ರಾಮನಗರ: ಪರೀಕ್ಷೆ ಬರೆದದ್ದು ಆಯ್ತು.. ಎಕ್ಸಾಂ ಪಾಸ್​​ ಆದ್ರು ಯೋಗೇಶ್ವರ್​​​ ಮಾತ್ರ ಡಿಬಾರ್​​ ಆಗಿದ್ದಾರೆ.. ನಾಯಕತ್ವ ಬದಲಾವಣೆ ವೇಳೆ ಅಂಕಗಣಿತದ ಲೆಕ್ಕ ಹಾಕಿದ್ದ ಸೈನಿಕ, ಆ ಬಳಿಕ ಲೆಕ್ಕ ತಪ್ಪಿ ಒಬ್ಬಂಟಿ ಆಗಿ ಪರಿತಪಿಸ್ತಿದ್ದಾರೆ. ಕಮಲದ ಮನೆಯಲ್ಲಿ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಅಂತ ಬೇಸರಗೊಂಡಿದ್ದಾರೆ. ಇದೇ ಸೂಕ್ತ ಸಮಯ ಅಂತ ಕಾಂಗ್ರೆಸ್​​ ಶಿಕಾರಿಗೆ ಇಳಿದಿದೆ. ಡಿಕೆಶಿ ಇಟ್ಟ ಗುರಿಯಲ್ಲಿ ಭರ್ಜರಿ ಬೇಟೆಯ ಸುಳಿವು ಸಿಕ್ಕಿದೆ.

ಕಮಲ ಮನೆಯಲ್ಲಿ ಮನ್ನಣೆ ಸಿಗದ ಕಾರಣ ಕೇಸರಿ ಬ್ರಿಗೇಡ್​​​​ ಬಗ್ಗೆ ಯೋಗೇಶ್ವರ್​​​ ಮುನಿಸಿಕೊಂಡಿದ್ದಾರೆ. ಸೈನಿಕನ ಬಾಯಿಂದ ಬರುತ್ತಿರುವ ಬೇಸರದ ನುಡಿಗಳು ಕಮಲ ತೊರೆಯುವ ಸುಳಿವು ನೀಡಿತ್ತಿದೆ. ಈ ಮುನಿಸೇ ಡಿಕೆಶಿಗೆ ಲಾಭದ ಅಸ್ತ್ರವಾಗಿ ಬಳಕೆ ಆಗಿದೆ .ಹಾಗಾದ್ರೆ ಜನ ಸ್ವರಾಜ್​ ಸಮಾವೇಶದಲ್ಲಿ ಸಿ.ಪಿ ಯೋಗೇಶ್ವರ್​​​ ಬಾಯಿಂದ ಬಂದ ಅಸಮಾಧಾನದ ನುಡಿಗಳು ಏನ್​ ಅಂತ ನೋಡೋದಾದ್ರೆ.

‘ಸೈನಿಕ’ನ ಬೇಸರದ ನುಡಿ
ಬೇಸರ 1: ರಾಮನಗರದಲ್ಲಿ ಇಬ್ಬರು ಘಟಾನುಘಟಿ ನಾಯಕರಿದ್ದಾರೆ
ಬೇಸರ 2: ರಾಮನಗರದ ಇಬ್ಬರು ನಾಯಕರು ಕೂಡ ರಾಜ್ಯಾಧ್ಯಕ್ಷರು
ಬೇಸರ 3: ಬಿಜೆಪಿ ರಾಮನಗರ ಜಿಲ್ಲೆಗೆ ಯಾವುದೇ ಅಧಿಕಾರ ನೀಡಿಲ್ಲ
ಬೇಸರ 4: ನಿಷ್ಠವಂತ ಕಾರ್ಯಕರ್ತರಿಗೆ ಯಾವುದೇ ಸಹಾಯ ಮಾಡುತ್ತಿಲ್ಲ

ರಾಮನಗರ ಜಿಲ್ಲೆಯಲ್ಲಿ ಇಬ್ಬರು ಘಟಾನುಘಟಿ ನಾಯಕರಿದ್ದಾರೆ. ಆ ಇಬ್ಬರು ನಾಯಕರು ಕೂಡ ರಾಜ್ಯಾಧ್ಯಕ್ಷರು, ಆದ್ರೂ ರಾಮನಗರ ಜಿಲ್ಲೆಗೆ ಬಿಜೆಪಿ ಯಾವುದೇ ಅಧಿಕಾರ ನೀಡಿಲ್ಲ, ಅಲ್ಲದೆ ನಿಷ್ಠಾವಂತ ಕಾರ್ಯಕರ್ತರಿಗೆ ಯಾವುದೇ ಸಹಾಯ ಮಾಡುತ್ತಿಲ್ಲ ಅಂತ ಸಿ.ಪಿ ಯೋಗೇಶ್ವರ್ ಅಸಮಾಧಾನ ಹಾಕಿದ್ದಾರೆ.

ಇತ್ತ ಚನ್ನಪಟ್ಟಣದಲ್ಲಿ ಚಂದದ ರಾಜಕೀಯ ಚಕ್ರವ್ಯೂಹಕ್ಕೆ ಡಿ.ಕೆ ಶಿವಕುಮಾರ್​​ ನೀಲನಕ್ಷೆ​ ಸಿದ್ಧಪಡಿಸುತ್ತಿದ್ದಾರೆ. ಕಮಲದ ವಿರುದ್ಧ ಅಸಮಾಧನಗೊಂಡಿರುವ ಸೈನಿಕನ ಸೆಳೆಯಲು ಸಜ್ಜಾಗಿದ್ದಾರೆ. ದಳಪತಿಗಳನ್ನ ಕಟ್ಟಿಹಾಕಲು ಸೈನಿಕನ ಅನಿವಾರ್ಯತೆ ಕಾಡುತ್ತಿದೆ.

ಕೈಗೆ ‘ಸೈನಿಕ’ನ ಅನಿವಾರ್ಯತೆ
ಲೆಕ್ಕಚಾರ 1: ರಾಮನಗರದಲ್ಲಿ ಹೆಚ್​.ಡಿ ಕುಮಾರಸ್ವಾಮಿ ಪ್ರಾಬಲ್ಯವಿದೆ
ಲೆಕ್ಕಚಾರ 2: ಹೆಚ್​ಡಿಕೆ ಕಟ್ಟಿಹಾಕಬೇಕಾದ ಅನಿವಾರ್ಯತೆ ಕಾಂಗ್ರೆಸ್​​ಗಿದೆ
ಲೆಕ್ಕಚಾರ 3: ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೂಕ್ತ ಅಭ್ಯರ್ಥಿ ಕೊರತೆ
ಲೆಕ್ಕಚಾರ 4: ದಳಪತಿಗಳ ಮಣಿಸಲು ಯೋಗೇಶ್ವರ್​​ಗೆ ಕಾಂಗ್ರೆಸ್​​ ಗಾಳ
ಲೆಕ್ಕಚಾರ 5: ಬಿಜೆಪಿಯಲ್ಲಿ ಸ್ಥಾನ ಕಳೆದುಕೊಂಡಿರುವ ಸಿ.ಪಿ ಯೋಗೇಶ್ವರ್​​

ರಾಮನಗರದಲ್ಲಿ ಮಾಜಿ ಸಿಎಂ ಹೆಚ್​.ಡಿ ಕುಮಾರಸ್ವಾಮಿ ಪ್ರಾಬಲ್ಯವಿದೆ. ಹೀಗಾಗಿ ಕುಮಾರಸ್ವಾಮಿಯನ್ನು ಕಟ್ಟಿಹಾಕಬೇಕಾದ ಅನಿವಾರ್ಯತೆ ಕಾಂಗ್ರೆಸ್​​ಗಿದೆ. ಅಲ್ಲದೆ ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಸೂಕ್ತ ಅಭ್ಯರ್ಥಿ ಕೊರತೆ ಕಾಡುತ್ತಿದೆ. ಹೀಗಾಗಿ ದಳಪತಿಗಳ ಮಣಿಸಲು ಯೋಗೇಶ್ವರ್​​ಗೆ ಕಾಂಗ್ರೆಸ್​​ ಗಾಳ ಹಾಕಿದೆ. ಅಲ್ಲದೆ ಸಿ.ಪಿ ಯೋಗೇಶ್ವರ್​​ಗೆ ಬಿಜೆಪಿ ಯಾವುದೇ ಅಧಿಕಾರ ನೀಡಿಲ್ಲ, ಇದರಿಂದ ಕಾಂಗ್ರೆಸ್​ ದಾರಿ ಮತ್ತಷ್ಟು ಸುಲಭವಾಗಿದೆ.

ಇತ್ತ ಸಂಸದ ಡಿ.ಕೆ ಸುರೇಶ್​ ಕೂಡ ಯೋಗೇಶ್ವರ್​​​​ ಕೈ ಸೇರುವ ಸುಳಿವು ನೀಡಿದ್ದಾರೆ. ಅರ್ಜಿ ಹಾಕಿದ್ದಾಗ ಕರೆದುಕೊಳ್ಳುತ್ತೇವೆ ಅಂತ ಪರೋಕ್ಷ ಆಹ್ವಾನ ನೀಡಿದ್ದಾರೆ.ಒಟ್ಟಾರೆ, ಮುಂದಿನ 15 ತಿಂಗಳ ಹೊತ್ತಿಗೆ ಬರಲಿರುವ ಚುನಾವಣೆಗೆ ಸಿದ್ಧತೆ ಜೊರಾಗಿ ನಡೆಯುತ್ತಿದೆ. ತಂತ್ರ-ಪ್ರತಿತಂತ್ರಗಳು ಪ್ರಯೋಗವಾಗ್ತಿದೆ. ಇದರ ನಡುವೆ ಸೈನಿಕ ಕಮಲ ತೊರೆದು ಮಾತೃ ಪಕ್ಷಕ್ಕೆ ಮರಳಲು ಸಜ್ಜಾಗಿರುವುದು, ಕುತೂಹಲ ಮತ್ತಷ್ಟು ಹೆಚ್ಚಿಸಿದೆ.

ವಿಶೇಷ ವರದಿ: ಮೋಹನಕುಮಾರ, ನ್ಯೂಸ್ ಫಸ್ಟ್, ರಾಮನಗರ

News First Live Kannada