ಬೆಂಗಳೂರು: ಮಳೆಗಾಲ ಮುಗಿದ್ರೂ ಮಳೆಯಬ್ಬರ ನಿಲ್ಲುತ್ತಿಲ್ಲ. ಚಳಿಗಾಲ ಆರಂಭವಾದ್ರೂ ವರುಣ ಮಾತ್ರ ಆರ್ಭಟಿಸ್ತಲೇ ಇದ್ದಾನೆ. ಅನ್ನದಾತರು ವರ್ಷಪೂರ್ತಿ ಕಷ್ಟಪಟ್ಟು ಬೆಳೆದಿದ್ದ ಫಸಲು ಇನ್ನೇನು ಕೈಗೆ ಬರ್ಬೇಕು ಅನ್ನುವಷ್ಟರಲ್ಲಿ ನೀರುಪಾಲಾಗಿ ಹೋಗಿದೆ. ಆದ್ರೆ, ಜನಪ್ರತಿನಿಧಿಗಳು ಮಾತ್ರ ರಾಜಕೀಯದಲ್ಲಿ ನಿರತರಾಗಿದ್ದಾರೆ. ಆ ಯಾತ್ರೆ, ಈ ಯಾತ್ರೆ ಅಂತಾ ಟೈಮ್ ಪಾಸ್ ಮಾಡ್ತಿದ್ದಾರೆ.

ಮಳೆರಾಯನ ಅಬ್ಬರಕ್ಕೆ ಸಿಲುಕಿ ಇಡೀ ರಾಜ್ಯವೇ ಮುಳುಗಿ ಹೋಗಿದೆ. ಅಕಾಲಿಕ ಮಳೆಗೆ ಅನ್ನದಾತ ಕಷ್ಟಪಟ್ಟು ಬೆಳೆದಿದ್ದ ಬೆಳೆಗಳೆಲ್ಲಾ ಸರ್ವನಾಶವಾಗಿ ಹೋಗಿವೆ. ವರುಣನ ಆರ್ಭಟಕ್ಕೆ ಜನ ಜೀವನವೇ ದುಸ್ಥರವಾಗಿ ಹೋಗಿದೆ. ಇಂಥಾ ಸಂಧಿಗ್ಧ ಪರಿಸ್ಥಿತಿಯಲ್ಲಿ ಜನರ ಹಿತ ಕಾಯಬೇಕಿದ್ದ ಆಡಳಿತ ಪಕ್ಷ ರಾಜಕೀಯ ಯಾತ್ರೆ ನಡೆಸ್ತಿದೆ. ಇತ್ತ ಸರ್ಕಾರವನ್ನ ಎಚ್ಚರಿಸಬೇಕಿದ್ದ ವಿಪಕ್ಷ ಪಾಲಿಟಿಕ್ಸ್‌ನಲ್ಲಿ ಮುಳುಗಿ ಹೋಗಿದೆ.

ಪೈಪೋಟಿಗೆ ಬಿದ್ದು ಉಭಯ ಪಕ್ಷಗಳಿಂದ ಜನಯಾತ್ರೆ
ಊರಿಗೆ ಊರೇ ಮುಳುಗಿ ಹೋದ್ರು ಬಿಜೆಪಿ ನಾಯಕರು ಜನಸ್ವರಾಜ್ ಯಾತ್ರೆ ಮಾಡ್ತಾ ತಿರುಗುತ್ತಿದ್ದಾರೆ. ಬೆಳೆಹಾನಿ ಪ್ರದೇಶಕ್ಕೆ ತೆರಳದೇ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಓಡಾಡ್ತಿದ್ದಾರೆ. ಇತ್ತ ಕಾಂಗ್ರೆಸ್‌ ಕೂಡಾ ಯಾವುದ ಬಗ್ಗೆಯೂ ತಲೆಕೆಡಿಸಿಕೊಳ್ಳದೇ ಜನ ಜಾಗೃತಿಯಾತ್ರೆಯಲ್ಲಿ ನಿರತವಾಗಿದೆ. ಪ್ರವಾಹದಲ್ಲಿ ಜನ ನಲುಗಿದ್ದರೂ ಎರಡೂ ಪಕ್ಷಗಳು ತಮ್ಮ ಪ್ರತಿಷ್ಠೆ ಯಾತ್ರೆಯನ್ನ ನಡೆಸುತ್ತಲೇ ಇವೆ.

ಪ್ರತಿಷ್ಠೆ ಯಾತ್ರೆಯಲ್ಲಿ ಮುಳುಗಿರುವ ಬಿಜೆಪಿ, ಕಾಂಗ್ರೆಸ್
ರಾಜ್ಯದಲ್ಲಿ ನಿರಂತರ ಮಳೆಗೆ ಬೆಳೆ, ಆಸ್ತಿಪಾಸ್ತಿ ನಾಶವಾಗಿದೆ. ಇಷ್ಟೆಲ್ಲಾ ಅನಾಹುತ ಸಂಭವಿಸಿದ್ದರೂ ಜನ ನಾಯಕರು ಮಾತ್ರ ನಿರ್ಲಕ್ಷ್ಯ ತೋರುತ್ತಿದ್ದಾರೆ. ಪ್ರತಿಷ್ಠೆಯ ಯಾತ್ರೆಯಲ್ಲಿ ಬಿಜೆಪಿ, ಕಾಂಗ್ರೆಸ್ ನಾಯಕರು ಮುಳುಗಿದ್ದಾರೆ. ಇತ್ತ ಅಧಿಕಾರ ವಹಿಸಿಕೊಂಡಿರೋ ಉಸ್ತುವಾರಿ ಸಚಿವರು ಜಿಲ್ಲೆಗಳಿಗೆ ತೆರಳಿ ಸಮಸ್ಯೆಗಳನ್ನ ಆಲಿಸುತ್ತಿಲ್ಲ. ಕೇಸರಿಪಡೆ ಜನಸ್ವರಾಜ್ ಯಾತ್ರೆಗೆ ಆದ್ಯತೆ ನೀಡಿದ್ದು, ಈ ಯಾತ್ರೆಯಲ್ಲೇ ಕೇಂದ್ರ ಹಾಗೂ ರಾಜ್ಯ ಸಚಿವರು ಬ್ಯುಸಿಯಾಗಿದ್ದಾರೆ. ಇಂತಹ ಸಂಕಷ್ಟದ ವೇಳೆಯಲ್ಲೂ ರಾಜಕೀಯ ಭಾಷಣದಲ್ಲಿ ನಿರತರಾಗಿದ್ದಾರೆ. ಇತ್ತ ವಿಪಕ್ಷ ಕಾಂಗ್ರೆಸ್​ ಕೂಡಾ ಜನಜಾಗೃತಿ ಯಾತ್ರೆ ನಡೆಸುತ್ತಿದ್ದು, ಜನರ ಕಷ್ಟ ಆಲಿಸದೆ ಬರೀ ಹೇಳಿಕೆಗಳಿಗೆ ಮಾತ್ರ ಕೈಪಡೆ ಸೀಮಿತವಾಗಿದೆ.

ಒಟ್ಟಾರೆ ರಾಜಕೀಯ ನಾಯಕರಿಗೆ ರೈತನ ಕಣ್ಣೀರು ಕಾಣುತ್ತಿಲ್ಲ. ಹಸಿವಿನ ಬೇಗೆಯು ಗಮನಕ್ಕೆ ಬರುತ್ತಿಲ್ಲ. ಕೇವಲ ತಮ್ಮ ಸ್ವಾರ್ಥದಲ್ಲೇ ಮುಳುಗಿ ಹೋಗಿದ್ದಾರೆ. ಇನ್ನಾದ್ರೂ ಎಚ್ಚೆತ್ತು ಸರ್ಕಾರವಾಗಲೀ, ವಿಪಕ್ಷವಾಗಲೀ ಜನರ ನೆರವಿಗೆ ಧಾವಿಸಬೇಕಿದೆ.

ವಿಶೇಷ ಬರಹ: ಹರೀಶ್ ಕಾಕೋಳ್, ನ್ಯೂಸ್‌ಫಸ್ಟ್‌, ಬೆಂಗಳೂರು

News First Live Kannada