ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ ಟಿಎಂಸಿ ಸೇರುವ ಸಾಧ್ಯತೆ

ಕೀರ್ತಿ ಆಜಾದ್

ದೆಹಲಿ: ಕಾಂಗ್ರೆಸ್ ನಾಯಕ ಕೀರ್ತಿ ಆಜಾದ್ (Kirti Azad l)ಮಂಗಳವಾರ ನವದೆಹಲಿಯಲ್ಲಿ ತೃಣಮೂಲ ಕಾಂಗ್ರೆಸ್ (TMC) ಸೇರುವ ಸಾಧ್ಯತೆ ಇದೆ. 2019 ರಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ಪಕ್ಷಾಂತರವಾಗಿದ್ದ ಆಜಾದ್ ಅವರು ಕಾಂಗ್ರೆಸ್ ನಾಯಕತ್ವ, ವಿಶೇಷವಾಗಿ ರಾಹುಲ್ ಗಾಂಧಿ (Rahul Gandhi) ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನರೇಂದ್ರ ಮೋದಿ ನೇತೃತ್ವದ ಬಿಜೆಪಿಗೆ ನಿದ್ದೆಯಿಲ್ಲದ ರಾತ್ರಿಗಳನ್ನು ನೀಡಬಲ್ಲ ಏಕೈಕ ನಾಯಕ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee)ಎಂದು ಆಜಾದ್ ನಂಬಿದ್ದಾರೆ. ಕ್ರಿಕೆಟಿಗರಾಗಿ ನಂತರ ರಾಜಕಾರಣಕ್ಕೆ ಬಂದ ಆಜಾದ್ ಬಿಹಾರದ ದರ್ಭಾಂಗಾದಿಂದ ಲೋಕಸಭೆಗೆ ಮೂರು ಬಾರಿ ಆಯ್ಕೆಯಾದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು. 2015 ರಲ್ಲಿ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿನ ಅಕ್ರಮ ಮತ್ತು ಭ್ರಷ್ಟಾಚಾರದ ಆರೋಪದ ಮೇಲೆ ಆಗಿನ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿಯನ್ನು ಬಹಿರಂಗವಾಗಿ ಗುರಿಯಾಗಿಸಿಕೊಂಡಿದ್ದಕ್ಕಾಗಿ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಲಾಯಿತು. ಆಜಾದ್ ಅವರ ತಂದೆ ಭಗವತ್ ಝಾ ಆಜಾದ್ ಅವರು ಬಿಹಾರದ ಹಿರಿಯ ಕಾಂಗ್ರೆಸ್ ನಾಯಕರಾಗಿದ್ದು, ಅವರು ರಾಜ್ಯದ ಮುಖ್ಯಮಂತ್ರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಗೋವಾದಲ್ಲಿ ಕಾಂಗ್ರೆಸ್‌ನ ಮಾಜಿ ನಾಯಕರಾದ ಲುಯಿಝಿನ್ಹೊ ಫಲೈರೊ ಮತ್ತು ಅಸ್ಸಾಂನಲ್ಲಿ ಸುಶ್ಮಿತಾ ದೇವ್ ಟಿಎಂಸಿ ಸೇರಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಕೂಡ ದೆಹಲಿಯಲ್ಲಿದ್ದಾರೆ. ನವೆಂಬರ್ 29 ರಂದು ಪ್ರಾರಂಭವಾಗಲಿರುವ ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೆ ಕೆಲವು ದಿನಗಳ ಮುಂಚಿತವಾಗಿ ಬ್ಯಾನರ್ಜಿ ಅವರು ರಾಜಧಾನಿಗೆ ಭೇಟಿ ನೀಡುತ್ತಿದ್ದಾರೆ. ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಮತ್ತು ರಾಜ್ಯದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯಗಳ ಕುರಿತು ಚರ್ಚಿಸಲು ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ.

ಇದನ್ನೂ ಓದಿ: ಕೃಷಿ ಕಾನೂನು ಬಗ್ಗೆ ನಮ್ಮ ವರದಿ ಬಹಿರಂಗಪಡಿಸಿ: ಸುಪ್ರೀಂಕೋರ್ಟ್ ನೇಮಕ ಮಾಡಿದ ಸಮಿತಿ ಸದಸ್ಯರ ಮನವಿ

TV9 Kannada