ನವದೆಹಲಿ: ಕೊರೊನಾ 3ನೇ ಅಲೆ ಮಕ್ಕಳನ್ನು ಕಾಡಬಹುದು ಎಂಬ ಚರ್ಚೆ ನಡೆಯುತ್ತಿರುವಾಗಲೇ ಸಂತಸ ವಿಚಾರವೊಂದು ಹೊರ ಬಿದ್ದಿದೆ. ಭಾರತ್ ಬಯೋಟೆಕ್‍ನ ಕೊರೊನಾ ಲಸಿಕೆ ಕೋವ್ಯಾಕ್ಸಿನ್‍ಗೆ 2 ಹಾಗೂ 3ನೇ ಹಂತದ ಪರೀಕ್ಷೆ ನಡೆಸಲು ತಜ್ಞರ ಸಮಿತಿ ಒಪ್ಪಿಗೆ ಸೂಚಿಸಿದ್ದು, ಇದೀಗ 2 ರಿಂದ 18 ವರ್ಷದವರ ಮೇಲೂ ಪ್ರಯೋಗ ನಡೆಸಲು ಸಂಸ್ಥೆ ಸಿದ್ಧತೆ ನಡೆಸಿದೆ.

ದೆಹಲಿಯ ಏಮ್ಸ್, ಪಾಟ್ನಾದ ಏಮ್ಸ್ ಹಾಗೂ ನಾಗ್ಪುರ್ ನ ಮೆಡಿಟ್ರಿನಾ ಇನ್‍ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಸೇರಿದಂತೆ ವಿವಿಧ ಸ್ಥಳಗಳಲ್ಲಿ 525 ಜನರಿಗೆ ಲಸಿಕೆ ಪ್ರಯೋಗ ಮಾಡಲಾಗುತ್ತದೆ.

2 ರಿಂದ 18 ವರ್ಷದ ಮಕ್ಕಳಲ್ಲಿ ಕೋವ್ಯಾಕ್ಸಿನ್ ಲಸಿಕೆಯ ಸುರಕ್ಷತೆ, ಪ್ರತಿಕ್ರಿಯಾತ್ಮಕತೆ ಹಾಗೂ ರೋಗನಿರೋಧಕ ಶಕ್ತಿಯನ್ನು ಮೌಲ್ಯಮಾಪನ ಮಾಡಲು 2 ಹಾಗೂ 3ನೇ ಹಂತದ ಕ್ಲಿನಿಕಲ್ ಪ್ರಯೋಗಕ್ಕೆ ಅನುಮತಿ ಕೋರಿ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್ ಸಂಸ್ಥೆ ತಜ್ಞರ ಸಮಿತಿಗೆ ಮನವಿ ಸಲ್ಲಿಸಿತ್ತು. ಈ ಕುರಿತು ಚರ್ಚೆ ನಡೆಸಿ, ಪರಿಶೀಲಿಸಿದ ಕೇಂದ್ರ ಔಷಧಿಗಳ ಪ್ರಮಾಣಿತ ನಿಯಂತ್ರಣ ಸಂಸ್ಥೆ(ಸಿಡಿಎಸ್‍ಸಿಒ)ಯ ಸಬ್ಜೆಕ್ಟ್ ಎಕ್ಸ್ ಪರ್ಟ್ ಕಮಿಟಿ (ಎಸ್‍ಇಸಿ) ಇಂದು ಅನುಮತಿ ನೀಡಿದೆ.

ಈ ಕುರಿತು ವಿವರವಾದ ಚರ್ಚೆ ನಡೆಸಿದ ಸಮಿತಿ, 2 ಹಾಗೂ 3ನೇ ಹಂತದ ಕ್ಲಿನಿಕಲ್ ಟ್ರಯಲ್‍ಗೆ ಅನುಮತಿ ನೀಡಿದೆ. ಆದರೆ 2ನೇ ಹಂತದ ಕ್ಲಿನಿಕಲ್ ಟ್ರಯಲ್ ಪೂರ್ಣಗೊಂಡ ಬಳಿಕ, 3ನೇ ಹಂತದ ಟ್ರಯಲ್ ನಡೆಸುವ ಮೊದಲು ಮಧ್ಯಂತರ ಸುರಕ್ಷತಾ ದತ್ತಾಂಶವನ್ನು ಸಿಡಿಎಸ್‍ಸಿಒಗೆ ಸಲ್ಲಿಸಬೇಕು ಎಂದು ಷರತ್ತು ವಿಧಿಸಲಾಗಿದೆ ಎಂದು ವರದಿಯಾಗಿದೆ.

ಈ ಮೊದಲು ಫೆಬ್ರವರಿ 24ರ ಎಸ್‍ಇಸಿ ಸಭೆಯಲ್ಲಿ ಈ ಪ್ರಸ್ತಾಪವನ್ನು ಚರ್ಚಿಸಲಾಗಿತ್ತು. ಆಗ ಪರಿಷ್ಕøತ ಕ್ಲಿನಿಕಲ್ ಟ್ರಯಲ್ ಪ್ರೋಟೋಕಾಲ್ ಸಲ್ಲಿಸಲು ಭಾರತ್ ಬಯೋಟೆಕ್‍ಗೆ ತಿಳಿಸಲಾಗಿತ್ತು.

ಕೊರೊನಾ ವೈರಸ್ ವಿರುದ್ಧ ಹೋರಾಡಲು ಕೋವ್ಯಾಕ್ಸಿನ್ ಲಸಿಕೆಯನ್ನು ಭಾರತೀಯ ಸಂಸ್ಥೆ ಭಾರತ್ ಬಯೋಟೆಕ್, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಸಹಯೋಗದಲ್ಲಿ ಅಭಿವೃದ್ಧಿಪಡಿಸಿದೆ. ಈಗಾಗಲೇ ವಯಸ್ಕರಿಗೆ ಕೋವ್ಯಾಕ್ಸಿನ್ ಲಸಿಕೆ ನೀಡಲು ಅನುಮತಿ ನೀಡಲಾಗಿದೆ. ಆದರೆ 2-18 ವರ್ಷದ ಮಕ್ಕಳಿಗೂ ನೀಡಲು ಇದೀಗ ಪರೀಕ್ಷೆ ನಡೆಸಲು ಮುಂದಾಗಿದೆ.

The post 2, 3ನೇ ಹಂತದ ಪರೀಕ್ಷೆಗೆ ಅನುಮತಿ- 2 ರಿಂದ 18 ವರ್ಷದವರ ಮೇಲೆ ಕೋವ್ಯಾಕ್ಸಿನ್ ಪ್ರಯೋಗ appeared first on Public TV.

Source: publictv.in

Source link