ನವದೆಹಲಿ: ದೇಶದಲ್ಲಿ ಕೊರೊನಾ ಎರಡನೇ ಅಲೆ ಸುನಾಮಿಯಂತೆ ಅಪ್ಪಳಿಸಿರುವ ಹಿನ್ನೆಲೆ ಔಷಧಿಗಳಿಗೆ ಬೇಡಿಕೆ ಹೆಚ್ಚಾಗಿದೆ. ಗಂಭೀರ ಸ್ಥಿತಿಯಲ್ಲಿರೋ ಕೊರೊನಾ ರೋಗಿಗಳಿಗೆ ನೀಡಲಾಗುವ ಆ್ಯಂಟಿ ವೈರಲ್ ಇಂಜೆಕ್ಷನ್ ರೆಮ್ಡೆಸಿವಿರ್​ನ ಅಭಾವ ಉಂಟಾಗಿದೆ. ಹೀಗಾಗಿ ರೆಮ್ಡೆಸಿವಿರ್ ಚುಚ್ಚುಮದ್ದನ್ನ ವಿದೇಶಗಳಿಂದ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧಾರ ಮಾಡಿದೆ.

ಇಂದು ಮೊದಲ ಬ್ಯಾಚ್​​ನ 75 ಸಾವಿರ ವಯಲ್ಸ್(ಬಾಟಲಿ) ರೆಮ್ಡೆಸಿವಿರ್ ಭಾರತಕ್ಕೆ ಬರಲಿದೆ ಅಂತ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯ ಹೇಳಿದೆ. ಭಾರತದ ಸರ್ಕಾರಿ ಸ್ವಾಮ್ಯದ ಕಂಪನಿಯಾದ ಎಚ್‌ಎಲ್‌ಎಲ್ ಲೈಫ್‌ಕೇರ್ ಲಿಮಿಟೆಡ್, ಅಮೆರಿಕಾದ ಫಾರ್ಮಾ ಸಂಸ್ಥೆ ಗಿಲ್ಯಾಡ್ ಸೈನ್ಸಸ್ ಮತ್ತು ಈಜಿಪ್ಟ್ ಫಾರ್ಮಾ ಕಂಪನಿ ಇವಾ ಫಾರ್ಮಾದಿಂದ 4,50,000 ರೆಮ್ಡೆಸಿವಿರ್​ ಬಾಟಲಿಗಳಿಗೆ ಆರ್ಡರ್ ಕೊಟ್ಟಿದೆ ಎಂದು ಸಚಿವಾಲಯ ಹೇಳಿದೆ.

ಮುಂದಿನ ಒಂದು ಅಥವಾ ಎರಡು ದಿನಗಳಲ್ಲಿ ಗಿಲ್ಯಾಡ್ ಸೈನ್ಸಸ್ ಸಂಸ್ಥೆ 75,000 ದಿಂದ 1 ಲಕ್ಷ ರೆಮ್ಡೆಸಿವಿರ್​ ಬಾಟಲಿಗಳನ್ನ ಭಾರತಕ್ಕೆ ಕಳಿಸಲಿದೆ. ಬಳಿಕ ಮೇ 15ರೊಳಗೆ ಮತ್ತೆ 1 ಲಕ್ಷ ವೈಯಲ್ಸ್​ ರವಾನಿಸಲಿದೆ. ಹಾಗೇ ಇವಾ ಫಾರ್ಮಾ ಕೂಡ ಮೊದಲು ಸುಮಾರು 10,000 ಬಾಟಲಿಗಳನ್ನ ಪೂರೈಸುತ್ತದೆ ಮತ್ತು ನಂತರ ಪ್ರತಿ 15 ದಿನಗಳಿಗೊಮ್ಮೆ ಅಥವಾ ಜುಲೈವರೆಗೆ 50,000 ಬಾಟಲಿ ​ ಪೂರೈಸುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಭಾರತದಲ್ಲೂ ಕೂಡ ರೆಮ್ಡೆಸಿವಿರ್ ಉತ್ಪಾದನೆಯನ್ನ ಹೆಚ್ಚಿಸಲಾಗಿದೆ. ಏಪ್ರಿಲ್ 27ರ ಹೊತ್ತಿಗೆ,  ಪರವಾನಗಿ ಪಡೆದ ಏಳು ದೇಶಿ ತಯಾರಕರ ಉತ್ಪಾದನಾ ಸಾಮರ್ಥ್ಯ ತಿಂಗಳಿಗೆ 38 ಲಕ್ಷ ಬಾಟಲಿ ಇತ್ತು. ಅದೀಗ ತಿಂಗಳಿಗೆ 1.03 ಕೋಟಿ ಬಾಟಲಿಗಳಿಗೆ ಏರಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ.

ನ್ಯೂಸ್​ಫಸ್ಟ್​ ಕಳಕಳಿ
ಕೊರೊನಾದಿಂದ ರಕ್ಷಿಸಿಕೊಳ್ಳಲು ನಿಮ್ಮ ಎಚ್ಚರಿಕೆಯಲ್ಲಿ ನೀವಿರಿ. ಮಾಸ್ಕ್ ಧರಿಸಿ, ಸೋಶಿಯಲ್ ಡಿಸ್ಟನ್ಸ್ ಕಾಪಾಡಿ. ಕೈ ತೊಳೆಯುತ್ತಿರಿ. ಮತ್ತು ಮೇ 1 ರಿಂದ 18ರ ಮೇಲ್ಪಟ್ಟ ಎಲ್ಲರೂ ವ್ಯಾಕ್ಸಿನ್ ಪಡೆಯಲು ಅರ್ಹರಾಗಿದ್ದು ರೆಜಿಸ್ಟರ್ ಮಾಡಿಕೊಳ್ಳಬಹುದಾಗಿದೆ. ಅದಕ್ಕಾಗಿ https://www.cowin.gov.in/  ಇಲ್ಲಿಗೆ ಭೇಟಿ ಕೊಟ್ಟು ನೊಂದಣಿ ಮಾಡಿಕೊಳ್ಳಿ. ಮತ್ತೊಂದು ಮುಖ್ಯ ಸಂಗತಿ ಗಮನಿಸಿ CoWin ಆ್ಯಪ್ ಸಾರ್ವಜನಿಕರಿಗೆ ಅಲ್ಲ. ಹೀಗಾಗಿ ಕಡ್ಡಾಯವಾಗಿ ವೆಬ್​ಸೈಟ್​ನಲ್ಲಿಯೇ ನೊಂದಾಯಿಸಿಕೊಳ್ಳಬೇಕು.

 

The post 4,50,000 ಬಾಟಲ್ ರೆಮ್ಡೆಸಿವಿರ್ ಆಮದು ಮಾಡಿಕೊಳ್ಳಲು ಮುಂದಾದ ಕೇಂದ್ರ ಸರ್ಕಾರ appeared first on News First Kannada.

Source: newsfirstlive.com

Source link