ತಿರುಪತಿ ತಿಮ್ಮಪ್ಪನ ಸನ್ನಿಧಿ ಹಾಗೂ ಸುತ್ತಮುತ್ತ ಸುರಿದ ಧಾರಾಕಾರ ಮಳೆಯಿಂದಾಗಿ ಸಾಕಷ್ಟು ಅವಾಂತರಗಳು ಸೃಷ್ಠಿಯಾಗಿತ್ತು. ಮಳೆಯ ಅರ್ಭಟ ಕಡಿಮೆ ಆಗಿ ಮೂರು ದಿನಗಳು ಕಳೆದಿದ್ರೂ ಜನರ ಪರದಾಟ ಮಾತ್ರ ಕಡಿಮೆಯಾಗಿಲ್ಲ. ತಿಮ್ಮಪ್ಪನ ದರ್ಶನಕ್ಕೆ ಯಾವುದೇ ರೀತಿಯ ಅಡಚಣೆ ಆಗಿಲ್ಲ. ಆದ್ರೆ ಸುತ್ತಮುತ್ತಲಿನ ಗ್ರಾಮಗಳ ಸ್ಥಿತಿ ಮಾತ್ರ ಹೇಳತೀರದು. ಅದೊಂದು ಕಾರಣದಿಂದಾಗಿ ಸುಮಾರು ನಲವತ್ತು ಗ್ರಾಮಗಳ ಜನ ಜೀವವನ್ನ ಕೈಯಲ್ಲಿ ಹಿಡಿದುಕೊಂಡು ತಿಮ್ಮಪ್ಪ ನೀನೇ ಕಾಪಾಡಬೇಕು ಅಂತಾ ದಿನ ದೂಡುತ್ತಿದ್ದಾರೆ.

ಕಳೆದೊಂದು ವಾರದ ಹಿಂದೆ ತಿಮ್ಮಪ್ಪನ ಸನ್ನಿಧಿಯಲ್ಲಿ ಸುರಿದ ಮಳೆ ಆತಂಕ ಸೃಷ್ಟಿ ಮಾಡಿತ್ತು. ತಿರುಮಲ ಬೆಟ್ಟದ ಮೇಲಿಂದ ಹರಿದು ಬರ್ತಿದ್ದ ಮಳೆ ನೀರನ್ನ ನೋಡಿ ತಿರುಪತಿ ನಿವಾಸಿಗಳು ಗಾಬರಿಗೊಂಡಿದ್ರು. ಒಂದಲ್ಲ ಎರಡಲ್ಲ.. ನಾಲ್ಕು ದಿನಗಳ ಕಾಲ ನಿರಂತರವಾಗಿ ಸುರಿದ ಮಳೆಯಿಂದಾಗಿ ಸಾಕಷ್ಟು ಅವಾಂತರಗಳೂ ಸೃಷ್ಟಿಯಾಗಿದ್ವು.

ತಿರುಪತಿ ಬೆಟ್ಟದ ಮೇಲಿಂದ ನೀರು ಸುರಿಯುತ್ತಿರೋದನ್ನ ಸಾಕು ನೋಡುಗರಲ್ಲಿ ಆತಂಕ ಸೃಷ್ಟಿ ಮಾಡೋದಕ್ಕೆ. ಇದನ್ನ ನೋಡಿದವರು ಬೆಟ್ಟದ ಮೇಲಿಂದ ಕಳಗೆ ಈ ರೀತಿಯಾಗಿ ನೀರು ದುಮ್ಮುಕ್ಕಿ ಹರಿಯುತ್ತಿದ್ದರೆ ಕೆಳಗೆ ಏನಪ್ಪ ಪರಿಸ್ಥಿತಿ ಅಂತಾ ಅಂದುಕೊಂಡಿದ್ರು. ಅಂದಿನ ಪರಿಸ್ಥಿತಿ ನಿಜಕ್ಕೂ ನರಕ. ಆದ್ರೆ ಮಳೆಯ ಆರ್ಭಟ ನಿಂತು ಮೂರು ದಿನ ಆದ್ರೂ ಕೂಡ ಸಮಸ್ಯೆ ಮಾತ್ರ ಕೊನೆಯಾಗಿಲ್ಲ.

ತಿರುಪತಿಯ ಬಹುತೇಕ ಪ್ರದೇಶಗಳಲ್ಲಿ ಇನ್ನೂ ಜಲದಿಗ್ಬಂಧನದ ಸ್ಥಿತಿ  ಇರೋದಂತೂ ಸುಳ್ಳಲ್ಲ. ಆ ಎಲ್ಲಾ ಸಮಸ್ಯೆಗಳು ಇನ್ನು ಬಗೆ ಹರಿಯೋದಕ್ಕೆ ವಾರವಾದ್ರೂ ಬೇಕಾಗಬಹುದು. ಈ ನಡುವೆ ತಿರುಪತಿಯಿಂದ ಸುಮಾರು 15 ಕಿಮಿ ದೂರದಲ್ಲಿರೋ ಒಂದು ಅಣೆಕಟ್ಟಿನಿಂದಾಗಿ ಈಗ ನೂರಾರು ಗ್ರಾಮಸ್ಥರಲ್ಲಿ ಆತಂಕವನ್ನ ಸೃಷ್ಟಿ ಮಾಡಿದ್ದು, ಆಂಧ್ರ ಪ್ರದೇಶವೇ ಇತ್ತ ತಿರುಗಿ ನೋಡುವಂತೆ ಮಾಡಿದೆ.

ರಾಯಲ ಚೆರವು ಜಲಾಶಯ ತಂದಿಟ್ಟ ಅವಾಂತರ

ಈ ದೃಶ್ಯವನ್ನ ಒಮ್ಮೆ ನೋಡಿಕೊಳ್ಳಿ. ಇಲ್ಲಿ ಸಣ್ಣದಾಗಿ ನೀರು ಹರಿಯುತ್ತಿರೋದನ್ನ ನೋಡಿ.. ಇಷ್ಟು ಸಣ್ಣದಾಗಿ ಹರಿಯುತ್ತಿರೋ ನೀರು ಈಗ ನೂರಾರು ಗ್ರಾಮಸ್ಥರನ್ನ ಆತಂಕಕ್ಕೆ ದೂಡಿದೆ ಅಂದ್ರೆ ನೀವು ನಂಬ್ತೀರಾ.. ನಂಬಲೇ ಬೇಕು.. ಇದು ಒಂದು ಭಾಗದಲ್ಲಿ ಸೋರಿಕೆ ಆಗುತ್ತಿರೋ ನೀರು.. ಆದ್ರೆ ಇದರ ಹಿಂದಿರೋ ನೀರಿನ ಪ್ರಮಾಣವನ್ನೂ ಒಮ್ಮೆ ನೋಡಿ.. ಇದುವೇ ರಾಯಲ ಚೆರುವು ಜಲಾಶಯ..

ರಾಯಲ ಸೀಮಾದ ದೊಡ್ಡ ಜಲಾಶಯ

ಆಂಧ್ರಪ್ರದೇಶದ ಅತಿ ಹಳೆಯ ಹಾಗು ಅತಿ ದೊಡ್ಡ ಜಲಾಶಯಗಳಲ್ಲಿ ಒಂದಾಗಿರೋ ಈ ರಾಯಲ ಚೆರವು ಅಣೆಕಟ್ಟಿನಲ್ಲಿ ಈಗ ಬಿರುಕು ಕಾಣಿಸಿಕೊಂಡಿದೆ. ಆ ಜಾಗದಿಂದಲೇ ಹರಿದು ಬರುತ್ತಿರೋ ನೀರು ಇದು. ಸಣ್ಣ ಪ್ರಮಾಣದಲ್ಲಿ ಸೋರಿಕೆ ಆಗುತ್ತಿರೋ ನೀರು ಇಡೀ ಅಣೆಕಟ್ಟು ಒಡೆದು ಹೋಗುತ್ತೆ ಅನ್ನೋ ಆತಂಕಕ್ಕೆ ದೂಡಿ ಬಿಟ್ಟಿದೆ. ಅದು ಎಷ್ಟರ ಮಟ್ಟಿಗೆ ಅಂದ್ರೆ ನೂರು ಗ್ರಾಮಗಳಲ್ಲಿ ಆತಂಕ ಸದ್ಯ ಮನೆ ಮಾಡಿದೆ.

ಹದಿನಾಲ್ಕು ಸಾವಿರ ಸ್ಥಳೀಯರು ಶಿಫ್ಟ್​​

ಯಾವಾಗ ರಾಯಲ ಚೆರುವು ಅಣೆಕಟ್ಟು ಅಪಾಯದ ಅಂಚಿನಲ್ಲಿದೆ ಅನ್ನೋದು ಅಧಿಕಾರಿಗಳಿಗೆ ಗೊತ್ತಾಗಿತ್ತೋ ತಕ್ಷಣ ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದ್ರು. ಈ ಭಾಗದಲ್ಲಿ ಸಮಸ್ಯೆ ಕಟ್ಟಿಟ್ಟ ಬುತ್ತಿ ಎಂದು ತಿಳಿದು ಸುಮಾರು ನಲವತ್ತು ಹಳ್ಳಿ ಗ್ರಾಮಗಳು ಡೇಂಜರ್ ಝೋನ್​ನಲ್ಲಿದೆ ಎಂದು ಘೋಷಿಸಿದ್ದಲ್ಲದೆ, ಸರ್ಕಾರ ಜನರ ಸ್ಥಳಾಂತರಕ್ಕೂ ಮುಂದಾಯ್ತು. ಇಲ್ಲಿಯವರೆಗೆ ಸುಮಾರು 14 ಸಾವರ ಮಂದಿಯನ್ನ ಸುರಕ್ಷಿತ ಸ್ಥಳಕ್ಕೆ ಸ್ಥಳಾಂಜತರ ಮಾೠಲಾಗಿದೆ.

ಕೃಷ್ಣದೇವರಾಯನ ಕಾಲದಲ್ಲಿ ನಿರ್ಮಾಣ ಆಗಿತ್ತು ಜಲಾಶಯ

ಹೌದು.. ಈ ಜಲಾಶಯಕ್ಕೊಂದು ಐತಿಹಾಸಿಕ ಹಿನ್ನಲೆ ಇದೆ. ಈ ಜಲಾಶಯವನ್ನ ವಿಜಯ ನಗರ ಸಾಮ್ರಾಜ್ಯದ ಸಂದರ್ಭದಲ್ಲಿ ಆಳ್ವಿಕೆ ನಡೆಸುತ್ತಿದ್ದ ಶ್ರಿ ಕೃಷ್ಣ ದೇವರಾಯ ಅಂದಿನ ಕಾಲಮಾನಕ್ಕೆ ತಕ್ಕಂತೆ ನಿರ್ಮಾಣ ಮಾಡಿದ್ದರು. ಯಾಕಂದ್ರೆ ಈ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಪೋಲಾಗುತ್ತಿತ್ತು. ಇದನ್ನ ಗಮನಿಸಿದ್ದ ಶ್ರೀ ಕೃಷ್ಣ ದೇವರಾಯರು ಇಲ್ಲೊಂದು ಜಲಾಶಯ ಅವಶ್ಯಕತೆ ಇದೆ ಎಂದು ತಿಳಿದು ಇಲ್ಲಿ ಅಣೆಕಟ್ಟನ್ನ ನಿರ್ಮಿಸಿದ್ರು.

ಜನರ ಕಷ್ಟ ಪರಿಹಾರಕ್ಕೆ ನಿರ್ಮಾಣ ಆಗಿತ್ತು ಜಲಾಶಯ

ಹೌದು.. ಈ ಭಾಗದ ಸುತ್ತ ಮುತ್ತಲಿನ ರೈತರಿಗೆ ಅಂದು ಕೃಷಿ ಮಾಡೋದಕ್ಕೆ ತುಂಬಾನೆ ಸಮಸ್ಯೆ ಆಗುತ್ತಿತ್ತು. ಮಳೆಯನ್ನ ನಂಬಿಕೊಂಡು ತಿಂಗಳಾನುಗಟ್ಟಲೆ ಕಾದು ನಂತರ ಮಳೆ ಬಂದ ಮೇಲೆ ಕೃಷಿ ಕೆಲಸಗಳನ್ನ ಆರಂಭಿಸಬೇಕಿತ್ತು. ಇದನ್ನ ಮನಗಂಡಂತಹ ಶ್ರೀ ಕೃಷ್ಣದೇವರಾಯ ಅವರು ಇಲ್ಲಿ ಒಂದು ಜಲಾಶಯ ನಿರ್ಮಾಣ ಮಾಡಿದ್ರೆ ನೀರು ಶೇಖರಣೆ ಆಗುತ್ತೆ. ಆ ಬಳಿಕ ನೀರನ್ನ ಇಲ್ಲಿ ಸ್ಟೋರ್ ಮಾಡಿ ನಂತರ ಆ ನೀರನ್ನ ವರ್ಷ ಪೂರ್ತಿ ಬಳಕೆ ಮಾಡಿಕೊಳ್ಳಬಹುದು ಎಂದು ಹೇಳಿ ಇಲ್ಲಿ ಜಲಾಶಯವನ್ನ ನಿರ್ಮಾಣ ಮಾಡಲಾಯಿತು. ಹೀಗೆ ನಿರ್ಮಾಣ ಆಗಿದ್ದೇ ರಾಯಲ್ ಚೆರುವು ಜಲಾಶಯ..

ಅದೇ ಜಲಾಶಯ ಇಂದು ಸಮಸ್ಯೆ ತಂದಿಟ್ಟಿದೆ

ಬಹಳ ವರ್ಷಗಳ ಹಿಂದೆ ಈ ಜಲಾಶಯವನ್ನ ಅನುಕೂಲಕ್ಕಾಗಿ ನಿರ್ಮಾಣ ಮಾಡಲಾಗಿತ್ತು. ಆದ್ರೆ ಇಂದು ಅದೇ ಜಲಾಶಯ ಅನಾನುಕೂಲವನ್ನ ತಂದೊಡ್ಡುವ ಮುನ್ಸೂಚನೆಯನ್ನ ನೀಡುತ್ತಿದೆ. ಒಂದಲ್ಲ ಎರಡಲ್ಲ ನೂರಕ್ಕೂ ಹೆಚ್ಚು ಗ್ರಾಮಗಳಿಗೆ ಸಮಸ್ಯೆ ಎದುರಾಗುವ ಸಂಭವ ಇದೆ ಎಂದು ಡೆಂಜರ್ ಝೋನ್ ಎಂದು ಘೋಷಣೆ ಮಾಡಲಾಗಿದೆ.

ಮನೆ ಮಠಗಳನ್ನ ತೊರೆಯುತ್ತಿದ್ದಾರೆ ಸ್ಥಳೀಯರು

ಈಗಾಗಲೇ ಸುಮಾರು ಹದಿನಾಲ್ಕು ಸಾವಿರಕ್ಕೂ ಹೆಚ್ಚು ಮಂದಿ ಮನೆ ಮಠಗಳನ್ನ ಬಿಟ್ಟು ತಮ್ಮ ತಮ್ಮ ಸಂಬಂಧಿಕರ ಮನೆಗಳಿಗೆ ಶಿಫ್ಟ್ ಆಗಿದ್ದಾರೆ. ಇಪ್ಪತ್ತು ಸಾವಿರಕ್ಕೂ ಹೆಚ್ಚು ಮಂದಿ ಬೆಲೆ ಬಾಳುವ ವಸ್ತುಗಳನ್ನ, ಡಾಕ್ಯೂಮೆಂಟ್​​ಗಳನ್ನ ಸೇಫ್ ಮಾಡಿಕೊಂಡಿದ್ದಾರೆ. ಮೂವತ್ತು ಸಾವಿರಕ್ಕು ಹೆಚ್ಚು ಮನೆಗಳಲ್ಲಿದ್ದ ಮಕ್ಕಳನ್ನ ಸಂಬಂಧಿಕರ ಮನೆಗೆ ಕಳುಹಿಸಲಾಗಿದೆ. ಆ ಮೂಲಕ ಜನ ಆತಂಕದಲ್ಲಿಯೇ ಕಾಲವನ್ನ ದೂಡುವಂತಾಗಿದೆ.

ಯಾವಾಗ ಬೇಕಾದ್ರು ಅಣೆಕಟ್ಟು ಒಡೆಯುವ ಭೀತಿ 
ಗಲ್ಲಿ ಗಲ್ಲಿಗಳಲ್ಲಿ ಅನೌನ್ಸ್​ ಮಾಡುತ್ತಿರೋ ಮಂದಿ

ಇನ್ನು ಯಾವಾಗ ಬೇಕಾದ್ರು ಆಪತ್ತು ಎದುರಾಗಬಹುದು ಎಂದು ಕೆವಲರು ಮೈಕ್ ಹಿಡಿದುಕೊಂಡು ಅಲ್ಲಲ್ಲಿ ಅನೌನ್ಸ್​ ಮಾಡುತ್ತಿದ್ದಾರೆ. ಆ ಮೂಲಕ ಜನ ಬಹಳ ಜಾಗರೂಕತೆಯಿಂದ ಇರಬೇಕು ಎಂದು ಮುನ್ಸೂಚನೆಯನ್ನ ಕೊಡುತ್ತಿದ್ದಾರೆ.

ನಮ್ಮನ್ನ ಕಾಪಾಡಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತಿರೋ ಮಂದಿ

ಮಳೆ ನಿಂತು ಮೂರು ದಿನಗಳಾದ್ರು ಕೂಡ ರಾಯಲ ಚೆರುವಿ ಗ್ರಾಮದಲ್ಲಿ ನೀರು ಹರಿಯುವ ಪ್ರಮಾಣ ಮಾತ್ರ ಕಡಿಮೆ ಆಗಿಲ್ಲ. ಇದೇ ಕಾರಣಕ್ಕಾಗಿ ಸ್ಥಳೀಯರು ಹರಿಯುತ್ತಿರೋ ನೀರಿನಲ್ಲಿಯೇ ನಿಂತು ನಮ್ಮ ಜೀವ ಉಳಿಸಿ ಎಂದು ಮನವಿಯನ್ನ ಮಾಡಿಕೊಳ್ಳುತ್ತಿದ್ದಾರೆ. ಸಂಬಂಧ ಪಟ್ಟ ಅಧಿಕಾರಿಗಳು ಆದಷ್ಟು ಬೇಗ ಏನಾದ್ರು ಮಾಡಿ ಎಂದು ಕೈ ಮುಗಿದು ಬೇಡಿಕೊಳ್ಳುತ್ತಿದ್ದಾರೆ.

ಒಂದು ಟಿಎಂಸಿ ನೀರು ಶೇಖರಣೆ ಆಗುವ ಸಾಮರ್ಥ್ಯ ಇದೆ

ಹೌದು.. ಈ ಜಲಾಶಯದಲ್ಲಿ ಸುಮಾರು 0.9 ಟಿಎಂಸಿ ನೀರು ಶೇಖರಣೆ ಆಗುವ ಸಾಮರ್ಥ್ಯವಿದೆ. ಆದ್ರೆ ತೀರಾ ಹೆಚ್ಚಿನ ಪ್ರಮಾಣ ಅಂದ್ರೆ ಸುಮಾರು 1 ಟಿಎಂಸಿ ನೀರನ್ನ ಶೇಖರಣೆ ಮಾಡ ಬಹುದಾಗಿದೆ. ಆದ್ರೆ ಕಳೆದ ಒಂದು ವಾರ ಸುರಿದ ಧಾರಾಕಾರ ಮಳೆಗೆ ಜಲಾಶಯ ಸಂಪೂರ್ಣ ಭರ್ತಿ ಆಗಿದೆ. ಈಗಲೂ ಕೂಡ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿರೋದ್ರಿಂದ ಪರಿಸ್ಥಿತಿ ಉಲ್ಭಣಿಸುತ್ತಿದೆ.

ಹೊರ ಹರಿವಿಗೆ ಸೂಕ್ತ ವ್ಯವಸ್ಥೆ ಮಾಡಿಲ್ಲ

ಇನ್ನು ಒಳ ಹರಿವು ಹೆಚ್ಚಾಗಿದ್ದರು ಕೂಡ ಹೊರ ಹರಿವಿಗೆ ಸೂಕ್ತ ವ್ಯವಸ್ಥೆಯನ್ನ ಮಾಡಿಲ್ಲ. ಇದೇ ಕಾರಣಕ್ಕಾಗಿ ನೀರಿನ ಪ್ರಮಾಣ ಹೆಚ್ಚಾಗಿ ಜಲಾಶಯದ ಒಂದು ಭಾಗದಲ್ಲಿ ಸಣ್ಣದಾಗಿ ಬಿರುಕು ಮೂಡಿದೆ ಎಂದು ಹೇಳಲಾಗಿದೆ. ಸದ್ಯಕ್ಕೆ ಸಂಬಂಧ ಪಟ್ಟ ಅಧಿಕಾರಿಗಳು ಎರಡು ದಿನಗಳಿಂದ ಇಲ್ಲೆ ಬೀಡುಬಿಟ್ಟಿದ್ದು ಸಾಕಷ್ಟು ಮುಂಜಾಗ್ರತ ಕ್ರಮಗಳನ್ನ ತೆಗೆದುಕೊಂಡಿದ್ದಾರೆ. ಸದ್ಯಕ್ಕೆ ಸಿಮೆಂಟ್ ಮೂಟೆಗಳನ್ನ ಅಡ್ಡಲಾಗಿ ಹಾಕಲಾಗಿದ್ದು, ಮುಂದಿನ ದಿನಗಳಲ್ಲಿ ಏನಾದ್ರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದ್ದೇ ಆದ್ರೆ ಇಲ್ಲಿ ಅನಾಹುತ ಕಟ್ಟಿಟ್ಟ ಬುತ್ತಿ ಎಂದು ಹೇಳಲಾಗಿದೆ. ಸದ್ಯ ತಿಮ್ಮಪ್ಪನೇ ಕಾಪಾಡಬೇಕಿದೆ.

ತಿಮ್ಮಪ್ಪನ ಜಾಗದಲ್ಲಿ ಆಗುತ್ತಿರೋ ಅವಾಂತರಗಳಿಂದ ಸಾರ್ವಜನಿಕರು ತತ್ತರಿಸಿ ಹೋಗಿದ್ದು, ಜನ ಪರದಾಡುವಂತಾಗಿದೆ. ಮುಂದೆ ಇನ್ನು ಹೆಚ್ಚು ಸಮಸ್ಯೆಗಳು ಉಲ್ಭಣಗೊಳ್ಳೋ ಸಾಧ್ಯತೆ ಇದ್ದು, ಇದೇ ತಿಂಗಳ 26 ರಿಂದ ಡಿಸೆಂಬರ್ 2 ರವರೆಗೆ ಮತ್ತೆ ಮಹಾ ಮಳೆ ಆಗೋ ಸಾಧ್ಯತೆ ಇದೆ ಎಂಬ ಎಚ್ಚರಿಕೆಯನ್ನ ನೀಡಲಾಗಿದೆ. ಏನೇ ಹೇಳಿ ತಿರುಪತಿಯಲ್ಲಿರೋರನ್ನ ತಿಮ್ಮಪ್ಪನೇ ರಕ್ಷಣೆ ಮಾಡಬೇಕಿದೆ.

ವಿಶೇಷ ವರದಿ: ನಾಗೇಂದ್ರ ಬಾಬು, ಸ್ಪೆಷಲ್ ಡೆಸ್ಕ್​​

News First Live Kannada