ಧಾರವಾಡ: ಕೇವಲ ಎರಡು ವಾರದಲ್ಲಿ ಒಂದೇ ಗ್ರಾಮದ 13 ಜನ ಸಾವನ್ನಪ್ಪಿದ್ದು, ಗ್ರಾಮಸ್ಥರು ದೇವರ ಮೊರೆ ಹೋಗಿದ್ದಾರೆ.

ತಾಲೂಕಿನ ಮನಸೂರ ಗ್ರಾಮದಲ್ಲಿ ಎರಡು ವಾರದಲ್ಲಿ 13 ಜನ ಸಾವನ್ನಪ್ಪಿದ್ದು, ಇದರಲ್ಲಿ 2 ಜನ ಕೋವಿಡ್‍ದಿಂದ ಸಾವನ್ನಪ್ಪಿದರೆ, 11 ಜನ ಇತರೆ ಖಾಯಿಲೆಗಳಿಂದ ಸಾವನ್ನಪ್ಪಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಆತಂಕ ಮನೆ ಮಾಡಿದ್ದು, ಗ್ರಾಮಸ್ಥರು ಮನೆಯಿಂದ ಹೊರಗೆ ಬರಲು ಭಯ ಪಡುತಿದ್ದಾರೆ. ಮನೆ ಬಾಗಿಲು ಹಾಕಿಕೊಂಡು ಜನ ಭಯದಿಂದಲೇ ಒಳಗೆ ಕುಳಿತಿದ್ದಾರೆ.

ಮತ್ತೊಂದೆಡೆ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಗ್ರಾಮಸ್ಥರು ದೇವರ ಮೊರೆ ಹೋಗಿ ಗ್ರಾಮದ ಜನರನ್ನು ಉಳಿಸು ಎಂದು ಬೇಡಿಕೊಂಡಿದ್ದಾರೆ. ಕಳೆದ 7 ವರ್ಷಗಳಿಂದ ಈ ಗ್ರಾಮದ ಡೋಣಿ ಕರೆಮ್ಮ ದೇವಸ್ಥಾನ ಕಟ್ಟಿಸದೇ ಅರ್ಧಕ್ಕೆ ಬಿಡಲಾಗಿತ್ತು. ಅದಕ್ಕೆ ಈ ರೀತಿ ಕಷ್ಟ ಬಂದಿದೆ ಎಂದು ಗ್ರಾಮಸ್ಥರಲ್ಲಿ ಭಯ ಹುಟ್ಟಿದೆ. ಹೀಗಾಗಿ ಹಳ್ಳದ ಕರೆಮ್ಮ ದೇವಸ್ಥಾನದಲ್ಲಿ ಡೋಣಿ ಕರೆಮ್ಮ ದೇವಸ್ಥಾನ ಕಟ್ಟಿಸುವುದಾಗಿ ಗ್ರಾಮಸ್ಥರು ಬೇಡಿಕೊಂಡಿದ್ದಾರೆ.

ಡೋಣಿ ಕರೆಮ್ಮ ದೇವಸ್ಥಾನ ಕಟ್ಟಿಸುವ ಕಾರ್ಯವನ್ನು ಸಹ ಆರಂಭಿಸಿದ್ದಾರೆ. ಕಳೆದ ವಾರವಷ್ಟೇ ಒಂದೇ ಓಣಿಯಲ್ಲಿ 4 ಜನ ಎರಡು ದಿನಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಆದರೆ ದೇವರ ಮೊರೆ ಹೋದ ಮೇಲೆ ಮತ್ತೆ ಗ್ರಾಮದಲ್ಲಿ ಸಾವಾಗಿಲ್ಲ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ.

The post 2 ವಾರದಲ್ಲಿ ಒಂದೇ ಗ್ರಾಮದ 13 ಜನ ಸಾವು- ದೇವರ ಮೊರೆ ಹೋದ ಗ್ರಾಮಸ್ಥರು appeared first on Public TV.

Source: publictv.in

Source link