ಕ್ರಿಕೆಟ್..! ಭಾರತದಲ್ಲಿ ಮೋಸ್ಟ್​ ಪಾಪುಲರ್ ಗೇಮ್​..! ಸಣ್ಣ ಮಗುವಿನಿಂದ ಹಿಡಿದು, ಮುದುಕನರವರೆಗೂ ಕ್ರಿಕೆಟ್​​ ಆರಾಧಿಸ್ತಾರೆ. ಹಾಗಾಗಿಯೇ ಭಾರತದಲ್ಲಿ ಶೇ.80ರಷ್ಟು ಯುವಕರು, ಕ್ರಿಕೆಟರ್ಸ್​ ಆಗಬೇಕು ಅಂತ, ಕಸನು ಕಾಣ್ತಾರೆ. ಆದ್ರೆ ಆ ಕನಸು ನನಸಾಗೋದು, ಕೇವಲ ಬೆರಳೆಣಿಕೆಯಷ್ಟು ಮಂದಿಗೆ ಮಾತ್ರ. ಇನ್ನು ಕೆಲ ಪ್ರತಿಭೆಗಳಿಗೆ ಅವಕಾಶ ಸಿಕ್ಕಿದ್ರೂ, ಆ ಸ್ಥಾನವನ್ನ ಉಳಿಸಿಕೊಳ್ಳೋಕೆ ಹರಸಾಹವನ್ನೇ ಪಡಬೇಕಾಗುತ್ತೆ. ದೇಶಿ ಕ್ರಿಕೆಟ್​​​ನಲ್ಲಿ ಯಶಸ್ಸು, ರಾಷ್ಟ್ರೀಯ ತಂಡದಲ್ಲಿ ಸಾಧಿಸಲು ವಿಫಲವಾಗಿರೋ ಹಲವು ಆಟಗಾರರು, ನಂತರ ಟೀಮ್ ಇಂಡಿಯಾಕ್ಕೆ ಕಮ್​ಬ್ಯಾಕ್ ಮಾಡಲು ಸಾಧ್ಯವಾಗದ ಹಲವರು, ನಮ್ಮ ಕಣ್ಮುಂದೆಯೇ ಇದ್ದಾರೆ. ಈ ಪೈಕಿ ಜಾರ್ಖಂಡ್ ವೇಗಿ ವರುಣ್ ಆರೋನ್ ಕೂಡ ಒಬ್ಬರು…!

ವರುಣ್ ಬದುಕಿಗೆ ಮುಳ್ಳಾಗಿತ್ತು ಇಂಜುರಿ, ಅನಾರೋಗ್ಯ

ವರುಣ್ ಆರೋನ್, ಟೀಮ್ ಇಂಡಿಯಾದ ವೇಗದ ಬೌಲರ್, 2011ರ ವಿಜಯ್​ ಹಜಾರೆ ಟ್ರೋಫಿಯಲ್ಲಿ ಗುಜರಾತ್​ ವಿರುದ್ಧದ 153 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡಿದ್ದ ಈತ, ಅದೇ ವರ್ಷ ಟೀಮ್ ಇಂಡಿಯಾಕ್ಕೂ ಕಾಲಿಟ್ಟ.. ಇಂಗ್ಲೆಂಡ್ ವಿರುದ್ಧ ಏಕದಿನ ಪಂದ್ಯದಲ್ಲಿ ಡೆಬ್ಯೂ ಮಾಡಿದ್ದ ವರುಣ್, ತನ್ನ ಪೇಸ್​​ನಿಂದ ಎಲ್ಲರ ಗಮನ ಸೆಳೆದಿದ್ದ. ಅಷ್ಟೇ ಅಲ್ಲ..! ಚೊಚ್ಚಲ ಪಂದ್ಯದಲ್ಲೇ 6 ಓವರ್​ ಎಸೆದ ಆರೋನ್, ಒಂದು ಮೇಡನ್ ಸಹಿತ 3 ವಿಕೆಟ್ ಉರುಳಿಸಿ, ಟೀಮ್ ಇಂಡಿಯಾದ ಭವಿಷ್ಯದ ಸೂಪರ್ ​ಸ್ಟಾರ್​ ಅಂತಾನೇ ಗುರುತಿಸಿಕೊಂಡಿದ್ದ. ಆದ್ರೆ ವರುಣ್ ಬದುಕಿಗೆ ಮುಳ್ಳಾಗಿದ್ದು, ಪದೇ ಪದೇ ಕಾಡಿದ ಇಂಜುರಿ ಹಾಗೂ ಅನಾರೋಗ್ಯ..!

ಈ ಅನಾರೋಗ್ಯ, ಗಾಯದ ಸಮಸ್ಯೆಯೇ ವರುಣ್ ಆರೋನ್ ಪಾಲಿಗೆ, ವಿಲನ್ ಆಗಿತ್ತು. ಪದೇ ಪದೇ ಕಾಡ್ತಿದ್ದ ಇಂಜುರಿ, ಅನಾರೋಗ್ಯ ಆಸ್ಪತ್ರೆಯ ಗೋಡೆಯ ಮಧ್ಯೆಯೇ ಕಳೆಯುವಂತೆ, ಮಾಡಿತ್ತು. ಇದರೊಂದಿಗೆ ಟೀಮ್ ಇಂಡಿಯಾದಿಂದ ಹೊರ ಬಿದ್ದ ಆರೋನ್, ರಾಷ್ಟ್ರೀಯ ತಂಡದ ಜರ್ಸಿ ತೊಟ್ಟು ಸರಿ ಸುಮಾರು 5 ವರ್ಷ ಆರು ತಿಂಗಳೇ ಕಳೆದಿದೆ. 2015ರಲ್ಲಿ ಧೋನಿ ನಾಯಕತ್ವದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಅಂತಿಮ ಪಂದ್ಯವನ್ನಾಡಿದ್ದ ವರುಣ್ ಆರೋನ್, ಇದುವರೆಗೆ ಟೀಮ್ ಇಂಡಿಯಾಕ್ಕೆ ಕಮ್​​ಬ್ಯಾಕ್ ಮಾಡಲೇ ಇಲ್ಲ..!

ಬೊಂಬಾಟ್ ಪ್ರದರ್ಶನ ಬಳಿಕವೂ ಸಿಗಲಿಲ್ಲ ಸ್ಥಾನ

ಇಂಜುರಿ ಸಮಸ್ಯೆಗಳ ನಡುವೆ ಫಿಟ್ನೆಸ್ ಸಮಸ್ಯೆ ಎದುರಿಸಿದ್ದ ವರುಣ್ ಆರೋನ್, ತನ್ನ ಬೌಲಿಂಗ್ ಶೈಲಿಯ ಬದಲಾವಣೆಯಿಂದ ಮತ್ತೆ ದೇಶಿ ಕ್ರಿಕೆಟ್​​ನಲ್ಲಿ ಮಿಂಚಿದ್ರು. ವಿಜಯ್ ಹಜಾರೆ ಟೂರ್ನಿಯಲ್ಲಿ ಕ್ರಮಬದ್ಧ ದಾಳಿ ಸಂಘಟಿಸಿದ್ದ ವರುಣ್, 6.90ರ ಎಕಾನಮಿಯಲ್ಲಿ ಬೌಲಿಂಗ್ ಮಾಡಿ ಗಮನ ಸೆಳೆದಿದ್ದರು. ಅದ್ರಲ್ಲೂ ಮಧ್ಯಪ್ರದೇಶ ವಿರುದ್ಧದ ಪಂದ್ಯದಲ್ಲಿ 6 ವಿಕೆಟ್ ಉರುಳಿಸಿದ್ದ ಆರೋನ್, ಅತ್ಯದ್ಬುತ ಪ್ರದರ್ಶನವನ್ನೇ ನೀಡಿದ್ದರು. ಪ್ರಚಂಡ ಫಾರ್ಮ್​ನಲ್ಲಿದ್ದ ಈತನ, ಟೀಮ್ ಇಂಡಿಯಾ ಕರೆಯ ನಿರೀಕ್ಷೆ ಹುಸಿಯಾಗಿತ್ತು. ಇದು ಜಸ್ಟ್​ ವರುಣ್ ವಿಚಾರದಲ್ಲಿ ಮಾತ್ರವಲ್ಲ. ಶೆಲ್ಡನ್ ಜಾಕ್ಸನ್, ಜಯದೇವ್ ಉನಾದ್ಕಟ್ ವಿಷ್ಯದಲ್ಲೂ ಇದೇ ಆಗಿತ್ತು..!

ತಂಡದ ಆಯ್ಕೆಯ ಮಾನದಂಡಕ್ಕೆ ವರುಣ್ ಌರೋನ್ ಟೀಕೆ..!

ಇತ್ತಿಚಿನ ದಿನಗಳಲ್ಲಿ ರಾಷ್ಟ್ರೀಯ ತಂಡದ ಆಯ್ಕೆ ಮಾನದಂಡ, ಅಲಿಖಿತ ನಿಯಮವೊಂದು ತೀವ್ರ ಚರ್ಚೆಗೆ ಗ್ರಾಸವಾಗಿದೆ. ಅದು ದೇಶಿ ಟೂರ್ನಿಯಲ್ಲಿ 30 ವರ್ಷದ ಆಟಗಾರ, ಉತ್ತಮ ಪ್ರದರ್ಶನ ನೀಡಿದ ಹೊರತಾಗಿ ಟೀಮ್ ಇಂಡಿಯಾ ಬಾಗಿಲು ಮುಚ್ಚುವುದು.! ಇದೇ ಮಾನದಂಡ ಜೈದೇವ್ ಉನಾದ್ಕಟ್ ಹಾಗೂ ಶೆಲ್ಡನ್ ಜಾಕ್ಸನ್ ಆಯ್ಕೆಗೂ ಮುಳ್ಳಾಗಿತ್ತು. ಸೆಲೆಕ್ಷನ್ ಕಮಿಟಿಯ ಈ ಮಾನದಂಡಕ್ಕೆ ಜೈದೇವ್, ಶೆಲ್ಡನ್ ಜಾಕ್ಸನ್ ನೇರವಾಗಿಯೇ ಪ್ರಶ್ನಿಸಿದ್ದರು. ಈ ಬೆನ್ನಲ್ಲೇ ಈಗ ವರುಣ್ ಆರೋನ್, ಇಂಗ್ಲೆಂಡ್​ನ ಌಂಡರ್​ಸನ್​ ಹೆಸರನ್ನ ಉಲ್ಲೇಖಿಸಿ ಕಟುವಾಗಿ ಟೀಕಿಸಿದ್ದಾರೆ..

30 ವರ್ಷ ಮೇಲ್ಪಟ್ಟವರು ಉತ್ತಮ ಪ್ರದರ್ಶನ ನೀಡಲ್ಲ ಎಂದು ಭಾರತದಲ್ಲಿ ಮಾತ್ರ ಭಾವಿಸುತ್ತಾರೆ. ಬೇರೆ ಯಾವ ದೇಶವೂ ಈ ರೀತಿ ಯೋಚಿಸುವುದಿಲ್ಲ. ಮೈಕಲ್ ಹಸ್ಸಿ 30 ವರ್ಷಕ್ಕಿಂತ ಮೇಲ್ಪಟ್ಟಿದ್ದರೂ, ಆಸ್ಟ್ರೇಲಿಯಾ ತಂಡದ ಪರ ಆಡಿದ್ದರು. 38 ವರ್ಷದ ಜೇಮ್ಸ್ ಆಂಡರ್ಸನ್ ಇನ್ನೂ ತಂಡಕ್ಕಾಗಿ ಆಡುತ್ತಿದ್ದಾರೆ. ಆದರೆ ಅಲ್ಲಿ ಯಾರೂ ಅದನ್ನು ಪ್ರಶ್ನಿಸಲಿಲ್ಲ. ಕಠಿಣ ಅಭ್ಯಾಸ ನಡೆಸುವ ಸ್ಪೋರ್ಟ್ಸ್​ಮನ್, 30 ವರ್ಷಕ್ಕಿಂತ ಮೇಲ್ಪಟ್ಟವರು ಆಡಲು ಸಾಧ್ಯವಿಲ್ಲ ಎಂದು ಹೇಗೆ ಹೇಳ್ತಾರೆ.? ನನಗೆ ಈಗ 31 ವರ್ಷ. ನಾನು ಕಷ್ಟಪಟ್ಟು ಕೆಲಸ ಮಾಡುತ್ತೇನೆ. ಹೀಗಾಗಿ ನನಗೆ ಕೇವಲ 27 ಅಥವಾ 28 ವರ್ಷ ವಯಸ್ಸಾಗಿದೆ ಎಂದು ತೋರುತ್ತದೆ. ಟೆಸ್ಟ್ ಪಂದ್ಯಗಳಲ್ಲಿ ನಾನು ಚೆನ್ನಾಗಿ ಬೌಲಿಂಗ್ ಮಾಡಬಹುದು. ಟೆಸ್ಟ್ ಪಂದ್ಯದಲ್ಲಿ ಸತತ 140 ಕಿ.ಮೀಟರ್​​​ಗಿಂತ ಹೆಚ್ಚು ವೇಗದಲ್ಲಿ ಬೌಲಿಂಗ್ ಮಾಡಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೆ. ನನಗೆ ಚೆಂಡನ್ನು 145 ಕಿ.ಮೀ ವೇಗದಲ್ಲಿ ಎಸೆಯುವ ಸಾಮರ್ಥ್ಯವಿದೆ.
ವರುಣ್ ಆರೋನ್, ಕ್ರಿಕೆಟರ್

ವರುಣ್ ಆರೋನ್ ಹೇಳಿದಂತೆ, ಬೇರ್ಯಾವುದೇ ದೇಶದಲ್ಲಿ ರಾಷ್ಟ್ರೀಯ ತಂಡದ ಪರ ಆಡಲು ಅಥವಾ ರಾಷ್ಟ್ರೀಯ ತಂಡಕ್ಕೆ ಆಯ್ಕೆ ಮಾಡಲು ಈ ಮಾನದಂಡ ಇಲ್ಲ. ಸದ್ಯ ಭಾರತದಲ್ಲೂ ಇಲ್ಲದಿದ್ದರೂ, ಸೆಲೆಕ್ಷನ್ ಕಮಿಟಿ ಮಾತ್ರ 30ರೊಳಗಿನ ಆಟಗಾರರಿಗೇನೆ ಆದ್ಯತೆ ನೀಡುತ್ತಿದೆ. ಆದ್ರೆ 30ರ ಬಳಿಕ ಇಂಟರ್​ನ್ಯಾಷನಲ್ ಕ್ರಿಕೆಟ್ ಕರಿಯರ್ ಆರಂಭಿಸಿದ್ದ ಮೈಕೆಲ್ ಹಸ್ಸಿ, ಕ್ರಿಸ್ ರೋಜರ್, ಬ್ರಾಡ್ ಹ್ಯಾಡಿನ್, ಸಯೀದ್ ಅಜ್ಮಲ್, ಆಡಂ ವೋಗ್ಸ್ ಯಶಸ್ಸು ಕಂಡಿರುವುದು, ನಮ್ಮ ಕಣ್ಮೆಂದೆಯೇ ಕಾಣ್ತಿದೆ. ಅಷ್ಟೇ ಯಾಕೆ. ಸದ್ಯ ವಿಶ್ವ ಕ್ರಿಕೆಟ್​ನಲ್ಲಿ ಸ್ಟುವರ್ಡ್ ಬ್ರಾಡ್, ಆ್ಯಂಡರ್ಸನ್, ನೇಲ್ ವ್ಯಾಗ್ನರ್ ಮಿಂಚುತ್ತಿರುವುದು ಕಣ್ಣಿಗೆ ಕಾಣ್ತಿದೆ.

ಆದ್ರೆ, ಭಾರತೀಯ ಕ್ರಿಕೆಟ್​ನಲ್ಲಿ ಮಾತ್ರ, ದೇಶಿ ಕ್ರಿಕೆಟ್​​ನಲ್ಲಿ ಅದ್ಬುತ ಪ್ರದರ್ಶನ ನೀಡುತ್ತಿರುವ 30 ವರ್ಷದ ಆಟಗಾರರಿಗೆ ಮಣೆಹಾಕುತ್ತಿಲ್ಲ. ಇದು ದಿನೇ ದಿನೇ ತೀವ್ರ ಚರ್ಚೆಗೆ ಗ್ರಾಸವಾಗ್ತಿರುವ ಜೊತೆಗೆ, ಆಟಗಾರರ ಕಂಗಣ್ಣಿಗೂ ಗುರಿಯಾಗ್ತಿದೆ. ಒಟ್ನಲ್ಲಿ ಸದ್ಯ ಭಾರತೀಯ ಕ್ರಿಕೆಟ್‌ ವಲಯದಲ್ಲಿ ತೀವ್ರ ಸ್ವರೂಪ ಪಡೆದುಕೊಂಡಿರುವ ಈ ವಿಚಾರ, ಮುಂದಿನ ದಿನಗಳಲ್ಲಿ ಕೋಲಾಹಲಕ್ಕೂ ದಾರಿ ಮಾಡಿಕೊಟ್ಟರೂ, ಅಚ್ಚರಿ ಇಲ್ಲ… ಅದೇನೇ ಆಗಲಿ ಮುಂದಿನ ದಿನಗಳಲ್ಲಿ ವಯಸ್ಸಿನ ಆಧಾರಕ್ಕಲ್ಲದೇ, ಪ್ರತಿಭೆಗಳಿಗೆ ಅವಕಾಶ ನೀಡಲಿ ಅನ್ನೋದೆ ಕ್ರಿಕೆಟ್ ಅಭಿಮಾನಿಗಳ ಆಶಯ…

The post 30 ವರ್ಷ ಆದ್ರೆ ಏನು..? ಟೀಮ್ ಇಂಡಿಯಾಕ್ಕೆ ಯಾಕೆ ಆಯ್ಕೆ ಮಾಡೊಲ್ಲ..? appeared first on News First Kannada.

Source: newsfirstlive.com

Source link