ಕೊರೊನಾ ವೈರಸ್ ಎಂಥ ಕಠೋರ ಪರಿಣಾಮ ಬೀರುತ್ತದೆ ಎಂಬುದಕ್ಕೆ ಯುಕೆಯ 72 ವರ್ಷದ ಓರ್ವ ವೃದ್ಧ ಸಾಕ್ಷಿಯಾಗಿದ್ದಾನೆ. ಈತನ ಕಥೆ ಕೇಳಿದ್ರೆ ನಿಮಗೆ ಅಚ್ಚರಿ ಆತಂಕ ಭಯ ಎಲ್ಲವ ಒಟ್ಟೊಟ್ಟಿಗೆ ಆಗಬಹುದು.

ಆತನ ಹೆಸರು ಡೇವ್ ಸ್ಮಿತ್.. 72 ವರ್ಷದ ವೃದ್ಧ.. ವೃತ್ತಿಯಲ್ಲಿ ಡ್ರೈವಿಂಗ್ ಕಲಿಸುವ ಇನ್​ಸಟ್ರಕ್ಟರ್ ಆಗಿದ್ದವನು.. ವೃದ್ಧಾಪ್ಯದಲ್ಲಿರೋ ಡೇವ್ ಸ್ಮಿತ್ ಹಲವು ವರ್ಷಗಳ ಹಿಂದೆಯೇ ಕೆಲಸದಿಂದ ನಿವೃತ್ತಿ ಪಡೆದು ಪತ್ನಿಯ ಜೊತೆ ಮನೆಯಲ್ಲೇ ಇದ್ರು.

ಇಂಥ 72 ವರ್ಷದ ಡೇವ್​ಸ್ಮಿತ್​​ಗೆ ಬಹುತೇಕರಂತೆ ಕೊರೊನಾ ಸೋಂಕು ಬಂದಿತ್ತು. ಆದ್ರೆ ಈತನಿಗೆ ಅಂಟಿಕೊಂಡ ಸೋಂಕು ಭಯಂಕರವಾಗಿತ್ತು. ಬರೋಬ್ಬರಿ 10 ತಿಂಗಳುಗಳ ಕಾಲ ಈತ ಕೊರೊನಾ ಸೋಂಕಿನಿಂದ ಬಳಲಿದ್ದಾರೆ. ಬರೋಬ್ಬರಿ 43 ಬಾರಿ ಡೇವ್​ ಸ್ಮಿತ್​​ರನ್ನ ಕೊರೊನಾ ವೈರಸ್ ಅಟ್ಯಾಕ್ ಮಾಡಿದೆ.

ಪದೇ ಪದೇ ಕೊರೊನಾ ವೈರಸ್ ಡೇವ್ ಸ್ಮಿತ್ ಅವರನ್ನ ಅಟ್ಯಾಕ್ ಮಾಡುತ್ತಲೇ ಇತ್ತು. ಎಷ್ಟರ ಮಟ್ಟಿಗೆ ಅಂದ್ರೆ 10 ತಿಂಗಳು ನಿರಂತರವಾಗಿ ಸೋಂಕಿನಿಂದ ಬಳಲಿದ್ದಾರೆ. 7 ಬಾರಿ ಆಸ್ಪತ್ರೆಗೆ ಅಡ್ಮಿಟ್ ಆಗಿ ಡಿಸ್ಚಾರ್ಜ್ ಆಗಿದ್ದಾರೆ. ಆದ್ರೆ ಕೊರೊನಾ ಸೋಂಕು ಅವರನ್ನ ಬಿಡಲೇ ಇಲ್ಲ. ಯಾವೆಲ್ಲಾ ಔಷಧಿ ತೆಗೆದುಕೊಂಡ್ರೂ ಅದರಿಂದ ಯಾವ ಪ್ರಯೋಜನವೂ ಆಗಲೇ ಇಲ್ಲ.

ಕೊನೆಗೆ ನನ್ನನ್ನು ಈ ವೈರಸ್ ಬಿಡೋದಿಲ್ಲ ಅನ್ನೋ ನಿರ್ಧಾರಕ್ಕೆ ಬಂದ ಡೇವ್ ಸ್ಮಿತ್ ತಮ್ಮ ಕುಟುಂಬದವರಿಗೆಲ್ಲ ಕರೆಮಾಡಿ ನಾನಿನ್ನು ಬದುಕೋದಿಲ್ಲ.. ನನ್ನನ್ನ ಸಂತೋಷದಿಂದ ಕಳುಹಿಸಿಕೊಡಿ ಎಂದು ಕಣ್ಣೀರು ಹಾಕಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ತನ್ನ ಅಂತ್ಯಸಂಸ್ಕಾರಕ್ಕೂ ಸಹ ಎಲ್ಲ ಸಿದ್ಧತೆ ಮಾಡಿಕೊಂಡುಬಿಟ್ಟಿದ್ರು.

ಕೊನೆಯ ಪ್ರಯತ್ನ ಎಂಬಂತೆ ಡೇವ್ ಸ್ಮಿತ್ ಅವರಿಗೆ ಯುಎಸ್ ಬಯೋಟೆಕ್ ರೆಜೆನೆರೊನ್ ಅಭಿವೃದ್ಧಿಪಡಿಸಿರೋ ಸಿಂಥೆಟಿಕ್ ಆ್ಯಂಟಿಬಾಡಿಗಳ ಕಾಕ್​ಟೇಲ್​ ಲಸಿಕೆಯನ್ನ ನೀಡಲಾಗಿದೆ. ಇದರಿಂದ ಕೊನೆಗೂ ಡೇವ್ ಸ್ಮಿತ್ ಗುಣಮುಖರಾಗಿದ್ದಾರೆ. ಡೇವ್ ಸ್ಮಿತ್ ಕೊರೊನಾ ರಿಸಲ್ಟ್ ಕೊನೆಗೂ ನೆಗೆಟಿವ್ ಬಂದಿದೆ. ಸೋಂಕು ತಗುಲಿದ 305 ದಿನಗಳ ನಂತರ ಡೇವ್​ ಸ್ಮಿತ್ ಕೊನೆಗೂ ಸೋಂಕಿನಿಂದ ಹೊರಬಂದಿದ್ದಾರೆ.

ಕೊನೆಗೂ ನೆಗೆಟಿವ್ ಬಂದಿದ್ದರಿಂದ ಖುಷಿಯಾದ ಡೇವ್ ಸ್ಮಿತ್ ಹಾಗೂ ಪತ್ನಿ ಶಾಂಪೇನ್ ಬಾಟಲ್ ಓಪನ್ ಮಾಡುವ ಮೂಲಕ ಸಂಭ್ರಮ ಪಟ್ಟಿದ್ದಾರೆ.

The post 43 ಬಾರಿ ಕೊರೊನಾ ಪಾಸಿಟಿವ್: ಅಂತ್ಯಸಂಸ್ಕಾರಕ್ಕೂ ಸಿದ್ಧತೆ ಮಾಡಿಕೊಂಡಿದ್ದವನು ಬದುಕಿದ್ದೇ ಮಿರಾಕಲ್ appeared first on News First Kannada.

Source: newsfirstlive.com

Source link