ವಿಶ್ವದ ಅತೀ ಶ್ರೀಮಂತ ಉದ್ಯಮಿಗಳಲ್ಲಿ ಒಬ್ಬರಾದ, ಮೈಕ್ರೋಸಾಫ್ಟ್​ ಕಂಪನಿಯ ಸಹಸಂಸ್ಥಾಪಕ ಬಿಲ್​ ಗೇಟ್ಸ್​ ಹಾಗೂ ಪತ್ನಿ ಮೆಲಿಂಡಾ ತಮ್ಮ ದಾಂಪತ್ಯ ಜೀವನ ಅಂತ್ಯಗೊಳಿಸಲು ಮುಂದಾಗಿದ್ದಾರೆ. ನಿನ್ನೆ ಗೇಟ್ಸ್​ ದಂಪತಿ ಡಿವೋರ್ಸ್​​​ಗೆ ಅರ್ಜಿ ಸಲ್ಲಿಸಿದ್ದು, ಈ ಬಗ್ಗೆ ಇಬ್ಬರೂ ಸೋಷಿಯಲ್​ ಮೀಡಿಯಾದಲ್ಲಿ ಪ್ರತ್ಯೇಕ ಪೋಸ್ಟ್​ಗಳನ್ನ ಹಾಕಿ ಅಧಿಕೃತವಾಗಿ ಅನೌನ್ಸ್​ ಮಾಡಿದ್ದಾರೆ.

ಬಿಲ್​ ಗೇಟ್ಸ್​ ಹಾಗೂ ಮೆಲಿಂಡಾ ವಿಶ್ವದ ಅತೀ ದೊಡ್ಡ ಖಾಸಗಿ ಚಾರಿಟೆಬಲ್ ಫೌಂಡೇಷನ್​ಗಳಲ್ಲಿ ಒಂದಾದ The Bill & Melinda Gates Foundationನ ಸಹಸಂಸ್ಥಾಪಕರು ಕೂಡ ಹೌದು. ವಿಚ್ಛೇದನದ ನಂತರವೂ ತಮ್ಮ ಲೋಕೋಪಕಾರಿ ಕಾರ್ಯಗಳನ್ನ ಮುಂದುವರೆಸೋದಾಗಿ ದಂಪತಿ ತಿಳಿಸಿದ್ದಾರೆ. ಹಾಗೇ ತಮ್ಮ ಆಸ್ತಿಯನ್ನ ಭಾಗ ಮಾಡಿಕೊಳ್ಳೋದು ಹೇಗೆ ಎಂಬ ಬಗ್ಗೆಯೂ ಒಪ್ಪಂದಕ್ಕೆ ಬಂದಿರೋದಾಗಿ ತಿಳಿಸಿದ್ದಾರೆ. ವಿಚ್ಚೇದನದ ಮೂಲಕ ಸುದೀರ್ಘ 27 ವರ್ಷಗಳ ದಾಂಪತ್ಯ ಜೀವನಕ್ಕೆ ಗೇಟ್ಸ್​ ದಂಪತಿ ಅಂತ್ಯವಿರಾಮವಿಡಲು ಮುಂದಾಗಿದ್ದಾರೆ.

ನಾವು ಮೂರು ಮಕ್ಕಳನ್ನು ಬೆಳೆಸಿದ್ದೇವೆ. ಆರೋಗ್ಯಕರ, ಉತ್ಪಾದಕ ಜೀವನವನ್ನು ನಡೆಸಲು  ಜನರಿಗೆ ಅನುವು ಮಾಡಿಕೊಡುವಂತೆ ವಿಶ್ವದಾದ್ಯಂತ ಕೆಲಸ ಮಾಡುವ ಒಂದು ಅಡಿಪಾಯವನ್ನು ನಿರ್ಮಿಸಿದ್ದೇವೆ ಎಂದು ದಂಪತಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಬಿಲ್​ ಗೇಟ್ಸ್​ ಈ ಹಿಂದೆ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿಗಳ ಪೈಕಿ ಟಾಪ್ 1 ಸ್ಥಾನದಲ್ಲಿದ್ದರು. ಈಗ ಫೋರ್ಬ್ಸ್​​ ರಿಯಲ್​ ಟೈಂ ಬಿಲಿಯನೇರ್ಸ್​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದ್ದು, ಅವರ ಆಸ್ತಿ ಮೌಲ್ಯ ಸುಮಾರು 130 ಬಿಲಿಯನ್ ಡಾಲರ್ಸ್​(ಸರಿಸುಮಾರು ₹9.6 ಲಕ್ಷ ಕೋಟಿ) ಇದೆ. ಹೀಗಾಗಿ ಸಹಜವಾಗಿಯೇ ಇಬ್ಬರೂ ಆಸ್ತಿಯನ್ನ ಹೇಗೆ ವಿಭಜನೆ ಮಾಡಿಕೊಳ್ಳಲಿದ್ದಾರೆ ಎಂಬುದರ ಮೇಲೆ  ಜಗತ್ತಿನ ಕಣ್ಣು ನೆಟ್ಟಿದೆ. ಯಾಕಂದ್ರೆ 2019ರಲ್ಲಿ ವಿಶ್ವದ ನಂಬರ್ ಒನ್ ಶ್ರೀಮಂತನ ಸ್ಥಾನದಲ್ಲಿದ್ದ ಅಮೇಜಾನ್ ಕಂಪನಿ ಸಿಇಓ ಜೆಫ್​ ಬಿಜೋಸ್ ಹಾಗೂ ಮೆಕೆನ್ಝಿ ಬಿಜೋಸ್ ದಂಪತಿ​ ಕೂಡ ಡಿವೋರ್ಸ್ ಪಡೆದಿದ್ದರು. ಬಳಿಕ ಅಮೆಜಾನ್‌ನಲ್ಲಿನ ಶೇಕಡ  4ರಷ್ಟು ಷೇರ್ಸ್​ ಮೆಕೆನ್ಝಿ ಪಾಲಾಗಿತ್ತು, ಇದರ ಮೌಲ್ಯ 36 ಬಿಲಿಯನ್ ಡಾಲರ್‌ (ಸುಮಾರು 2.6 ಲಕ್ಷ ಕೋಟಿ)ಗಳಿಗಿಂತ ಹೆಚ್ಚು.

ಡಿವೋರ್ಸ್​ ಬಳಿಕ ಈಗ ​ ಮೆಕೆನ್ಝಿ ವಿಶ್ವದ ಮೂರನೇ ಅತೀ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ. ತಮ್ಮ ಆಸ್ತಿಯಲ್ಲಿ ಭಾರೀ ಮೊತ್ತದ ಹಣವನ್ನ ಅವರು ದಾಣ ಮಾಡಿದ್ದಾರೆ. ಕೊರೊನಾ ಸಾಂಕ್ರಾಮಿಕದ ಹಿನ್ನೆಲೆ ಮೆಕೆನ್ಝಿ 2020ರಲ್ಲಿ ಒಟ್ಟಾರೆ 5.7 ಬಿಲಿಯನ್ ಡಾಲರ್(ಅಂದಾಜು ₹42 ಸಾವಿರ ಕೋಟಿ) ಹಣವನ್ನ ವಿವಿಧ ಯೂನಿವರ್ಸಿಟಿ, ಎನ್​ಜಿಓ, ಆಹಾರ ಬ್ಯಾಂಕುಗಳು, ಮಾನವ ಸೇವಾ ಸಂಸ್ಥೆಗಳು ಮತ್ತು ಜನಾಂಗೀಯ-ನ್ಯಾಯ ದತ್ತಿ ಸಂಸ್ಥೆ ಮುಂತಾದವುಗಳಿಗೆ ದೇಣಿಗೆ ನೀಡಿದ್ದಾರೆ ಎಂದು ವರದಿಯಾಗಿದೆ. ಸದ್ಯ ಮೆಕೆನ್ಝಿ ಸೈನ್ಸ್​ ಶಿಕ್ಷಕರೊಬ್ಬರನ್ನ ಮದುವೆಯಾಗಿದ್ದು, ಲೋಕೋಪಕಾರಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

The post 27 ವರ್ಷದ ದಾಂಪತ್ಯ ಜೀವನ ಅಂತ್ಯ; ವಿಶ್ವದ ಅತಿ ಶ್ರೀಮಂತ ಬಿಲ್​ ಗೇಟ್ಸ್​ ದಂಪತಿ ಡಿವೋರ್ಸ್​ appeared first on News First Kannada.

Source: newsfirstlive.com

Source link