ಬೆಂಗಳೂರು: ಡ್ರಗ್ಸ್​ ದಾಸನಾಗಿದ್ದ ವ್ಯಕ್ತಿಯೋರ್ವ ಪೋಷಕರ ಬಳಿ 3 ಲಕ್ಷ ಹಣಕ್ಕ ಬೇಡಿಕೆ ಇಟ್ಟು.. ಹಣ ನೀಡದಿರುವುದಕ್ಕೆ ಪೋಷಕರ ತಲೆಗೆ ದೊಣ್ಣೆಯಿಂದ ಹೊಡೆದ ಘಟನೆ ನಗರದಲ್ಲಿ ನಡೆದಿದೆ.

ಮಿಲಿಟರಿಯಲ್ಲಿ ದೇಶ ಸೇವೆ ಮಾಡಿ ಬಂದಿದ್ದ ಜೆಸಿ ನಗರದ ಜಯಮಹಲ್ ಎಕ್ಸಟೆನ್ಷನ್ ನಿವಾಸಿ ಹುಸೇನ್ ಷಾ ಪತ್ನಿ ನಜಮ್ ಜೊತೆ ವಾಸವಾಗಿದ್ರು. ದಂಪತಿಯ ಪುತ್ರನಿಗೆ 47 ವರ್ಷವಾಗಿದ್ದು, ಇವನ ಹುಚ್ಚಾಟಕ್ಕೆ ಹೆಂಡತಿ‌ ಮಕ್ಕಳು ಬಿಟ್ಟು ಹೋಗಿದ್ದಾರೆ. ಹೀಗೆ ಏನೂ ಕೆಲಸವಿಲ್ಲದ ಪುತ್ರನನ್ನು ವೃದ್ಧ ದಂಪತಿಯೇ ತಿಂಗಳಿಗೆ 20 ಸಾವಿರ ಕೊಟ್ಟು ನೋಡಿಕೊಳ್ತಿದ್ದರು. ಆದರೆ ಮೊನ್ನೆ ಲಾಕ್ ಡೌನ್ ಇದ್ದರೂ ಮನೆಗೆ ಬಂದ ಮಗ ಶಮಿವುಲ್ಲ ಅಮಾನುಲ್ಲಾ ದಂಪತಿ ಬಳಿ ಏಕಾಏಕಿ 3 ಲಕ್ಷ ಹಣ ಕೇಳಿದ್ದಾನೆ. ಇಲ್ಲ ಅಂದಾಗ ಆಸ್ತಿ‌ ಬರೆದುಕೊಡು‌ ಮಾರ್ತೀನಿ ಅಂದಿದ್ದಾನೆ. ಇದಕ್ಕೆ ಬುದ್ದಿ ಹೇಳಿದ್ದಕ್ಕೆ ವೃದ್ಧ ಹೆತ್ತವರ ತಲೆಗೇನೇ ದೊಣ್ಣೆಯಿಂದ ಹೊಡೆದು ಎಸ್ಕೇಪ್​ ಆಗಿದ್ದಾನೆ. ಇವರ ಕಿರಿಚಾಟ ಕೇಳಿದ ಸ್ಥಳೀಯರು ಅವರನ್ನ ಆಸ್ಪತ್ರೆಗೆ ‌ದಾಖಲಿಸಿದ್ದಾರೆ.

ಹೇಳಿ ಕೇಳಿ ಚಿಕ್ಕ ವಯಸ್ಸಿನಲ್ಲೇ ಡ್ರಗ್ಸ್​ ಹಿಂದೆ ಬಿದ್ದು ನಶಾ ಲೋಕದಲ್ಲಿದ್ದ ಮಗನಿಗೆ ಆಗಲೇ ಬಿಸಿ ಮುಟ್ಟಿಸದೇ ಸುಮ್ಮನಿದ್ದ ದಂಪತಿ ಈಗ ಪಶ್ಚಾತ್ತಾಪ ಪಟ್ಟು ಕಣ್ಣೀರು ಹಾಕ್ತಿದ್ದಾರೆ. ಆರೋಪಿಯನ್ನ 11 ಬಾರಿ ರಿಹ್ಯಾಬಿಲಿಟೇಶನ್​ಗೆ ಕಳಿಸಿದ್ರೂ ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೇ ಅನ್ನೋ ಹಾಗೆ ಆಸಾಮಿ ಮಾತ್ರ ಚಟ ಬಿಟ್ಟಿಲ್ಲ. ಈಗ ಈ ರೀತಿ ಕೃತ್ಯವೆಸಗಿದ ಬಳಿಕ ಸ್ವತಃ ತಾಯಿ ಪೊಲೀಸರ ಬಳಿ ಹೇಳಿಕೆ ಕೊಟ್ಟಿದ್ದು, ಜೆಸಿ ನಗರ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿದ್ದಾರೆ. ಅದೇನೇ ಇರಲಿ ಹೆತ್ತವರು ಮಕ್ಕಳನ್ನು ಅತೀ ಮುದ್ದು ಮಾಡದೇ ತಿದ್ದಿ ಬುದ್ಧಿ ಹೇಳದಿದ್ರೆ ಮಕ್ಕಳು ಹೀಗೆ ದಾರಿ ತಪ್ತಾರೆ ಅನ್ನೋದಕ್ಕೆ ಇದೊಂದು ನಿದರ್ಶನ.

The post 3 ಲಕ್ಷ ಹಣ ಕೊಡದಿದ್ದಕ್ಕೆ ಹೆತ್ತವರ ತಲೆಗೆ ದೊಣ್ಣೆಯಿಂದ ಹೊಡೆದ ಪಾಪಿ ಮಗ appeared first on News First Kannada.

Source: newsfirstlive.com

Source link