ಬಿಜೆಪಿ ಬೆಂಬಲಿತ ಮಹೇಶ್ ಜೋಶಿ ವಿರುದ್ಧ ಕೆಲಸ ಮಾಡಿದ ಆರೋಪ: ಪಕ್ಷದಿಂದ ಎಂ.ಮಹೇಂದ್ರ ಗೌಡ ಅಮಾನತು

ಸಾಹಿತ್ಯ ಪರಿಷತ್ ಚುನಾವಣೆಯಲ್ಲಿ ರಾಜಕೀಯ ಪ್ರಭಾವದ ಆರೋಪ

ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಮಹೇಶ್ ಜೋಶಿ ವಿರುದ್ಧ ಕೆಲಸ ಮಾಡಿದ್ದ ಎಂ.ಮಹೇಂದ್ರ ಗೌಡ ಅವರನ್ನು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ವಜಾಗೊಳಿಸಿದ್ದಾರೆ. ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ಮಹೇಂದ್ರ ಅವರನ್ನು ವಚಾ ಮಾಡಲಾಗಿದೆ ಎಂದು ಸೂಚನಾ ಪತ್ರದಲ್ಲಿ ತಿಳಿಸಲಾಗಿದೆ.

ತಾವು ನಿರಂತರವಾಗಿ ಒಂದಿಲ್ಲೊಂದು ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಎಲ್ಲವನ್ನೂ ಕಡೆಗಣಿಸಿದ್ದೀರಿ. ಪ್ರಸ್ತುತ ನಡೆಯುತ್ತಿರುವ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಸಂಬಂಧಿಸಿದಂತೆ ಬಿಜೆಪಿಯು ಅಧಿಕೃತವಾಗಿ ಬೆಂಬಲ ನೀಡಿರುವ ಮಹೇಶ್ ಜೋಶಿ ಅವರ ವಿರುದ್ಧ ಕೆಲಸ ಮಾಡಿದ್ದೀರಿ. ಬೇರೊಬ್ಬ ಅಭ್ಯರ್ಥಿಯ ಪರವಾಗಿ ಬೆಂಬಲ ಘೋಷಿಸಿ ಹಲವು ವಾಟ್ಸ್ಯಾಪ್​ ಗ್ರೂಪ್​ಗಳಿಗೆ ಸಂದೇಶಗಳನ್ನು ಹಾಕಿದ್ದೀರಿ ಎಂದು ರಮೇಶ್ ಹೇಳಿದ್ದಾರೆ.

ತಕ್ಷಣದಿಂದ ಜಾರಿಗೆ ಬರುವಂತೆ ತಮ್ಮನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಕಾರ್ಯಕಾರಿಣಿ ಸದಸ್ಯ ಸ್ಥಾನದಿಂದ ತೆಗೆದುಹಾಕಲಾಗಿದೆ. ಇನ್ನು ಮುಂದೆ ಪಕ್ಷದ ಯಾವುದೇ ಚಟುವಟಿಕೆಗಳಲ್ಲಿ ಅಧಿಕೃತವಾಗಿ ಭಾಗವಹಿಸುವ ಅವಕಾಶ ಇರುವುದಿಲ್ಲ ಎಂದು ಮಹೇಂದ್ರಗೌಡ ಅವರಿಗೆ ನೀಡಿರುವ ಪತ್ರದಲ್ಲಿ ಎಚ್ಚರಿಸಲಾಗಿದೆ.

ಇದನ್ನೂ ಓದಿ: ಕನ್ನಡ ಸಾಹಿತ್ಯ ಪರಿಷತ್ ಚುನಾವಣೆ ಫಲಿತಾಂಶದ ವಿವರಗಳು ಇಲ್ಲಿದೆ

TV9 Kannada