ಟಿ20 ವಿಶ್ವಕಪ್ ನಂತರ ರವಿಶಾಸ್ತ್ರಿ ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಯನ್ನು ತೊರೆದಿದ್ದಾರೆ. ಶಾಸ್ತ್ರಿ ಕೋಚ್ ಸ್ಥಾನದಿಂದ ಕೆಳಗಿಳಿದ ದಿನದಿಂದಲೂ ಅವರು ಈಗ ಏನು ಮಾಡುತ್ತಾರೆ ಎಂಬ ಪ್ರಶ್ನೆಗಳು ಎದ್ದಿದ್ದವು. ಈಗ ಶಾಸ್ತ್ರಿ ಅವರಿಗೆ ಹೊಸ ಜವಾಬ್ದಾರಿ ಸಿಕ್ಕಿದೆ. ಮುಂದಿನ ವರ್ಷ ಜನವರಿಯಲ್ಲಿ ಆರಂಭವಾಗಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನಲ್ಲಿ ನಿವೃತ್ತ ಆಟಗಾರರ ಕಮಿಷನರ್ ಆಗಿ ರವಿಶಾಸ್ತ್ರಿ ಅವರನ್ನು ಸೇರಿಸಿಕೊಳ್ಳಲಾಗಿದೆ.

ಜನವರಿಯಲ್ಲಿ ಗಲ್ಫ್ ದೇಶದಲ್ಲಿ LLCಯ ಮೊದಲ ಅಧಿವೇಶನ ನಡೆಯಲಿದೆ. ಈ ಬಗ್ಗೆ ರವಿಶಾಸ್ತ್ರಿ ಪ್ರತಿಕ್ರಿಯಿಸಿದ್ದು ಲೆಜೆಂಡ್ಸ್ ಲೀಗ್ ಕ್ರಿಕೆಟ್‌ನ ಭಾಗವಾಗಲು ನಾನು ತುಂಬಾ ರೋಮಾಂಚನಗೊಂಡಿದ್ದೇನೆ ಎಂದು ಹೇಳಿಕೊಂಡಿದ್ದಾರೆ. ಲೀಗ್‌ನಲ್ಲಿ ಭಾರತ, ಪಾಕಿಸ್ತಾನ, ಶ್ರೀಲಂಕಾ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗರು ಭಾರತ, ಏಷ್ಯಾ ಮತ್ತು ವಿಶ್ವದ ಇತರ ತಂಡಗಳನ್ನು ಪ್ರತಿನಿಧಿಸಲಿದ್ದಾರೆ. ಭಾರತೀಯ ತಂಡದ ಮಾಜಿ ಫಿಸಿಯೋ ಆಂಡ್ರ್ಯೂ ಲೀಪಸ್ ನಿರ್ದೇಶಕರಾಗಿ ನೇಮಕಗೊಂಡಿದ್ದಾರೆ. ಅವರು ಲೀಗ್‌ಗೆ ಸಂಬಂಧಿಸಿದ ಆಟಗಾರರ ಫಿಟ್‌ನೆಸ್ ಅನ್ನು ನೋಡಿಕೊಳ್ಳುತ್ತಾರೆ. ಹೀಗಾಗಿ ಐಪಿಎಲ್​​​ನಲ್ಲಿ ಕೋಚ್​ ಆಗ್ತಾರೆ ಎಂಬ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

2024 ರಿಂದ 2031ರವರೆಗಿನ ಪ್ರಮುಖ ಟೂರ್ನಮೆಂಟ್​ಗಳ ವೇಳಾಪಟ್ಟಿಯನ್ನು ಐಸಿಸಿ ಪ್ರಕಟಿಸಿದ್ದು, 2025ರ ಚಾಂಪಿಯನ್​ ಟ್ರೋಫಿ ಆತಿಥ್ಯವನ್ನು ಪಾಕಿಸ್ತಾನಕ್ಕೆ ನೀಡಿದೆ. ಆದರೆ ಭಾರತ-ಪಾಕಿಸ್ತಾನ ನಡುವೆ ಸಂಬಂಧ ಸರಿಯಿಲ್ಲದ ಕಾರಣ ಚಾಂಪಿಯನ್​ ಟ್ರೋಫಿಯಲ್ಲಿ ಭಾಗವಹಿಸಲಿದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆ ನಡೆಯುತ್ತಿದೆ. ಆದರೆ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಮಾತನಾಡಿದ್ದು, ಭಾರತ ತಂಡ, ಚಾಂಪಿಯನ್ಸ್ ಟ್ರೋಫಿಗೆ ನಮ್ಮ ದೇಶಕ್ಕೆ ಬರಲಿದೆ. ದೊಡ್ಡ ಟೂರ್ನಮೆಂಟ್ ​ಅನ್ನು ತ್ಯಜಿಸುವುದು ಸುಲಭದ ಮಾತಲ್ಲ ಎಂದಿದ್ದಾರೆ. ಆತಿಥೇಯರ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ಮಂಡಳಿಗಳ ನಡುವಿನ ವೈಷಮ್ಯವನ್ನ ಐಸಿಸಿ ಪರಿಗಣಿಸುತ್ತದೆ. ಆದ್ದರಿಂದ ನನ್ನ ಅಭಿಪ್ರಾಯದಲ್ಲಿ ಭಾರತ ತಂಡ ಪಾಕಿಸ್ತಾನದಲ್ಲಿ ನಡೆಯಲಿರುವ ಚಾಂಪಿಯನ್ಸ್ ಟ್ರೋಫಿಯಿಂದ ಹಿಂದೆ ಸರಿಯುವುದಿಲ್ಲ ಎಂದು ಭಾವಿಸುತ್ತೇನೆ ಎಂದು ರಮೀಜ್ ತಿಳಿಸಿದ್ದಾರೆ.

News First Live Kannada