Kamal Hassan Health: ಕಮಲ್​ ಹಾಸನ್​ ಆರೋಗ್ಯದ ಬಗ್ಗೆ ವೈದ್ಯರಿಂದ ಹೊಸ ಅಪ್​​ಡೇಟ್​

ಕಮಲ್​ ಹಾಸನ್

ಖ್ಯಾತ ನಟ ಕಮಲ್​ ಹಾಸನ್ (Kamal Hassan)​ ಅವರಿಗೆ ಇತ್ತೀಚೆಗೆ ಕೊವಿಡ್ ಕಾಣಿಸಿಕೊಂಡಿದೆ. ‘ವಿಕ್ರಮ್​’ ಸಿನಿಮಾದ (Vikram Movie) ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದ ಅವರಿಗೆ ಕೊರೊನಾ ಪಾಸಿಟಿವ್​ ಆಗಿದ್ದರಿಂದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇದು ಅಭಿಮಾನಿಗಳಲ್ಲಿ ಸಾಕಷ್ಟು ಆತಂಕ ಮೂಡಿಸಿದೆ. ಅವರು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಕೋರುತ್ತಿದ್ದಾರೆ. ಈ ಪ್ರಾರ್ಥನೆ ಸಫಲವಾಗಿದೆ.

ಈಚೆಗಷ್ಟೇ ಕಮಲ್​ ಹಾಸನ್​ ಅಮೆರಿಕಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ಸಣ್ಣ ಪ್ರಮಾಣದ ಕೊವಿಡ್​ ಲಕ್ಷಣಗಳು ಅವರಿಗೆ ಕಾಣಿಸಿಕೊಂಡಿತ್ತು. ಹೀಗಾಗಿ, ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದರು ಕಮಲ್​. ಈ ವೇಳೆ ಕೊರೊನಾ ಪಾಸಿಟಿವ್ ಆಗಿರುವುದು ಖಚಿತಗೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಲಾಗುತ್ತಿದೆ.

ಈ ಬಗ್ಗೆ ಟ್ವೀಟ್​ ಮಾಡಿದ್ದ ಕಮಲ್​ ‘ಅಮೆರಿಕದಿಂದ ವಾಪಸ್ ಬಂದ ಬಳಿಕ ನನಗೆ ಸಣ್ಣದಾಗಿ ಕೆಮ್ಮು ಆರಂಭವಾಗಿತ್ತು. ಪರೀಕ್ಷೆ ಮಾಡಿಸಿದ ನಂತರ ಇದು ಕೋವಿಡ್-19 ಪಾಸಿಟಿವ್ ಎಂಬುದು ತಿಳಿದುಬಂತು. ನಾನೀಗ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದೇನೆ. ಒಂದು ಅರಿವಾಗಿದ್ದೇನೆಂದರೆ, ಈ ಮಹಾಮಾರಿ ನಮ್ಮನ್ನು ಬಿಟ್ಟು ಇನ್ನೂ ಹೋಗಿಲ್ಲ. ನಾವೆಲ್ಲ ಸುರಕ್ಷಿತವಾಗಿ ಇರಬೇಕಿದೆ’ ಎಂದಿದ್ದರು ಕಮಲ್​. ಈಗ ಅವರ ಆರೋಗ್ಯ ಸುಧಾರಿಸಿದೆ.

ಕಮಲ್​ ಆರೋಗ್ಯ ವರದಿಯನ್ನು ಚೆನ್ನೈನ ಆಸ್ಪತ್ರೆಯವರು ಇಂದು ಬಿಡುಗಡೆ ಮಾಡಿದ್ದಾರೆ. ‘ಕಮಲ್ ಹಾಸನ್​ಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ’ ಎಂದು ಆಸ್ಪತ್ರೆಯವರು ಹೇಳಿದ್ದಾರೆ.

ನವೆಂಬರ್​ 7ರಂದು ಕಮಲ್​ ಜನ್ಮದಿನ ಆಚರಿಸಿಕೊಂಡಿದ್ದರು. ಸೆಲೆಬ್ರಿಟಿಗಳು, ಅಭಿಮಾನಿಗಳು, ಸ್ನೇಹಿತರು ಕಮಲ್​ ಹಾಸನ್​ಗೆ ಹುಟ್ಟುಹಬ್ಬದ ಶುಭಾಶಯ ಕೋರಿದ್ದರು. ಬರ್ತ್​ಡೇ ಪ್ರಯುಕ್ತ ಬಹುನಿರೀಕ್ಷಿತ ‘ವಿಕ್ರಮ್​’ ಸಿನಿಮಾ ತಂಡದಿಂದ ಟೀಸರ್​ ಬಿಡುಗಡೆ ಆಗಿತ್ತು. ಈ ಸಿನಿಮಾದಲ್ಲಿ ವಿಜಯ್​ ಸೇತುಪತಿ, ಫಹಾದ್​ ಫಾಸಿಲ್​ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಟೀಸರ್​ನಲ್ಲಿ ಅನಿರುದ್ಧ್​ ರವಿಚಂದರ್​ ಅವರ ಹಿನ್ನೆಲೆ ಸಂಗೀತ ಕೂಡ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ಯುಎಸ್ ಪ್ರವಾಸದಿಂದ ಹಿಂದಿರುಗಿದ ನಂತರ ಕಮಲ್ ಹಾಸನ್​​ಗೆ ಕೊರೊನಾ ಪಾಸಿಟಿವ್

TV9 Kannada