ಅದು ಬರೋಬ್ಬರಿ 400 ವರ್ಷಗಳ ದಾಸ್ಯ. ಎಲ್ಲದ್ದಕ್ಕೂ ರಾಜಮನೆತನವನ್ನೇ ನಂಬಿದ್ದ ಪುಟ್ಟ, ಸುಂದರ ರಾಷ್ಟ್ರವೊಂದು ಈಗ ಆ ದಾಸ್ಯದಿಂದ ಹೊರಬಂದಿದೆ. ತನ್ನ ರಾಷ್ಟ್ರದ ಪ್ರಜೆಗಳ ಮೇಲೆ ಹಿಡಿತ ಸಾಧಿಸುತ್ತಿದ್ದ ಬ್ರಿಟಿಷರ ಅಧಿಪತ್ಯಕ್ಕೆ ಇತಿಶ್ರೀ ಹಾಡಿದೆ . 4 ಶತಮಾನಗಳ ಮೃದು ದಬ್ಬಾಳಿಕೆಯ ವಿರುದ್ಧ ಸೆಟೆದು ನಿಂತಿದ್ದು, ತನ್ನನ್ನು ತಾನು ಗಣರಾಜ್ಯವೆಂದು ಘೋಷಿಸಿಕೊಂಡಿದೆ. ಬ್ರಿಟನ್ ಮಹಾರಾಣಿಗೆ ದಿಢೀರ್ ಅಂತಾ ದೊಡ್ಡ ಶಾಕ್ ಕೊಟ್ಟಿರುವ ಬಾರ್ಬಡೋಸ್ ಈಗ ರಿಪಬ್ಲಿಕ್ ಆಫ್ ಬಾರ್ಬಡೋಸ್ ಆಗಿ ಉದಯವಾಗಿದೆ.
ಹಾಡು, ಕುಣಿತ, ಸಂಭ್ರಮ.. ಯಾವುದೋ ಒಂದು ಯುದ್ಧ ಗೆದ್ದಂತಹ ಅನುಭವ… ಎಲ್ಲರ ಮುಖದಲ್ಲೂ ಹುಣ್ಣಿಮೆಯ ನವನೀತದಂತಿರುವ ನಗು, ಕಿತ್ತು ತಿನ್ನುವ ಬಡತನವಿದ್ದರೂ ಮುಂದೊಂದು ದಿನ ಶತಮಾನಗಳಿಂದ ತಾವು ಕಂಡ ಸಾಮ್ರಾಜ್ಯ ಹಾಗೂ ಸುಂದರ ಪ್ರಪಂಚವನ್ನು ಕಟ್ಟುವ ಕನಸು.. ಇದನ್ನೆಲ್ಲಾ ನೋಡ್ತಿದ್ರೆ ಇಲ್ಲೇನೋ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೀತಿವೆಯಲ್ಲಾ ಅಂತಾ ಅಂದುಕೊಳ್ತಿದ್ದೀರಾ? ಖಂಡಿತ ಇಲ್ಲ.. ಈ ಎಲ್ಲಾ ಸಂಭ್ರಮ ಸಡಗರ ಮತ್ತೊಬ್ಬರ ಹಿಡಿತದಿಂದ ಹೊರಬಂದಿದ್ದಿದ್ದಕ್ಕೆ, ಬ್ರಿಟಿಷರ ದಾಸ್ಯದ ಸಂಕೋಲೆಯನ್ನು ಮೆಟ್ಟಿ ನಿಂತಿದ್ದಕ್ಕೆ..
ಕೆರಿಬಿಯನ್ನ ಸುಂದರ ದ್ವೀಪರಾಷ್ಟ್ರಗಳಲ್ಲೊಂದಾದ ಬಾರ್ಬಡೋಸ್ ತನ್ನನ್ನು ತಾನು ರಿಪಬ್ಲಿಕ್ ಆಫ್ ಬಾರ್ಬಡಸ್ ಅಂತಾ ಘೋಷಿಸಿಕೊಂಡಿದೆ. ಅತ್ಯಮೋಘವಾದ ಪ್ರಕೃತಿ, ಕಡಲತಡಿಗಳಲ್ಲಿ ಬಿಳಿ ಮರಳು, ಶುದ್ಧ ನೀರಿಗೇ ಹೆಸರುವಾಸಿಯಾಗಿರೋ ಬಾರ್ಬಡೋಸ್ನಲ್ಲಿ ಇನ್ಮುಂದೆ ಶುದ್ಧ ಗಾಳಿಯೂ ಬೀಸತೊಡಗಿದೆ.ಬರೋಬ್ಬರಿ 400 ವರ್ಷಗಳಿಂದ ಬ್ರಿಟಿಷರ ವಸಾಹತುಶಾಹೀಗೆ ತುತ್ತಾಗಿದ್ದ ಪುಟ್ಟರಾಷ್ಟ್ರ ತನ್ನೆಲ್ಲಾ ದಾಸ್ಯದ ಸಂಕೋಲೆಯನ್ನು ಕಳಚಿ ಗಣರಾಜ್ಯವಾಗಿದೆ.
ಬಾರ್ಬಡೋಸ್ನ ಈ ನಡೆಯಿಂದ ಬ್ರಿಟನ್ ರಾಜಮನೆತನಕ್ಕೆ ದೊಡ್ಡ ಪೆಟ್ಟೇ ಬಿದ್ದಾಂಗಿದೆ. ಯಾಕಂದ್ರೆ, ಶಾಂತ, ಮೃದು ಸ್ವಭಾವದ ಜನರನ್ನ ಹೊಂದಿದ್ದ ಬಾರ್ಬಡೋಸ್ ಈ ರೀತಿಯ ನಿರ್ಧಾರ ಕೈಗೊಳ್ಳುತ್ತೆ ಅಂತಾ ಯಾರೂ ಅಂದುಕೊಂಡಿರಲಿಲ್ಲ. ಕೆಲವು ತಿಂಗಳುಗಳ ಹಿಂದೆಯಿಂದಲೇ ಬಾರ್ಬಡೋಸ್ ತಾವು ಗಣರಾಜ್ಯಹೊಂದುವುದಾಗಿ ಹೇಳಿತ್ತು. ಅದರಂತೆಯೇ ಬ್ರಿಟನ್ನ ರಾಜಮನೆತನವೂ ಬಾರ್ಬಡೋಸ್ ನಿರ್ಧಾರಕ್ಕೆ ಒಪ್ಪಿಗೆ ಸೂಚಿಸಿತ್ತು ಅಂತಾ ಹೇಳಲಾಗ್ತಿದೆ. ಆದ್ರೆ, ಒಳಗಿನ ಮರ್ಮಗಳು ಮಾತ್ರ ಯಾರಿಗೂ ತಿಳಿದಿಲ್ಲ. ಎಲ್ಲಾ ಅಂದುಕೊಂಡಂತೆ ಆದ ಹಿನ್ನೆಲೆ ಬಾರ್ಬಡೋಸ್ ರಿಪಬ್ಲಿಕ್ ಆಫ್ ಬಾರ್ಬಡೋಸ್ ಆಗಿದೆ.
ಇನ್ನು ನಿನ್ನೆ ನಡೆದ ಬಾರ್ಬಡೋಸ್ನಲ್ಲಿ ನಡೆದ ಗಣರಾಜ್ಯ ದಿನದ ಸಮಾರಂಭದಲ್ಲಿ ಕ್ವೀನ್ ಎಲಿಜಬೆತ್ರ ಪುತ್ರ ರಾಜಮನೆತನದ ಪ್ರಿನ್ಸ್ ಚಾರ್ಲ್ಸ್ ಕೂಡ ಭೇಟಿಯಾಗಿದ್ದು ಕಾರ್ಯಕ್ರಮಕ್ಕೆ ಮೆರುಗು ತಂದಿತ್ತು. ಸಾವಿರಾರು ಜನರು, ಬಾರ್ಬಡೋಸ್ನ ರಾಜಧಾನಿಯಲ್ಲಿ ಮಧ್ಯರಾತ್ರಿ ನಿಂತು ರಾಷ್ಟ್ರಗೀತೆ ಹಾಡಿ ಹೊಸ ಜೀವನಕ್ಕೆ ಸ್ವಾಗತಕೋರಿದ್ದು ನಿಜಕ್ಕೂ ಮೈನವಿರೇಳಿಸುವಂತಿತ್ತು..
ದೇಶದ ಮೊದಲ ಅಧ್ಯಕ್ಷೆಯಾಗಿ ಸಾಂಡ್ರಾ ಮೇಸನ್ ನೇಮಕ!
ಬಾರ್ಬಡೋಸ್ ಈ ಹಿಂದೆ ಬ್ರಿಟಿಷರ ಹೊಸಹತು ಪ್ರದೇಶವಾಗಿತ್ತು. 1627ರಲ್ಲಿ ಬ್ರಿಟಿಷರು ಈ ದ್ವೀಪಕ್ಕೆ ಎಂಟ್ರಿ ನೀಡಿದ್ದರು. ಅಂದಿನಿಂದ ಹೊಸಹತುಶಾಹೀ ಆಡಳಿತವನ್ನು ಇಲ್ಲಿ ಬಿಗಿಗೊಳಿಸಿದ್ದ ಬ್ರಿಟಿಷ್, ದ್ವೀಪರಾಷ್ಟ್ರವನ್ನು ತಮ್ಮ ಹಿಡಿತಕ್ಕೆ ತೆಗೆದುಕೊಂಡರು. ಉಳಿಗಮಾನ ಪದ್ಧತಿ ಸೇರಿದಂತೆ, ಬ್ರಿಟಿಷರು ಹೇರಿದ್ದಪ ಹಲವು ನಿಯಮಗಳಿಂದ ಇಲ್ಲಿನ ಜನರು ನಲುಗಿಹೋಗಿದ್ದಾರೆ.
1627ರಿಂದ 1833ರವರೆಗೂ ಬರೋಬ್ಬರಿ 6 ಲಕ್ಷಕ್ಕೂ ಅಧಿಕ ಆಫ್ರಿಕನ್ ಕಾರ್ಮಿಕರು ಶುಗರ್ ಪ್ಲಾಂಟೇಷನ್ಗಳಲ್ಲಿ ಕೆಲಸಕ್ಕಿದ್ದರು, ಅವರು ದುಡಿದ ಹಣವನ್ನು, ಬ್ರಿಟಿಷರಿಗೆ ನೀಡಬೇಕಾಗಿತ್ತು. ಅವರು ಕೊಟ್ಟ ಅನ್ನ ತಿನ್ನಬೇಕಾಗಿತ್ತು. ಇಂದಲ್ಲ ನಾಳೆ ಈ ದಾಸ್ಯದಿಂದ ಆಚೆ ಬರ್ತೀವಿ ಅನ್ನೋ ಕನಸು ಕಾಣ್ತಿದ್ರು. ಕೊನೆಗೂ ಬಾರ್ಬಡೋಸ್ ಜನರಿಗೆ ಅವರು ಕಾಣುತ್ತಿದ್ದ ಕನಸಿನ ದಿನ ಬಂದೇಬಟ್ಟಿದೆ. ಬ್ರಿಟನ್ನ ವಸಾಹತುಶಾಹೀ ನೀತಿಗೆ ದೊಡ್ಡ ಪೆಟ್ಟು ನೀಡಿ ಗಣರಾಜ್ಯವೆಂದು ಘೋಷಿಸಿಕೊಂಡಿದೆ..
ಈ ಸಂಭ್ರಮದ ಘಳಿಗೆಯಲ್ಲಿ ಬಾರ್ಬಡೋಸ್, ತನ್ನ ಮೊದಲ ನೂತನ ಅಧ್ಯರನ್ನೂ ಆಯ್ಕೆ ಮಾಡಿಕೊಂಡಿದೆ. 72 ವರ್ಷದ ಸಾಂಡ್ರಾ ಮೇಸನ್ ಎಂಬ ಮಹಿಳೆಗೆ ರಾಷ್ಟ್ರದ ಮೊದಲ ಪ್ರಜೆ ಎಂಬ ಗೌರವ ಸಿಕ್ಕಿದೆ . ತನ್ನ ದೇಶ ಸ್ವಂತ ಶಕ್ತಿಯ ಮೇಲೆ ಜೀವಿಸಲು ಇನ್ಮುಂದೆ ನಿರ್ಧರಿಸಿರು ಬಗ್ಗೆ ಮಾತನಾಡಿರುವ ಸಾಂಡ್ರಾ, ಸ್ವಂತ ಶಕ್ತಿಯಲ್ಲಿ ಪ್ರಬಲ ಹಾಗೂ ಸುಂದರ ಭವಿಷ್ಯವನ್ನು ಬಾರ್ಬಡೋಸ್ ರೂಪಿಸಿಕೊಳ್ಳಲಿದೆ ಅಂತಾ ಅಭಿಪ್ರಾಯಪಟ್ಟಿದ್ದಾರೆ.
ಹೌದು.. ಬಾರ್ಬಡೋಸ್ ಗಣರಾಜ್ಯವಾಗುವುದರ ಜೊತೆಗೆ ಖ್ಯಾತ ಅಂತಾರಾಷ್ಟ್ರೀಯ ಪಾಪ್ತಾರೆ ರಿಹಾನ್ನಾಗೆ ನ್ಯಾಷನಲ್ ಸ್ಟಾರ್ ಪಟ್ಟ ಕಟ್ಟಿದೆ. ಕಡುಬಡರಾಷ್ಟ್ರವಾಗಿದ್ದ, ಬಾರ್ಬಡೋಸ್ನಲ್ಲಿ ಹುಟ್ಟಿ, ವಿಶ್ವದ ಟಾಪ್ ಸಿಂಗರ್ಗಳ ಪಟ್ಟಿಯಲ್ಲಿ, ಅಗ್ರಸ್ಥಾನಗಿಟ್ಟಿಸಿಕೊಳ್ಳುವ ಮಟ್ಟಿಗೆ ಬೆಳೆದ ರಿಹಾನ್ನಾಗೆ ತನ್ನ ದೇಶ ಅಂದ್ರೆ, ಎಲ್ಲಿಲ್ಲದ ಪ್ರೀತಿ. ಹಾಗಾಗಿ, ಆಕೆ ಬಾರ್ಬಡೋಸ್ ಮೇಲೆ ಇಟ್ಟಿರುವ ಪ್ರೀತಿಗೆ ಹಾಗೂ ಗಾಯನಲೋಕದಲ್ಲಿ ಮಾಡಿರುವ ಅತ್ಯುನ್ನತ ಸಾಧನೆಯ ತುಲನೆ ಮಾಡಿ ರಿಹಾನ್ನಾಳಿಗೆ ನ್ಯಾಷನಲ್ ಹೀರೋ ಎಂಬ ಪಟ್ಟಕಟ್ಟಿದೆ..
ಬಾರ್ಬಡೋಸ್ ಬ್ರಿಟಿಷರ ದಾಸ್ಯದಿಂದ ಆಚೆ ಬಂದಿದ್ರೂ ಕಾಮನ್ವೆಲ್ತ್ ರಾಷ್ಟ್ರಗಳ ಪಟ್ಟಿಯಲ್ಲಿ ಉಳಿದುಕೊಳ್ಳಲಿದೆ. ಯೂರೋಪ್ನ 54 ದೇಶಗಳೂ ಸೇರಿ, ಹಲವು ರಾಷ್ಟ್ರಗಳು ಕಾಮನ್ವೆಲ್ತ್ ರಾಷ್ಟ್ರಗಳ ಪಟ್ಟಿಯಲ್ಲಿವೆ. ಜೊತೆಗೆ, ಬಾರ್ಬಡೋಸ್ನ ಈ ಕ್ರಾಂತಿಗೆ ಭಾರತವೂ ಶುಭಾಶಯ ಕೋರಿದೆ.
ಬಾರ್ಬಡೋಸ್ಗೆ ಭಾರತದ ವಿಶ್
ವಿದೇಶಾಂಗ ಸಚಿವರಾಗಿರುವ ಡಾ.ಜೀರೋಮ್ ಕ್ಸೇವಿಯರ್ ವಾಲ್ಕಾಟ್ ಹಾಗೂ ಬಾರ್ಬಡೋಸ್ ಸರ್ಕಾರಕ್ಕೆ, ಅಲ್ಲಿನ ಜನರಿಗೆ ಶುಭಾಶಯಗಳು. ನಮ್ಮಿಬ್ಬರ ನಡುವಿನ ಸ್ನೇಹ ಸಂಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುವ ನಿರೀಕ್ಷೆಯಲ್ಲಿದ್ದೇವೆ. ಗಣರಾಜ್ಯವಾಗುವ ಮೂಲಕ ಹೊಸ ಇನ್ನಿಂಗ್ಸ್ ಆರಂಭಿಸಿರುವ ಬಾರ್ಬಡೋಸ್ಗೆ ಶುಭಾಶಯಗಳು
– ಡಾ.ಎಸ್. ಜೈಶಂಕರ್, ವಿದೇಶಾಂಗ ಸಚಿವ
ಬಾರ್ಬಡೋಸ್ನ ನಡೆಯನ್ನು ಭಾರತವೂ ಸಮರ್ಥಿಸಿಕೊಂಡಿದೆ. ಯಾಕಂದ್ರೆ, ಬ್ರಿಟನ್ನ ವಸಾಹತುಶಾತೀ ಆಡಳಿತದ ವಿರುದ್ಧ ಮೊದಲು ದಂಗೆ ಎದ್ದು ವಿಜಯದ ಪತಾಕೆ ಹಾರಿಸಿದ್ದು ಭಾರತವೇ ಅನ್ನೋದು ತುಂಬಾ ಜನರಿಗೆ ಗೊತ್ತಿಲ್ಲ, ಅಲ್ಲದೇ, ಸೂರ್ಯ ಮುಳುಗದ ಸಾಮ್ರಾಜ್ಯ ಅಂತಲೇ ಕರೆಸಿಕೊಳ್ಳುತ್ತಿದ್ದ ಬ್ರಿಟನ್ಗೆ ಕತ್ತಲು ಕವಿಯಲಾರಂಭಿಸಿದೆ. ಯಾಕಂದ್ರೆ, ಒಂದೊಂದೇ ದೇಶಗಳು ಬ್ರಿಟನ್ ತೆಕ್ಕೆಯಿಂದ ಮೆಲ್ಲಗೆ ಜಾರಿಕೊಳ್ತಿವೆ. 1992ರಲ್ಲಿ ಸುಂದರ ದ್ವೀಪರಾಷ್ಟ್ರವಾಗಿರುವ ಮಾರಿಷಸ್ ಕೂಡ ಬ್ರಿಟನ್ ರಾಣಿಯನ್ನ ತನ್ನ ಮುಖ್ಯಸ್ಥೆಯಲ್ಲ ಎಂದು ಹೇಳಿಕೊಳ್ಳುವ ಮೂಲಕ ಗಣರಾಜ್ಯ ಅಂತಾ ಘೋಷಿಸಿಕೊಂಡಿತ್ತು. ಆದ್ರೆ, ಇನ್ನೂ ಕೆಲವು ರಾಷ್ಟ್ರಗಳು ಬ್ರಿಟನ್ ಮನೆತನದ ಹಿಡಿತದಲ್ಲಿಯೇ ಇದ್ದು, ಅವೂ ಯಾವಾಗ ಬಾರ್ಬಡೋಸ್ ರೀತಿತೇ ಪುಟಿದೇಳಲಿವೆ ಎಂಬ ಪ್ರಶ್ನೆ ಮೂಡಿವೆ.. ಒಟ್ಟಾರೆ, ಬ್ರಿಟಿಷರ ದಾಸ್ಯಕ್ಕೆ ಹೊಡೆತ ಕೊಟ್ಟು ಸ್ವಂತ ಬಲದಲ್ಲಿ ತಮ್ಮದೇ ಸಾಮ್ರಾಜ್ಯ ಕಟ್ಟಿಕೊಳ್ಳಲು ಹೊರಟಿರುವ ಬಾರ್ಬಡೋಸ್ಗೆ ಗುಡ್ಲಕ್ ಹೇಳಲೇಬೇಕು.
ರಾಜಮನೆತನಕ್ಕೆ ಸುದ್ದಿ ಮುಟ್ಟಿಸಿಯೇ ಬಾರ್ಬಡೋಸ್ ಗಣರಾಜ್ಯವನ್ನಾಗಿ ಘೋಷಿಸಿಕೊಂಡಿದೆ. ಆದ್ರೂನೂ ಬ್ರಿಟಿಷರ ದಾಸ್ಯ ಕಳಚಿಕೊಂಡಿದ್ದರಿಂದ ಕೊರೊನಾ ವಿಚಾರದಲ್ಲಿ, ಪ್ರವಾಸೋದ್ಯಮದ ವಿಷಯದಲ್ಲಿ ಬಾರ್ಬಡೋಸ್ಗೆ ಹೊಡೆತ ಬೀಳುತ್ತೆ ಅಂತಲೇ ಅಂದಾಜಿಸಲಾಗ್ತಿದೆ. ಏನೇ ಆಗ್ಲಿ ಯಾರ ಹಂಗಿಲ್ಲದೆಯೂ ತನ್ನ ಸ್ವಂತ ಕಾಲಿನ ಮೇಲೆ ನಿಲ್ಲಬೇಕು ಅಂತಿರೊ ಬಾರ್ಬಡೋಸ್ಗೆ ಒಳ್ಳೆದಾಗಲಿ ಅನ್ನೊದೇ ಎಲ್ಲರ ಆಶಯ.