ಬೆಂಗಳೂರು: ಸತತವಾಗಿ ಸುರಿದ ಮಳೆಯಿಂದ ಬೆಂಗಳೂರಿನ ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್​ ಜಲಾವೃತವಾಗಿದೆ. ಜಲಾವೃತಗೊಂಡಿರೋ ಕೇಂದ್ರೀಯ ವಿಹಾರ್ ಅಪಾರ್ಟ್​ಮೆಂಟ್​​ಗೆ ಸಿಎಂ ಬಸವರಾಜ್ ಬೊಮ್ಮಾಯಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಮನೆಗೆ ನೀರು ನುಗ್ಗಿದ್ರೆ 10 ಸಾವಿರ ರೂಪಾಯಿ, ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿದ್ದರೆ ₹5 ಲಕ್ಷ ಪರಿಹಾರ ನೀಡಲಾಗುತ್ತದೆ. ಇವತ್ತೇ 10 ಸಾವಿರ ರೂಪಾಯಿ, ಪೂರ್ಣ ಪ್ರಮಾಣದಲ್ಲಿ ಹಾನಿಯಾಗಿರೋ ಮನೆಗಳ ಮಾಲೀಕರಿಗೆ ಮೊದಲ ಕಂತದಲ್ಲಿ 1 ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

ಅಲ್ಲದೇ, ಅತೀ ಹೆಚ್ಚು ಮಳೆಗೆ ಯಲಹಂಕ ಕೆರೆ ಕೋಡಿ ಒಡೆದಿದೆ. ಯಲಹಂಕ ಕೆರೆ ಕೋಡಿ ಒಡೆದು ಅಪಾರ್ಟ್​​ಮೆಂಟ್ ಜಲಾವೃತವಾಗಿದೆ. ಅಲ್ಲದೇ ಸುಮಾರು 300-400 ಮನೆಗಳಿಗೆ ಕೆರೆ ನೀರು ನುಗ್ಗಿದೆ. ಅಪಾರ್ಟ್​ಮೆಂಟ್​ನಲ್ಲಿ 2-3 ಅಡಿ ನೀರು ನಿಂತಿದೆ. ಎಲ್ಲಾ ಮಾಹಿತಿಯನ್ನ ಅಧಿಕಾರಿಗಳಿಂದ ಪಡೆದಿದ್ದೇನೆ. ರಾಜಕಾಲುವೆ ಚಿಕ್ಕದಾಗಿದ್ದು ನೀರು ಹರಿದು ಹೋಗಿಲ್ಲ, ರಾಜಕಾಲುವೆ ಒತ್ತುವರಿಯಾಗಿದ್ದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ರಾಜಕಾಲುವೆ ಸಂಪೂರ್ಣ ದುರಸ್ಥಿ ಮಾಡಲು ಸೂಚನೆ ನೀಡುತ್ತೇನೆ. ಕೂಡಲೇ ರಾಜಕಾಲುವೆ ಅಗಲೀಕರಣ ಅಗತ್ಯವಿದೆ. ಕಾಮಗಾರಿಗೆ ಅಗತ್ಯ ಹಣಕಾಸು ನೆರವು ಒದಗಿಸುತ್ತೇವೆ.

ಮಳೆ ನಿಂತ ಕೂಡಲೇ ರಾಜಕಾಲುವೆ ಅಗಲೀಕರಣ ಮಾಡಲಾಗುತ್ತದೆ. ಇಡೀ ಬೆಂಗಳೂರಿನಲ್ಲಿ ರಾಜಕಾಲುವೆ ಸಮಸ್ಯೆ ಇದೆ. ಹೈವೇ ಕೆಳಗೆ ಡ್ರೈನೇಜ್ ಕಂಟಿನ್ಯೂ ಮಾಡಲು ಕ್ರಮವಹಿಸಲಾಗುವುದು. ನೀರು ನುಗ್ಗಿದ ಮನೆಗಳಿಗೆ 10 ಸಾವಿರ ರೂ. ಪರಿಹಾರ, ಹೆಚ್ಚಿನ ಹಾನಿಯಾಗಿದ್ದರೇ ಒಂದು ಲಕ್ಷ ರೂಪಾಯಿ ಪರಿಹಾರ ನೀಡಲಾಗುತ್ತದೆ ಎಂದು ತಿಳಿಸಿದರು.

News First Live Kannada