ಬೆಳಗಾವಿ: ಮೇಲ್ಮನೆ ಆಟ ರೋಚಕ ತಿರುವು ಪಡೆದಿದೆ. ಗರಡಿಯಲ್ಲಿನ ಕುಸ್ತಿ ಬಿಟ್ಟು ಗೋಕಾಕ್​​​ ಸಾಹುಕಾರ್​​​ ದೆಹಲಿ ದಂಡಯಾತ್ರೆ ಕೈಗೊಂಡಿದ್ದಾರೆ. ಸ್ವಹಿತ, ಸೋದರರ ಪರ ಜಾರಕಿಹೊಳಿ ಲಾಬಿ ಮಾಡ್ತಿದ್ದಾರೆ. ಕಾಂಗ್ರೆಸ್​​​ ಸೋಲಿಗೆ ರಣವ್ಯೂಹಕ್ಕೆ ಗ್ರೀನ್​​ಸಿಗ್ನಲ್​​ ಪಡೆಯಲಿದ್ದಾರೆ.

ಬೆಳಗಾವಿ ರಾಜಕಾರಣ ನಿಗಿ ನಿಗಿ ಅಂತಿದೆ. ಪರಿಷತ್​​ ಅಖಾಡದಲ್ಲಿ ಜಿದ್ದಾಜಿದ್ದಿ ಶುರುವಾಗಿದೆ. ಬೆಳಗಾವಿಯ ಪ್ರಭುತ್ವಕ್ಕಾಗಿ ಜಾರಕಿಹೊಳಿ ಮತ್ತೊಂದು ಸಮರಕ್ಕೆ ಸರ್ವಸನ್ನದ್ಧರಾಗಿದ್ದಾರೆ. ಬಿಜೆಪಿ ಮತ್ತು ಸಹೋದರ ಲಖನ್​​ ಗೆಲುವಿಗಿಂತ ಹೆಬ್ಬಾಳ್ಕರ್​​ ಸಹೋದರನನ್ನೇ ಸೋಲಿಸೋದೇ ಪರಮ ಗುರಿ ಆಗಿಸಿಕೊಂಡಿದ್ದಾರೆ.

ಪರಿಷತ್​​ ಅಖಾಡದಲ್ಲಿ ಜಾರಕಿಹೊಳಿ ಮಹಾ ತಂತ್ರ
ಸಾಹುಕಾರ್​​​ ದೆಹಲಿ ಯಾತ್ರೆ ಹಿಂದಿನ ರಹಸ್ಯವೇನು?
ಸಿ.ಡಿ ಕೇಸ್​​ನಲ್ಲಿ ಹೋದ ಮಾನ, ಪರಿಷತ್​ ಅಖಾಡದಲ್ಲಿ ಮರಳಿ ಪಡೆಯಲು ಸಾಹುಕಾರ್​​​ ಸಂಗ್ರಾಮ ಸಾರಿದ್ದಾರೆ.. ಈ ಸಮರದ ಹೊತ್ತಲ್ಲೇ ದೆಹಲಿ ದಂಡಯಾತ್ರೆ ಕೈಗೊಂಡಿರೋದು ಒಳ-ಹೊರ ಕೂಟದಲ್ಲಿ ಅಚ್ಚರಿ ಮೂಡಿಸಿದ್ದಾರೆ.. ನಿನ್ನೆ ಸಂಜೆಯೇ ದೆಹಲಿ ಯಾತ್ರೆ ಮಾಡಿರುವ ಜಾರಕಿಹೊಳಿ, ಪರಿಷತ್​​​ ಪ್ರತಿಷ್ಠೆಯೊಂದಿಗೆ ಮಂತ್ರಿಪಟ್ಟಕ್ಕೆ ಹೊಸ ಪಟ್ಟು ಹಾಕ್ತಿದ್ದಾರೆ.

ಜಾರಕಿಹೊಳಿ ರಾಷ್ಟ್ರ ರಾಜಧಾನಿಗೆ ತೆರಳಿರೋದು ಯಾಕೆ ಅನ್ನೋ ಕುತೂಹಲಕ್ಕೆ ಎರಡು ಕಾರಣಗಳು ಮೇಲ್ನೋಟಕ್ಕೆ ಕಾಣಿಸ್ತಿವೆ.. ಸಚಿವ ಸ್ಥಾನಕ್ಕೆ ಲಾಬಿ ಮಾಡೋಕೆ ಹೋದ್ರಾ ಅಥವಾ ತಮ್ಮ ಸೋದರನ ಸ್ಪರ್ಧೆ ಬಗ್ಗೆ ವರಿಷ್ಠರ ಕಿವಿ ತಲುಪಿಸಲು ಸಾಹುಕಾರ್​​​ ವಿಸಿಟ್​​​ ಮಾಡಿದ್ರಾ ಅನ್ನೋ ಪ್ರಶ್ನೆಗೆ ಉತ್ತರ ಹೇಳ್ತೀವಿ ಓದಿ..

ರಮೇಶ್ ‘ದೆಹಲಿ’ ಸೀಕ್ರೆಟ್

  1. ತಮ್ಮ ವಿರುದ್ಧದ ಸಿ.ಡಿ. ಆರೋಪದಿಂದ ಮುಕ್ತಿ ಸಿಗುವ ಸಾಧ್ಯತೆ
  2. 2023ಕ್ಕೆ ರಾಜ್ಯ ಸಾರ್ವತ್ರಿಕ ವಿಧಾನಸಭಾ ಕ್ಷೇತ್ರದ ಚುನಾವಣೆ
  3. ಎಲೆಕ್ಷನ್​​​ ಗಮನದಲ್ಲಿಟ್ಟು ಎಲೆಕ್ಷನ್ ಕ್ಯಾಬಿನೆಟ್ ರಚಿಸಬೇಕು
  4. ಎಲೆಕ್ಷನ್ ಕ್ಯಾಬಿನೆಟ್‌ನಲ್ಲಿ ಸೇರ್ಪಡೆಗೆ ವರಿಷ್ಠರ ಮೇಲೆ ಒತ್ತಡ
  5. ಒಂದ್ವೇಳೆ, ನನಗಲ್ಲದಿದ್ದರೂ ಸೋದರ ಬಾಲಚಂದ್ರಗಾದ್ರೂ ಸಚಿವ ಸ್ಥಾನ ನೀಡಲೇಬೇಕು ಅಂತ ಸಾಹುಕಾರ್​​ ಪಟ್ಟು ಹಿಡಿದಿದ್ದಾರೆ.

ಈ ಒತ್ತಡಗಳನ್ನ ಹೇರಲು ದೆಹಲಿಗೆ ಹಾರಿರುವ ರಮೇಶ್ ಜಾರಕಿಹೊಳಿ, ವರಿಷ್ಠರಿಗೆ ಕೆಲ ಮಾಹಿತಿಗಳನ್ನ ತಲುಪಿಸಲಿದ್ದಾರೆ ಅಂತ ಹೇಳಲಾಗ್ತಿದೆ..

ರಮೇಶ್ ‘ಪರಿಷತ್’ ಪ್ಲಾನ್

  • ತಂತ್ರ 1 : ಪರಿಷತ್ ಬಿಜೆಪಿ ಅಭ್ಯರ್ಥಿ ಮಹಾಂತೇಶ್ ಕವಟಗಿಮಠ ಗೆಲ್ಲಿಸೋದು
  • ತಂತ್ರ 2 : ಸಹೋದರ ಲಖನ್ ಜಾರಕಿಹೊಳಿಯನ್ನು ಗೆಲ್ಲಿಸಿಕೊಂಡು ಬರುವುದು
  • ತಂತ್ರ 3 : ಕಾಂಗ್ರೆಸ್‌ನ ಅಭ್ಯರ್ಥಿ ಚನ್ನರಾಜ ಹಟ್ಟಿಹೊಳಿಯನ್ನ ಸೋಲಿಸಬೇಕು

ಒಟ್ಟಾರೆ, ಕಾಂಗ್ರೆಸ್​​​ ಸೋಲಿಗೆ ಪಣ ತೊಟ್ಟಿರುವ ರಮೇಶ್​​ ಜಾರಕಿಹೊಳಿ, ಕುಂದಾನಗರಿಯಲ್ಲಿ ತಮ್ಮ ಮುುಷ್ಠಿ ಬಿಗಿಗೊಳಿಸುವ ಲೆಕ್ಕಾಚಾರ ಹೊಂದಿದ್ದಾರೆ.. ಈ ಲೆಕ್ಕಾಚಾರಗಳಿಗೆ ಹೈಕಮಾಂಡ್​​​ ಕೊಡುವ ಕಮಾಂಡ್​​​ ಮೇಲೆ ನಿಂತಿದೆ.

ವಿಶೇಷ ವರದಿ: ಮಧುಸೂದನ್​​, ಪೊಲಿಟಿಕಲ್​​​ ಬ್ಯೂರೋ, ನ್ಯೂಸ್​​ಫಸ್ಟ್​​

News First Live Kannada