ACB Mega Raid: ‘ಮಾಯ’ದಂತಹ ಭ್ರಷ್ಟಾಚಾರ: ನಕಲಿ ಬಿಲ್‌ ಸೃಷ್ಟಿ ಪರಿಣತ, ಕನ್ನಡ ಸಾಹಿತ್ಯ ಪರಿಷತ್‌ ಮಾಜಿ ಜಿಲ್ಲಾಧ್ಯಕ್ಷನೂ ಹೌದು!

ಮಾಯಣ್ಣನ ಮನೆ ಮೇಲೆ ಎಸಿಬಿ ದಾಳಿ

ಬೆಂಗಳೂರು: ನಕಲಿ ಬಿಲ್‌ ಸೃಷ್ಟಿಸಿ ಸರಕಾರ ಹಾಗೂ ಪಾಲಿಕೆಗೆ ಕೋಟ್ಯಾಂತರ ರೂ. ನಷ್ಟ ಮಾಡಿರುವ ಆರೋಪ ಬಿಬಿಎಂಪಿ ಪ್ರಥಮ ದರ್ಜೆ ಗುಮಾಸ್ತನಾಗಿರುವ ಮಾಯಣ್ಣನ ಮೇಲೆ ಕೇಳಿ ಬಂದಿದೆ. ಮಾಜಿ ಕನ್ನಡ ಸಾಹಿತ್ಯ ಪರಿಷತ್‌ ಬೆಂಗಳೂರು ನಗರ ಜಿಲ್ಲಾಧ್ಯಕ್ಷರೂ ಆಗಿರುವ ಮಾಯಣ್ಣ ನಕಲಿ ಸಹಿ, ಬಿಲ್‌, ದಾಖಲೆಗಳನ್ನು ಸೃಷ್ಟಿಸಿ ಸರಕಾರ ಹಾಗೂ ಪಾಲಿಕೆಗೆ ನೂರಾರು ಕೋಟಿ ರೂ. ವಂಚನೆ ಮಾಡಿದ್ದಾರಂತೆ. ಸದ್ಯ ಈಗ ಇವರಿಗೆ ಎಸಿಬಿ ಶಾಕ್ ಕೊಟ್ಟಿದೆ.

ಕಳೆದ ಏಳು ವರ್ಷಗಳಿಂದ ಒಂದೇ ವಿಭಾಗದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವ ಮಾಯಣ್ಣ ಹಲವು ಬಾರಿ ವರ್ಗಾವಣೆ ಮಾಡಿದ್ದರೂ ಪ್ರಭಾವ ಬಳಸಿ ವರ್ಗಾವಣೆ ರದ್ದುಪಡಿಸಿಕೊಂಡು ಪಾಲಿಕೆಯಲ್ಲೇ ಉಳಿದಿದ್ದಾರೆ. ಸದ್ಯ ಈಗ ಇವರ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪ ಕೇಳಿ ಬಂದಿದ್ದು ಬೆಳ್ಳಂ ಬೆಳಗ್ಗೆ ಎಸಿಬಿ ಶಾಕ್ ಕೊಟ್ಟಿದೆ. ಡಿವೈಎಸ್ ಪಿ ರವಿಕುಮಾರ್ ನೇತೃತ್ವದಲ್ಲಿ ಮಾಯಣ್ಣ ಮನೆ‌ ಮೇಲೆ ಎಸಿಬಿ ದಾಳಿ ನಡೆದಿದೆ.

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಎಸಿಬಿ ದಾಳಿ ನಡೆಸಿದ್ದು ಅಧಿಕಾರಿಗಳು, ಸಿಬ್ಬಂದಿ ಸೇರಿ ನಾಲ್ವರ ಮನೆ ಮೇಲೆ ರೇಡ್ ಆಗಿದೆ. ಸಕಾಲ ಕೆಎಎಸ್ ಅಧಿಕಾರಿ ನಾಗರಾಜ್, ಯಲಹಂಕ ಸರ್ಕಾರಿ ಆಸ್ಪತ್ರೆ, ಫಿಸಿಯೋಥೆರಪಿಸ್ಟ್ ರಾಜಶೇಖರ, ಬಿಬಿಎಂಪಿ ಸಿಬ್ಬಂದಿ ಮಾಯಣ್ಣ, ಬಿಬಿಎಂಪಿ ಸಿಬ್ಬಂದಿ ಬಾಗಲಗುಂಟೆಯ ಗಿರಿ ಮನೆಗಳ ಮೇಲೆ ಎಸಿಬಿ ರೇಡ್ ಆಗಿದೆ. ಒಟ್ಟು ನಾಲ್ವರ ಮನೆಗಳ ಮೇಲೆ ಎಸಿಬಿ ದಾಳಿ ಮಾಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಮಾಯಣ್ಣ ಮನೆಯಲ್ಲಿ ಕೆಜಿಗಟ್ಟಲೆ ಚಿನ್ನಾಭರಣ, ದಾಖಲೆ ಪತ್ತೆ
ಇನ್ನು ಮಾಯಣ್ಣ ಮನೆ ಮೇಲೆ ದಾಳಿ ವೇಳೆ ಅಕ್ರಮ ಆಸ್ತಿಪಾಸ್ತಿ ಪತ್ತೆಯಾಗಿದೆ. ಮಾಯಣ್ಣ ಅಕ್ರಮ ಆಸ್ತಿ ಗಳಿಕೆ ಮಾಡಿರುವ ಬಗ್ಗೆ ದಾಖಲೆಯಿಲ್ಲದ ಹಣ, ಕೆಜಿಗಟ್ಟಲೆ ಚಿನ್ನಾಭರಣ ಪತ್ತೆಯಾಗಿದೆ. ಹೀಗಾಗಿ ಸದ್ಯ ಮಾಯಣ್ಣ ಆಪ್ತರ ಮನೆ ಮೇಲೂ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಹೆಬ್ಬಾಳ ಬಿಬಿಎಂಪಿ ಕಚೇರಿಯಲ್ಲಿ ಕೆಲಸ ಮಾಡ್ತಿರುವ ನಂದಿನಿ‌ ಲೇಔಟ್‌ನಲ್ಲಿರುವ ಉಮಾದೇವಿ ಮನೆ ಮೇಲೆ ದಾಳಿ ನಡೆದಿದೆ.

ಇದನ್ನೂ ಓದಿ: ACB massive raid: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ: ಬೆಂಗಳೂರು ಸೇರಿದಂತೆ ರಾಜ್ಯದ 60 ಕಡೆ ಎಸಿಬಿ ದಾಳಿ

TV9 Kannada