ಯಲಹಂಕನಲ್ಲಿರುವ ಕೇಂದ್ರೀಯ ವಿಹಾರ್ ಅಪಾರ್ಟ್ಮೆಂಟ್ ಒಂದು ದ್ವೀಪವಾಗಿ ಪರಿವರ್ತನೆಗೊಂಡಿರುವ ಬಗ್ಗೆ ನಾವು ಈಗಾಗಲೇ ಚರ್ಚೆ ಮಾಡಿದ್ದೇವೆ. ಅಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಗಳವಾರ ಅಧಿಕಾರಿಗಳೊಂದಿಗೆ ಆಗಮಿಸಿದ್ದರು. ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ ಸಹ ಅವರ ಜೊತೆ ಇದ್ದರು. ನಿಮಗೆ ಗೊತ್ತಿರಬಹುದು, ಬೊಮ್ಮಾಯಿ ಅವರು ಸೋಮವಾರದಂದು ಮಳೆಯಿಂದ ಆಗಿರುವ ಹಾನಿಯ ಪ್ರಥಮ ಮಾಹಿತಿ ಪಡೆದುಕೊಳ್ಳಲು ಕೋಲಾರ ಜಿಲ್ಲೆಗೆ ತೆರಳಿದ್ದರು. ಅದೇ ಉದ್ದೇಶದೊಂದಿಗೆ ಇಂದು ಅಂದರೆ ಮಂಗಳವಾರ ಬೆಂಗಳೂರಿನ ಹಲವು ಪ್ರದೇಶಗಳಿಗೆ ಬೇಟಿ ನೀಡಿದರು.

ಮುಖ್ಯಮಂತ್ರಿಗಳ ಕಾಲಿಗೆ ಗಾಯವಾದಂತಿದೆ. ಅವರು ನಡೆಯುವಾಗ ಕುಂಟುತ್ತಿರುವುದು ವಿಡಿಯೋನಲ್ಲಿ ಸ್ಪಷ್ಟವಾಗಿ ಕಾಣುತ್ತಿದೆ. ಈ ಅಪಾರ್ಟ್ ಮೆಂಟ್ ಕಂಪೌಂಡಿನಲ್ಲಿ 2-3 ಅಡಿಗಳಷ್ಟು ಎತ್ತರ ನೀರು ನಿಂತಿದೆ. ಹಾಗಾಗಿ ಬೊಮ್ಮಾಯಿ ಅವರು ತಮ್ಮ ಪೈಜಾಮವನ್ನು ಮೊಣಕಾಲವರೆಗೆ ಮೇಲೆತ್ತಿದ್ದರು.

ಆದರೆ ಅವರು ಅವರಣದೊಳಗೆ ನಡೆದು ಹೋಗುವಂಥ ಸ್ಥಿತಿಯೇನೂ ಎದುರಾಗಲಿಲ್ಲ. ಒಂದು ಸನ್ರೂಫ್ ಜೀಪನ್ನು ಅವರಿಗಾಗಿ ವ್ಯವಸ್ಥೆ ಮಾಡಲಾಗಿತ್ತು. ಜೀಪು ನಿಧಾನವಾಗಿ ಚಲಿಸುತ್ತಿದ್ದಂತೆ ಬೊಮ್ಮಾಯಿ ಅವರು ಸುತ್ತಣ ಪ್ರದೇಶವನ್ನು ವೀಕ್ಷಿಸಿದರು. ಕನ್ನಡದ ಹಲವಾರು ಟಿವಿ ಚ್ಯಾನೆಲ್ ಗಳು ಮುಖ್ಯಮಂತ್ರಿಗಳ ಈ ಭೇಟಿಯನ್ನು ನೇರಪ್ರಸಾರ ಮಾಡಿದವು.

ಮುಖ್ಯಮಂತ್ರಿಗಳು ತೊಂದರೆಗೊಳಗಾಗಿರುವ ಅಪಾರ್ಟ್ಮೆಂಟ್ ನಿವಾಸಿಗಳೊಂದಿಗೆ ಜೀಪಿನಲ್ಲಿ ನಿಂತುಕೊಂಡೇ ಮಾತುಕತೆ ನಡೆಸಿ ಸಮಸ್ಯೆಯನ್ನು ನಿವಾರಿಸುವ ಭರವಸೆಯನ್ನು ನೀಡಿದರು.

ಇದನ್ನೂ ಓದಿ:  Andhra Pradesh: ಪ್ರವಾಹದಲ್ಲಿ ಕೊಚ್ಚಿ ಹೋಗುತ್ತಿದ್ದ ಅರ್ಚಕರ ಜೀವ ಉಳಿಸಿದ ಟ್ರಾಫಿಕ್ ಪೊಲೀಸ್; ವಿಡಿಯೊ ವೈರಲ್

TV9 Kannada