Omicron: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಒಮಿಕ್ರಾನ್ ವೈರಸ್ ಭೀತಿ; ವಿಶ್ವ ಆರೋಗ್ಯ ಸಂಸ್ಥೆಯಿಂದಲೂ ಎಚ್ಚರಿಕೆ

ಒಮಿಕ್ರಾನ್

ನವದೆಹಲಿ: ಒಮಿಕ್ರಾನ್ (Omicron) ಪ್ರಭೇದದ ಕೊರೊನಾ ವೈರಸ್ (Coronavirus) ಬಗ್ಗೆ ಇಡೀ ಜಗತ್ತಿನಲ್ಲಿ ಆತಂಕ, ಭಯ ಮನೆ ಮಾಡಿದೆ. ದಿನ ಕಳೆದಂತೆ ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಒಮಿಕ್ರಾನ್ ಪ್ರಭೇದದ ವೈರಸ್ ಹರಡಿದೆ. ಆದರೆ, ಹೊಸ ಒಮಿಕ್ರಾನ್ ಪ್ರಭೇದದ ಬಗ್ಗೆ ಇನ್ನೂ ವಿಶ್ವ ಆರೋಗ್ಯ ಸಂಸ್ಥೆಗೂ (WHO) ಸರಿಯಾದ ಸ್ಪಷ್ಟತೆ ಇಲ್ಲ. ಇದರ ಬಗ್ಗೆ ಸರಿಯಾದ ಅಧ್ಯಯನ, ಸಂಶೋಧನೆ ನಡೆಯಲು ಇನ್ನೂ ಕೆಲ ದಿನ, ವಾರಗಳ ಸಮಯ ಬೇಕು. ಇದರ ಮಧ್ಯೆಯೇ ಕೆಲವು ದೇಶಗಳು ದಕ್ಷಿಣ ಆಫ್ರಿಕಾ (South Africa) ಹಾಗೂ ಒಮಿಕ್ರಾನ್ ಬಾಧಿತ ದೇಶಗಳಿಗೆ ವಿಮಾನ ಸಂಚಾರ ಸ್ಥಗಿತಗೊಳಿಸಿವೆ.

ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಈಗಾಗಲೇ ಜಗತ್ತಿನಲ್ಲಿ 14 ದೇಶಗಳಿಗೆ ಹರಡಿದೆ. ದಕ್ಷಿಣ ಆಫ್ರಿಕಾದಿಂದ ಹಾಂಕಾಂಗ್, ಇಸ್ರೇಲ್, ಇಟಲಿ, ಬೆಲ್ಜಿಯಂ ಸೇರಿದಂತೆ 14 ದೇಶಗಳಿಗೆ ಹರಡಿದೆ. ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಒಮಿಕ್ರಾನ್ ಪ್ರಭೇದದ ವೈರಸ್ ಬಗ್ಗೆ ಭಯ, ಆತಂಕ ಹುಟ್ಟಲು ಕಾರಣ ಕೂಡ ಇದೆ. ಒಮಿಕ್ರಾನ್ ಪ್ರಭೇದದ ವೈರಸ್ ಸ್ಪೈಕ್ ಪ್ರೋಟೀನ್​ನಲ್ಲಿ 32 ರೂಪಾಂತರಗಳಿವೆ. ಒಟ್ಟಾರೆ, ಒಮಿಕ್ರಾನ್ ಪ್ರಭೇದದ ವೈರಸ್ 50 ರೂಪಾಂತರಗಳನ್ನು ಹೊಂದಿದೆ.

ಜೊತೆಗೆ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಕೊರೊನಾ ಲಸಿಕೆ, ಪ್ರತಿಕಾಯಗಳು ಹಾಗೂ ರೋಗ ನಿರೋಧಕ ಶಕ್ತಿಯಿಂದಲೂ ಎಸ್ಕೇಪ್ ಆಗುವ ಸಾಮರ್ಥ್ಯ ಹೊಂದಿದೆ ಅಂತ ಕೂಡ ಹೇಳಲಾಗುತ್ತಿದೆ. ಇದರ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ, ಅಧ್ಯಯನ ನಡೆಯಬೇಕಾಗಿದೆ. ಒಮಿಕ್ರಾನ್ ಪ್ರಭೇದದ ವೈರಸ್ ಒಬ್ಬರಿಂದ ಮತ್ತೊಬ್ಬರಿಗೆ ಸುಲಭವಾಗಿ ಹರಡುತ್ತದೆ ಎನ್ನುವುದು ಇನ್ನೂ ಸ್ಪಷ್ಟವಾಗಿಲ್ಲ. ಬೇರೆ ಪ್ರಭೇದದ ಕೊರೊನಾ ವೈರಸ್​ಗೆ ಹೋಲಿಸಿದರೆ ಒಮಿಕ್ರಾನ್ ಪ್ರಭೇದ ಗಂಭೀರ ಕಾಯಿಲೆಗೆ ಕಾರಣವಾಗುತ್ತದೆ ಎಂಬುದು ಕೂಡ ಇನ್ನೂ ಸ್ಪಷ್ಟವಾಗಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.

ಸದ್ಯ, ಒಮಿಕ್ರಾನ್ ಪ್ರಭೇದದ ಲಕ್ಷಣಗಳು ಬೇರೆ ಪ್ರಭೇದದ ವೈರಸ್​ಗಿಂತ ಭಿನ್ನವಾಗಿರುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಒಮಿಕ್ರಾನ್ ಪ್ರಭೇದದ ಬಗ್ಗೆ ಸದ್ಯ ಸೀಮಿತ ಮಾಹಿತಿ ಮಾತ್ರ ಇದೆ. ಪ್ರಾಥಮಿಕ ಮಾಹಿತಿ ಪ್ರಕಾರ, ಈಗಾಗಲೇ ಕೊರೊನಾ ಸೋಂಕು ತಗುಲಿದ್ದವರಿಗೆ ಮತ್ತೆ ಒಮಿಕ್ರಾನ್ ಪ್ರಭೇದದ ಕೊರೊನಾ ಸೋಂಕು ತಗುಲಬಹುದು. ಒಮಿಕ್ರಾನ್ ಹೊಸ ಪ್ರಭೇದದ ಬೇರೆ ಬೇರೆ ವಿಷಯಗಳ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ, ಅಧ್ಯಯನ ನಡೆಯಬೇಕಾಗಿದೆ. ಇದಕ್ಕೆ ಇನ್ನೂ ಕೆಲ ದಿನ, ವಾರಗಳ ಕಾಲಾವಕಾಶ ಬೇಕು ಎಂದು ತಜ್ಞ ವಿಜ್ಞಾನಿಗಳು ಹೇಳಿದ್ದಾರೆ.

ಜಗತ್ತಿನ ಪ್ರಸಿದ್ದ ಲಸಿಕಾ ಕಂಪನಿಗಳಾದ ಮಾಡೆರ್ನಾ, ಜಾನ್ಸನ್ ಆ್ಯಂಡ್ ಜಾನ್ಸನ್, ಫೈಜರ್, ಸ್ಪುಟ್ನಿಕ್ ಲಸಿಕಾ ಕಂಪನಿಗಳು ಒಮಿಕ್ರಾನ್ ಪ್ರಭೇದದ ಬಗ್ಗೆ ಅಧ್ಯಯನ ನಡೆಸಿ ಬಳಿಕ ಇದನ್ನು ನಿಗ್ರಹಿಸುವ ಹೊಸ ಕೊರೊನಾ ಲಸಿಕೆ ಸಂಶೋಧನೆ ನಡೆಸುತ್ತೇವೆ, ಇದಕ್ಕೆ ಕನಿಷ್ಠ ನೂರು ದಿನಗಳ ಕಾಲಾವಕಾಶ ಬೇಕು ಎಂದು ಹೇಳಿವೆ. ಭಾರತದ ಕಂಪನಿಗಳು ಕೂಡ ಒಮಿಕ್ರಾನ್ ಬಗ್ಗೆ ಅಧ್ಯಯನ ನಡೆಸಿ ಬಳಿಕ ಸೂಕ್ತ ಕೊರೊನಾ ಲಸಿಕೆ ಸಂಶೋಧನೆ ಮಾಡಬಹುದು.

ಆಫ್ರಿಕಾದಲ್ಲಿ 40 ವರ್ಷದೊಳಗಿನವರಲ್ಲಿ ಹೆಚ್ಚಾಗಿ ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ಕಾಣಿಸಿಕೊಂಡಿದೆ. ಬಹಳಷ್ಟು ಮಂದಿಯಲ್ಲಿ ಅಲ್ಪ ಪ್ರಮಾಣದ ಕೊರೊನಾ ಲಕ್ಷಣಗಳು ಮಾತ್ರ ಇವೆ. ಮೈ ಕೈ ನೋವು, ಮೂಳೆ ನೋವು, ಸುಸ್ತುನಂಥ ಲಕ್ಷಣಗಳು ಮಾತ್ರ ಒಮಿಕ್ರಾನ್ ಪ್ರಭೇದದ ಕೊರೊನಾ ಸೋಂಕಿತರಲ್ಲಿವೆ. ಆಫ್ರಿಕಾದಲ್ಲಿ ಒಮಿಕ್ರಾನ್ ಸೋಂಕಿತರಿಗೆ ಮನೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ದಾಖಲಾಗುವ ಅಗತ್ಯ ಇಲ್ಲ ಎಂದು ಅಲ್ಲಿನ ವೈದ್ಯರು ಹೇಳಿದ್ದಾರೆ. ಹೀಗಾಗಿ ಒಮಿಕ್ರಾನ್ ಪ್ರಭೇದದ ಕೊರೊನಾ ಸೋಂಕು ತಗುಲಿದರೂ, ಆಸ್ಪತ್ರೆಗೆ ದಾಖಲಾಗುವ, ಐಸಿಯುಗೆ ದಾಖಲಾಗುವ, ಮೆಡಿಕಲ್ ಆಕ್ಸಿಜನ್ ಪಡೆಯುವ ಅಗತ್ಯತೆ ಸದ್ಯಕ್ಕೆ ಕಂಡು ಬಂದಿಲ್ಲ. ಕೊರೊನಾ ಲಸಿಕೆಯು ಒಮಿಕ್ರಾನ್ ವಿರುದ್ಧ ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಅಧ್ಯಯನ ನಡೆಸುತ್ತಿದೆ.

ದಕ್ಷಿಣ ಆಫ್ರಿಕಾದ ಮಾಹಿತಿ ಆಧಾರದ ಮೇಲೆ ಸೂಕ್ಷ್ಮಾಣು ತಜ್ಞ ಮಾರ್ಕ್ ವ್ಯಾನ್ ಪ್ರಕಾರ, ಒಮಿಕ್ರಾನ್ ಕಡಿಮೆ ರೋಗಕಾರಕ. ಒಮಿಕ್ರಾನ್ ಪ್ರಭೇದದ ಕೊರೊನಾ ವೈರಸ್ ವಿರುದ್ಧ ಕೊರೊನಾ ಲಸಿಕೆಗಳು ಭಾಗಶಃ ಪರಿಣಾಮಕಾರಿ ಎಂದು ಭಾರತದ ಐಸಿಎಂಆರ್‌ನ ಮಾಜಿ ಮುಖ್ಯಸ್ಥ ಡಾಕ್ಟರ್ ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ. ಭಾರತಕ್ಕೆ ಓಮಿಕ್ರಾನ್ ಪ್ರಭೇದದ ವೈರಸ್ ಅನ್ನು ಮಾನಿಟರ್ ಮಾಡುವುದು ಕಷ್ಟವೇನಲ್ಲ. ಟೆಸ್ಟಿಂಗ್, ಟ್ರೇಸಿಂಗ್, ಟ್ರ್ಯಾಕಿಂಗ್ ಮತ್ತು ಐಸೋಲೇಷನ್ ಕಾರ್ಯತಂತ್ರಗಳನ್ನ ಮತ್ತೆ ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು ಎಂದು ಡಾಕ್ಟರ್ ರಾಮನ್ ಗಂಗಾಖೇಡ್ಕರ್ ಹೇಳಿದ್ದಾರೆ.

ಇನ್ನು, ಭಾರತದಲ್ಲಿ ಅಂತಾರಾಷ್ಟ್ರೀಯ ವಿಮಾನ ಪ್ರಯಾಣಿಕರ ಮೇಲೆ ಹೆಚ್ಚಿನ ನಿರ್ಬಂಧ ವಿಧಿಸಲಾಗಿದೆ. ಆದರೇ, ಜೆನೋಮ್ ಸಿಕ್ವೇನ್ಸಿಂಗ್ ನಡೆಸಿದ ಬಳಿಕವಷ್ಟೇ ಕೊರೊನಾ ವೈರಸ್ ಯಾವ ಪ್ರಭೇದ ಎಂದು ತಿಳಿಯುತ್ತೆ. ಆದರೆ, ನಮ್ಮ ಭಾರತದಲ್ಲಿ ಜೆನೋಮಿಕ್ ಸಿಕ್ವೇನ್ಸಿಂಗ್ ನಡೆಸುವ ಲ್ಯಾಬ್ ಗಳ ಸಂಖ್ಯೆ ಕಡಿಮೆ ಇದೆ. ಇದರಿಂದಾಗಿ ಜೆನೋಮಿಕ್ ಸಿಕ್ವೇನ್ಸಿಂಗ್ ನಡೆಸಿ, ವರದಿ ನೀಡಲು ಈ ಮೊದಲು 2 ತಿಂಗಳವರೆಗೂ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಈಗ ಈ ಅವಧಿಯನ್ನು 1 ತಿಂಗಳಿಗೆ ಇಳಿಸುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಈ ತಿಂಗಳ ಅವಧಿಯವರೆಗೂ ಕೊರೊನಾ ಸೋಂಕಿತರು ಐಸೋಲೇಷನ್ ನಲ್ಲೇ ಇರಬೇಕು. ಐಸೋಲೇಷನ್ ನಲ್ಲಿ ಇರಲಾಗದೇ ಹೊರಬಂದು ಸಾಕಷ್ಟು ಮಂದಿ ಕೊರೊನಾ ವೈರಸ್ ಹರಡುವ ಜನರೇ ಭಾರತದಲ್ಲಿ ಜಾಸ್ತಿ. ಇಂಗ್ಲೆಂಡ್ ನಲ್ಲಿ ಒಂದೆರೆಡು ದಿನದಲ್ಲೇ ಜೆನೋಮ್ ಸಿಕ್ವೇನ್ಸಿಂಗ್ ವರದಿ ನೀಡಲಾಗುತ್ತೆ. ಅದೇ ರೀತಿ ಭಾರತದಲ್ಲೂ ಕನಿಷ್ಠ ಒಂದು ವಾರದೊಳಗೆ ಜೆನೋಮ್ ಸಿಕ್ವೇನ್ಸಿಂಗ್ ವರದಿ ನೀಡುವಂತಾಗಬೇಕು ಎಂದು ತಜ್ಞ ವೈದ್ಯರು ಹೇಳಿದ್ದಾರೆ.

ಇನ್ನೂ ಜಗತ್ತಿನ ಅನೇಕ ದೇಶಗಳು ಆಫ್ರಿಕಾದ ವಿರುದ್ಧ ಸಂಚಾರ ನಿರ್ಬಂಧ ವಿಧಿಸುತ್ತಿರುವುದಕ್ಕೆ ಆಫ್ರಿಕಾ ಆಕ್ಷೇಪ ವ್ಯಕ್ತಪಡಿಸಿದೆ. ವಿಮಾನ ಸಂಚಾರ ನಿರ್ಬಂಧವನ್ನು ವಾಪಸ್ ತೆಗೆದುಕೊಳ್ಳಬೇಕು. ಒಮಿಕ್ರಾನ್ ಪ್ರಭೇದ ಪತ್ತೆ ಹಚ್ಚಿದ್ದಕ್ಕೆ ದಕ್ಷಿಣ ಆಫ್ರಿಕಾವನ್ನು ಈ ರೀತಿ ಶಿಕ್ಷಿಸಲಾಗುತ್ತಿದೆ ಎಂದು ಕಿಡಿಕಾರಿದೆ.

ಇದನ್ನೂ ಓದಿ: Omicron: ವಿಶ್ವಾದ್ಯಂತ ಒಮಿಕ್ರಾನ್ ಹರಡುವಿಕೆಗೆ ಕಡಿಮೆ ಲಸಿಕೆ ದರ ಕಾರಣವೇ?; ತಜ್ಞರು ಹೇಳೋದೇನು?

Omicron Variant: ಒಮಿಕ್ರಾನ್ ಎಂಬ ಭಯಾನಕ ವೈರಸ್ ಬಗ್ಗೆ ನಿಮಗೆಷ್ಟು ಗೊತ್ತು?

TV9 Kannada