ಹೆಚ್ಚುತ್ತಿದೆ ಅಂತರ್ಜಲ! ಬೋರ್​ವೆಲ್​ಗಳು ಉಕ್ಕಿ ಹರಿಯುವುದನ್ನು ಜೀವಮಾನದಲ್ಲೇ ನೋಡಿರಲಿಲ್ಲ ಎಂದ ಕಡೂರು ರೈತರು

ಹೆಚ್ಚುತ್ತಿದೆ ಅಂತರ್ಜಲ! ಬೋರ್​ವೆಲ್​ಗಳು ಉಕ್ಕಿ ಹರಿಯುವುದನ್ನು ಜೀವಮಾನದಲ್ಲೇ ನೋಡಿರಲಿಲ್ಲ ಎಂದ ಕಡೂರು ರೈತರು

ಚಿಕ್ಕಮಗಳೂರು: ನನಗೆ 80 ವರ್ಷ, 55 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ, ಆದ್ರೆ ಈ ಪರಿ ಬೋರ್ ವೆಲ್​ಗಳು ಳು ಉಕ್ಕಿ ಹರಿಯೋದನ್ನ ನಾನು ಜೀವಮಾನದಲ್ಲೇ ನೋಡಿಲ್ಲ ಅಂತಾ ಕಡೂರು ತಾಲೂಕಿನ ಯಗಟಿ ಗ್ರಾಮದ ರೈತ ಕುಮಾರಸ್ವಾಮಿ ಸಂತಸ ವ್ಯಕ್ತ ಪಡಿಸಿದ್ದಾರೆ. ಸತತ ಮಳೆಯಾದ ಪರಿಣಾಮ ಶಾಶ್ವತ ಬರ ಪೀಡಿತ ಪ್ರದೇಶ ಅಂತಾ ಹಣೆಪಟ್ಟಿ ಹೊತ್ತಿದ್ದ ಕಡೂರು ತಾಲೂಕಿನಲ್ಲಿ ಅಂತರ್ಜಲ ವೃದ್ಧಿಯಾಗಿದೆ. ಹೀಗಾಗಿ ತಾಲೂಕಿನಾದ್ಯಂತ ಸಾವಿರಾರು ಬೋರ್ಗಳು ಉಕ್ಕಿ ಹರಿಯುತ್ತಿವೆ. ಹೊಲಗದ್ದೆಗಳಲ್ಲಿ ಕೊರೆಸಿದ ಬೋರ್ಗಳನ್ನ ಆನ್ ಮಾಡದೇ ನೀರು ಉಕ್ಕಿ ಹರಿಯುತ್ತಿರೋದನ್ನ ನೋಡಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ಶಾಶ್ವತ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿ ಹೊತ್ತಿದ್ದ ಕಡೂರು
ಚಿಕ್ಕಮಗಳೂರು ಅಂದ್ರೆ ಹೆಚ್ಚಾಗಿ ಎಲ್ಲರಿಗೂ ಹೆಚ್ಚಾಗಿ ಮಲೆನಾಡಿನ ನೆನಪು ಕಣ್ಮುಂದೆ ಬರುತ್ತದೆ. ಆದ್ರೆ ಮೂಡಿಗೆರೆ, ಕಳಸ, ಕೊಪ್ಪ, ಎನ್.ಆರ್ ಪುರ, ಶೃಂಗೇರಿ, ತರೀಕೆರೆ ಹೊರತುಪಡಿಸಿ ಕಡೂರು-ಅಜ್ಜಂಪುರ ತಾಲೂಕುಗಳಲ್ಲಿ ಮಳೆಯ ಪ್ರಮಾಣ ಗಣನೀಯ ಮಟ್ಟದಲ್ಲಿ ಕಡಿಮೆ. ಅದರಲ್ಲೂ ಕಡೂರು ತಾಲೂಕು ಪ್ರತಿ ಬಾರಿಯೂ ಬರಪೀಡಿತ ಪ್ರದೇಶ ಎಂಬ ಹಣೆಪಟ್ಟಿಯನ್ನ ಹಲವಾರು ದಶಕಗಳಿಂದ ಉಳಿಸಿಕೊಂಡಿದೆ. ಮಳೆಗಾಲದಲ್ಲೂ ಮೈಸುಡುವ ಬಿಸಿಲು, ಧೂಳುಮಯವಾದ ವಾತಾವರಣ, ಅಂತರ್ಜಲ ಕೊರತೆಯಿಂದ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುವಂತಹ ದು:ಸ್ಥಿತಿ. ಕಡೂರು ತಾಲೂಕಿನ ಜನರ ಪರಿಸ್ಥಿತಿ ನಿಜಕ್ಕೂ ಆ ದೇವರಿಗೆ ಪ್ರೀತಿ ಅನ್ನುವಷ್ಟರ ಮಟ್ಟಿಗೆ ಹದೆಗೆಟ್ಟು ಹೋಗಿತ್ತು. ಹೇಗಾದ್ರೂ ಮಾಡಿ ಬೆಳೆಗಳನ್ನ ಬೆಳೆಯಲು ಬೋರ್ಗಳನ್ನ ಕೊರೆಸೋಕೆ ಮುಂದಾದ್ರೂ 1000-2000 ಅಡಿ ತೆಗೆಸಬೇಕಾದ ಅನಿವಾರ್ಯತೆ.

ಅದೆಷ್ಟೋ ಜನರು 2000 ಅಡಿ ತೆಗೆಸಿದ್ರೂ ನೀರಿನ ಸುಳಿವು ಕೂಡ ಸಿಗದೇ ವ್ಯರ್ಥ ಪ್ರಯತ್ನ ಮಾಡಿ ಕೈ ಸುಟ್ಟುಕೊಂಡ ಉದಾಹರಣೆಗಳು ಬಹಳಷ್ಟಿದೆ. ಇತ್ತೀಚಿನ ದಿನಗಳಲ್ಲಂತೂ ಅಂತರ್ಜಲ ಕೈ ಕೊಟ್ಟಿದ್ದರಿಂದ ತಾಲೂಕಿನಾದ್ಯಂತ ಬೋರ್ ತೆಗೆಯಿಸಲು ನಿರ್ಬಂಧ ವಿದಿಸಲಾಗಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲೇ ಬೋರ್ ವೆಲ್ಗೆ ನಿರ್ಬಂಧ ವಿಧಿಸಿದ ಏಕೈಕ ತಾಲೂಕು ಕಡೂರು. ಅದೆಷ್ಟೋ ಮಳೆಗಾಲ ಬಂದೂ ಮರೆಯಾದ್ರೂ ಕೆರೆಗಳಲ್ಲಿ ಗೇಣುದ್ದ ನೀರು ನಿಲ್ಲುತ್ತಿರಲಿಲ್ಲ. ಜನ-ಜಾನುವಾರುಗಳು ನೀರಿಲ್ಲದೇ ಪಟ್ಟಿದ ಪಡಿಪಾಟಲು ಅಷ್ಟಿಷ್ಟಲ್ಲ. ಅನೇಕ ಕಡೆಗಳಲ್ಲಿ ಒಣಗಿ ಹೋಗಿದ್ದ ಕೆರೆಗಳು ಒತ್ತುವರಿದಾರರ ಸ್ವತ್ತುಗಳಾಗಿ ಮಾರ್ಪಟ್ಟಿದ್ದು ಇದೀಗ ಹಳೆ ವಿಷ್ಯ..

ಚಳಿಗಾಲದ ಮಳೆಗೆ ಬರದ ತಾಲೂಕಲ್ಲಿ ಅಭಿವೃದ್ಧಿಯಾಗುತ್ತಾ ಅಂತರ್ಜಲ..?
ಅದೆಂತಹ ಮಳೆ ಬಂದರೂ ಕಡೂರಿನಲ್ಲಿ ಬರದ ಬವಣೆ ನೀಗಿರಲಿಲ್ಲ. ಬಿಸಿಯಾದ ಭೂಮಿಯ ಧಗೆ ತಂಪಾಗಿರಲಿಲ್ಲ. ಜನರ-ಜಾನುವಾರುಗಳ ನೀರಿನ ದಾಹ ತೀರಿರಲಿಲ್ಲ. ಈ ಬಾರಿಯ ಮಳೆಗಾಲ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಅಚ್ಚರಿ ಎಂಬಂತೆ ಮಳೆಗಾಲ ಕಳೆದು ಚಳಿಗಾಲದಲ್ಲಿ ಅಬ್ಬರಿಸಿದ ಈ ಮಳೆಗೆ ಕಡೂರಿನ ಜನ ನಿಜಕ್ಕೂ ಬೆರಗಾಗಿದ್ದಾರೆ. ಜೀವಮಾನದಲ್ಲೇ ಕಂಡು ಕೇಳರಿಯದ, ನೋಡದ ಮಳೆ ಜನರನ್ನ ದಂಗಾಗುವಂತೆ ಮಾಡಿದೆ.

ಎಷ್ಟರಮಟ್ಟಿಗೆ ಅಂದ್ರೆ ಮಲೆನಾಡಿಗೂ ಸೆಡ್ಡು ಹೊಡೆಯುವಂತೆ ವರುಣ, ಕಡೂರು ತಾಲೂಕಿನಾದ್ಯಂತ ಆರ್ಭಟಿಸಿದ್ದು, ಇಲ್ಲಿಯವರೆಗೂ ಮಳೆ ಬೇಕು-ಬೇಕು ಅಂತಿದ್ದ ಜನರು ಸಾಕಪ್ಪ ಸಾಕು ಮಳೆ ಸಹವಾಸ ಅನ್ನುವಷ್ಟರ ಮಟ್ಟಿಗೆ ಮಳೆ ಸುರಿದಿದೆ. ಎರಡು ವಾರದಿಂದ ಸತತವಾಗಿ ಸುರಿಯುತ್ತಿರುವ ಮಳೆಯ ಪರಿಣಾಮವಾಗಿ ಈಗ ಎಲ್ಲೆಂದರಲ್ಲಿ ನೀರೇ ನೀರು ಕಾಣಸಿಗ್ತಿದೆ. ಹೊಲಗದ್ದೆಗಳಲ್ಲಿ ನೀರು ನಿಂತಿದ್ದು, ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ರಾಗಿ ಬೆಳೆ ಸಂಪೂರ್ಣವಾಗಿ ಮುಳುಗಡೆಯಾಗಿದೆ. ಮೆಕ್ಕೆ ಜೋಳ, ಈರುಳ್ಳಿ, ಆಲೂಗೆಡ್ಡೆ, ಟೊಮೊಟೊ ಬೆಳೆಗೂ ಮಳೆ ಶಾಪವಾಗಿದೆ.

ಮೋಟಾರ್ ಸ್ಪಾರ್ಟ್ ಮಾಡದಿದ್ರೂ ಉಕ್ಕಿ ಹರಿಯುತ್ತಿದೆ ಬೋರ್​ಗಳು..!
ಕಡೂರು ತಾಲೂಕಿನಾದ್ಯಂತ ಅಂತರ್ಜಲ ಕೊರತೆಯಿಂದ ಅತಿ ಹೆಚ್ಚು ಬೋರ್ ಗಳನ್ನ ಕೊರೆಯಿಸಿರೋದು ಗೊತ್ತಿರೋ ವಿಚಾರ. ಬೋರ್ ಕೊರೆಸಿದ್ರೂ ಜಮೀನುಗಳಿಗೆ ನೀರು ಹರಿಸಬೇಕು, ಮನೆಗಳಿಗೆ ನೀರು ತುಂಬಿಸಬೇಕು ಅಂದ್ರೆ ಮೋಟಾರ್ ಸ್ಪಾರ್ಟ್ ಮಾಡಲೇಬೇಕಿತ್ತು. ಆದರೆ ಇದೀಗ ಮೋಟಾರ್ ಸ್ಟಾರ್ಟ್ ಮಾಡದಿದ್ರೂ ಬೋರ್ ನಿಂದ ಜಮೀನುಗಳಿಗೆ ನೀರು ಸಪ್ಲೈ ಆಗ್ತಿದೆ. ಸತತ ಮಳೆಯ ಹಿನ್ನೆಲೆ ಬೋರ್​ಗಳು ಆನ್ ಆಗದಿದ್ರೂ ತುಂಬಿ ಹರಿಯುತ್ತಿದೆ.

ನಾನು ಕೂಡ 55 ವರ್ಷದಿಂದ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೇನೆ, ಜೀವಮಾನದಲ್ಲೇ ನಾವೆಂದೂ ಈ ರೀತಿಯಾಗಿ ಜಲ ಉಕ್ಕುತ್ತಿರುವುದನ್ನ ನೋಡಿರಲಿಲ್ಲ. ಇದೀಗ ಕಳೆದ ಒಂದು ವಾರದಿಂದ ಯಥೇಚ್ಚವಾಗಿ ನೀರು ಬೋರ್​ನಿಂದ ಸತತವಾಗಿ ಹೊರಬರುತ್ತಿರೋದು ಸಂತಸವಾಗಿದೆ ಅಂತಾರೆ ಯಗಟಿ ಗ್ರಾಮದ 80 ವರ್ಷದ ರೈತ ಕುಮಾರಸ್ವಾಮಿ.

ಹಾಗಂತ ಇದು ಒಂದು ಗ್ರಾಮದಲ್ಲಿ ಮಾತ್ರವಲ್ಲ, ಕಡೂರು ತಾಲೂಕಿನ ದೋಗೆಹಳ್ಳಿ, ಬಂಟಗನಹಳ್ಳಿ, ಸಖರಾಯಪಟ್ಟಣ ಸೇರಿದಂತೆ ಅನೇಕ ಹಳ್ಳಿಗಳ ನೂರಾರು ಬೋರ್​ಗಳು ಉಕ್ಕಿ ಹರಿಯುತ್ತಿರೋದು ರೈತರ ಮೊಗದಲ್ಲಿ ಮಂದಹಾಸ ಉಂಟಾಗಲು ಕಾರಣವಾಗಿದೆ. ಇನ್ನಾದ್ರೂ ಕಡೂರು ತಾಲೂಕಿನಲ್ಲಿ ಅಂತರ್ಜಲ ವೃದ್ಧಿಯಾಗಿ, ಶಾಶ್ವತ ಬರಪೀಡಿತ ತಾಲೂಕು ಅನ್ನೋ ಹಣೆಪಟ್ಟಿ ಕಳಚುತ್ತಾ ಅನ್ನೋ ಆಶಾಭಾವನೆ ಜನರಲ್ಲಿ ಮೂಡಿದೆ.

-ಪ್ರಶಾಂತ್, ಚಿಕ್ಕಮಗಳೂರು

TV9 Kannada