ಪರಿಷತ್ ಚುನಾವಣೆ: ಎಸ್​ಆರ್​ ಪಾಟೀಲ್​ಗೆ ಟಿಕೆಟ್ ಸಿಗದ ಹಿನ್ನೆಲೆ; ಸೋನಿಯಾ ಗಾಂಧಿಗೆ ಪತ್ರ ಬರೆದು ಬೆಂಬಲಿಗರ ಅಸಮಾಧಾನ

ಎಸ್​ಆರ್ ಪಾಟೀಲ್

ಬಾಗಲಕೋಟೆ: ಕರ್ನಾಟಕದಲ್ಲಿ ವಿಧಾನ ಪರಿಷತ್ ಚುನಾವಣೆ ಡಿಸೆಂಬರ್ 10 ರಂದು ನಡೆಯಲಿದೆ. ಚುನಾವಣೆಯಲ್ಲಿ ಕಾಂಗ್ರೆಸ್​ನಿಂದ ಸ್ಪರ್ಧಿಸುವುದಕ್ಕೆ ಎಸ್.ಆರ್. ಪಾಟೀಲ್​ಗೆ ಚುನಾವಣಾ ಟಿಕೆಟ್ ನೀಡದ ವಿಚಾರವಾಗಿ ಕಾಂಗ್ರೆಸ್​ನಲ್ಲಿ ಅಸಮಾಧಾನ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಪಾಟೀಲ್‌ ಬೆಂಬಲಿಗರು ಸೋನಿಯಾ ಗಾಂಧಿಗೆ ಪತ್ರ ಬರೆದಿದ್ದಾರೆ. ಎಸ್.ಆರ್. ಪಾಟೀಲ್, 4 ಬಾರಿ ಎಂಎಲ್​ಸಿ ಚುನಾವಣೆಯಲ್ಲಿ ಜಯಗಳಿಸಿದ್ದಾರೆ. ಕಾಂಗ್ರೆಸ್‌ ಪಕ್ಷದ ಸಂಘಟನೆಗೆ ಹಗಲಿರುಳು ಶ್ರಮಿಸಿದ್ದರು ಎಂದು ಉಲ್ಲೇಖಿಸಿ ಪತ್ರ ಬರೆದಿದ್ದಾರೆ.

ಕಾಂಗ್ರೆಸ್ ಪಕ್ಷವೂ ತನ್ನ ಮೂಲ ಸಿದ್ಧಾಂತಗಳಿಗೆ ತಿಲಾಂಜಲಿ ಇಡುತ್ತಿದೆ. ಕಾಂಗ್ರೆಸ್ ತನ್ನ ಸಿದ್ಧಾಂತಗಳಿಗೆ ತಿಲಾಂಜಲಿ ಇಡುವ ಕಾಲ ಸನಿಹವಾಗಿದೆ ಎಂದು ಚುನಾವಣಾ ಟಿಕೆಟ್‌ ನೀಡದಿದ್ದಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ. ಸೋನಿಯಾ ಗಾಂಧಿ ಸೇರಿದಂತೆ ಮಲ್ಲಿಕಾರ್ಜುನ ಖರ್ಗೆ, ರಣದೀಪ್​​ ಸುರ್ಜೇವಾಲ, ಡಿ.ಕೆ. ಶಿವಕುಮಾರ್, ಸಿದ್ದರಾಮಯ್ಯಗೆ ಪತ್ರ ಬರೆದು ವಿಚಾರ ತಿಳಿಸಿದ್ದಾರೆ. ಕಾಂಗ್ರೆಸ್‌ ಹಿರಿಯ ನಾಯಕರಿಗೂ ಪತ್ರ ಬರೆದು ಎಸ್.ಆರ್. ಪಾಟೀಲ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಸ್​ಆರ್ ಪಾಟೀಲ್ ಸ್ವಂತ ನಿರ್ಧಾರ ತೆಗೆದುಕೊಳ್ತಾರೆ: ಮುರುಗೇಶ್ ನಿರಾಣಿ
ಎಸ್.ಆರ್. ಪಾಟೀಲ್ ಹಿರಿಯರಿದ್ದಾರೆ, ಸ್ವಂತ ನಿರ್ಧಾರ ಕೈಗೊಳ್ತಾರೆ. 24 ವರ್ಷ ರಾಜಕಾರಣ ಮಾಡಿದವರಿಗೆ ಟಿಕೆಟ್ ಸಿಗಬೇಕಿತ್ತು. ಟಿಕೆಟ್ ಸಿಗದಿರುವುದು ನಮ್ಮ ಜಿಲ್ಲೆಗೆ ಆ ಪಕ್ಷದಿಂದ ಅನ್ಯಾಯ ಆಗಿದೆ. ಎಸ್.ಆರ್. ಪಾಟೀಲ್​ಗೆ ಎಂಎಲ್​ಸಿ ಟಿಕೆಟ್ ಸಿಗಬೇಕಾಗಿತ್ತು ಎಂದು ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್ ನಿರಾಣಿ ಹೇಳಿಕೆ ನೀಡಿದ್ದಾರೆ. ಪಾಟೀಲ್, ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ತಾರೆ ಎಂಬ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಅವರು ವಿಪಕ್ಷದಲ್ಲಿದ್ರೂ ನಮಗೆ ಒಳ್ಳೆಯ ಪ್ರಶ್ನೆ ಕೇಳುತ್ತಿದ್ದರು. ಈ ಭಾಗದ ಅಭಿವೃದ್ಧಿ ಆಗುವುದಕ್ಕೆ ಸಶಕ್ತ ನಾಯಕರಾಗಿದ್ದರು. ಕಾಂಗ್ರೆಸ್​ನವರು ಯಾವ ಕಾರಣಕ್ಕೆ ಟಿಕೆಟ್​ ಕೊಟ್ಟಿಲ್ಲ ಗೊತ್ತಿಲ್ಲ. ಮುಂದೆ ಏನ್ಮಾಡ್ತಾರೆ ಅನ್ನುವುದು ಅವರ ಪಕ್ಷಕ್ಕೆ ಬಿಟ್ಟ ವಿಚಾರ ಎಂದು ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.

ಇದನ್ನೂ ಓದಿ: ಎಸ್​ಆರ್ ಪಾಟೀಲ್​ಗೆ ತಪ್ಪಿದ ಪರಿಷತ್ ಚುನಾವಣೆ ಟಿಕೆಟ್; ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಇದನ್ನೂ ಓದಿ: ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸುವುದಾಗಿ ಹೇಳಿದ ವರ್ತೂರು ಪ್ರಕಾಶ್; ಬೆಂಬಲಿಗರ ಸಭೆಯಲ್ಲಿ ಕಣ್ಣೀರು

TV9 Kannada