ವಿಶ್ವದ ಅತ್ಯಂತ ದೊಡ್ಡ ಕುಟುಂಬದ ಯಜಮಾನ ತನ್ನ ಮನೆ ತೊರೆದು ಹೋಗಿದ್ದಾನೆ. ಅಂದ್ರೆ, 38 ಪತ್ನಿಯರನ್ನು ಹೊಂದಿದ್ದ ಮಿಜೋರಾಂನ ಜಿಯೊನಾ ಚಾನಾ ನಿಧನರಾಗಿದ್ದಾರೆ. ಈ ಗ್ರೂಪ್ ಫೋಟೋ ನೋಡಿ. ಇವರೆಲ್ಲ ಒಂದೇ ಕುಟುಂಬದ ಸದಸ್ಯರು. ಒಟ್ಟಿಗೆ ಹತ್ತಾರು ವರ್ಷಗಳಿಂದ ಒಂದೇ ಮನೆಯಲ್ಲಿದ್ದಾರೆ. ಬಹಳ ಅನ್ಯೋನ್ಯವಾಗಿ ಇರೋ ವಿಶ್ವದ ಈ ಬಿಗ್ ಫ್ಯಾಮಿಲಿಗೆ ಈಗ ಶಾಕ್ ಆಗಿದೆ. ಕಾರಣ ಮನೆಯ ಯಜಮಾನ ಇಹಲೋಹ ತ್ಯಜಿಸಿದ್ದಾರೆ.

ವಿಶ್ವದ ಅತ್ಯಂತ ದೊಡ್ಡ ಕುಟುಂಬ ಹೊಂದಿರುವ ವ್ಯಕ್ತಿ ಎಂದೇ ಪ್ರಸಿದ್ಧರಾಗಿದ್ದ ಮಿಜೋರಾಂನ ಜಿಯೊನಾ ಚಾನಾ ವಯೋಸಹಜ ಅನಾರೋಗ್ಯದ ಕಾರಣದಿಂದ ನಿಧನರಾಗಿದ್ದಾರೆ. ಇವರದ್ದೊಂದು ಅಚ್ಚರಿಯ ಬದುಕು. ಅಷ್ಟೇ ಕುತೂಹಲಕಾರಿ ಜೀವನ. ಇಷ್ಟೊಂದು ದೊಡ್ಡ ಫ್ಯಾಮಿಲಿಯನ್ನು ಅದೇಗೆ ನಿಭಾಯಿಸಿದರು ಅನ್ನೋದೇ ಇಂಟರೆಸ್ಟಿಂಗ್.

38 ಹೆಂಡಿರ ಗಂಡನಾಗಿದ್ದ ಮಿಜೋರಾಂನ ಜಿಯೊನಾ ಚಾನಾ
89 ಮಕ್ಕಳು,33 ಮೊಮ್ಮಕ್ಕಳನ್ನು ಅಗಲಿರುವ ವಿಶ್ವಪ್ರಸಿದ್ಧ ಅಜ್ಜ
ಇವರ ಜೀವನಗಾಥೆಯೇ ವಿಭಿನ್ನ, ವಿಶಿಷ್ಟ, ಅಷ್ಟೇ ಅಪರೂಪ

ವಿಶ್ವದ ಅತ್ಯಂತ ದೊಡ್ಡ ಕುಟುಂಬ ಹೊಂದಿರುವ ವ್ಯಕ್ತಿ ಎಂದೇ ವಿಶ್ವದಲ್ಲಿ ಪ್ರಸಿದ್ಧವಾಗಿರುವ ಮಿಜೋರಾಂನ ಜಿಯೊನಾ ಚಾನಾ ತಮ್ಮ 76ನೇವಯಸ್ಸಿನಲ್ಲಿ ನಿಧನರಾಗಿದ್ದಾರೆ. 38 ಪತ್ನಿಯರು, 89 ಮಕ್ಕಳು, 33 ಮೊಮ್ಮಕ್ಕಳನ್ನು ಅಗಲಿದ್ದಾರೆ. ಇಷ್ಟು ದೊಡ್ಡ ಕುಟುಂಬ ಮಾತ್ರವಲ್ಲ. ತಮ್ಮ ಹಿಂದೆ ಇರುವ ತಮ್ಮ ಸಮುದಾಯದ ಅಪಾರ ಅಭಿಮಾನಿಗಳಿಂದ ದೂರವಾಗಿದ್ದಾರೆ. ಮಿಜೋರಾಂ ಮುಖ್ಯಮಂತ್ರಿ ಜೊರಾಂತಗಾ ಅವರು ಟ್ವೀಟ್ ಮಾಡಿ ಚಾನಾ ನಿಧನಕ್ಕೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಮಿಜೋರಾಂ ಪ್ರವಾಸಿಗರನ್ನು ಆಕರ್ಷಿಸಲು ಚಾನಾ ಕೊಡುಗೆಯೂ ಅಪಾರವಾಗಿದೆ ಎಂದು ಹೇಳಿದ್ದಾರೆ. ಅಂದರೆ ಇವರ ಬಿಗ್ ಫ್ಯಾಮಿಲಿಯ ಕಾರಣದಿಂದಲೇ ಮಿಜೊರಾಂಗೆ ಅನೇಕರು ಪ್ರವಾಸ ಕೈಗೊಳ್ತಾ ಇದ್ರು. ಅಷ್ಟರ ಮಟ್ಟಿಗೆ ಕುತೂಹಲ ಮೂಡಿಸಿತ್ತು ಈ ಬಿಗ್ ಫ್ಯಾಮಿಲಿ.

ಮಿಜೊರಾಂನ ಬಕ್ತಾಂವ್ಗ್ ತ್ಲಂಗ್ನುಮ್ ಗ್ರಾಮದಲ್ಲಿ ಶೋಕ
ದೊಡ್ಮನೆ ಹಿರಿಯಜ್ಜನ ಕಳೆದುಕೊಂಡು ತಬ್ಬಲಿಯಾದ ಭಾವನೆ
38 ಹೆಂಡಿರಿದ್ದರೂ ಆದರ್ಶ ಪ್ರಾಯವಾಗಿದ್ದ ಜಿಯೊನಾ ಚಾನಾ

ಇತ್ತೀಚಿನ ದಶಕಗಳಲ್ಲಿ ಫ್ಯಾಮಿಲಿ ಅಂದ್ರೆ ಗಂಡ-ಹೆಂಡತಿ-ಮಗ ಇಷ್ಟೇ. ಅವಿಭಕ್ತ ಕುಟುಂಬಗಳೇ ಮಾಯವಾಗಿದ್ದಾವೆ. ಅವಿಭಕ್ತ ಕುಟುಂಬಗಳೆಲ್ಲ ಈಗ ಸಣ್ಣ ಸಣ್ಣ ಫ್ಯಾಮಿಲಿಗಳಾಗಿ ಬಿಟ್ಟಿವೆ. ಇಂಥ ಕಾಲದಲ್ಲಿ ಇಷ್ಟೊಂದು ಬಿಗ್ ಫ್ಯಾಮಿಲಿ ನಿಭಾಯಿಸಿದ್ದ ಅಂದರೆ ಈತ ಸಾಮಾನ್ಯ ಮನುಷ್ಯನಲ್ಲ. ಏನಪ್ಪಾ ಇದು, ಇಬ್ಬರನ್ನೇ ಮದುವೆಯಾಗಲು ಅವಕಾಶ ಇಲ್ಲ. ಅಂತಾದ್ರಲ್ಲಿ 38 ಜನರನ್ನು ಮದುವೆಯಾಗಲು ಈತನಿಗೆ ಅವಕಾಶ ಕೊಟ್ಟಿದ್ದಾದ್ರೂ ಯಾರು ಅನ್ನೋ ಪ್ರಶ್ನೆ ಮೂಡೋದು ಸಹಜ. ಆದ್ರೆ ಇವರ ಸಮುದಾಯದಲ್ಲಿ ಬಹುಪತ್ನಿತ್ವಕ್ಕೆ ಅವಕಾಶ ಇದೆ. ಇದು ಇವರ ಸಮುದಾಯದಲ್ಲಿ ಧಾರ್ಮಿಕ ಹಕ್ಕು ಎಂಬಂತೆ ಪ್ರತಿಪಾದಿಸಲಾಗಿದೆ. ಬಕ್ತಾಂವ್ಗ್ ತ್ಲಂಗ್ನುಮ್ ಗ್ರಾಮದಲ್ಲಿನ ‘ಚಾನಾಸ್ ಸೆಕ್ಟ್’ ಎಂದು ಕರೆಯಲಾಗುವ ಧಾರ್ಮಿಕ ಸಮುದಾಯವೊಂದರ ಮುಖ್ಯಸ್ಥರಾಗಿದ್ದರು ಈ ಜಿಯೊನಾ ಚಾನಾ. ಈ ಪಂಥದಲ್ಲಿ ಸುಮಾರು 400 ಸದಸ್ಯರಿದ್ದು, ಪುರುಷ ಸದಸ್ಯರಿಗೆ ಬಹುಪತ್ನಿತ್ವಕ್ಕೆ ಅವಕಾಶವಿದೆ. ಹೀಗಾಗಿ ಚಾನಾ ಅವರಿಗೆ 38 ಹೆಂಡಿರನ್ನು ಕಟ್ಟಿಕೊಳ್ಳಲು ಯಾವುದೇ ನಿರ್ಬಂಧ ಅಡ್ಡಿ ಬಂದಿರಲಿಲ್ಲ. ಹಾಗಂತ ಇಷ್ಟೊಂದು ಹೆಂಡಿರನ್ನು ಇವರೇಕೆ ಮದುವೆ ಮಾಡಿಕೊಂಡರು ಅಂದರೆ ಅದಕ್ಕೂ ಕಾರಣವಿದೆ.

1945ರಲ್ಲಿ ಜನಿಸಿದ್ದ ಬಿಗ್ ಫ್ಯಾಮಿಲಿಯ ಯಜಮಾನ ಚಾನಾ
17ನೇ ವಯಸ್ಸಿನಲ್ಲೆ ಮೊದಲ ಮದುವೆಯಾಗಿದ್ದ ಮಹಾಪುರುಷ
ಬಳಿಕ ಒಂದೊಂದು ಮದುವೆಗೂ ಒಂದೊಂದು ವಿಭಿನ್ನ ಕಾರಣ

1945ರ ಜುಲೈ 21ರಂದು ಜನಿಸಿದ್ದ ಜಿಯೋನಾ ಚಾನಾ ತಮ್ಮ 17ನೇ ವಯಸ್ಸಿನಲ್ಲೇ ಮೊದಲ ಮದುವೆಯಾಗಿಬಿಟ್ಟಿದ್ದರು. ಇವರಿಗೆ ಹಿರಿಯರಿಂದ ಬಂದ ಆಸ್ತಿ ಇತ್ತು. ಮಿಜೊರಾಂನ ಬೆಟ್ಟ ಗುಡ್ಡಗಳ ನಡುವೆ ಸಾಕಷ್ಟು ಕೃಷಿ ಭೂಮಿ ಹೊಂದಿದ್ದ ಇವರು ಭೂ ಮಾಲಿಕರಾಗಿದ್ದರು. ಮೊದಲಿನಿಂದಲೂ ಸಮೃದ್ಧವಾಗಿತ್ತು ಈ ಜಿಯೋನಾ ಚಾನಾ ಕುಟುಂಬ. ಆದ್ರೆ ತಾವೇ ಪ್ರತ್ಯೇಕವಾಗಿ ಬದುಕು ಕಟ್ಟಿಕೊಳ್ಳಲು ನಿರ್ಧರಿಸಿದ್ದ ಚಾನಾ ಸುಮ್ಮನೇ ಕುಳಿತುಕೊಳ್ಳದೇ ಸ್ವಂತವಾಗಿ ಜಮೀನು ಮನೆ ಮಾಡಿದ್ದರು. ಸಣ್ಣ ಫ್ಯಾಮಿಲಿಯನ್ನು ಬಯಸಿದ್ದ ಇವರು ಕೊನೆಗೆ ಊಹೆಗೂ ಮೀರಿದ ದೊಡ್ಡ ಸಂಸಾರದ ಯಜಮಾನರಾಗಿಬಿಟ್ಟಿದ್ದರು. ಮೃದು ಸ್ವಭಾವದ ಚಾನಾಗೆ ಹೆಂಗರುಳು. ಇಷ್ಟು ಜನರನ್ನು ಮದುವೆ ಆಗೋದಕ್ಕೆ ಕಾರಣವೇನು ಅಂತ ಕೇಳಬಹುದು. ಇವರೇನು ಹೆಣ್ಣು ಹುಡುಕಿಕೊಂಡು ಯಾವತ್ತೂ ಹೋಗಲೇ ಇಲ್ಲ. ಆದ್ರೆ ಇವರ ಆಶ್ರಯ ಬಯಸಿ ಬಂದವರಿಗೆ ಇಲ್ಲ ಅಂತ ಎಂದೂ ಹೇಳಿಲ್ಲ. ಹೀಗಾಗಿ ಒಬ್ಬೊಬ್ಬರೇ ಇವರ ಮನೆ ಸೇರಿಕೊಂಡರು. ಆದ್ರೆ, ಸಮಾಜದಲ್ಲಿ ಹೆಣ್ಣುಮಕ್ಕಳ ಬಗ್ಗೆ ತಪ್ಪು ಭಾವನೆ ಬರಬಾರದು ಅಂತ ಮದುವೆಯಾಗಿ ಬಿಡುತ್ತಿದ್ದರು ಈ ಜಿಯೋನಾ ಚಾನಾ. ಹೀಗಾಗಿ ಇವರ ಹೆಂಡಿರ ಸಂಖ್ಯೆ 38ಕ್ಕೇರಿತ್ತು.

ಮೂವರಿದ್ದರೇ ಅನ್ಯೋನ್ಯವಾಗಿ ಒಂದೆಡೆ ಇರೋದು ಕಷ್ಟ
184 ಮಂದಿ ಒಂದೇ ಮನೆಯಲ್ಲಿ ಒಟ್ಟಿಗೆ ಇದ್ದಿದ್ದಾದ್ರು ಹೇಗೆ?
ಪತ್ನಿಯರು, ಮಕ್ಕಳು, ಮೊಮ್ಮಕ್ಕಳಿಗೆ ಏನು ಹೇಳಿದ್ರು ಈ ಅಜ್ಜ?

ಒಂದು ಮನೆಯಲ್ಲಿ ಮೂರೇ ಮೂರು ಮಂದಿ ಇದ್ದರೂ ಒಬ್ಬೊಬ್ಬರದ್ದು ಒಂದೊಂದು ದಿಕ್ಕು. ಇಂತಾದ್ರಲ್ಲಿ ಇಷ್ಟೊಂದು ಜನ ಒಂದೇ ಕಡೆ ಇದ್ದಿದ್ದಾದರೂ ಹೇಗೆ. ಹೇಗೋ ಇರಬಹುದು. ಆದ್ರೆ ಇವರೆಲ್ಲ ಅನ್ಯೋನ್ಯವಾಗಿ ಇದ್ದಿದ್ದು ಹೇಗೆ ಎಂಬ ಕುತೂಹಲ ಸಾಮಾನ್ಯವಾಗಿ ಇದ್ದೇ ಇರುತ್ತೆ. ಆದ್ರೆ ಈ ಬಿಗ್ ಫ್ಯಾಮಿಲಿಯ ಯಜಮಾನ ಜಿಯೋನಾ ಚಾನಾ ತಮ್ಮ ಕುಟುಂಬದ ಸದಸ್ಯರನ್ನ ಬೆಳೆಸಿದ್ದೇ ಹೀಗೇ. ಎಲ್ಲರೂ ಒಗ್ಗಟ್ಟಿನಿಂದ ಇರಬೇಕು, ಪ್ರೀತಿಯಿಂದ ಇರಬೇಕು, ನಾವು-ನಮ್ಮವರೆಂಬ ಭಾವನೆ ಬೆಳೆಸಿಕೊಳ್ಳಿ ಅಂತಾನೇ ಹೇಳ್ತಾ ಇದ್ರು. ಈ ಮನೆಯ ಹಿರಿಯರು-ಕಿರಿಯರು ತಾತನ ಮಾತನ್ನು ಚಾಚು ತಪ್ಪದಂತೆ ಪಾಲಿಸ್ತಾ ಇದ್ರು. ಈ ಬೆಟ್ಟದ ಮೇಲೆ ಚುವಾನ್ ಥಾರ್ ರನ್ ಅನ್ನೋ ಹೆಸರಿನ ಮನೆ ಕಟ್ಟಿಸಿದ್ದರು ಜಿಯೋನಾ ಚಾನಾ. ಮೂರಂತಸ್ತಿನ ಮನೆಯಲ್ಲಿ ಹತ್ತಾರು ಕೊಠಡಿಗಳು, ಹಾಲ್ ಗಳು, ಅಡುಗೆ ಕೋಣೆ ಬೇಕಾದಷ್ಟು ದೊಡ್ಡ ಜಾಗ ಎಲ್ಲವೂ ಇದೆ. ಈ ನವ ಪೀಳಿಗೆಯ ಮನೆಯೇ ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಹೇಗಪ್ಪಾ ಇಷ್ಟೊಂದು ಜನ ಒಂದೇ ಮನೆಯಲ್ಲಿ ಇರ್ತಾರೆ, ಹೇಗೆ ಬದುಕ್ತಾರೆ ಅನ್ನೋ ಕುತೂಹಲದಿಂದ ಇವರನ್ನು ನೋಡೋಕೆ ಅಂತಾನೇ ಬರ್ತಾ ಇದ್ರು ಇಲ್ಲಿಗೆ ಪ್ರವಾಸಿಗರು.

ವಿಸ್ತಾರವಾದ ಅಡುಗೆ ಮನೆ, ಇಡೀ ದಿನ ಊಟೋಪಚಾರ
ಮಡದಿ, ಮಕ್ಕಳು, ಮೊಮ್ಮಕ್ಕಳೊಂದಿಗೆ ಊಟ ಮಾಡ್ತಿದ್ದ ಚಾನಾ
ಬೆಳಗಿನಿಂದ ಸಂಜೆವರೆಗೆ ಕುಟುಂಬದ ಸದಸ್ಯರದ್ದು ಕೃಷಿ ಕೆಲಸ

ಬಿಗ್ ಫ್ಯಾಮಿಲಿ ಸಾಕೋದು ಅಂದ್ರೆ ಹುಡುಗಾಟಾನಾ. ಅಬ್ಬಾ. ನಿತ್ಯ 184 ಮಂದಿಗೆ ಊಟ-ತಿಂಡಿ ಮಾಡಿ ಹಾಕೋದೇ ಸವಾಲು. ಇದಕ್ಕಾಗಿಯೇ ದೊಡ್ಡ ಅಡುಗೆ ಮನೆ. ದೊಡ್ಡ ದೊಡ್ಡ ಪಾತ್ರೆಗಳು. ಬೆಳಗಿನಿಂದಲೇ ಶುರುವಾಗುತ್ತಿತ್ತು ಅಡುಗೆ ಕೆಲಸ. ಕುಟುಂಬದ ಒಂದಿಷ್ಟು ಜನರಿಗೆ ಇದೇ ಕೆಲಸ. ನಿತ್ಯ ನೂರಿನ್ನೂರು ಜನಕ್ಕೆ ಅಡುಗೆ ಮಾಡಿ ಹಾಕೋದು ಅಂದ್ರೆ ಸುಲಭಾನಾ. ಅದು ಮೂರು ಹೊತ್ತು 184 ಜನರಿಗೆ ಊಟ-ತಿಂಡಿ ಮಾಡಬೇಕು ಅಂದ್ರೆ ಕಷ್ಟಾನೇ. ಆದ್ರೆ, ಯಾವತ್ತೂ ಈ ಬಿಗ್ ಫ್ಯಾಮಿಲಿನಲ್ಲಿ ಯಾವುದಕ್ಕೂ ಕೊರತೆ ಅನ್ನೋದೇ ಇರಲಿಲ್ಲ. ಕಾರಣ ಯಜಮಾನ ಜಿಯೋನಾ ಚಾನಾ ಮ್ಯಾನೇಜ್ಮೆಂಟ್. ಏನೇ ವ್ಯವಹಾರ ಇರಲಿ ಅದನ್ನು ಚಾನಾನೇ ಖುದ್ದು ನಿಭಾಯಿಸ್ತಾ ಇದ್ರು. ಇನ್ನು ಬೆಳಗಾಯಿತೆಂದರೆ ಸಾಕು ಕುಟುಂಬದ ಸದಸ್ಯರು ತಮಗೆ ವಹಿಸುವ ಕೆಲಸವನ್ನು ಅವರ ಪಾಡಿಗೆ ಅವರು ಮಾಡ್ತಾ ಇರ್ತಿದ್ರು. ಒಬ್ಬೊಬ್ಬರು ಒಂದೊಂದು ಕೆಲಸ ಮಾಡುತ್ತಾ ಇಡೀ ಕೃಷಿ ಚಟುವಟಿಕೆಯನ್ನೆಲ್ಲ ಫ್ಯಾಮಿಲಿ ಮೆಂಬರ್ಸ್​ ನಿಭಾಯಿಸ್ತಾ ಇದ್ರು.

ಬೆಳಿಗ್ಗೆ ಸಂಜೆ ಆಗದೇ ಇದ್ರು ರಾತ್ರಿ ಊಟಕ್ಕಂತೂ ಈ ಕುಟುಂಬದ ಸದಸ್ಯರೆಲ್ಲಾ ಒಂದು ಕಡೆ ಸೇರ್ತಾ ಇದ್ರು. ಆಗ ಈ ದೃಶ್ಯ ನೋಡಿದ್ರೆ ಇದ್ಯಾವುದೋ ರೆಸ್ಟೋರೆಂಟ್ ಕಂಡಂಗೆ ಕಾಣ್ತಾ ಇತ್ತು. ಹತ್ತಾರು ಮಂದಿ ಒಂದೇ ಕಡೆ ಸೇರಿ ಊಟ ಮಾಡ್ತಾ ಇದ್ರು. ಇನ್ನು ಮಕ್ಕಳು ಒಟ್ಟೊಟ್ಟಿಗೆ ಊಟ-ತಿಂಡಿ ಹಂಚಿಕೊಂಡು ತಿಂತಾ ಇರೋದನ್ನು ನೋಡಿದ್ರೇನೇ ಅಷ್ಟೊಂದು ಖುಷಿ ಆಗ್ತಾ ಇತ್ತು. ಕುಟುಂಬದ ಕೆಲವರು ತಮ್ಮದೇ ಆದ ಆದಾಯದ ಮೂಲಗಳನ್ನು ಕೂಡ ಹುಡುಕಿಕೊಂಡಿದ್ರು. ಬೇರೆ ಬೇರೆ ಬ್ಯುಸಿನೆಸ್​ನಲ್ಲೂ ತೊಡಗಿಸಿಕೊಂಡಿದ್ರು. ಇನ್ನು ಈ ಆದರ್ಶ ಕುಟುಂಬಕ್ಕೆ ಬೇರೆ ಬೇರೆ ಕಡೆಗಳಿಂದ ದೇಣಿಗೆಯನ್ನು ಕೆಲವರು ಕಳಿಸಿ ಕೊಡ್ತಾ ಇದ್ರು. ಇಷ್ಟೊಂದು ಜನ ಒಂದೇ ಮನೆಯಲ್ಲಿ ಇರೋದೇ ಅನೇಕರಿಗೆ ಅಚ್ಚರಿ ತರ್ತಾ ಇತ್ತು. ಹೀಗಾಗಿ ಈ ಫ್ಯಾಮಿಲಿ ಹೀಗೆ ಇರಬೇಕು ಅಂತಾ ಅನೇಕರು ತಮಗಾದ ನೆರವು ಕೊಡ್ತಾ ಇದ್ರು. ವಿಶ್ವದೆಲ್ಲೆಡೆ ಈ ಫ್ಯಾಮಿಲಿ ಫೇಮಸ್ ಆಗ್ತಾ ಇದ್ದಂತೆ ಜನಪ್ರಿಯ ಕಾರ್ಯಕ್ರಮ ‘ರಿಪ್ಲೈಸ್ ಬಿಲೀವ್ ಇಟ್ ಆರ್ ನಾಟ್’ ಶೋದಲ್ಲಿ 2011 ಮತ್ತು 2013ರಲ್ಲಿ ಎರಡು ಬಾರಿ ಈ ಕುಟುಂಬ ಕಾಣಿಸಿಕೊಂಡಿತ್ತು. ವಿಶೇಷ ಅಂದ್ರೆ ಚಾನಾಸ್ ಕುಟುಂಬ ಮತ್ತು ಈ ಮನೆ ರಾಜ್ಯದ ಪ್ರಮುಖ ಪ್ರವಾಸಿ ತಾಣವಾಗಿತ್ತು.

ಹಸಿರು ಬನದ ನಡುವೆ ಇರುವ ಈ ಸುಂದರ ಬಿಗ್ ಫ್ಯಾಮಿಲಿ
ಯಜಮಾನನ ನಿರ್ಗಮನದ ನಂತರವೂ ಹೀಗೆಯೇ ಇರುತ್ತಾ?
ಜೊಯೀನಾ ಚಾನಾ ನಿಧನ ಬಳಿಕ ಮಿಜೊರಾಂನಲ್ಲಿ ಇದೇ ಚರ್ಚೆ

ಹಸಿರು ಬನದ, ಬೆಟ್ಟದ ಗುಡ್ಡದ ನಡುವೆ ಇದ್ದ ಈ ಮನೆ ವಿಶ್ವದಲ್ಲೆಲ್ಲ ಪ್ರಸಿದ್ಧ. ಈ ಬಿಗ್ ಫ್ಯಾಮಿಲಿ ನೋಡಲೆಂದೇ ಪ್ರತಿವರ್ಷ ನೂರಾರು ಜನ ಬರ್ತಾನೇ ಇರ್ತಾರೆ. ಈ ಫ್ಯಾಮಿಲಿ ಬಗ್ಗೆ ಅನೇಕ ಎಪಿಸೋಡ್ ಗಳು ವಿಶ್ವದ ಬೇರೆ ಬೇರೆ ಚಾನೆಲ್ ಗಳಲ್ಲಿ ಪ್ರಸಾರ ಕೂಡ ಆಗಿದೆ. ಆದ್ರೆ ಈಗ ಮಿಜೊರಾಂ ನಲ್ಲಿ ಆಗ್ತಾ ಇರೋ ಚರ್ಚೆ ಅಂದ್ರೆ ಈ ಬಿಗ್ ಫ್ಯಾಮಿಲಿ ಈಗ ಹೀಗೆಯೇ ಇರುತ್ತಾ. ಯಜಮಾನನ ನಿರ್ಗಮನದ ಬಳಿಕವೂ ಬಿಗ್ ಫ್ಯಾಮಿಲಿಯಾಗಿಯೇ ಇರುತ್ತಾ ಅಥವಾ ಸಣ್ಣ ಸಣ್ಣ ಕುಟುಂಬಗಳಾಗಿ ಒಡೆದು ಹೋಗುತ್ತಾ ಅನ್ನೋದು. ಬಹುಷಃ ಈಗ ಈ ಊರಿನವರು ಹೇಳ್ತಿರೋ ಪ್ರಕಾರ, ಚಾನಾರ ಬಳಿಕ ಇಷ್ಟೊಂದು ಬಿಗ್ ಫ್ಯಾಮಿಲಿ ಮುನ್ನೆಡೆಸಿಕೊಂಡು ಹೋಗುವ ಶಕ್ತಿ ಈ ಫ್ಯಾಮಿಲಿಯಲ್ಲಿ ಬೇರಾರಿಗೂ ಇಲ್ಲ. ಚಾನಾಗಿದ್ದ ಚಾಕಚಕ್ಯತೆಯೇ ಹಾಗಿತ್ತು. ಅವರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗ್ತಾ ಇದ್ರು. ಪರಸ್ಪರ ಪ್ರೀತಿಯಿಂದ ಇರುವಂತೆ ನೋಡಿಕೊಂಡಿದ್ರು. ಮುಂದೆ ಈ ಬಿಗ್ ಫ್ಯಾಮಿಲಿ ಇತಿಹಾಸದ ಪುಟ ಸೇರುವ ಸಾಧ್ಯತೆಯೇ ಹೆಚ್ಚು ಅಂತಿದಾರೆ ಸ್ಥಳೀಯರು.

ಯಜಮಾನನ ನಿರ್ಗಮನದಿಂದ ವಿಶ್ವದ ಈ ಬಿಗ್ ಫ್ಯಾಮಿಲಿ ಈಗ ಸುದ್ದಿಯಲ್ಲಿದೆ. ಆದ್ರೆ ಈ ಬಿಗ್ ಫ್ಯಾಮಿಲಿ ದೊಡ್ಮನೆಯಾಗಿಯೇ ಇರುತ್ತಾ, ಅಥವಾ ಸಣ್ಣ ಸಣ್ಣ ಕುಟುಂಬಗಳಾಗಿ ಚದುರಿ ಹೋಗುತ್ತಾ ಗೊತ್ತಿಲ್ಲ. ಅದಕ್ಕೆ ಕಾಲವೇ ಉತ್ತರ ನೀಡಬೇಕು.

The post 38 ಹೆಂಡಿರು, 89 ಮಕ್ಕಳು, 33 ಮೊಮ್ಮಕ್ಕಳನ್ನು ಅಗಲಿದ ಅಜ್ಜ.. ಇಷ್ಟೊಂದು ಮದುವೆಗೆ ಇದೆ ಕಾರಣ appeared first on News First Kannada.

Source: newsfirstlive.com

Source link