4 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮತ್ತೆ ಶಕ್ತಿ ಕೊಟ್ಟ ಕೊವಿಡ್​ 19 ಲಸಿಕೆ; ವ್ಯಾಕ್ಸಿನ್​ ಪಡೆದ ಮರುದಿನವೇ ಮಾತೂ ಬಂತು ! | A Man who suffering from paralysis from 4 years starts walking after receiving Covid 19 vaccine


4 ವರ್ಷಗಳಿಂದ ಹಾಸಿಗೆ ಹಿಡಿದಿದ್ದ ವ್ಯಕ್ತಿಗೆ ಮತ್ತೆ ಶಕ್ತಿ ಕೊಟ್ಟ ಕೊವಿಡ್​ 19 ಲಸಿಕೆ; ವ್ಯಾಕ್ಸಿನ್​ ಪಡೆದ ಮರುದಿನವೇ ಮಾತೂ ಬಂತು !

ದುಲಾರ್​ಚಾಂದ್ ಮುಂಡಾ

ಇತ್ತೀಚೆಗೆ ವೃದ್ಧನೊಬ್ಬ ಕೊವಿಡ್​ 19 ಲಸಿಕೆ 11 ಡೋಸ್​ ಪಡೆದ ಬಗ್ಗೆ ನೀವು ಕೇಳಿದ್ದೀರಿ. ಅವರು ಕೊರೊನಾ ಲಸಿಕೆಯಿಂದ ನನ್ನ ಆರೋಗ್ಯಕ್ಕೆ ಹಲವು ವಿಧದ ಅನುಕೂಲವಾಗಿದೆ ಎಂದು ಹೇಳಿ ಒಟ್ಟು 11 ಡೋಸ್​ ಪಡೆದಿದ್ದರು. ಆದರೆ ಇದೀಗ 55ವರ್ಷದ ವ್ಯಕ್ತಿಯೊಬ್ಬರು ಇದೇ ರೀತಿಯ ಮಾತುಗಳನ್ನಾಡಿದ್ದಾರೆ. ಕಳೆದ ನಾಲ್ಕು ವರ್ಷಗಳ ಹಿಂದೆ ಪಾರ್ಶ್ವವಾಯುವಿಗೆ ತುತ್ತಾಗಿ  ಧ್ವನಿ ಕಳೆದುಕೊಂಡಿದ್ದೆ. ಬರೀ ಧ್ವನಿಯಷ್ಟೇ ಅಲ್ಲ, ನಡೆದಾಡಲೂ ಆಗದೆ ಹಾಸಿಗೆಯ ಮೇಲೇ ಇರುವಂತಾಗಿತ್ತು. ಆದರೆ ಕೊವಿಡ್ 19 ಲಸಿಕೆ ಪಡೆದ ಬಳಿಕ ನಾನು ನಡೆಯುತ್ತಿದ್ದೇನೆ..ನನಗೆ ಮಾತನಾಡಲು ಸಾಧ್ಯವಾಗುತ್ತಿದೆ ಎಂದು ಹೇಳಿದ್ದಾರೆ. 

ಇವರ ಹೆಸರು ದುಲಾರ್​ಚಾಂದ್​ ಮುಂಡಾ. ಬೊಕಾರೋದ ಸಲ್ಗಾದಿಹ್ ಗ್ರಾಮದವರು. ಜನವರಿ 4ರಂದು ಕೊವಿಶೀಲ್ಡ್ ಲಸಿಕೆ ಮೊದಲ ಡೋಸ್ ಪಡೆದಿದ್ದೇನೆ.  ಲಸಿಕೆ ಪಡೆದಾದ ಮೇಲೆ ನನಗೆ ನಡೆಯಲು ಸಾಧ್ಯವಾಯಿತು. ಮಾತನಾಡಲೂ ಬರುತ್ತಿದೆ. ವ್ಯಾಕ್ಸಿನ್​ ಪಡೆದಿದ್ದು ನಿಜಕ್ಕೂ ಸಂತೋಷ ತಂದಿದೆ ಎಂದು ದುಲಾರ್​ಚಾಂದ್​ ಹೇಳಿದ್ದಾಗಿ ಎಎನ್​ಐ ವರದಿ ಮಾಡಿದೆ. ಈಗಂತೂ ಅವರೇ ಯಾರ ಸಹಾಯವಿಲ್ಲದೆ ಎದ್ದು ನಿಲ್ಲುತ್ತಾರೆ. ನಿಧಾನವಾಗಿ ಹೆಜ್ಜೆ ಹಾಕುತ್ತಾರೆ.

ದುಲಾರ್​ಚಾಂದ್ ಆರೋಗ್ಯದಲ್ಲಾದ ಬದಲಾವಣೆಯ ಬಗ್ಗೆ ಬೊಕಾರೋ ಸಿವಿಲ್​ ಸರ್ಜನ್ ಡಾ. ಜಿತೇಂದ್ರ ಕುಮಾರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಮುಂಡಾ ನಡೆಯುತ್ತಿರುವುದು ಮತ್ತು ಮಾತನಾಡುತ್ತಿರುವುದನ್ನು ನೋಡಲು ಖುಷಿಯಾಗಿದೆ ಎಂದಿದ್ದಾರೆ. ಅಷ್ಟೇ ಅಲ್ಲ, ದುಲಾರ್​ಚಾಂದ್​ ವೈದ್ಯಕೀಯ ಇತಿಹಾಸವನ್ನು ಒಮ್ಮೆ ಸ್ಟಡಿ ಮಾಡುವಂತೆ ವೈದ್ಯಕೀಯ ಸಿಬ್ಬಂದಿಗೆ ಹೇಳಿದ್ದಾರೆ. ಲಸಿಕೆ ತೆಗೆದುಕೊಂಡ ಬಳಿಕ ದುಲಾರ್​ಚಾಂದ್ ನಡೆದಾಡುತ್ತಿದ್ದಾರೆ. ಇದು ನಿಜಕ್ಕೂ ಅದ್ಭುತ ಎನ್ನಿಸುತ್ತಿದೆ. ಆದರೆ ಲಸಿಕೆಯಿಂದಲೇ ಈ ಶಕ್ತಿ ಬಂತಾ ಎಂಬುದನ್ನು ತಜ್ಞರು ಪರಿಶೀಲಿಸಿ, ಖಚಿತಪಡಿಸಬೇಕು. ನಾಲ್ಕು ವರ್ಷಗಳಿಂದ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ ಅವರು ನಿಧಾನಕ್ಕೆ ಚೇತರಿಸಿಕೊಳ್ಳಲಿಲ್ಲ, ಬದಲಿಗೆ ಲಸಿಕೆ ಪಡೆದ ತಕ್ಷಣವೇ ಚೇತರಿಸಿಕೊಂಡಿರುವುದು ನಿಜಕ್ಕೂ ನಂಬಲಸಾಧ್ಯ ಎಂದು ವೈದ್ಯರು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪೇಟಾರ್​​ವಾರ್ ಆರೋಗ್ಯ ಕೇಂದ್ರದ ಉಸ್ತುವಾರಿ ಅಲ್ಬೇಲ್​ ಕೆರ್ಕೆಟ್ಟಾ, ದುಲಾರ್​ಚಾಂದ್​​ ವಿಚಾರದಲ್ಲಿ ಆಗಿದ್ದು ಒಂದು ಪವಾಡವೇ ಸರಿ. ಈ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಯಲಿದೆ. ಮುಂದಿನ ದಿನಗಳಲ್ಲಿ ನಿಖರ ಮಾಹಿತಿ ಹೊರಬೀಳಲಿದೆ ಎಂದು ತಿಳಿಸಿದ್ದಾರೆ. ಹಾಗೇ, ಜನವರಿ 4ರಂದು ಅಂಗನವಾಡಿ ಕೇಂದ್ರದಲ್ಲಿ ದುಲಾರ್​ಚಾಂದ್ ಮತ್ತು ಅವರ ಕುಟುಂಬಕ್ಕೆ ವ್ಯಾಕ್ಸಿನ್​ ನೀಡಲಾಗಿತ್ತು. ಮರುದಿನವೇ ಅವರ ದೇಹದಲ್ಲಿ ಚಲನೆ ಕಂಡುಬಂತು ಎಂದು ಅವರು ತಿಳಿಸಿದ್ದಾರೆ.

TV9 Kannada


Leave a Reply

Your email address will not be published. Required fields are marked *