ಸದ್ಯದಲ್ಲೇ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಸಹಜ ಸ್ಥಿತಿಯತ್ತ; ವಿಮಾನಯಾನ ಸಚಿವಾಲಯ

ವಿಮಾನ

ನವದೆಹಲಿ: ವಿಶ್ವಾದ್ಯಂತ ಕೊವಿಡ್ ಅಬ್ಬರ ಹೆಚ್ಚಾಗಿದ್ದರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ನವೆಂಬರ್ 30ರವರೆಗೂ ನಿರ್ಬಂಧ ಹೇರಲಾಗಿತ್ತು. ಇದೀಗ ಕೊರೊನಾ ಆತಂಕ ಕೊಂಚ ಕಡಿಮೆ ಆಗಿರುವುದರಿಂದ ಈ ವರ್ಷದ ಅಂತ್ಯದೊಳಗೆ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಸಹಜ ಸ್ಥಿತಿಗೆ ಮರಳಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಬಗ್ಗೆ ಕೇಂದ್ರ ವಿಮಾನಯಾನ ಸಚಿವಾಲಯದ ಕಾರ್ಯದರ್ಶಿ ರಾಜೀವ್ ಬನ್ಸಾಲ್ ಮಾಹಿತಿ ನೀಡಿದ್ದು, ಡಿಸೆಂಬರ್ ವೇಳೆಗೆ ಭಾರತದ ಎಲ್ಲ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರ ಮೊದಲಿನಂತಾಗಲಿದೆ ಎಂದಿದ್ದಾರೆ.

ಈಗಾಗಲೇ ಕೆಲವು ದೇಶಗಳಿಗೆ ಅಂತಾರಾಷ್ಟ್ರೀಯ ವಿಮಾನ ಸಂಚಾರ ಶುರುವಾಗಿದೆ. ಕಳೆದ ವರ್ಷದಿಂದ ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನಗಳಿಗೆ ನಿಷೇಧ ವಿಧಿಸಲಾಗಿತ್ತು. 2020ರ ಮಾರ್ಚ್ 23ರಿಂದ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟಕ್ಕೆ ಭಾರತದಲ್ಲಿ ನಿಷೇಧ ಹೇರಲಾಗಿತ್ತು. ಕೋವಿಡ್-19 ಸಾಂಕ್ರಾಮಿಕದ ನಡುವೆ ಭಾರತದಲ್ಲಿ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳ ಹಾರಾಟವನ್ನು ನವೆಂಬರ್ 30ರವರೆಗೂ ರದ್ದುಗೊಳಿಸಲಾಗಿತ್ತು. ವಿಶೇಷ ಸಂದರ್ಭಗಳನ್ನು ಪರಿಗಣಿಸಿ, ನಿಗದಿಯಾಗಿರುವ ಅಂತಾರಾಷ್ಟ್ರೀಯ ವಿಮಾನಗಳ ಸಂಚಾರಕ್ಕೆ ಅನುಮತಿ ದೊರೆಯಲಿದ್ದು, ಅಂತಾರಾಷ್ಟ್ರೀಯ ಎಲ್ಲಾ ಕಾರ್ಗೋ ಕಾರ್ಯಾಚರಣೆ ಹಾಗೂ ಡಿಜಿಸಿಎ ವಿಶೇಷವಾಗಿ ಅನುಮೋದಿಸಿದ ವಿಮಾನಗಳಿಗೆ ಈ ನಿರ್ಬಂಧ ಅನ್ವಯವಾಗುವುದಿಲ್ಲ.

ಕೊವಿಡ್ ಸಾಂಕ್ರಾಮಿಕ ರೋಗದ ಹಿನ್ನೆಲೆಯಲ್ಲಿ ಕಳೆದ ವರ್ಷ ಮಾರ್ಚ್ 23ರಿಂದ ಭಾರತದಿಂದ ಹೊರಡುವ ಮತ್ತು ಆಗಮಿಸುವಂತೆ ಎಲ್ಲಾ ನಿಗದಿತ ಅಂತಾರಾಷ್ಟ್ರೀಯ ವಿಮಾನಗಳನ್ನು ನಿಷೇಧಿಸಲಾಗಿದೆ. ಅಂತಾರಾಷ್ಟ್ರೀಯ ವಾಣಿಜ್ಯ ವಿಮಾನಗಳ ಮೇಲಿನ ನಿರ್ಬಂಧಗಳು ಅ. 31ಕ್ಕೆ ಕೊನೆಗೊಳ್ಳಬೇಕಿತ್ತು. ಬಳಿಕ ಮತ್ತೆ ಆ ಗಡುವನ್ನು ವಿಸ್ತರಿಸಲಾಗಿತ್ತು. ಭಾರತಕ್ಕೆ ಮತ್ತು ಭಾರತದಿಂದ ಹೊರಹೋಗುವ ಅಂತಾರರಾಷ್ಟ್ರೀಯ ವಿಮಾನಗಳ ಮೇಲಿನ ಅಮಾನತನ್ನು ನವೆಂಬರ್ 30ರವರೆಗೆ ವಿಸ್ತರಿಸಲಾಗಿತ್ತು.

ಕಳೆದ ವಾರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಅಂತಾರಾಷ್ಟ್ರೀಯ ವಿಮಾನ ಸಂಚಾರವನ್ನು ಸಹಜ ಸ್ಥಿತಿಗೆ ತರುವ ಪ್ರಕ್ರಿಯೆಯನ್ನು ಸರ್ಕಾರ ಮೌಲ್ಯಮಾಪನ ಮಾಡುತ್ತಿದೆ ಎಂದು ಹೇಳಿದ್ದರು. ಅದರಂತೆ ಸದ್ಯದಲ್ಲೇ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ಮತ್ತೆ ಶುರುವಾಗುವ ಸಾಧ್ಯತೆಯಿದೆ.

ಇದನ್ನೂ ಓದಿ: ನೊಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆ ನ.25ಕ್ಕೆ; 20 ವರ್ಷದಲ್ಲಿ ಭರ್ಜರಿ ಅಭಿವೃದ್ಧಿಯಾಗಲಿದೆ ಇಲ್ಲಿ !

ಪೂರ್ವಾಂಚಲ್ ಎಕ್ಸ್​ಪ್ರೆಸ್​ವೇಯಲ್ಲಿ ವಾಯುಪಡೆಯ ಏರ್​ ಶೋ; ಕಮಾಂಡೋಗಳನ್ನು ಹೊತ್ತು ಇಳಿದ ಎಎನ್​-32 ಯುದ್ಧ ವಿಮಾನ

TV9 Kannada