ಬೆಂಗಳೂರು: 2005ರಲ್ಲಿ ನಗರದಲ್ಲಿ ನಡೆದಿದ್ದ ಶೂಟೌಟ್ ಪ್ರಕರಣದ ಆರೋಪಿ ಮೊಹಮ್ಮದ್ ಹಬೀಬ್​ನನ್ನು ಬಿಡುಗಡೆ ಮಾಡಿ, ಬೆಂಗಳೂರಿನ ಎನ್ಐಎ ವಿಶೇಷ ನ್ಯಾಯಾಲಯ ಆದೇಶಿಸಿದೆ.

2005ರಲ್ಲಿ ನಗರದ ಭಾರತೀಯ ವಿಜ್ಞಾನ ಸಂಸ್ಥೆ(IISC)ಯಲ್ಲಿ ಶೂಟೌಟ್ ನಡೆದಿತ್ತು. ಪ್ರಕರಣದಲ್ಲಿ 7ನೇ ಆರೋಪಿಯಾಗಿ ತ್ರಿಪುರ ಮೂಲದ ಮೊಹಮ್ಮದ್ ಹಬೀಬ್​ನನ್ನು ಬಂಧಿಸಲಾಗಿತ್ತು. ಆದ್ರೆ ಆರೋಪಿ ವಿರುದ್ಧ ಯಾವುದೇ ಸೂಕ್ತ ಸಾಕ್ಷ್ಯಾಧಾರಗಳು ಲಭ್ಯವಿಲ್ಲದ ಕಾರಣ ಆತನನ್ನು  ಬಿಡುಗಡೆಗೊಳಿಸಲು ನ್ಯಾಯಾಧೀಶ ಡಾ. ಕಸನಪ್ಪ ನಾಯಕ್ ರಿಂದ ಆದೇಶ ಹೊರಡಿಸಲಾಗಿದೆ.

ಪ್ರಕರಣದ ಹಿನ್ನೆಲೆ
2005ರಲ್ಲಿ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ನಡೆದ ಶೂಟೌಟ್​ನಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಘಟನೆಯಲ್ಲಿ ಅನೇಕ ಮಂದಿಗೆ ಗಾಯಗೊಂಡಿದ್ದರು. ಪ್ರಕರಣ ಸಂಬಂಧ ಮೊದಲು ಸದಾಶಿವನಗರ ಠಾಣೆಯಲ್ಲಿ FIR ದಾಖಲಾಗಿತ್ತು. ನಂತರ ಈ ಕೇಸ್ ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಗೆ ಟ್ರಾನ್ಸಫರ್ ಆಗಿತ್ತು. ಎನ್ಐಎ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 120(ಬಿ), 121, 121(ಎ). 122, 123, 307, 302, ಆರ್ಮ್ಸ್ ಆಕ್ಟ್ ಸೆಕ್ಷನ್ 25, 27, ಎಕ್ಸ್​ಪ್ಲೋಸಿ್ಸ್​ ಆಕ್ಟ್ ಸೆಕ್ಷನ್ 3, 4 , 5, 6 ಹಾಗೂ ಇಲ್ಲೀಗಲ್ ಆಕ್ಟಿವಿಟಿ ಕಂಟ್ರೋಲ್ ಆಕ್ಟ್​ನ ಸೆಕ್ಷನ್ 10, 13, 16, 17, 18, 20ರಡಿ ಕೇಸ್ ದಾಖಲಾಗಿತ್ತು. ಪ್ರಕರಣದಲ್ಲಿ 4 ವರ್ಷಗಳ ಹಿಂದೆ ಅರೆಸ್ಟ್ ಆಗಿದ್ದ ಹಬೀಬ್ ಜೈಲು ಸೇರಿದ್ದ. ಇತ್ತೀಚೆಗೆ ತನ್ನನ್ನು ಪ್ರಕರಣದಿಂದ ಬಿಡುಗಡೆ ಮಾಡುವಂತೆ  ಸಿಆರ್​​ಪಿಸಿ ಸೆಕ್ಷನ್ 227ರ ಅಡಿ ಅರ್ಜಿ ಸಲ್ಲಿಸಿದ್ದ.

ಈ ಪ್ರಕರಣದ ಮೊದಲನೇ ಆರೋಪಿ ಶಹಾಬುದ್ದೀನ್ ಅಹ್ಮದ್. 2008ರಲ್ಲಿ ಆತ ನೀಡಿದ್ದ ಹೇಳಿಕೆ ಮೇಲೆ ಹಬೀಬ್​​ನನ್ನು ಅರೆಸ್ಟ್​​ ಮಾಡಲಾಗಿತ್ತು. ಶಹಾಬುದ್ದೀನ್ ಬಾಂಗ್ಲಾಗೆ ಭೇಟಿ ನೀಡಿದ್ದ ವೇಳೆ ತ್ರಿಪುರ ರಾಜ್ಯದ ಅಗರ್ತಲದಲ್ಲಿ ಹಬೀಬ್​ನ ಭೇಟಿ ಮಾಡಿದ್ದಾಗಿ ಹೇಳಿದ್ದ. ಅದೇ ರೀತಿ ಶಹಾಬುದ್ದೀನ್ ಸಾಕಷ್ಟು ಜನರನ್ನು ಭೇಟಿಯಾಗಿದ್ದ. ಅವರ ಮೂಲಕ ಊಟ ಹಾಗೂ ಉಳಿಯಲು ವ್ಯವಸ್ಥೆ ಪಡೆದಿದ್ದಾಗಿ ತಿಳಿಸಿದ್ದ. ಆದರೆ ತಾನು ಬಾಂಗ್ಲಾಗೆ ಹೋಗುತ್ತಿರುವ ಉದ್ದೇಶ ಹೇಳಿರಲಿಲ್ಲ ಅಂತ ತನಿಖೆಯ ವೇಳೆ ಹೇಳಿಕೆ ನೀಡಿದ್ದ ಎನ್ನಲಾಗಿದೆ.

ಇದೇ ವೇಳೆ ಬೇರೆ ಕೇಸ್​ನಲ್ಲಿ ಲಖನೌ ಪೊಲೀಸರು ಹಬೀಬ್​​ನನ್ನು ಬಂಧಿಸಿದ್ದರು. ಬಳಿಕ ಕರ್ನಾಟಕ ಪೊಲೀಸರು 2017ರಲ್ಲಿ ಹಬೀಬ್​​ನನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ತನಿಖೆಯಲ್ಲಿ ಹಬೀಬ್ ವಿರುದ್ಧ ಜಿಹಾದಿ ಕೃತ್ಯಗಳ ಕುರಿತು ಆರೋಪಿಸಲಾಗಿತ್ತು. ಬೆಂಗಳೂರಿನಲ್ಲಿ ಉಗ್ರ ಚಟುವಟಿಕೆ ನಡೆಸಲು ಯೋಜನೆ ಹೊಂದಿದ್ದ ಆರೋಪ ಆತನ ಮೇಲಿತ್ತು. ಆದರೆ ಕೋರ್ಟ್ಗೆ ಸೂಕ್ತ ಸಾಕ್ಷ್ಯಗಳನ್ನು ಉಲ್ಲೇಖಿಸಿಲ್ಲ. ಈ ಹಿನ್ನೆಲೆ ಕೋರ್ಟ್​ ಆರೋಪಿ ಮೊಹಮ್ಮದ್ ಹಬೀಬ್ನನ್ನು ಪ್ರಕರಣದಿಂದ ಕೈಬಿಟ್ಟಿದೆ.

The post 2005ರ IISC ಶೂಟೌಟ್ ಪ್ರಕರಣ: ಆರೋಪಿ ಹಬೀಬ್ ಬಿಡುಗಡೆಗೆ NIA ವಿಶೇಷ ಕೋರ್ಟ್ ಆದೇಶ appeared first on News First Kannada.

Source: newsfirstlive.com

Source link