2.25 ಕೆ.ಜಿ ಚಿನ್ನ ಮಾಯ.. ಈಗ ದಾನ ಕೊಟ್ಟಿದ್ದ ಆಸ್ತಿ ಮಾರಾಟ ಮಾಡಿದ್ರಾ ವೀರೇಶ್ವರ ಪುಣ್ಯಾಶ್ರಮ ಶ್ರೀಗಳು?

2.25 ಕೆ.ಜಿ ಚಿನ್ನ ಮಾಯ.. ಈಗ ದಾನ ಕೊಟ್ಟಿದ್ದ ಆಸ್ತಿ ಮಾರಾಟ ಮಾಡಿದ್ರಾ ವೀರೇಶ್ವರ ಪುಣ್ಯಾಶ್ರಮ ಶ್ರೀಗಳು?

ಉತ್ತರ ಕರ್ನಾಟಕ ಭಾಗದಲ್ಲಿ ಅತ್ಯಂತ ವಿಶೇಷತೆ ಹೊಂದಿರೋ ಪ್ರಸಿದ್ಧ ಮಠವದು. ಆದರೆ ಅಂಥಾ ಮಠಕ್ಕೆ ಸದ್ಯ ಅಕ್ರಮಗಳ ಸರಮಾಲೆಯೇ ಪೋಣಿಸಿಕೊಂಡಿದೆ. ಅದನ್ನ ನ್ಯೂಸ್ ಫಸ್ಟ್​ ಆರಂಭದಿಂದಲೂ ಹೆಕ್ಕಿ ತೆಗೆಯುವ ಪ್ರಯತ್ನ ಮಾಡುತ್ತಲೆ ಇತ್ತು. ಹಗರಣವೇ ನಡೆದಿಲ್ಲಾ ಎಂಬಂತೆ ಪೀಠಾಧಿಪತಿಗಳು ಪ್ರತಿಕ್ರಿಯೆ ನೀಡುತ್ತಿದ್ದರು. ಆದ್ರೆ ಅದಕ್ಕೆ ಬ್ರೇಕ್ ಹಾಕುವಂತಹ ದಾಖಲೆ ಸಮೇತ ನ್ಯೂಸ್ ಫಸ್ಟ್​ ಮತ್ತೊಂದು ಸುದ್ದಿಯನ್ನ ಭಕ್ತರ ಮುಂದೆ ಬಯಲಿಗಿಡುತ್ತಿದೆ.

ಗದಗ ವೀರೇಶ್ವರ ಪುಣ್ಯಾಶ್ರಮ. ನಡೆದಾಡುವ ದೇವರು ಅಂಧರ ಬಾಳಿನ ಆಶಾಕಿರಣ ಡಾ. ಪಂಡಿತ್ ಪುಟ್ಟರಾಜ ಗವಾಯಿಗಳ ನೆಲೆಸಿದ್ದ ಪುಣ್ಯ ಸ್ಥಳ. ಆ ನಡೆದಾಡುವ ದೇವರಿಗೆ ನಾಡಿನ ಜನ ಮನತುಂಬಿ ದಾನ ಮಾಡಿದ್ದರು. ಭಕ್ತರ ದಾನದಿಂದಲೇ ಈ ಆಶ್ರಮ ಬೆಳೆದು ಅಂಧರ ಅನಾಥರ ಆಶ್ರಯ ತಾಣವಾಗಿದೆ, ಶಿಕ್ಷಣ ಕೇಂದ್ರವಾಗಿದೆ. ಬೀದಿಗೆ ಬಿದ್ದವರನ್ನು ತಬ್ಬಿ ಜೀವನಕ್ಕೆ ದಾರಿ ದೀಪವಾಗಿದೆ. ಆದರೆ ಇದೇ ಪುಣ್ಯಾಶ್ರಮದಲ್ಲಿ ಭ್ರಷ್ಠರು ಸದ್ದಿಲ್ಲದೇ ಬೀಡು ಬಿಟ್ಟು ಇಡೀ ಆಶ್ರಮವನ್ನು ಕೊಳ್ಳೆ ಹೊಡೆದಿದ್ದಾರೆ. ಬರೊಬ್ಬರಿ 2.25 ಕೆಜಿ ಚಿನ್ನ ಸದ್ದಿಲ್ಲದೇ ಮಾಯವಾಗಿದೆ. ಲಕ್ಷಾಂತರ ರೂಪಾಯಿ ಬೆಳ್ಳಿ ಪರಿಕರಗಳು ನಾಪತ್ತೆಯಾಗಿವೆ. ಇದೆಲ್ಲವನ್ನೂ ನ್ಯೂಸ್​​ಫಸ್ಟ್ ರಹಸ್ಯ ಕಾರ್ಯಾಚರಣೆ ಮೂಲಕ ಬಯಲಿಗೆಳೆದಿತ್ತು. 2020ರ ಅಕ್ಟೋಬರ್ 24 ರಂದು ಪುಣ್ಯಾಶ್ರಮದ ಅಕ್ರಮದ ಕುರಿತು ನ್ಯೂಸ್ ಫಸ್ಟ್ ವಿಸ್ತ್ರತ ವರದಿ ಮಾಡಿತ್ತು.

ಇನ್ನು ಈ ರಹಸ್ಯ ಕಾರ್ಯಾಚರಣೆ ಮಾಡಿದ ಬಳಿಕ ಗದಗ ವಿರೇಶ್ವರ ಪುಣ್ಯಾಶ್ರಮದಲ್ಲಿ ಸಾಕಷ್ಟು ಬೆಳವಣಿಗೆ ಆಗೋದಕ್ಕೆ ಶುರು ಆಗಿತ್ತು. ಅಲ್ಲದೇ ಕಲ್ಲಯ್ಯಜ್ಜನವರು ಕೂಡ ನ್ಯೂಸ್ ಫಸ್ಟ್​ ವರದಿಗೆ ಸಂಬಂಧಪಟ್ಟಂತೆ ದ್ವಂದ್ವ ನಿಲುವನ್ನ ತಾಳಿದ್ದರು. ಅದರ ಬಗ್ಗೆ ಮುಂದಿನ ಹಂತದಲ್ಲಿ ಉತ್ತರ ನಿಮಗೆ ಸಿಕ್ಕೆ ಸಿಗುತ್ತದೆ. ಆದ್ರೆ ಗದಗ ವಿರೇಶ್ವರ ಪುಣ್ಯಶ್ರಮದ ಪೀಠಾಧಿಪತಿಯಾದ ಮೇಲೆ ಕಲ್ಲಯ್ಯಜ್ಜನವರ ಕಾರ್ಯಕ್ಕೆ ಎಲ್ಲಾ ಕಡೆಯಿಂದ ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಅಷ್ಟೇ ಯಾಕೆ ಅವರ ಕಾರ್ಯಕ್ಕೆ ಭಕ್ತರೇ ಇಂಥಾ ಪೀಠಾಧಿಪತಿ ನಮಗೆ ಸಿಕ್ಕಿರೋದು ಪುಣ್ಯವೇ ಅಂತಾ ಹೇಳುತ್ತಿದ್ದಾರೆ. ಅದೇ ರೀತಿಯಾಗಿ ಕಲ್ಲಯ್ಯಜ್ಜನವರು ಕೂಡ ಅಷ್ಟೇ ನಾಜೂಕಾಗಿ ಆಡಳಿತವನ್ನ ನಡೆಸಿಕೊಂಡು ಹೋಗುತ್ತಿದ್ದಾರೆ. ಯಾರು ಕೂಡ ಬೊಟ್ಟು ಮಾಡದಂತೆ ದಾಖಲಾತಿಗಳ ಸಮೇತ ಮಠವನ್ನ ಮುನ್ನೆಡೆಸಿಕೊಂಡು ಬಂದಿದ್ದೆ ಇದಕ್ಕೆಲ್ಲಾ ಸಾಕ್ಷಿ ಆಗಿತ್ತು.

ನೋಡಿ ಅಂಧರ ಪಾಲಿನ ಆಶಾಕಿರಣ ಅಂತಾನೇ ಕಲ್ಲಯ್ಯಜ್ಜನವರನ್ನು ಕೂಡ ಬಿಂಬಿಸೋದಕ್ಕೆ ಭಕ್ತರೇ ಶುರು ಮಾಡಿದ್ರು. ಆದ್ರೆ ಅದೇ ಭಕ್ತಾಧಿಗಳು ಮೂಗಿನ ಮೇಲೆ ಬೆರಳನ್ನ ಇಟ್ಟುಕೊಳ್ಳುವಂತೆ ಮಠದಲ್ಲಿ ಒಂದು ಬೆಳವಣಿಗೆ ಆಗೋದಕ್ಕೆ ಶುರು ಆಗಿತ್ತು. ಆಶ್ರಮದಲ್ಲಿ ಕೊಟ್ಯಾಂತರ ರೂಪಾಯಿ ಅವ್ಯವಹಾರ ನಡೆದಿದೆ, ತನಿಖೆ ನಡೆಸಿ ತಪ್ಪಿಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಶ್ರಮದ ಸೇವಾ ಸಮಿತಿಯ 105 ಸದಸ್ಯರು ಸಹಿ ಮಾಡಿ ಪೀಠಾಧಿಪತಿ ಕಲ್ಲಯ್ಯಜ್ಜನವಿಗೆ ಪತ್ರ ಬರೆದಿದ್ದರು.

ಇದೇ ಪತ್ರದ ಆಧಾರದ ಮೇಲೆ ನ್ಯೂಸ್ ಫಸ್ಟ್ ರಹಸ್ಯ ಕಾರ್ಯಾಚರಣೆ ನಡೆಸಿ ಅಕ್ರಮ ಬಯಲಿಗೆಳಿದಿತ್ತು. ಆದ್ರೆ ಆಗಲೂ ಕೂಡಾ ಪೀಠಾಧಿಪತಿ ಕಲ್ಲಯ್ಯಜ್ಜನವರು ಅಕ್ರಮ ನಡೆದಿಲ್ಲ ಎಂದು ನಂಬಿಸಲು ಪ್ರಯತ್ನಿಸಿದ್ದರು. ಇನ್ನೊಂದು ಕಡೆ ಭ್ರಷ್ಟಾಚಾರ ನಡೆದಿರುವದನ್ನೂ ಒಪ್ಪಿಕೊಂಡಿದ್ದರು . ಪೀಠಾಧಿಪತಿಗಳು ಗೌಪ್ಯ ಸಭೆಯಲ್ಲಿ ಶಿಷ್ಯರ ಜೊತೆ ಮಾತನಾಡುವಾಗ ಚಿನ್ನದ ರಹಸ್ಯವನ್ನ ಬಿಚ್ಚಿಟ್ಟಿದ್ದರು. ಅದರ ವಿಡಿಯೋ ಸಮೇತ ನ್ಯೂಸ್ಫಸ್ಟ್​​ ಸುದ್ದಿಯನ್ನ ಪ್ರಸಾರ ಮಾಡಿತ್ತು. ಅದರ ಬಗ್ಗೆ ಮಾತಾನಾಡಿದ್ದ ಕಲ್ಲಯ್ಯಜ್ಜನವರು ಚಿನ್ನವನ್ನು ಮಾರಾಟ ಮಾಡಿ ಪ್ರಸಾದ ನಿಲಯ ಕಟ್ಟಿಸಿರುವುದಾಗಿ ಭಕ್ತರು ಹೇಳಿದ್ದಾರೆ ಅಂತಾ ಕೂಡ ಹೇಳಿದ್ದರು. ಆದ್ರೆ ಈಗ ಮತ್ತೊಂದು ಹಗರಣ ಆಶ್ರಮದ ಅಂಗಳದಿಂದ ಬಯಲಿಗೆ ಬಂದಿದೆ. ಅಂಧರ ಶಿಕ್ಷಣ ಸಮಿತಿಗೆ ಸೇರಿದ ಜಾಗವನ್ನು ಪೀಠಾಧ್ಯಕ್ಷ ಕಲ್ಲಯ್ಯಜ್ಜನವರೇ ಮಾರಾಟ ಮಾಡಿದ್ದಾರೆ. ಈ ಆಸ್ತಿಪರಭಾರೆ ದಾಖಲೆಗಳನ್ನ ನ್ಯೂಸ್ ಫಸ್ಟ್ ಆಶ್ರಮದ ಭಕ್ತರ ಮುಂದೆ ಬಯಲಿಗಿಡುತ್ತಿದೆ.

ವೀರೇಶ್ವರ ಪುಣ್ಯಾಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು ಪಂಡಿತ್ ಪುಟ್ಟರಾಜ ಅಂಧರ ಶಿಕ್ಷಣ ಸಮಿತಿಯ ಲಕ್ಷಾಂತರ ರೂಪಾಯಿ ಬೆಲೆಬಾಳುವ ಆಸ್ತಿಯನ್ನು ಕವಡೆ ಕಾಸಿನ ಕಿಮ್ಮತ್ತಿಗೆ ಮಾರಾಟ ಮಾಡಿದ್ದಾರೆ ಅಂತ ಆರೋಪಿಸಲಾಗಿದೆ.

ಅಕ್ರಮವಾಗಿ ಶಿಕ್ಷಣ ಸಮಿತಿ ಆಸ್ತಿ ಮಾರಾಟ ಮಾಡಿದ್ರಾ ಶ್ರೀಗಳು?
ದಾನವಾಗಿ ಕೊಟ್ಟಿದ್ದ ಆಸ್ತಿಯನ್ನೇ ಮಾರಾಟ ಮಾಡಿದ್ರಾ ಶ್ರೀಗಳು?
ಆಸ್ತಿ ಮಾರಾಟಕ್ಕೆ ಕಾಣದ ಕೈಗಳ ಒತ್ತಡ ಶ್ರೀಗಳ ಮೇಲಿತ್ತಾ?

ಹೌದು ಕಳೆದ 2021ರ ಜನವರಿ 27ರಂದು ಗದಗ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಇಂಥಹದೊಂದು ಅಕ್ರಮ ಆಸ್ತಿ ಮಾರಾಟ ಸದ್ದಿಲ್ಲದೇ ನಡೆದುಹೋಗಿದೆ. ಆಶ್ರಮದ ಪೀಠಾಧಿಪತಿ ಕಲ್ಲಯ್ಯಜ್ಜನವರು, ಪುಟ್ಟರಾಜ ಅಂಧರ ಶಿಕ್ಷಣ ಸಂಸ್ಥೆಗೆ ಸೇರಿದ ಬೆಟಗೇರಿ ಬಳಿ ಇರುವ 11 ಗಂಟೆ ಜಾಗವನ್ನು ಮಾರಾಟ ಮಾಡಿದ್ದಾರೆ. ಆಶ್ರಮದಲ್ಲೇ ಠಿಕಾಣಿ ಹೂಡಿರುವ 9 ಜನ ಕೇವಲ 2 ಲಕ್ಷ ರೂಪಾಯಿಗಳಿಗೆ ಈ ಆಸ್ತಿಯನ್ನು ಖರೀದಿಸಿದ್ದಾರೆ.

ಕಲ್ಲಯ್ಯಜ್ಜನವರು ಹೀಗೆ ಮಾರಾಟ ಮಾಡಿದ ಜಾಗ ಪಂಡಿತ್ ಪುಟ್ಟರಾಜ ಗವಾಯಿ ಅಂಧರ ಶಿಕ್ಷಣ ಸಮಿತಿಗೆ ಸೇರಿದ್ದು. ಈ ಜಾಗವನ್ನು ಪಂಚಾಕ್ಷರಿ ಸೇವಾ ಸಮಿತಿಯ ಅಧ್ಯಕ್ಷ ಹಾಗೂ ಮಠದ ಭಕ್ತ ಗುರುಸ್ವಾಮಿ ಕಲಕೇರಿ ಎಂಬುವರು, ಕಳೆದ 2020 ರ ನವೆಂಬರ್ 7ರಂದು ಅಂಧರ ಶಿಕ್ಷಣ ಸಮಿತಿಗೆ ಕಟ್ಟಡಗಳನ್ನು ಕಟ್ಟಲು ಹಾಗೂ ಶಿಕ್ಷಣದ ಇನ್ನಿತರ ಉದ್ದೇಶಗಳಿಗೆ ಬಳಸಿಕೊಳ್ಳುವ ಶರತ್ತುಗಳನ್ನು ಹಾಕಿ ದಾನ ನೀಡಿದ್ದರು. ಆದರೆ ಇದೇ ಜಾಗವನ್ನು ಕಲ್ಲಯ್ಯಜ್ಜನವರು ಮಠದ 9 ಜನ ಶಿಷ್ಯರಿಗೆ ಈ 11 ಗುಂಟೆ ಜಾಗವನ್ನ ಮಾರಾಟ ಮಾಡಿ ಹುಬ್ಬೇರಿಸುವಂತೆ ಮಾಡಿದ್ದಾರೆ.

ಜಾಗ ಖರೀದಿಸಿದ ಶಿಷ್ಯರು
1) ಗುರುರಾಜ ಕಲಕೇರಿ
2) ರುದ್ರಯ್ಯಶಾಸ್ತ್ರಿ ಚೌಕಿಮಠ
3) ಪಂಚಾಕ್ಷರಿ ಮಹಾಸ್ವಾಮಿಗಳು, ಮಡಿವಾಳೇಶ್ವರಮಠ
4) ವೀರಭದ್ರಯ್ಯ ಮುರಗಿಮಠ
5) ಮಡಿವಾಳಯ್ಯ ಗದ್ದಗಿಮಠ
6) ಬಸನಗೌಡ ಅಂಟರತಾನಿ
7) ನಿಜಗುಣಿ ಹೂಗಾರ್
8) ನಾಗಭೂಷಣ ಎಂ
9) ಶಿವಕುಮಾರ ಗದ್ದಗಿಮಠ
ಎಂಬುವರು ಖರೀದಿಸಿದ್ದಾಗಿ ಕಲ್ಲಯ್ಯಜ್ಜನವರು ಮಾಡಿಕೊಟ್ಟಿರುವ ಖರೀದಿ ಪತ್ರ ಹೇಳುತ್ತದೆ.

ವಿಚಿತ್ರ ಅಂದ್ರೆ ಈ ಜಾಗವನ್ನು ದಾನವಾಗಿ ಶಿಕ್ಷಣ ಸಂಸ್ಥೆಗೆ ಕೊಟ್ಟಿದ್ದ ಶಿಕ್ಷಣ ಸಮಿತಿ ಸದಸ್ಯರೂ ಆಗಿರುವ ಗುರುರಾಜ ಕಲಕೇರಿ ಕೂಡಾ ಖರೀದಿ ಮಾಡಿಕೊಂಡವರಲ್ಲಿ ಒಬ್ಬರು. ಶಿಕ್ಷಣ ಸಮಿತಿಯ ಬೈಲಾ ಪ್ರಕಾರ ಸಂಸ್ಥೆಯ ಯಾವುದೇ ಆಸ್ತಿಯನ್ನು ಮಾರಾಟ ಮಾಡಲು ಅನುಮತಿ ಇರುವುದಿಲ್ಲ. ಒಂದು ವೇಳೆ ಮಾರಾಟ ಮಾಡುವ ಅನಿವಾರ್ಯ ಪ್ರಸಂಗ ಬಂದರೆ ಶಿಕ್ಷಣ ಸಮಿತಿಯ ಸರ್ವ ಸದಸ್ಯರ ಒಪ್ಪಿಗೆ ಪಡೆದುಕೊಂಡು ಠರಾವು ಪಾಸ್ ಮಾಡಿ ಮಾರಾಟ ಮಾಡಬೇಕಾಗುತ್ತದೆ. ಆದ್ರೆ ನ್ಯೂಸ್ ಫಸ್ಟ್ಗೆ ಸಿಕ್ಕಿರುವ ಮಾಹಿತಿಯ ಪ್ರಕಾರ ಯಾವದೇ ಸಭೆ ಆಗಲಿ ಠರಾವುಗಳಾಗಲಿ ಪಾಸ್ ಆಗಿಲ್ಲ. ಇದನ್ನ ಶಿಕ್ಷಣ ಸಮಿತಿಯ ಸದಸ್ಯರೂ ಮಾಜಿ ಶಾಸಕರೂ ಆದ ಜಿ.ಎಸ್ ಪಾಟೀಲ ನ್ಯೂಸ್ ಫಸ್ಟ್ ಗೆ ದೃಢಪಡಿಸಿದ್ದಾರೆ.

ಆಸ್ತಿ ಖರೀದಿದಾರಲ್ಲಿ ಒಬ್ಬರಾಗಿರುವ ಶಿಕ್ಷಣ ಸಮಿತಿ ಸದಸ್ಯ ರಾಜಗುರು ಕಲಕೇರಿ, ಎಚ್.ಎಮ್ ಗೌಡರ್, ವಿ.ಎಸ್ ಮಾಳೆಕೊಪ್ಪಮಠ ಹಾಗೂ ಮಾಜಿ ಶಾಸಕ ಜಿ.ಎಸ್ ಪಾಟೀಲ ಸೇರಿದಂತೆ 13 ಜನ ಈ ಶಿಕ್ಷಣ ಸಮಿತಿಯ ಸದಸ್ಯರಾಗಿದ್ದಾರೆ. ಇದೇ ಶಿಕ್ಷಣ ಸಮಿತಿಗೆ ಮಠದ ಪೀಠಾಧಿಪತಿ ಕಲ್ಲಯ್ಯಜ್ಜನವರು ಕಾರ್ಯಾಧ್ಯಕ್ಷರಾಗಿದ್ದಾರೆ. ಇದೇ ಕಾರ್ಯಾಧ್ಯಕ್ಷ ಸ್ಥಾನದಲ್ಲಿ ಕುಳಿತುಕೊಂಡು ಏಕಸ್ವಾಮ್ಯವಾಗಿ ಮಾರಾಟ ಮಾಡಿದ್ದಾರೆ ಅನ್ನೋದು ಭಕ್ತರ ಆರೋಪ. ಈ ಆಸ್ತಿ ಮಾರಾಟದ ದಾಖಲೆಗಳಿಗೆ ಆಶ್ರಮದ ಪ್ರಮುಖರಾದ ಪಿ.ಸಿ ಹಿರೇಮಠ ಹಾಗೂ ಎಂ. ಕಲ್ಲಿನಾಥ ಶಾಸ್ತ್ರಿಗಳು ಸಾಕ್ಷಿದಾರರಾಗಿ ಸಹಿ ಹಾಕಿದ್ದಾರೆ. ಖರೀದಿ ಪತ್ರದಲ್ಲಿ ಹಣಕಾಸಿನ ಅವಶ್ಯಕತೆ ಹಿನ್ನಲೆ ಆಸ್ತಿ ಮಾರಾಟ ಮಾಡುತ್ತಿರುವುದಾಗಿ ಶ್ರೀಗಳು ಹೇಳುತ್ತಾರೆ.

ನಿಜಕ್ಕೂ ಪೀಠಾಧಿಪತಿಗಳಿಗೆ ಆರ್ಥಿಕ ಹಿನ್ನಡೆ ಉಂಟಾಗಿತ್ತಾ? ಕೇವಲ 2 ಲಕ್ಷ ರೂಪಾಯಿ ಹೊಂದಿಸಿಕೊಳ್ಳಲಾಗಷ್ಟು ಆಶ್ರಮ ಬಡವಾಗಿ ಹೋಯ್ತಾ? ಜೋಳಿಗೆ ಶಕ್ತಿಯಿಂದಲೇ ಈ ಪುಟ್ಟರಾಜ ಗವಾಯಿಗಳು ಈ ಆಶ್ರಮ ಕಟ್ಟಿದ್ದರು. ಪುಟ್ಟರಾಜ ಗವಾಯಿಗಳ ಜೋಳಿಗೆಗೆ ಇದ್ದ ಶಕ್ತಿ ಕಲ್ಲಯ್ಯಜ್ಜನವರ ಜೋಳಿಗೆಗೆ ಇಲ್ಲದೇ ಹೋಯ್ತಾ? ಅಥವಾ ಕಲ್ಲಯ್ಯಜ್ಜನವರಿಗೆ ಈ ಜಾಗ ಮಾರಾಟ ಮಾಡಲೇ ಬೇಕಾದ ಅನಿವಾರ್ಯತೆ ಸೃಷ್ಠಿಸಲಾಗಿತ್ತಾ? ಇಂಥಹ ಹಲವು ಪ್ರಶ್ನೆಗಳಿಗೆ ಉತ್ತರ ಸಿಗಬೇಕಾಗಿದೆ.

ಒಟ್ಟಿನಲ್ಲಿ ಆಶ್ರಮದಲ್ಲಿ ಸದ್ದಿಲ್ಲದೇ ಬೀಡು ಬಿಟ್ಟಿರುವ ಕಳ್ಳರು ಸುಳ್ಳರು ಖದೀಮರನ್ನು ಹೊರ ದಬ್ಬಬೇಕಾಗಿದೆ. ಅಂಧರ ಪಾಲಿನ ಆಶಾ ಜ್ಯೋತಿ ನಂದದಂತೆ ಭಕ್ತರು ಕಾಪಾಡಬೇಕಿದೆ. ಏನೇ ಹೇಳಿ. ವಿಖ್ಯಾತಿಗಳಿಸಿರೋ ಮಠದ ಸುತ್ತ ಇಂದು ಹಲವು ಅನುಮಾನಗಳು ಹುಟ್ಟಿಕೊಂಡಿರೋದಂತು ಸತ್ಯ. ಜಾಗ ಮಾರಟ ಅನಿವಾರ್ಯತೆ ಏನಿತ್ತು? ಇದ್ದರು ಅಷ್ಟು ಕಡಿಮೆ ಬೆಲೆಗೆ ಮಾರಾಟ ಮಾಡಿದ್ದು ಯಾಕೆ? ಪೀಠಾಧಿಪತಿ ಕಲ್ಲಯ್ಯಜ್ಜನವರ ಮೇಲೆ ಒತ್ತಡ ಹಾಕಿ ಈ ಆಸ್ತಿಯನ್ನು ಬರೆಯಿಸಿಕೊಳ್ಳಲಾಗಿದೆಯೇ? ಇಂಥಹ ಹಲವು ಪ್ರಶ್ನೆಗಳಿಗೆ ಉತ್ತರವಂತು ಸಿಗಬೇಕಿದೆ.

The post 2.25 ಕೆ.ಜಿ ಚಿನ್ನ ಮಾಯ.. ಈಗ ದಾನ ಕೊಟ್ಟಿದ್ದ ಆಸ್ತಿ ಮಾರಾಟ ಮಾಡಿದ್ರಾ ವೀರೇಶ್ವರ ಪುಣ್ಯಾಶ್ರಮ ಶ್ರೀಗಳು? appeared first on News First Kannada.

Source: newsfirstlive.com

Source link