ರಾಮನಗರ: ವಿಧಾನ ಪರಿಷತ್ ಚುನಾವಣೆಗೆ ರೇಷ್ಮೆನಾಡಿ‌ನಲ್ಲಿ ಮೂರು ಪಕ್ಷಗಳ ಅಭ್ಯರ್ಥಿಗಳು ಫೈನಲ್ ಆಗಿದ್ದಾರೆ. ಈವರೆಗೂ ಅಭ್ಯರ್ಥಿ ಹುಡುಕಾಟದಲ್ಲಿದ್ದ ಪಕ್ಷಗಳು, ಈಗ ಚುನಾವಣೆ ಗೆಲ್ಲಲು ರಣತಂತ್ರ ರೂಪಿಸುತ್ತಿವೆ. ಈಗಾಗಲೆ ಸಭೆ, ಸಮಾರಂಭಗಳು ಕಾವು ಪಡೆದಿದ್ದು, ಕಾರ್ಯಕರ್ತರಿಗೆ ಹೊಸ ಉತ್ಸಾಹ ನೀಡಲು ಪಕ್ಷಗಳು ಮುಂದಾಗಿವೆ. ಮೂರು ಪಕ್ಷಗಳಿಂದಲೂ ಮೇಲ್ಮನೆ ಸೇರೋಕೆ ಜಿದ್ದಾಜಿದ್ದಿ

ಹೆಚ್‌ಡಿಕೆ ಮತ್ತು ಡಿಕೆಶಿಗೆ ಪ್ರತಿಷ್ಠೆಯ ಕಣವಾದ ರಾಮನಗರ
ಹೌದು..! ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಭದ್ರಕೋಟೆಯಾಗಿರೋ ಬೆಂಗಳೂರು ಗ್ರಾಮಾಂತರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಕೈಪಡೆ ಮತ್ತು ದಳಪತಿಗಳ ಹಣಾಹಣಿ ಶುರುವಾಗಿದೆ. ಆದ್ರೆ ಬಿಜೆಪಿಯಿಂದ ಅಷ್ಟೊಂದು ಫೈಟ್ ದೊರೆಯುತ್ತಿಲ್ಲ. ಹಾಲಿ ಎಂಎಲ್‌‌ಸಿ ಆಗಿರೋ ಎಸ್.ರವಿ ಕಾಂಗ್ರೆಸ್‌ನಿಂದ ಮತ್ತೆ ಸರ್ಧಿಸಿದ್ದಾರೆ. ಜೆಡಿಎಸ್‌ನಿಂದ ರಮೇಶ್‌ಗೌಡ ಅಖಾಡಕ್ಕಿಳಿದಿದ್ದಾರೆ. ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾಗಿರೋ ಬಿ.ಎಂ.ನಾರಾಯಣಸ್ವಾಮಿಗೆ ಬಿಜೆಪಿ ಟಿಕೆಟ್ ನೀಡಲಾಗಿದೆ. ಆದ್ರೆ ಇವರಿಗೆ ಶುರುವಿನಲ್ಲೆ ಬಂಡಾಯದ ಬೇಗುದಿ ಎದುರಾಗಿದೆ.

‘ಪರಿಷತ್‌’ ಪ್ರತಿಷ್ಠೆ
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಳೆದ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಸ್.ರವಿ ಗೆಲುವು ಸಾಧಿಸಿದ್ರು. ಒಟ್ಟಾರೆ ಕ್ಷೇತ್ರದಲ್ಲಿ ಅಂದಾಜು 4500 ಮತಗಳಿದ್ದು 378 ಮತಗಳ ಅಂತರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ರು. ಇನ್ನು 2015ರಲ್ಲಿ ಜೆಡಿಎಸ್‌ನ ಇ.ಕೃಷ್ಣಪ್ಪ 1889 ಮತಗಳನ್ನು ಪಡೆದಿದ್ರು. ಈ ಬಾರಿ 2 ಪಕ್ಷಗಳಿಂದ ಹಾಲಿ ಎಂಎಲ್‌ಸಿಗಳೇ ಅಖಾಡದಲ್ಲಿ ಮುಖಾಮುಖಿಯಾಗಿದ್ದಾರೆ. ಅಲ್ಲದೆ ಜಿಲ್ಲೆಯವರೇ ಆದ ಹೆಚ್.ಡಿ.ಕುಮಾರಸ್ವಾಮಿ ಮತ್ತು ಡಿ. ಕೆ.ಶಿವಕುಮಾರ್‌ಗೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ.

ಸದ್ಯ ಚುನಾವಣೆ ಕಾವು ಹಬ್ಬುತ್ತಿದ್ದು, ಬಿಡದಿಯ ಎಚ್‌.ಡಿ.ಕುಮಾರಸ್ವಾಮಿ ತೋಟದ ಮನೆಯಲ್ಲಿ ಜೆಡಿಎಸ್ ಸಭೆ ನಡೆಸಲು ತಯಾರಿ ಮಾಡಿಕೊಂಡಿದೆ. 2 ಜಿಲ್ಲೆಗಳಲ್ಲಿನ ಮತ ಪಡೆಯುವುದು ನಾಯಕರಿಗೆ ಸವಾಲಿನ ಕೆಲಸವಾಗಿದೆ. ಮತ್ತೊಂದೆಡೆ ಈಗಾಗಲೇ ಚನ್ನಪಟ್ಟಣದ ಕೆಂಗಲ್ ಸಮೀಪ ಕಾಂಗ್ರೆಸ್‌ ಸಭೆ ನಡೆಸಿದ್ದು, ಸಂಸದ ಡಿ.ಕೆ. ಸುರೇಶ್, ಎಂ‌ಎಲ್‌ಸಿ ಸಿ.ಎಂ.ಲಿಂಗಪ್ಪ ಸೇರಿದಂತೆ ಹಲವು ಘಟಾನುಘಟಿ ನಾಯಕರುಗಳೆಲ್ಲ ಭಾಗವಹಿಸಿದ್ರು.

ಒಟ್ಟಾರೆ ರಾಮನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿ, ಒಟ್ಟು 8 ತಾಲೂಕುಗಳಲ್ಲಿ 5ರಲ್ಲಿ ಜೆಡಿಎಸ್ ಶಾಸಕರಿದ್ದು 3ರಲ್ಲಿ ಕಾಂಗ್ರೆಸ್ ಶಾಸಕರು ಜಿದ್ದಾಜಿದ್ದಿಗೆ ಸಜ್ಜಾಗಿದ್ದಾರೆ. ಆದ್ರೆ ಈ ಬಾರಿ ಯಾರು ಮೇಲುಗೈ ಸಾಧಿಸಿ ಮೇಲ್ಮನೆ ಗದ್ದುಗೆ ಏರುತ್ತಾರೆ ಎಂಬದನ್ನ ಕಾದುನೋಡಬೇಕಿದೆ.

News First Live Kannada