3ನೇ ದಿನಕ್ಕೆ ‘ಕೈ’ ಧರಣಿ, ಸೋಮವಾರ ಮತ್ತಷ್ಟು ತೀವ್ರ -ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ


ಬೆಂಗಳೂರು: ಸಚಿವ ಈಶ್ವರಪ್ಪ ಬಾಯಿಂದ ಹೊರಬಿದ್ದಿರೋ ವಿವಾದಾತ್ಮಕ ಮಾತು ಕೈ ಪಾಳಯಕ್ಕೆ ಆಹಾರವಾಗಿಬಿಟ್ಟಿದೆ. ಇದೇ ವಿವಾದ ಇಟ್ಟುಕೊಂಡು ಉಭಯ ಸದನಗಳಲ್ಲಿ ಪ್ರತಿಭಟನೆ ಮುಂದುವರಿಸಿದೆ. ಸದನದ ಹೊರಗೂ ಈಶ್ವರಪ್ಪ ವಿರುದ್ಧ ಪ್ರತಿಭಟನೆ ನಡೀತಿದೆ.

ವಿಧಾನಸಭೆಯಲ್ಲಿ 3ನೇ ದಿನವೂ ಕಾಂಗ್ರೆಸ್ ಪ್ರತಿಭಟನೆ
ಈಶ್ವರಪ್ಪ ವಜಾಕ್ಕೆ ಒತ್ತಾಯಿಸಿ ಕೈ ನಾಯಕರ ಬಿಗಿಪಟ್ಟು

ಕೆಂಪುಕೋಟೆ ಮೇಲೂ ಕೇಸರಿ ಧ್ವಜ ಹಾರಿಸ್ತೀವಿ ಅಂತಾ ಈಶ್ವರಪ್ಪ ನೀಡಿರೋ ವಿವಾದಾತ್ಮಕ ಹೇಳಿಕೆ ವಿಧಾನಸೌಧದ ಉಭಯ ಸದನಗಳಲ್ಲೂ ಕಿಚ್ಚು ಹೊತ್ತಿಸಿದೆ. ಈಶ್ವರಪ್ಪರ ಹೇಳಿಕೆಯನ್ನೇ ಪ್ರಬಲವಾಗಿ ಖಂಡಿಸ್ತಿರೋ ಕಾಂಗ್ರೆಸ್ ನಾಯಕರು ಕಲಾಪ ಆರಂಭವಾದ ದಿನದಿಂದಲೂ ಈಶ್ವರಪ್ಪ ರಾಜೀನಾಮೆಗೆ ಒತ್ತಾಯಿಸಿ ಧರಣಿ ನಡೆಸ್ತಿದ್ದಾರೆ. ಮೊದಲ ದಿನ ಉಭಯ ಸದನದ ಬಾವಿಗಿಳಿದು ಧರಣಿ ನಡೆಸಿದ ಕೈ ಪಡೆ, ಬಳಿಕ ಅಹೋರಾತ್ರಿ ಧರಣಿಯೊಂದಿಗೆ ಅನಿರ್ದಿಷ್ಠಾವಧಿ ಪ್ರತಿಭಟನೆಗೆ ಪ್ಲಾನ್ ಮಾಡಿಕೊಂಡಿದೆ. ಕಳೆದ ಮೂರು ದಿನಗಳಿಂದ ವಿಧಾನಸಭೆಯಲ್ಲಿ ಹಗಲು ರಾತ್ರಿ ಪ್ರತಿಭಟನೆ ಮಾಡುತ್ತಾ ಈಶ್ವರಪ್ಪರನ್ನು ವಜಾಗೊಳಿಸಬೇಕು ಅನ್ನೋ ಬೇಡಿಕೆ ಇಟ್ಟಿದೆ.

ಇನ್ನು ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಕಾಂಗ್ರೆಸ್ ಸದಸ್ಯರು ನಡೆಸ್ತಿರೋ ಪ್ರತಿಭಟನೆ ಸೋಮವಾರದವರೆಗೂ ಮುಂದುವರಿಸಲು ಕೈ ನಾಯಕರು ನಿರ್ಧರಿಸಿದ್ದಾರೆ. ಮೇಲ್ಮನೆ, ಕೆಳಮನೆ ಎರಡೂ ಸದನಗಳಲ್ಲಿ ಹೋರಾಟ ನಡೆಸೋ ಸಂಬಂಧ ವಿಧಾನಸಭೆ ವಿಪಕ್ಷದ ಮುಖ್ಯ ಸಚೇತಕ ಅಜಯ್ ಅಜಯ್ ಸಿಂಗ್ ವಿಪ್ ಹೊರಡಿಸಿದ್ದಾರೆ.

ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ

ಸಚಿವ ಈಶ್ವರಪ್ಪ ವಜಾಕ್ಕೆ ಒತ್ತಾಯಿಸಿ‌ ಕಾಂಗ್ರೆಸ್ ನಡೆಸ್ತಿರೋ ಅಹೋರಾತ್ರಿ ಹೋರಾಟವನ್ನು ಸೋಮವಾರದವರೆಗೆ ಮುಂದುವರಿಸಲು ಕೈ ಪಾಳಯ ನಿರ್ಧರಿಸಿದೆ. ಈಶ್ವರಪ್ಪ ವಿರುದ್ಧ ಮೇಲ್ಮನೆ, ಕೆಳಮನೆ ಎರಡೂ ಸದನಗಳಲ್ಲಿ ಕಾಂಗ್ರೆಸ್ ಹೋರಾಟ ಮುಂದುವರಿಸಲಿದ್ದು, ಈಶ್ವರಪ್ಪ ವಜಾಕ್ಕೆ ಕಾಂಗ್ರೆಸ್ ನಾಯಕರು ಬಿಗಿಪಟ್ಟು ಹಿಡಿದಿದ್ದಾರೆ. ಹೋರಾಟ ಮತ್ತಷ್ಟು ತೀವ್ರಗೊಳಿಸಲು ವಿಧಾನಸಭೆಯ ವಿಪಕ್ಷದ ಮುಖ್ಯಸಚೇತಕ ಅಜಯ್ ಸಿಂಗ್​ ಕಾಂಗ್ರೆಸ್ ಸದಸ್ಯರಿಗೆ ವಿಪ್ ಜಾರಿ ಮಾಡಿದ್ದಾರೆ. ಕ್ಷೇತ್ರಗಳಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳನ್ನ ಮುಂದೂಡಿ ಉಭಯ ಸದನದಲ್ಲಿ ನಡೆಯೋ ಧರಣಿಯಲ್ಲಿ ಭಾಗಿಯಾಗಲು ಸೂಚನೆ ನೀಡಲಾಗಿದೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್​ ವಿಧಾನಸಭೆ ಹಾಗೂ ವಿಧಾನಪರಿಷತ್ ಸದಸ್ಯರಿಗೆ ಸೂಚನೆ ನೀಡಿದ್ದಾರೆ.

ಸದನದ ಒಳಗೆ ಹಿರಿಯರಿಂದ ಧರಣಿ, ಹೊರಗೆ ಕಿರಿಯರ ಪ್ರತಿಭಟನೆ

ಅತ್ತ ಸದನ ಒಳಗೆ ಹಿರಿಯ ನಾಯಕರು ಈಶ್ವರಪ್ಪ ವಜಾಕ್ಕೆ ಒತ್ತಾಯಿಸಿ ಪ್ರತಿಭಟನೆ ನಡೆಸ್ತಿದ್ದರೆ ಹೊರಗೆ ಕಿರಿಯರು ಬೀದಿಗಿಳಿದಿದ್ದಾರೆ. ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿರುವ ಬಿಜೆಪಿ ಕಚೇರಿ ಎದುರು ಪ್ರತಿಭಟನೆ ನಡೆಸಿದ ಯೂತ್ ಕಾಂಗ್ರೆಸ್ ಸದಸ್ಯರು ಈಶ್ವರಪ್ಪ ಪ್ರತಿಕೃತಿ ದಹಿಸಿದ್ರು. ಈ ವೇಳೆ ಸಚಿವ ಈಶ್ವರಪ್ಪ ದೇಶದ್ರೋಹಿ ಅಂತಾ ಧಿಕ್ಕಾರ ಕೂಗಿದ್ರು.

ಈಶ್ವರಪ್ಪ-ಹರಿಪ್ರಸಾದ್ ನಡುವೆ ತೀವ್ರಗೊಂಡ ವಾಕ್ಸಮರ!

ಅತ್ತ ಕಾಂಗ್ರೆಸ್ ಈಶ್ವರಪ್ಪ ವಜಾಕ್ಕೆ ಆಗ್ರಹಿಸಿ ಅಹೋರಾತ್ರಿ ಧರಣಿ ನಡೆಸ್ತಿದ್ರೆ, ಇತ್ತ ಈಶ್ವರಪ್ಪ ಹಾಗೂ ಬಿಕೆ ಹರಿಪ್ರಸಾದ್ ನಡುವಿನ ವಾಕ್ಸಮರ ತಾರಕಕ್ಕೇರಿದೆ. ನ್ಯೂಸ್ ಫಸ್ಟ್ ಸಂದರ್ಶನದಲ್ಲಿ ಬಿಕೆ ಹರಿಪ್ರಸಾದ್ ವಿರುದ್ಧ ಹರಿಹಾಯ್ದಿದ್ದ ಈಶ್ವರಪ್ಪ, ಆರೆಸ್ಸೆಸ್ ಇದುವರೆಗೆ ರಾಷ್ಟ್ರಧ್ವಜ ಹಾರಿಸಿದ್ಯಾ ಅಂತಾ ಕೇಳೋಕೆ ಅವನ್ಯಾರು ಅಂತಾ ಏಕವಚನದಲ್ಲಿ ಪ್ರಶ್ನಿಸಿದ್ರು. ಇದಕ್ಕೆ ಉತ್ತರಿಸಿದ ಬಿಕೆ ಹರಿಪ್ರಸಾದ್, ಇಂತಹ ಬಚ್ಚಲು ಬಾಯಿ ಬಗ್ಗೆ ಏನೂ ಮಾತನಾಡಲ್ಲ ಅಂದ್ರು.

ಒಟ್ನಲ್ಲಿ ಸಚಿವ ಈಶ್ವರಪ್ಪ ನೀಡಿರೋ ವಿವಾದಾತ್ಮಕ ಹೇಳಿಕೆಯನ್ನೇ ಇಟ್ಕೊಂಡು ಕಾಂಗ್ರೆಸ್ ಆಲೌಟ್ ಅಟ್ಯಾಕ್​ ನಡೆಸ್ತಿದೆ. ಕಳೆದ ಮೂರು ದಿನಗಳಲ್ಲಿ ಉಭಯ ಸದನಗಳೂ ಪ್ರತಿಭಟನೆ ಬಲಿಯಾಗಿವೆ. ಇನ್ನು ಸೋಮವಾರ ಕಲಾಪ ಆರಂಭವಾದ್ರೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಲು ಸರ್ವಸನ್ನದ್ಧರಾಗಿದ್ದಾರೆ.

News First Live Kannada


Leave a Reply

Your email address will not be published. Required fields are marked *