ಟಿ20 ವಿಶ್ವಕಪ್​ ವೈಫಲ್ಯದ ಬಳಿಕ ಟೀಮ್ ಇಂಡಿಯಾ ಭರ್ಜರಿ ಕಮ್​​ಬ್ಯಾಕ್ ಮಾಡಿದೆ. ಆದ್ರೆ 2022ರ ವಿಶ್ವಕಪ್​ ದೃಷ್ಟಿಯಿಂದ ಓರ್ವ ಬೌಲರ್​​​​​​​​​​​​​​​ ಬಗ್ಗೆ ಹೆಚ್ಚು ಕಾಳಜಿಯ ಜೊತೆಗೆ ಆತನನ್ನ ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ, ಟೀಮ್ ಮ್ಯಾನೇಜ್​ಮೆಂಟ್ ಮುಂದಿದೆ. ಆತನ್ಯಾರು..? ಅದ್ಹೇಕೆ ಅಂತೀರಾ..? ಈ ಸ್ಟೋರಿ ಓದಿ..

ಈ ಟಿ20 ವಿಶ್ವಕಪ್​ನಲ್ಲಿ ಬರಿಗೈಯಲ್ಲಿ ವಾಪಾಸಾಗಿರುವ ಟೀಮ್ ಇಂಡಿಯಾ, ಆಸ್ಟ್ರೇಲಿಯಾದಲ್ಲಿ ನಡೆಯಲಿರುವ 2022ರ ಟಿ20 ವಿಶ್ವಕಪ್​​ ಟೂರ್ನಿಗೆ, ಈಗಿನಿಂದಲೇ ಸಿದ್ಧತೆ ಆರಂಭಿಸಿದೆ. ಅಷ್ಟೇ ಅಲ್ಲ.! ಈ ಟೂರ್ನಿಯಲ್ಲಿ ಪಕ್ಕಾ ವಿಶ್ವ ಕಿರೀಟವನ್ನ ಮುಡಿಗೇರಿಸಿಕೊಳ್ಳುವ ಲೆಕ್ಕಚಾರದಲ್ಲಿದೆ. ಇದಕ್ಕಾಗಿ ಟೀಮ್ ಮ್ಯಾನೇಜ್​ಮೆಂಟ್, ಹರ್ಷಲ್ ಪಟೇಲ್ ಎಂಬ ಡೆಥ್ ಈವರ್ ಸ್ಪೆಷಲಿಸ್ಟ್ ಬೌಲರ್​​ ಬಗ್ಗೆ ಗಮನ ಕೇಂದ್ರಿಕರಿಸಬೇಕಿದೆ.

ಹೌದು, IPL​ನಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿದ್ದ ಹರ್ಷಲ್ ಪಟೇಲ್, ಅತ್ಯಧಿಕ ವಿಕೆಟ್ ಬೇಟೆಯಾಡಿದ್ದರು. ಡೆತ್ ಓವರ್​ನಲ್ಲಿ ಪರಿಣಾಮಕಾರಿ ಬೌಲರ್​ ಎನಿಸಿದ್ದ ಈತ, RCBಯ ಮ್ಯಾಚ್ ವಿನ್ನರ್ ಎನಿಸಿದ್ದರು. ಅಷ್ಟೇ ಅಲ್ಲ.! ತಮ್ಮ ಪ್ರದರ್ಶನದಿಂದ ಟೀಮ್ ಇಂಡಿಯಾದ ಟಿಕೆಟ್ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ರು. ಇದೀಗ ಪದಾರ್ಪಣೆ ಪಂದ್ಯದಲ್ಲೇ ಮ್ಯಾಚ್​​ ವಿನ್ನರ್ ಆಗಿದ್ದಲ್ಲದೆ, ಪಂದ್ಯಶ್ರೇಷ್ಠ ಪ್ರಶಸ್ತಿಯನ್ನ ತಮ್ಮದಾಗಿಸಿಕೊಂಡ್ರು. ಈತನ ಪ್ರದರ್ಶನಕ್ಕೆ ಸ್ವತಃ ನಾಯಕ ರೋಹಿತ್​ ಸೇರಿದಂತೆ, ಮಾಜಿ ಕ್ರಿಕೆಟಿಗರು ಮನಸೋತಿದ್ದಾರೆ.

‘ಕಳೆದ 10 ವರ್ಷಗಳಿಂದ ಹರ್ಷಲ್​​​ ಪ್ರಥಮ ದರ್ಜೆ ಕ್ರಿಕೆಟ್ ಆಡುತ್ತಿದ್ದಾರೆ. ಅನುಭವಿ ಆಟಗಾರನಾಗಿದ್ದು, ಏನು ಮಾಡಬೇಕೆಂದು ಆತನಿಗೆ ಗೊತ್ತಿದೆ. ಅವರೊಬ್ಬ ಕೌಶಲ್ಯಪೂರ್ಣ ಬೌಲರ್. ಈ ರೀತಿಯ ಕಂಡೀಷನ್​ನಲ್ಲಿ ಅವರು ಸ್ಲೋವರ್ ಬಾಲ್ ಅನ್ನು ಅದ್ಭುತವಾಗಿ ಮಾಡುತ್ತಾರೆ’

ರೋಹಿತ್ ಶರ್ಮಾ, ಟಿ20 ತಂಡದ ನಾಯಕ

ಇನ್ನು ಹರ್ಷಲ್ ಪಟೇಲ್ ಬಗ್ಗೆ ಮಾತನಾಡಿರುವ ಅಜಯ್ ಜಡೇಜಾ, ಹರ್ಷಲ್​ರನ್ನ ಮುಂದಿನ ಟಿ20 ವಿಶ್ವಕಪ್​ ವೇಳೆ ಕೀ ಬೌಲರ್​ ಆಗಿ ಬಳಸಿಕೊಳ್ಳಬೇಕೆಂದಿದ್ದಾರೆ.

‘ಮುಂದಿನ ಟಿ20 ವಿಶ್ವಕಪ್‌ಗೆ ಹರ್ಷಲ್ ಪಟೇಲ್​ರನ್ನ ಉಳಿಸಿಕೊಳ್ಳಬೇಕು. ವಿಶ್ವಕಪ್‌ನಲ್ಲಿ ಹರ್ಷಲ್ ಪಟೇಲ್​ರನ್ನ ಅಸ್ತ್ರವಾಗಿ ಬಳಸಿಕೊಳ್ಳಬೇಕೆಂದು ನಾನು ಬಯಸುತ್ತೇನೆ. ನೀವು ಆಸ್ಟ್ರೇಲಿಯಾಗೆ ತೆರಳುವ ಮುನ್ನವೇ ಈ ಅಸ್ತ್ರವನ್ನ ಮೊಂಡಾಗಿಸಬಾರದು’

ಅಜಯ್ ಜಡೇಜಾ, ಮಾಜಿ ಕ್ರಿಕೆಟಿಗ

ಜಡೇಜಾರ ಈ ಮಾತಿಗೆ ಕಾರಣವೂ ಇದೆ. ಯಾಕಂದ್ರೆ, ಟಿ20ಯ ಬ್ಯಾಟ್ಸ್​ಮನ್​ಗಳ ಗೇಮ್​ನಲ್ಲಿ ಕೊನೆಯ 4 ಓವರ್​ಗಳೇ ನಿರ್ಣಾಯಕ. ಈ ನಾಲ್ಕು ಓವರ್​ಗಳಲ್ಲಿ ಯಾರು ಮೇಲುಗೈ ಸಾಧಿಸ್ತಾರೆ ಎಂಬ ಅಂಶದ ಮೇಲೆಯೇ ಪಂದ್ಯದ ಫಲಿತಾಂಶ ನಿರ್ಧಾರವಾಗುತ್ತೆ.

ಸದ್ಯ ಟೀಮ್ ಇಂಡಿಯಾ ಡೆತ್​ ಓವರ್​ನಲ್ಲಿ ಜಸ್​ಪ್ರೀತ್​ ಬೂಮ್ರಾ ಮೇಲೆಯೇ ಹೆಚ್ಚು ಡಿಪೆಂಡ್ ಆಗಬೇಕಾದ ಪರಿಸ್ಥಿತಿ ಇದೆ. ಹೀಗಾಗಿ ಹರ್ಷಲ್ ಪಟೇಲ್ ಎಂಬ ಸ್ಪೆಷಲಿಸ್ಟ್ ಬೌಲರ್ ತಂಡಕ್ಕೆ ಅಗತ್ಯವಿದೆ. ಯಾಕಂದ್ರೆ ಡೆತ್​​​​ ಓವರ್​ನಲ್ಲಿ ರನ್​ಗಳಿಕೆಗೆ ಕಡಿವಾಣ ಹಾಕೋದರ ಜೊತೆಗೆ ವಿಕೆಟ್ ಬೇಟೆಯಾಡುತ್ತಾ, ಎದುರಾಳಿ ಮೇಲೆ ಒತ್ತಡ ಹೇರುತ್ತಾರೆ. ಹೀಗಾಗಿ ಈ ಜೋಡಿ ಒಂದಾದರೆ, ಟೀಮ್ ಇಂಡಿಯಾ ಬೌಲಿಂಗ್ ವಿಭಾಗಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಜೊತೆಗೆ ಟಿ20 ವಿಶ್ವಕಪ್​​ನಲ್ಲಿ ಅದ್ಭುತ ಸೃಷ್ಟಿಸಲು ಅವಕಾಶವೂ ಇದೆ.

News First Live Kannada