ಹೆಮ್ಮಾರಿ ಕೊರೊನಾ ಮೊದಲ ಅಲೆಯನ್ನೇ ಸಹಿಸಿಕೊಳ್ಳದ ಜನ್ರು, ಇದೀಗ 2ನೇ ಅಲೆಯಲ್ಲೂ ಸಾವು-ನೋವುಗಳ ಕೂಪದಲ್ಲಿ ಮುಳುಗಿದ್ದಾರೆ. ಕೊರೊನಾಗೆ ಮುಕ್ತಿ ಯಾವಾಗ ಸಿಗುತ್ತಪ್ಪ ಅಂತ ಕಾಯ್ತಿರೋರಿಗೆ ಇದೀಗ 3ನೇ ಅಲೆಯ ಭೀತಿಯೂ ಶುರುವಾಗಿದೆ. ಈ ಕೊರೊನಾ ಮೂರನೇ ಅಲೆಯಲ್ಲಿ ಟಾರ್ಗೆಟ್ ಆಗೋರು ಮಕ್ಕಳು ಎಂಬುದೇ ಆತಂಕವನ್ನು ಹೆಚ್ಚಿಸಿದೆ.

ಮೊದಲ ಅಲೆಯಲ್ಲೇ ಮರಣ ಮೃದಂಗ ಬಾರಿಸಿದ್ದ ಹೆಮ್ಮಾರಿ ಕೊರೊನಾ, 2ನೇ ಅಲೆಯಲ್ಲೂ ತನ್ನ ಆಟ ಮುಂದುವರಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಪ್ರತಿನಿತ್ಯ ಬೆಡ್, ಆಕ್ಸಿಜನ್ ಸಿಗದೇ ಸೋಂಕಿತರು ಪರದಾಡ್ತಿದ್ದಾರೆ. ಇದರ ನಡುವೆ ಮೂರನೇ ಕೊರೊನಾ ಅಲೆಯ ಭೀತಿ ಎದುರಾಗಿದ್ದು. ಈ ಅಲೆಗೆ ಪುಟ್ಟ, ಪುಟ್ಟ ಮಕ್ಕಳೇ ಟಾರ್ಗೆಟ್ ಆಗಲಿದ್ದಾರೆ ಅನ್ನೋ  ಆಘಾತಕಾರಿ ವಿಷಯವನ್ನ ತಜ್ಞರು ಹೊರಹಾಕಿದ್ದಾರೆ.

ಏಸಿಂಪ್ಟಮ್ಯಾಟಿಕ್ ಲಕ್ಷಣಗಳು, ಚಿಕಿತ್ಸೆ ಏನು?
ಮಕ್ಕಳಲ್ಲಿ ಏಸಿಂಪ್ಟಮ್ಯಾಟಿಕ್(ರೋಗಲಕ್ಷಣವಿಲ್ಲದ) ಕೊರೊನಾ ಸೋಂಕು ಹೆಚ್ಚು ಕಾಣಬಹುದು. ಮೈ-ಕೈ ನೋವು, ಜ್ವರ, ಸುಸ್ತು ಕೂಡಾ ಇರುವುದಿಲ್ಲ. ಆಕ್ಸಿಜನ್ ಸ್ಯಾಚುರೇಷನ್ ನಾರ್ಮಲ್ ಇರುತ್ತೆ. ಹೀಗಾಗಿ ಸೋಂಕಿಗೊಳಗಾದ ಮಕ್ಕಳಿಗೆ, ಪೋಷಕರು ನಿತ್ಯ ಸ್ಯಾಚುರೇಷನ್ ಚೆಕ್ ಮಾಡಬೇಕಾಗುತ್ತೆ. ಮನೆಯಲ್ಲೇ ಮಗುವನ್ನು ಐಸೋಲೇಟ್ ಮಾಡ್ಬೇಕು. ಮಕ್ಕಳಿಗೆ ಪ್ಯಾರಾಸಿಟಮಲ್ ಸಿರಪ್ ಡೋಸ್‍ನಲ್ಲಿ ನೀಡಬೇಕು. ಮಕ್ಕಳ ಉಸಿರಾಟದ ವೇಗವನ್ನ ಪರಿಶೀಲಿಸುತ್ತಿರಬೇಕು. 10 ದಿನದ ಬಳಿಕ 3 ದಿನ ಜ್ವರ ಇಲ್ಲದಿದ್ರೆ, ಸೋಂಕು ನಿವಾರಣೆಯಾಗಿರುತ್ತೆ. ಈ ವೇಳೆ ಬೇರೆ ಮಕ್ಕಳ ಜೊತೆ 7 ದಿನ ಬೇರೆಯದಂತೆ ಪೋಷಕರು ನೋಡಿಕೊಳ್ಳಬೇಕು.

ಸಾಧಾರಣ ಲಕ್ಷಣಗಳು, ಚಿಕಿತ್ಸೆ ಹೇಗೆ?
ಮಕ್ಕಳಲ್ಲಿ ಸೋಂಕಿನ ಸಾಧಾರಣ ಲಕ್ಷಣಗಳೆಂದರೆ ಗಂಟಲು ಕೆರೆತ, ಗಂಟಲು ನೋವು, ಕೆಮ್ಮು, ಮೂಗು ಸೋರುವಿಕೆ, ಜ್ವರ ಇರುವುದು. ಉಸಿರಾಟದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಸೋಂಕಿತ ಮಕ್ಕಳಿಗೆ ಅಸ್ತಮಾ, ಹೃದಯ, ಕಿಡ್ನಿ ಸಮಸ್ಯೆ, ನರ ದೌರ್ಬಲ್ಯ ಸಮಸ್ಯೆ ಇದ್ದರೆ ತಡ ಮಾಡ್ಬಾರ್ದು. ನೇರವಾಗಿ ವೈದ್ಯರ ಸಲಹೆ ಪಡೀಬೇಕು.

ಮಧ್ಯಮ ಲಕ್ಷಣಗಳು, ಚಿಕಿತ್ಸೆ ಹೇಗೆ?
ಮಕ್ಕಳಲ್ಲಿ ಸೋಂಕಿನ ಮಧ್ಯಮ ಲಕ್ಷಣಗಳೆಂದರೆ 1 ರಿಂದ 5 ವರ್ಷದೊಳಗಿನ ಮಕ್ಕಳಿಗೆ ಉಸಿರಾಟದ ವೇಗ ಹೆಚ್ಚುವುದು. ಒಂದು ನಿಮಿಷಕ್ಕೆ 40 ಬಾರಿಗಿಂತ ಜಾಸ್ತಿ ಇರುವುದು. 5 ವರ್ಷಕ್ಕಿಂತ ಮೇಲ್ಪಟ್ಟವರಿಗೆ 1 ನಿಮಿಷಕ್ಕೆ 30 ಬಾರಿಗಿಂತ ಜಾಸ್ತಿಯಾಗುತ್ತದೆ. ಈ ವೇಳೆ ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು.

ಗಂಭೀರ ಲಕ್ಷಣಗಳು, ಚಿಕಿತ್ಸೆ ಹೇಗೆ?
ಮಕ್ಕಳಲ್ಲಿ ಕೊರೊನಾ ಸೋಂಕಿನ ಗಂಭೀರ ಲಕ್ಷಣಗಳೆಂದರೆ ಶ್ವಾಸಕೋಶದಲ್ಲಿ ನ್ಯುಮೋನಿಯಾ ಆಗುವುದು. ಆಕ್ಸಿಜನ್ ಸ್ಯಾಚುರೇಷನ್ 90ಕ್ಕಿಂತ ಕಡಿಮೆ ಇರುವುದು. ನಾಲಿಗೆ, ತುಟಿ, ಬೆರಳು ಕಪ್ಪಾಗುತ್ತವೆ. ಉಸಿರಾಟದಲ್ಲಿ ತೊಂದರೆ ಆಗುವುದು. ಮಕ್ಕಳಲ್ಲಿ ಹೆಚ್ಚು ಆಲಸ್ಯ ಕಂಡುಬರುತ್ತೆ. ಹಗಲಿನಲ್ಲೂ ನಿದ್ದೆ ಮಂಪರು, ಫಿಟ್ಸ್ ಬರುವುದು. ಈ ವೇಳೆ ಮಕ್ಕಳನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಬೇಕು.

ಒಟ್ಟಿನಲ್ಲಿ ಇಷ್ಟು ದಿನ ವೃದ್ಧರು, ಮಹಿಳೆಯರು, ಪುರುಷರನ್ನ ಕಾಡ್ತಿದ್ದ ಕ್ರೂರಿ ಕೊರೊನಾ, ತನ್ನ 3ನೇ ಅಲೆಯಲ್ಲಿ ಮಕ್ಕಳನ್ನ ಟಾರ್ಗೆಟ್ ಮಾಡೋದು ಮತ್ತಷ್ಟು ಆತಂಕ ಸೃಷ್ಟಿಸಿದೆ. ಹೀಗಾಗಿ ಮುಂಬರೋ ಕೊರೊನಾ 3ನೇ ಅಲೆಯಲ್ಲಿ ತಮ್ಮ ತಮ್ಮ ಮಕ್ಕಳನ್ನ ಕಾಪಾಡಿಕೊಳ್ಳಲು, ಪೋಷಕರು ಸಜ್ಜಾಗಬೇಕಿದೆ.

The post 3ನೇ ಕೊರೊನಾ ಅಲೆಯಲ್ಲಿ ಮಕ್ಕಳಿಗೆ ಅಪಾಯ.. ಲಕ್ಷಣಗಳೇನು..? ಚಿಕಿತ್ಸೆ ಹೇಗೆ..? appeared first on News First Kannada.

Source: newsfirstlive.com

Source link