ಮಂಡ್ಯ: ವಿಧಾನ ಪರಿಷತ್​ ಚುನಾವಣೆಗೆ ನಾಮಪತ್ರ ಸಲ್ಲಿಕೆ ಮಾಡಲು ಇಂದು ಅಂತಿಮ ದಿನವಾಗಿದ್ದು, ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಇದರೊಂದಿಗೆ ಚುನಾವಣಾ ಕಣ ರಂಗೇರಿದ್ದು, ತಮ್ಮ ಪಕ್ಷದ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲು ನಾಯಕರು ಸಿದ್ಧತೆ ನಡೆಸಿದ್ದಾರೆ. ಈ ನಡುವೆ ಮಂಡ್ಯ ಸಂಸದೆ ಸುಮಲತಾ ಅವರು ಯಾರಿಗೆ ಬೆಂಬಲ ನೀಡಲಿದ್ದಾರೆ ಎಂಬ ಚರ್ಚೆ ಸದ್ಯ ಕ್ಷೇತ್ರದಲ್ಲಿ ಜೋರಾಗಿದೆ.

ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿದ್ದ ಸುಮಲತಾ ಅವರಿಗೆ ಬಿಜೆಪಿ ಬೆಂಬಲ ನೀಡಿತ್ತು. ಅಲ್ಲದೇ ಮೈಸೂರಿನಲ್ಲಿ ನಡೆದ ಪ್ರಚಾರದ ಸಮಾವೇಶದಲ್ಲಿ ಸುಮಲತಾ ಗೆಲ್ಲಿಸುವಂತೆ ಬಿಜೆಪಿ ಕಾರ್ಯಕರ್ತರಿಗೆ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಮನವಿ ಮಾಡಿದ್ದರು. ಅತ್ತ ಕಾಂಗ್ರೇಸ್-ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರ್ ಸ್ವಾಮಿ ಬದಲು ಸುಮಲತಾರನ್ನು ಬಹುತೇಕ ಕಾಂಗ್ರೆಸ್​ ನಾಯಕರು ಬೆಂಬಲ ಸೂಚಿಸಿದ್ದರು. ನೇರವಾಗಿ ಬೆಂಬಲ ಸೂಚಿಸದಿದ್ದರೂ ಕೂಡ ಸುಮಲತಾ ಗೆಲುವಿಗೆ ತಂತ್ರ ಎಣೆದಿದ್ದ ಕಾಂಗ್ರೆಸ್​ ನಾಯಕರು ಗೆಲುವಿಗೆ ಶ್ರಮಿಸಿದ್ರು. ಈ ಹಿನ್ನೆಲೆಯಲ್ಲಿ ಸದ್ಯ ಸುಮಲತಾ ಅವರು ಇಕ್ಕಟ್ಟಿ ಸಿಲುಕಿದ್ದು, ಬಿಜೆಪಿಗೆ ಬೆಂಬಲ ಕೊಡೋದಾ, ಕಾಂಗ್ರೆಸ್​ಗೆ ಬೆಂಬಲ ಕೊಡೋದಾ ಎಂಬ ಚಿಂತನೆಯಲ್ಲಿದ್ದಾರೆ ಎನ್ನಲಾಗಿದೆ. ಈ ನಡುವೆ ಸುಮಲತಾ ಅವರ ಬಹುತೇಕ ಬೆಂಬಲಿಗರು ತಟಸ್ಥವಾಗಿರಲು ನಿರ್ಧರಿಸುವ ಸಾಧ್ಯತೆ ಇದೇ ಎಂದಿದ್ದಾರೆ.

ಇತ್ತ ಬಿಜೆಪಿ ಟಿಕೆಟ್​ ಪಡೆದಿರುವ ಬೂಕಹಳ್ಳಿ ಮಂಜು ಅವರು ಸುದ್ದಿಗೋಷ್ಠಿ ನಡೆಸಿ ತಮಗೇ ಸುಮಲತಾ ಅವರು ಬೆಂಬಲ ನೀಡಬೇಕು. ಅವರನ್ನು ಭೇಟಿ ಮಾಡುತ್ತೇನೆ ಎಂದಿದ್ದಾರೆ. ಸುಮಲತಾ ಅಂಬರೀಶ್ ಅವರ ಚುನಾವಣೆಯಲ್ಲಿ ನಾವು ಅವರ ಪರ ಕೆಲಸ ಮಾಡಿದ್ದೀವಿ. ಅವರ ಗೆಲುವು ನಮ್ಮ ಗೆಲುವು ಅಂತ ಸಂಭ್ರಮಿಸಿದ್ದೇವೆ. ಸುಮಲತಾ ನಮಗೆ ಬೆಂಬಲ ನೀಡಲಿದ್ದಾರೆ. ಈಗಾಗಲೇ ದೂರವಾಣಿ ಮೂಲಕ ಮಾತನಾಡಿದ್ದೇವೆ. ಮುಂದೆ ಖುದ್ದಾಗಿ ಭೇಟಿ ಮಾಡಿ ಬೆಂಬಲ ಕೇಳುತ್ತೇನೆ. ಸುಮಲತಾ ಬೆಂಬಲ ನೀಡುವ ವಿಶ್ವಾಸ ಇದೆ ಎಂದರು. ಇದೇ ವೇಳೆ ಬಿಜೆಪಿ ಋಣ ತೀರಿಸಲು ಸುಮಲತಾ ಅವರಿಗೆ ಒಳ್ಳೆಯ ಅವಕಾಶ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ವಿಜಯಕುಮಾರ್ ಹೇಳಿದ್ರು.

News First Live Kannada