ದೆಹಲಿಯಲ್ಲಿ ಮಮತಾ ಬ್ಯಾನರ್ಜಿ-ಸುಬ್ರಹ್ಮಣಿಯನ್ ಸ್ವಾಮಿ ಭೇಟಿ; ಕುತೂಹಲ ಮೂಡಿಸಿದ ಬಿಜೆಪಿ ಮುಖಂಡನ ಮಾತುಗಳು

ಸುಬ್ರಹ್ಮಣಿಯನ್​ ಸ್ವಾಮಿ-ಮಮತಾ ಬ್ಯಾನರ್ಜಿ ಭೇಟಿ

ದೆಹಲಿ ಪ್ರವಾಸದಲ್ಲಿರುವ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಂದು ಬಿಜೆಪಿ ನಾಯಕ ಸುಬ್ರಹ್ಮಣಿಯನ್ ಸ್ವಾಮಿಯವರನ್ನು ಭೇಟಿಯಾದರು. ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್​ ಬ್ಯಾನರ್ಜಿಯವರ ದೆಹಲಿಯಲ್ಲಿರುವ ನಿವಾಸದಲ್ಲಿ ಇಂದು ಮಧ್ಯಾಹ್ನ 3.30ರ ಹೊತ್ತಿಗೆ ಸಭೆ ನಡೆದಿತ್ತು.  ಸಭೆ ಬಳಿಕ, ‘ನೀವು ತೃಣಮೂಲ ಕಾಂಗ್ರೆಸ್ ಸೇರುತ್ತೀರಾ’ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಸುಬ್ರಹ್ಮಣಿಯನ್ ಸ್ವಾಮಿ, ನಾನು ಈಗಾಗಲೇ ಮಮತಾ ಬ್ಯಾನರ್ಜಿ ಜತೆಗೆ ಇದ್ದೇನೆ. ಅವರಿಗೆ ಬೆಂಬಲ ನೀಡುತ್ತಿದ್ದೇನೆ. ಮತ್ತೆ ಆ ಪಕ್ಷವನ್ನು ಸೇರುವ ಅಗತ್ಯತೆ ನನಗೆ ಕಾಣುತ್ತಿಲ್ಲ ಎಂದು ಉತ್ತರಿಸಿದ್ದಾರೆ.  ಇನ್ನು ನಿನ್ನೆಯಷ್ಟೇ (ಮಂಗಳವಾರ) ಸುಬ್ರಹ್ಮಣಿಯನ್​ ಸ್ವಾಮಿ ಕೋಲ್ಕತ್ತಕ್ಕೆ ತೆರಳಿ ಪಶ್ಚಿಮ ಬಂಗಾಳ ರಾಜ್ಯಪಾಲ ಜಗದೀಪ್​ ಧಂಕರ್​​ರನ್ನು ಭೇಟಿಯಾಗಿದ್ದರು.

ಸುಬ್ರಹ್ಮಣಿಯನ್​ ಸ್ವಾಮಿಯವರು ಪ್ರಧಾನಿ ಮೋದಿ ಮತ್ತು ಅವರ ಸರ್ಕಾರದ ಕಟು ವಿಮರ್ಶಕರು. ಸದಾ ಒಂದಲ್ಲ ಒಂದು ಟೀಕೆಯನ್ನು ಬಹಿರಂಗವಾಗಿಯೇ ಮಾಡುತ್ತಾರೆ. ಅವರನ್ನು ಈ ಬಾರಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿಯಿಂದ ಕೈಬಿಡಲಾಗಿದೆ. ಹಾಗಂತ ಪ್ರಧಾನಿ ಮೋದಿಯಾಗಲಿ, ಅಮಿತ್​ ಶಾ ಆಗಲೀ, ಜೆಪಿ ನಡ್ಡಾ ಆಗಲೀ ಇದುವರೆಗೂ ಸುಬ್ರಹ್ಮಣಿಯನ್​ ಸ್ವಾಮಿ ವಿರುದ್ಧ ಯಾವುದೇ ಮಾತುಗಳನ್ನೂ ಆಡಿಲ್ಲ. ಈ ಹಿಂದೆ ಹಲವು ಬಾರಿ ಕೂಡ ಮಮತಾ ಬ್ಯಾನರ್ಜಿಯವರನ್ನು ಹೊಗಳಿದ್ದಾರೆ. ಇತ್ತೀಚೆಗೆಷ್ಟೇ, ರೋಮ್​​ನಲ್ಲಿ ನಡೆಯಲಿದ್ದ ಶಾಂತಿ ಸಮಾವೇಶಕ್ಕೆ ಹೋಗಲು ಮಮತಾ ಬ್ಯಾನರ್ಜಿಯವರಿಗೆ ಅವಕಾಶ ಕೊಡಲಿಲ್ಲ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವನ್ನೇ ಟೀಕೆ ಮಾಡಿದ್ದಾರೆ.  ಅಷ್ಟೇ ಅಲ್ಲ ಪಶ್ಚಿಮ ಬಂಗಾಳದ ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ನಂದಿಗ್ರಾಮದಲ್ಲಿ ಪ್ರಚಾರ ಮಾಡುವಾಗ ಮಮತಾ ಬ್ಯಾನರ್ಜಿ ಗಾಯಗೊಂಡಿದ್ದರು. ಆಗ ಸ್ವಾಮಿ ಟ್ವೀಟ್ ಮಾಡುವ ಮೂಲಕ ಶೀಘ್ರವೇ ಚೇತರಿಸಿಕೊಳ್ಳುವಂತೆ ಹಾರೈಸಿದ್ದರು. ಇನ್ನು ಮಮತಾ ಬ್ಯಾನರ್ಜಿ ಇಂದು 5ಗಂಟೆಗೆ ಪ್ರಧಾನಿ ಮೋದಿಯವರನ್ನು ಭೇಟಿಯಾಗಲಿದ್ದಾರೆ.

ಇದನ್ನೂ ಓದಿ: ಯಾವ ಸಹಾಯವನ್ನೂ ಮಾಡದ ನಿಮ್ಮದು ಇದೆಂಥಾ ಸರ್ಕಾರ?- ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಪ್ರಶ್ನೆ

TV9 Kannada