ಕರ್ನಾಟಕದ 68 ಕಡೆ ಎಸಿಬಿ ದಾಳಿ ಬಹುತೇಕ ಅಂತ್ಯ; ಅಪಾರ ಪ್ರಮಾಣದ ಆಸ್ತಿ, ಚಿನ್ನಾಭರಣ, ಹಣ ಪತ್ತೆ- ವಿವರ ಇಲ್ಲಿದೆ

ಎಸಿಬಿ ದಾಳಿ

ಬೆಂಗಳೂರು: ರಾಜಧಾನಿ ಬೆಂಗಳೂರು ಸೇರಿದಂತೆ 68 ಕಡೆ ಎಸಿಬಿ ದಾಳಿ ನಡೆಸಿದೆ. ಎಸಿಬಿ ದಾಳಿ ಬಹುತೇಕ ಮುಕ್ತಾಯದ ಹಂತ ತಲುಪಿದೆ. 408 ಎಸಿಬಿ ಅಧಿಕಾರಿಗಳು ಇಂದು ದಾಳಿ ನಡೆಸಿದ್ದರು. 15 ಸರ್ಕಾರಿ ನೌಕರರ ಮನೆ, ಕಚೇರಿಗಳ ಮೇಲೆ ದಾಳಿ ಮಾಡಲಾಗಿತ್ತು. ಈ ವೇಳೆ, ಅಪಾರ ಪ್ರಮಾಣದ ಆಸ್ತಿ ದಾಖಲೆ, ಚಿನ್ನಾಭರಣ ಪತ್ತೆ ಆಗಿತ್ತು. ಅಧಿಕಾರಿಗಳು ಆದಾಯಕ್ಕಿಂತ ಹೆಚ್ಚು ಆಸ್ತಿ ಮಾಡಿರುವುದು ಪತ್ತೆಯಾಗಿತ್ತು. ದಾಳಿ ವೇಳೆ ಸಿಕ್ಕ ಚಿನ್ನಾಭರಣ, ಆಸ್ತಿ ಪತ್ರಗಳ ಪಂಚನಾಮೆ ಮಾಡಲಾಗಿದೆ. ಪಂಚನಾಮೆ ನಂತರ ವಶಕ್ಕೆ ಪಡೆದ ವಸ್ತುಗಳ ಬಗ್ಗೆ ಪಟ್ಟಿಯನ್ನು ಓದಿ ಅಧಿಕಾರಿಗಳು ಸಹಿ ಪಡೆಯಲಿದ್ದಾರೆ. ಇದೇ ವೇಳೆ ವಶಕ್ಕೆ ಪಡೆದ ವಸ್ತುಗಳ ಬಗ್ಗೆ ದಾಖಲೆ ನೀಡಲು ನೋಟಿಸ್ ನೀಡುವ ಸಾಧ್ಯತೆಯೂ ಇದೆ. 

ಗೋಕಾಕ್: 1 ಕೋಟಿ 87 ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಪತ್ತೆ
ಗೋಕಾಕ್ ಆರ್‌ಟಿಓ ಇನ್ಸಪೆಕ್ಟರ್ ಸದಾಶಿವ ಮರಲಿಂಗಣ್ಣವರ್ ಮನೆ ಮೇಲೆ ಎಸಿಬಿ ದಾಳಿ ಮುಕ್ತಾಯವಾಗಿದೆ. ದಾಳಿ ವೇಳೆ ಅಪಾರ ಪ್ರಮಾಣದ ನಗದು, ಆಭರಣ‌, ಆಸ್ತಿ ಪತ್ತೆಯಾಗಿದೆ. ರಾಮದುರ್ಗ ತಾಲೂಕಿನ ಕುಳ್ಳೂರಿನಲ್ಲಿ 22 ಎಕರೆ ಭೂಮಿ, ಬೆಳಗಾವಿಯಲ್ಲಿ 1 ಮನೆ, 31 ಲಕ್ಷ ಮೌಲ್ಯದ ಎರಡು ಕಾರು, 1 ಕೆಜಿ 135 ಚಿನ್ನಾಭರಣ, 200 ಗ್ರಾಂ ಬೆಳ್ಳಿ ಆಭರಣ, 5 ಲಕ್ಷ ಮೌಲ್ಯದ ಗೃಹೋಪಯೋಗಿ ಸಾಮಗ್ರಿಗಳು, 8 ಲಕ್ಷ 22 ಸಾವಿರ ರೂಪಾಯಿ ನಗದು ಎಸಿಬಿ ವಶಕ್ಕೆ ಪಡೆಯಲಾಗಿದೆ.

ಒಟ್ಟು 1 ಕೋಟಿ 87ಲಕ್ಷ ಮೌಲ್ಯದ ಅಕ್ರಮ ಸಂಪತ್ತು ಪತ್ತೆಯಾಗಿದೆ. ಈ ಬಗ್ಗೆ ಟಿವಿ9ಗೆ ಎಸಿಬಿ ಎಸ್‌ಪಿ ಬಿ.ಎಸ್.ನೇಮಗೌಡ ಮಾಹಿತಿ ನೀಡಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ನಗರದಲ್ಲಿರುವ ಮನೆ ಸೇರಿ ಒಟ್ಟು 6 ಕಡೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದರು. ಸದಾಶಿವ ಮನೆಯಲ್ಲಿ 20 ಎಕರೆಯ ಜಮೀನು ಪತ್ರ ಕೂಡ ಪತ್ತೆಯಾಗಿದೆ.

ಶಿವಮೊಗ್ಗ: ರುದ್ರೇಶಪ್ಪ ಮನೆಯಲ್ಲಿ 5 ಕೋಟಿ ಮೌಲ್ಯದ ಚಿನ್ನ ಪತ್ತೆ
ಗದಗದ ಕೃಷಿ ಇಲಾಖೆ ಜಂಟಿ ನಿರ್ದೇಶಕ ರುದ್ರೇಶಪ್ಪ ಮನೆಯಲ್ಲಿ ಎಸಿಬಿ ದಾಳಿ ಮುಂದುವರಿದಿದೆ. ಎಸಿಬಿ ಎಸ್​ಪಿ ಜಯಪ್ರಕಾಶ್ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ಶಿವಮೊಗ್ಗದ ಚಾಲುಕ್ಯನಗರದಲ್ಲಿ ಒಂದು ನಿವಾಸವಿದೆ. ಸುಮಾರು 1.5 ಕೋಟಿ ರೂಪಾಯಿ ಮೌಲ್ಯದ ಮನೆ, ಗೋಪಾಲಗೌಡ ಏರಿಯಾದ ಮನೆ ಮೌಲ್ಯ ₹80 ಲಕ್ಷ, ಎರಡು ಜೆಸಿಬಿ ಇರುವ ದಾಖಲೆ ಪತ್ರಗಳು ಲಭ್ಯ ಆಗಿದೆ. ಲಕ್ಷಾಂತರ ಮೌಲ್ಯದ ಎಲ್‌ಐಸಿ ಬಾಂಡ್‌ಗಳು ಪತ್ತೆಯಾಗಿದೆ. ಬ್ಯಾಂಕ್‌ನಲ್ಲಿ 20 ಲಕ್ಷ ಠೇವಣಿ ಇಟ್ಟಿರುವ ದಾಖಲೆ ಲಭಿಸಿದೆ.

ರುದ್ರೇಶಪ್ಪ ಮನೆಯಲ್ಲಿ 7 ಕೆಜಿ ಚಿನ್ನದ ಬಿಸ್ಕೆಟ್, ಡೈಮಂಡ್ ಹಾರ, 1.5 ಕೆಜಿ ಚಿನ್ನಾಭರಣ, 3 ಕೆಜಿ ಬೆಳ್ಳಿ, 15 ಲಕ್ಷ ನಗದು ಪತ್ತೆಯಾಗಿದೆ. ಎಸಿಬಿ ದಾಳಿ ವೇಳೆ ಸುಮಾರು 5 ಕೋಟಿ ಮೌಲ್ಯದ ಚಿನ್ನ ಪತ್ತೆಯಾಗಿದೆ. ಶಿವಮೊಗ್ಗದ ಚಾಲುಕ್ಯ ನಗರದಲ್ಲಿರುವ ರುದ್ರೇಶಪ್ಪ ಮನೆಯಲ್ಲಿ ದಾಳಿ ನಡೆಸಿದ ವೇಳೆ ಇಷ್ಟು ಪ್ರಮಾಣದ ಆಸ್ತಿ ಪತ್ತೆಯಾಗಿದೆ.

ನಾನು ಯಾವ ತಪ್ಪು ಮಾಡಿದ್ರೂ ಕೋರ್ಟ್ ಶಿಕ್ಷೆ ಕೊಡುತ್ತೆ: ಎಲ್​ಸಿ ನಾಗರಾಜ್ ಹೇಳಿಕೆ
ನಾನು ಯಾವ ತಪ್ಪು ಮಾಡಿದ್ರೂ ಕೋರ್ಟ್ ಶಿಕ್ಷೆ ಕೊಡುತ್ತೆ ಎಂದು ಎಸಿಬಿ ದಾಳಿಯ ಬಳಿಕ ಸಕಾಲ, ಬೆಂಗಳೂರು ಆಡಳಿತಾಧಿಕಾರಿ ಎಲ್‌.ಸಿ.ನಾಗರಾಜ್ ಹೇಳಿಕೆ ನೀಡಿದ್ದಾರೆ. ನನ್ನ ತಾತ ಜಮೀನುದಾರ, ಅವರು ಕೊಟ್ಟ 43 ಲಕ್ಷ ಇದೆ. ನಮ್ಮ ತಾತ ಕೊಟ್ಟ 43 ಲಕ್ಷ ರೂಪಾಯಿ ನನ್ನ ಬಳಿ ಇದೆ. ನಾನು ವ್ಯವಸಾಯ ಮಾಡುತ್ತೇನೆ, ಆದಾಯ ತೆರಿಗೆ ಕಟ್ಟುತ್ತೇನೆ. ನನ್ನ ಹೆಂಡತಿ ಉದ್ಯಮಿ, ಅವರಿಗೂ ಒಳ್ಳೆ ಆದಾಯ ಬರುತ್ತದೆ. ನಾವು ಸರ್ಕಾರಿ ಕೆಲಸದಲ್ಲಿ ಈ ಹಣ ಗಳಿಸಿಲ್ಲ ಎಂದು ನಾಗರಾಜು ಹೇಳಿದ್ದಾರೆ.

ಉದ್ದೇಶಪೂರ್ವಕವಾಗಿ ನಮ್ಮ ಮೇಲೆ ದಾಳಿ ನಡೆಸಲಾಗಿದೆ. ರಾಜಕೀಯವಾಗಿ ನಾನು ಮುಂದೆ ಬರುತ್ತೇನೆಂದು ದಾಳಿ ಮಾಡಲಾಗಿದೆ. ನಾನು ತೆರಿಗೆ ಪಾವತಿಸಿರುವ ಎಲ್ಲ ದಾಖಲೆ ಕೊಟ್ಟಿದ್ದೇನೆ. ಎಸಿಬಿ ಅಧಿಕಾರಿಗಳಿಗೆ ದಾಖಲೆ ಕೊಟ್ಟಿದ್ದೇನೆ. ನನ್ನ ಅತ್ತೆಗೆ ಹೃದಯಘಾತವಾಗಿದೆ, ಚಿಕಿತ್ಸೆಗಾಗಿ ಹಣ ಇಟ್ಟಿದ್ದೆ. ಸಂಬಂಧಪಟ್ಟ ಇಲಾಖೆಗೆ ನಾನು ಉತ್ತರ ನೀಡುತ್ತೇನೆ. ನಾನು ಪ್ರಾಮಾಣಿಕ, ಯಾವುದೇ ಅಕ್ರಮದಲ್ಲಿ ಭಾಗಿಯಾಗಿಲ್ಲ ಎಂದು ಎಸಿಬಿ ದಾಳಿಯ ಬಳಿಕ ಎಲ್‌.ಸಿ.ನಾಗರಾಜ್​​ ಹೇಳಿಕೆ ನೀಡಿದ್ದಾರೆ.

ಎಲ್‌.ಸಿ.ನಾಗರಾಜ್ 6ಕ್ಕೂ ಹೆಚ್ಚು ಬ್ಯಾಂಕ್​​ ಅಕೌಂಟ್​​ ಮುಟ್ಟುಗೋಲು ಹಾಕಲಾಗಿದೆ. ಈಗಾಗಲೇ ಮನೆಯಲ್ಲಿ 40 ಲಕ್ಷಕ್ಕೂ ಅಧಿಕ ನಗದು ಪತ್ತೆ ಆಗಿದೆ. 105 ಗ್ರಾಂ ಚಿನ್ನಾಭರಣ ಹಾಗೂ ಬೆಳ್ಳಿ ವಸ್ತುಗಳು ಸಿಕ್ಕಿವೆ. ಹೆಂಡತಿ, ನಾಗರಾಜ್ ಹೆಸರಲ್ಲಿ ಲಾಕರ್ ಬಗ್ಗೆ ಪರಿಶೀಲನೆ ಮಾಡಲಾಗಿದೆ. ನೆಲಮಂಗಲದಲ್ಲಿ ಎರಡು ಎಕರೆ ಜಮೀನಿರುವುದು ಪತ್ತೆ ಆಗಿದೆ. ಜಮೀನಿನಲ್ಲಿ 18 ಕೋಟಿ ಲೋನ್ ಪಡೆದು ಗೋದಾಮು ನಿರ್ಮಾಣ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರಿನಲ್ಲಿ ಎಸಿಬಿ ದಾಳಿ
ಬೆಂಗಳೂರು ನಿರ್ಮಿತಿ ಕೇಂದ್ರ ಪ್ರಾಜೆಕ್ಟ್ ಮ್ಯಾನೇಜರ್ ವಾಸುದೇವ್ ಮನೆಯಲ್ಲಿ 15 ಲಕ್ಷ ನಗದು ಪತ್ತೆ ಆಗಿದೆ. ಎಸಿಬಿ ಅಧಿಕಾರಿಗಳ ದಾಳಿ ವೇಳೆ ಹಣ ಪತ್ತೆಯಾಗಿದೆ. ಬೆಂಗಳೂರಿನಲ್ಲಿ ವಾಸುದೇವ್‌ಗೆ ಸೇರಿದ 6 ಸ್ಥಳಗಳಲ್ಲಿ ದಾಳಿ ನಡೆದಿತ್ತು.

ಬಿಬಿಎಂಪಿ ಎಫ್‌ಡಿಎ ಎಮ್. ಮಾಯಣ್ಣ ಮನೆ ಮೇಲೆ ಎಸಿಬಿ ದಾಳಿ ನಡೆಸಿದೆ. ಸರ್ಕಾರಕ್ಕೆ ಪ್ರತಿ ವರ್ಷ ಆಸ್ತಿ ವಿವರ ಸಲ್ಲಿಸದಿರುವುದು ರೇಡ್ ವೇಳೆ ಪತ್ತೆಯಾಗಿದೆ. ಮಾಯಣ್ಣನ ಆದಾಯಕ್ಕಿಂತ 5 ಕೋಟಿ ಹೆಚ್ಚುವರಿ ಆಸ್ತಿ ಪತ್ತೆಯಾಗಿದೆ. ಅಲ್ಲದೇ‌ ಖರ್ಚು ಕೂಡ ಹೆಚ್ಚು ಮಾಡಿರುವುದು ಪತ್ತೆ ಆಗಿದೆ. ಮಾಯಣ್ಣ ಮನೆ ಸೇರಿ ಈತನ ಮೂಲದಲ್ಲಿ 8 ಕಡೆ ರೇಡ್ ಮಾಡಲಾಗಿದೆ. ಚಿನ್ನಾಭರಣಕ್ಕಿಂತ‌ಲೂ ಹೆಚ್ಚು ಆಸ್ತಿ ಪತ್ರಗಳು ಲಭ್ಯವಾಗಿದೆ. ಮನೆ ಲಾಕರ್​​ನಲ್ಲಿ 580 ಗ್ರಾಂ ಚಿನ್ನ, ಬ್ಯಾಂಕ್ ಲಾಕರ್​​ನಲ್ಲಿ 600 ಗ್ರಾಂ ಚಿನ್ನ, 10 ಲಕ್ಷ ಠೇವಣಿ, ಆರು ಸೈಟ್​, ನಾಲ್ಕು ಮನೆ ಮಾಯಣ್ಣ ಹೆಸರಿನಲ್ಲಿ ಪತ್ತೆಯಾಗಿದೆ. ಎರಡು ಕಡೆ ಜಮೀನು ಇರುವ ದಾಖಲೆ ಪತ್ರಗಳು ಲಭ್ಯವಾಗಿದೆ.

ಇದನ್ನೂ ಓದಿ: ಎಸಿಬಿ ದಾಳಿ ವೇಳೆ ಸೀರೆಯಲ್ಲಿ ಬಚ್ಚಿಟ್ಟ ಹಣ ಪತ್ತೆ; ನೋಟು ಎಣಿಸಲು ಮಷೀನ್ ತಂದ ಅಧಿಕಾರಿಗಳು

ಇದನ್ನೂ ಓದಿ: ಕಲಬುರಗಿಯ ಭ್ರಷ್ಟ ಅಧಿಕಾರಿ ಮನೆಯ ಪೈಪ್​​ನಲ್ಲಿಯೂ ಕಂತೆ ಕಂತೆ ಹಣ ಪತ್ತೆ! ಪ್ಲಂಬರ್ ಮೊರೆ ಹೋದ ಎಸಿಬಿ ಅಧಿಕಾರಿಗಳು

TV9 Kannada