Janhvi Kapoor: 2020ರಲ್ಲಿ 39 ಕೋಟಿ ರೂಪಾಯಿಗೆ ಖರೀದಿಸಿದ್ದ ಪ್ರಾಪರ್ಟಿಯನ್ನು ಜಾನ್ವಿ ಕಪೂರ್ ಅವರು ಈಗ 44 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದಾರೆ. ಆ ಮೂಲಕ ಅವರು 5 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ.

ಜಾನ್ವಿ ಕಪೂರ್
ನಟಿ ಜಾನ್ವಿ ಕಪೂರ್ (Janhvi Kapoor) ಅವರು ಒಂದಿಲ್ಲೊಂದು ಕಾರಣಕ್ಕೆ ಪ್ರತಿ ದಿನ ಸುದ್ದಿ ಆಗುತ್ತಾರೆ. ಸಿನಿಮಾಗಿಂತಲೂ ಹೆಚ್ಚಾಗಿ ಅವರ ಖಾಸಗಿ ಜೀವನದ ವಿಷಯಗಳೇ ಹೈಲೈಟ್ ಆಗುತ್ತವೆ. ಈಗ ಅವರು ಮನೆ ಮಾರಿಕೊಂಡಿರುವ ಬಗ್ಗೆ ಹಲವೆಡೆ ವರದಿ ಆಗಿದೆ. ಬರೋಬ್ಬರಿ 44 ಕೋಟಿ ರೂಪಾಯಿಗೆ ಅವರು ಮುಂಬೈನ ಅಪಾರ್ಟ್ಮೆಂಟ್ (Apartment) ಫ್ಲಾಟ್ಗಳನ್ನು ಮಾರಿದ್ದಾರೆ. ಬಾಲಿವುಡ್ನ ಖ್ಯಾತ ನಟ ರಾಜ್ಕುಮಾರ್ ರಾವ್ (Rajkummar Rao) ಅವರು ಇದನ್ನು ಖರೀದಿಸಿದ್ದಾರೆ. ಸದ್ಯ ಬಿ-ಟೌನ್ನಲ್ಲಿ ಈ ಸುದ್ದಿ ಹರಿದಾಡುತ್ತಿದೆ. ಸೆಲೆಬ್ರಿಟಿ ಕಿಡ್ ಎಂಬ ಕಾರಣಕ್ಕೆ ಜಾನ್ವಿ ಕಪೂರ್ ಅವರಿಗೆ ಹಲವು ಅವಕಾಶಗಳು ಬರುತ್ತಿವೆ. ಒಳ್ಳೆಯ ಸಂಭಾವನೆಯೂ ಸಿಗುತ್ತಿದೆ. ಈ ಸಂದರ್ಭದಲ್ಲಿ ಅವರು ಮನೆ ಮಾರಿಕೊಂಡಿದ್ದರು ಯಾಕೆ ಎಂಬ ಕೌತುಕದ ಪ್ರಶ್ನೆ ಮೂಡಿದೆ.
2020ರಲ್ಲಿ ಜಾನ್ವಿ ಕಪೂರ್ ಅವರು ಜುಹೂನಲ್ಲಿ ಇರುವ ಪ್ರತಿಷ್ಠಿತ ಅಪಾರ್ಟ್ಮೆಂಟ್ನಲ್ಲಿ 14, 15 ಮತ್ತು 16ನೇ ಫ್ಲೋರ್ನಲ್ಲಿ ಇರುವ ಫ್ಲಾಟ್ಗಳನ್ನು ಖರೀದಿಸಿದ್ದರು. ಆಗ ಅವರು 39 ಕೋಟಿ ರೂಪಾಯಿ ನೀಡಿದ್ದರು. ಆರು ಪಾರ್ಕಿಂಗ್ ಸ್ಲಾಟ್ಗಳನ್ನು ಒಳಗೊಂಡಿರುವ ಈ ಪ್ರಾಪರ್ಟಿಗೆ ಈಗ ಸಖತ್ ಬೇಡಿಕೆ ಇದೆ. ಇದನ್ನು 44 ಕೋಟಿ ರೂಪಾಯಿಗೆ ಮಾರಾಟ ಮಾಡುವ ಮೂಲಕ ಜಾನ್ವಿ ಕಪೂರ್ ಅವರು 5 ಕೋಟಿ ರೂಪಾಯಿ ಲಾಭ ಮಾಡಿಕೊಂಡಿದ್ದಾರೆ.
ಮೂಲಗಳ ಪ್ರಕಾರ, ಈ ವರ್ಷ ಮಾರ್ಚ್ 31ಕ್ಕೆ ಜಾನ್ವಿ ಕಪೂರ್ ಮತ್ತು ರಾಜ್ಕುಮಾರ್ ರಾವ್ ನಡುವೆ ಡೀಲ್ ಕುದುರಿತ್ತು. ಜುಲೈ 21ಕ್ಕೆ ರಿಜಿಸ್ಟ್ರೇಷನ್ ಆಗಿದೆ. ರಾಜ್ಕುಮಾರ್ ರಾವ್ ಅವರು ಬರೋಬ್ಬರಿ 2.19 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರೆ. ಈ ಆಸ್ತಿ ಖರೀದಿ ಮಾಡುವ ಮೂಲಕ ರಾಜ್ಕುಮಾರ್ ಮತ್ತು ಪತ್ರಲೇಖ ದಂಪತಿ ಜುಹೂನಲ್ಲಿ ಮನೆ ಮಾಡಿದಂತಾಗಿದೆ.