ಮುಂಬಯಿ: ಚೆನ್ನೈ ಪರ 200ನೇ ಐಪಿಎಲ್‌ ಪಂದ್ಯವಾಡಿದ ಮಹೇಂದ್ರ ಸಿಂಗ್‌ ಧೋನಿ ಅವರಿಗೆ ಭರ್ಜರಿ ಗೆಲುವಿನ ಉಡುಗೊರೆ ಲಭಿಸಿದೆ. ಪಂಜಾಬ್‌ ಕಿಂಗ್ಸ್‌ ಎದುರಿನ ಶುಕ್ರವಾರದ ಪಂದ್ಯವನ್ನು 6 ವಿಕೆಟ್‌ಗಳಿಂದ ತನ್ನದಾಗಿಸಿಕೊಂಡ ಚೆನ್ನೈ ಜಯದ ಖಾತೆ ತೆರೆದಿದೆ.

ಚೆನ್ನೈ ತಂಡದ ಅತ್ಯಂತ ಬಿಗಿಯಾದ ಬೌಲಿಂಗ್‌ ದಾಳಿಗೆ ತತ್ತರಿಸಿದ ಪಂಜಾಬ್‌ 8 ವಿಕೆಟಿಗೆ ಕೇವಲ 106 ಮಾಡಿತು. ಇದು ಪ್ರಸಕ್ತ ಐಪಿಎಲ್‌ನಲ್ಲಿ ದಾಖಲಾದ ತಂಡವೊಂದರ ಕನಿಷ್ಠ ಮೊತ್ತ. ಇದನ್ನು ಸುಲಭದಲ್ಲಿ ಬೆನ್ನಟ್ಟಿದ ಧೋನಿ ಪಡೆ 15.4 ಓವರ್‌ಗಳಲ್ಲಿ 4 ವಿಕೆಟಿಗೆ 107 ರನ್‌ ಬಾರಿಸಿ ವಿಜಯೋತ್ಸವ ಆಚರಿಸಿತು.

ಗಾಯಕ್ವಾಡ್‌ (5) ಅವರನ್ನು ಬೇಗನೇ ಕಳೆದುಕೊಂಡ ಚೆನ್ನೈಗೆ ಡು ಪ್ಲೆಸಿಸ್‌ (ಔಟಾಗದೆ 36) ಮತ್ತು ಮೊಯಿನ್‌ ಅಲಿ (46) ಉತ್ತಮ ಜತೆಯಾಟವೊಂದನ್ನು ಒದಗಿಸಿದರು. ಬಳಿಕ ರೈನಾ (8) ಮತ್ತು ರಾಯುಡು (0) ವಿಕೆಟ್‌ ಬೆನ್ನು ಬೆನ್ನಿಗೆ ಬಿದ್ದರೂ ತಂಡಕ್ಕೆ ಯಾವುದೇ ಆತಂಕ ಎದುರಾಗಲಿಲ್ಲ.

ಚಹರ್‌ ಜೀವನಶ್ರೇಷ್ಠ ಸಾಧನೆ
ಪಂಜಾಬ್‌ ಪವರ್‌ ಪ್ಲೇ ಮುಗಿಯುವಷ್ಟರಲ್ಲಿ 4 ಬಿಗ್‌ ವಿಕೆಟ್‌ ಕಳೆದುಕೊಂಡು ಭಾರೀ ಸಂಕಟಕ್ಕೆ ಸಿಲುಕಿತು. ಈ ಅವಧಿಯಲ್ಲಿ ಘಾತಕವಾಗಿ ಪರಿಣಮಿಸಿದ ಮಧ್ಯಮ ವೇಗಿ ದೀಪಕ್‌ ಚಹರ್‌ ಚೆನ್ನೈಗೆ ಕನಸಿನ ಆರಂಭ ಒದಗಿಸಿದರು.

4ನೇ ಎಸೆತದಲ್ಲೇ ಖಾತೆ ತೆರೆಯದ ಮಾಯಾಂಕ್‌ ಅಗರ್ವಾಲ್‌ ಅವರನ್ನು ಬೌಲ್ಡ್‌ ಮಾಡುವ ಮೂಲಕ ಚಹರ್‌ ಪಂಜಾಬ್‌ ಕುಸಿತಕ್ಕೆ ಮುಹೂರ್ತವಿರಿಸಿದರು. ಗೇಲ್‌ ಕೂಡ ಅದೇ ಓವರ್‌ನಲ್ಲಿ ವಾಪಸಾಗಬೇಕಿತ್ತು. ಆದರೆ ಗಾಯಕ್ವಾಡ್‌ ಜೀವದಾನ ನೀಡಿದ ಪರಿಣಾಮ ಸ್ವಲ್ಪ ಹೊತ್ತು ಕ್ರೀಸಿನಲ್ಲಿ ಉಳಿದುಕೊಂಡರು.

ಮೂರನೇ ಓವರಿನಲ್ಲಿ ರವೀಂದ್ರ ಜಡೇಜ ಅವರ ಡೈರೆಕ್ಟ್ ಹಿಟ್‌ ನಾಯಕ ಕೆ.ಎಲ್‌. ರಾಹುಲ್‌ ಆಟವನ್ನು 5 ರನ್ನಿಗೆ ಕೊನೆಗೊಳಿಸಿತು. 5ನೇ ಓವರ್‌ನಲ್ಲಿ ಚಹರ್‌ ಅವಳಿ ಬೇಟೆಯಾಡಿ ಪಂಜಾಬ್‌ಗ ಬಲವಾದ ಪಂಚ್‌ ಕೊಟ್ಟರು. ವಿಂಡೀಸ್‌ ಕ್ರಿಕೆಟಿಗರಿಬ್ಬರೂ ಚಹರ್‌ ಮೋಡಿಗೆ ಸಿಲುಕಿದ್ದು ವಿಶೇಷ. ಎರಡನೇ ಎಸೆತದಲ್ಲಿ ಕ್ರಿಸ್‌ ಗೇಲ್‌ (10) ಜಡೇಜಾಗೆ ಕ್ಯಾಚಿತ್ತು ನಿರ್ಗಮಿಸಿದರೆ, 4ನೇ ಎಸೆತದಲ್ಲಿ ನಿಕೋಲಸ್‌ ಪೂರಣ್‌ ರನ್‌ ಗಳಿಸುವ ಮೊದಲೇ ಪೆವಿಲಿಯನ್‌ ಹಾದಿ ಹಿಡಿದರು. ಪೂರಣ್‌ ರಾಜಸ್ಥಾನ್‌ ಎದುರಿನ ಹಿಂದಿನ ಪಂದ್ಯದಲ್ಲೂ ಖಾತೆ ತೆರೆದಿರಲಿಲ್ಲ. ಅಲ್ಲಿ ಗೋಲ್ಡನ್‌ ಡಕ್‌ ಅವಮಾನಕ್ಕೆ ಸಿಲುಕಿದರೆ, ಇಲ್ಲಿ 2ನೇ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. ಸತತ 4ನೇ ಓವರ್‌ ದಾಳಿಗಿಳಿದ ದೀಪಕ್‌ ಚಹರ್‌ ಇಲ್ಲಿಯೂ ಭರ್ಜರಿ ಯಶಸ್ಸು ಸಾಧಿಸಿದರು.

ರಾಜಸ್ಥಾನ್‌ ವಿರುದ್ಧ ಸಿಡಿದು ನಿಂತಿದ್ದ ದೀಪಕ್‌ ಹೂಡಾ ಅವರನ್ನು ಡು ಪ್ಲೆಸಿಸ್‌ ಕೈಗೆ ಕ್ಯಾಚ್‌ ಕೊಡಿಸಿದರು. ಹೂಡಾ ಹೊಡೆದದ್ದು ಕೇವಲ 10 ರನ್‌. 6.2 ಓವರ್‌ಗಳಲ್ಲಿ 26 ರನ್‌ ಆಗುವಷ್ಟರಲ್ಲಿ ಪಂಜಾಬ್‌ ತಂಡದ ಅರ್ಧ ಬ್ಯಾಟಿಂಗ್‌ ಮುಗಿದಿತ್ತು. ಒಂದು ಓವರ್‌ ಮೇಡನ್‌ ಕೂಡ ಮಾಡಿದ ದೀಪಕ್‌ ಚಹರ್‌ 4 ವಿಕೆಟಿಗೆ ನೀಡಿದ್ದು ಕೇವಲ 13 ರನ್‌. ಇದು ಐಪಿಎಲ್‌ನಲ್ಲಿ ಅವರ ಜೀವನಶ್ರೇಷ್ಠ ಬೌಲಿಂಗ್‌ ಸಾಧನೆಯಾಗಿದೆ.

ತಂಡ ಒಂದೊಂದು ರನ್ನಿಗೂ ಚಡಪಡಿಸುತ್ತಿದ್ದಾಗ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಶಾರೂಖ್‌ ಖಾನ್‌ ಹೋರಾಟವೊಂದನ್ನು ಜಾರಿಯಲ್ಲಿರಿಸಿ ತಂಡದ ಮೊತ್ತವನ್ನು ನೂರರ ಗಡಿ ದಾಟಿಸಿದರು. ಆದರೆ ಮೊದಲ ಅರ್ಧ ಶತಕದಿಂದ ತುಸು ದೂರವೇ ಉಳಿದರು. ಶಾರೂಖ್‌ ಗಳಿಕೆ 36 ಎಸೆತಗಳಿಂದ 47 ರನ್‌ (4 ಫೋರ್‌, 2 ಸಿಕ್ಸರ್‌).

ಸ್ಕೋರ್‌ ಪಟ್ಟಿ
ಪಂಜಾಬ್‌ ಕಿಂಗ್ಸ್‌
ಕೆ.ಎಲ್‌ ರಾಹುಲ್‌ ರನೌಟ್‌ 5
ಮಾಯಾಂಕ್‌ ಅಗರ್ವಾಲ್‌ ಬಿ ಚಹರ್‌ 0
ಕ್ರಿಸ್‌ ಗೇಲ್‌ ಸಿ ಜಡೇಜ ಬಿ ಚಹರ್‌ 10
ದೀಪಕ್‌ ಹೂಡಾ ಸಿ ಡು ಪ್ಲೆಸಿಸ್‌ ಬಿ ಚಹರ್‌ 10
ಪೂರಣ್‌ ಸಿ ಠಾಕೂರ್‌ ಬಿ ಚಹರ್‌ 0
ಶಾರೂಖ್‌ ಖಾನ್‌ ಸಿ ಜಡೇಜ ಬಿ ಕರನ್‌ 47
ಜೇ ರಿಚರ್ಡ್‌ಸನ್‌ ಬಿ ಅಲಿ 15
ಎಂ. ಅಶ್ವಿ‌ನ್‌ ಸಿ ಡು ಪ್ಲೆಸಿಸ್‌ ಬಿ ಬ್ರಾವೊ 6
ಮೊಹಮ್ಮದ್‌ ಶಮಿ ಔಟಾಗದೆ 9
ರೀಲೆ ಮೆರೆಡಿತ್‌ ಔಟಾಗದೆ 0
ಇತರ 4
ಒಟ್ಟು (8 ವಿಕೆಟಿಗೆ) 106
ವಿಕೆಟ್‌ ಪತನ:1-1, 2-15, 3-19, 4-19, 5-26, 6-57, 7-87, 8-101.
ಬೌಲಿಂಗ್‌; ದೀಪಕ್‌ ಚಹರ್‌ 4-1-13-4
ಸ್ಯಾಮ್‌ ಕರನ್‌ 3-0-12-1
ಶಾದೂìಲ್‌ ಠಾಕೂರ್‌ 4-0-35-0
ರವೀಂದ್ರ ಜಡೇಜ 4-0-19-0
ಮೊಯಿನ್‌ ಅಲಿ 3-0-17-1
ಡ್ವೇನ್‌ ಬ್ರಾವೊ 2-0-10-1

ಚೆನ್ನೈ ಸೂಪರ್‌ ಕಿಂಗ್ಸ್‌
ಗಾಯಕ್ವಾಡ್‌ ಸಿ ಹೂಡಾ ಬಿ ಆರ್ಷದೀಪ್‌ 5
ಫಾ ಡು ಪ್ಲೆಸಿಸ್‌ ಔಟಾಗದೆ 36
ಮೊಯಿನ್‌ ಅಲಿ ಸಿ ಶಾರೂಖ್‌ ಬಿ ಅಶ್ವಿ‌ನ್‌ 46
ಸುರೇಶ್‌ ರೈನಾ ಸಿ ರಾಹುಲ್‌ ಬಿ ಶಮಿ 8
ಅಂಬಾಟಿ ರಾಯುಡು ಸಿ ಪೂರಣ್‌ ಬಿ ಶಮಿ 0
ಸ್ಯಾಮ್‌ ಕರನ್‌ ಔಟಾಗದೆ 5
ಇತರ 7
ಒಟ್ಟು (15.4 ಓವರ್‌ಗಳಲ್ಲಿ 4 ವಿಕೆಟಿಗೆ) 107
ವಿಕೆಟ್‌ ಪತನ:1-24, 2-90, 3-99, 4-99.
ಬೌಲಿಂಗ್‌;
ಮೊಹಮ್ಮದ್‌ ಶಮಿ 4-0-21-2
ಜೇ ರಿಚರ್ಡ್‌ಸನ್‌ 3-0-21-0
ಆರ್ಷದೀಪ್‌ ಸಿಂಗ್‌ 2-0-7-1
ರೀಲೆ ಮೆರೆಡಿತ್‌ 3.4-0-21-0
ಮುರುಗನ್‌ ಅಶ್ವಿ‌ನ್‌ 3-0-32-1

ಕ್ರೀಡೆ – Udayavani – ಉದಯವಾಣಿ
Read More