– ಪ್ರಚಾರಕ್ಕಾಗಿ ಅರ್ಜಿ ಸಲ್ಲಿಸಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡ ಕೋರ್ಟ್

ನವದೆಹಲಿ: ಭಾರತದಲ್ಲಿ 5ಜಿ ನೆಟ್‍ವರ್ಕ್ ಸ್ಥಾಪನೆ ವಿರುದ್ಧ ನಟಿ, ಪರಿಸರ ಹೋರಾಟಗಾರ್ತಿ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈ ಕೋರ್ಟ್ ವಜಾಗೊಳಿಸಿದೆ. ಅಲ್ಲದೆ ಅರ್ಜಿದಾರರು ‘ಕಾನೂನನ್ನು ದುರುಪಯೋಗಪಡಿಸಿಕೊಂಡಿದ್ದಾರೆ’ ಎಂದು 20 ಲಕ್ಷ ರೂ.ಗಳ ದಂಡ ವಿಧಿಸಿದೆ.

ಜೂಹಿ ಚಾವ್ಲಾ, ಸಾಮಾಜಿಕ ಕಾರ್ಯಕರ್ತರಾದ ವೀರೇಶ್ ಮಲಿಕ್ ಹಾಗೂ ಟೀನಾ ವಚನಿ ಅವರು 5ಜಿ ತಂತ್ರಜ್ಞಾನದ ವಿರುದ್ಧ ಹೈ ಕೋರ್ಟ್‍ನಲ್ಲಿ ಅರ್ಜಿ ಸಲ್ಲಿಸಿದ್ದರು. 5ಜಿ ತಂತ್ರಜ್ಞಾನದಿಂದಾಗಿ ಅಪಾಯಕಾರಿ ರೇಡಿಯೇಶನ್ ಮಾನವರ ಮೇಲೆ ಗಂಭೀರ ಪರಿಣಾಮ ಬೀರಬಹುದು. ಅಲ್ಲದೆ ಪರಿಸರ ವ್ಯವಸ್ಥೆಯನ್ನು ಶಾಶ್ವತವಾಗಿ ಹಾನಿಗೊಳಿಸಬಹುದು ಎಂದು ಅರ್ಜಿಯಲ್ಲಿ ತಿಳಿಸಿದ್ದರು. ಇದನ್ನೂ ಓದಿ: 5ಜಿ ನೆಟ್‍ವರ್ಕ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ಜೂಹಿ ಚಾವ್ಲಾ

ಅರ್ಜಿದಾರರ ವಾದವು ಅಸಹ್ಯಕರವಾಗಿದ್ದು, ಏನು ಹೇಳುತ್ತಿದ್ದಾರೆ ಎಂಬುದರ ಕುರಿತು ಅವರಿಗೇ ಜ್ಞಾನವಿಲ್ಲ. ಕೇವಲ ಪ್ರಚಾರಕ್ಕಾಗಿ ಈ ಅರ್ಜಿಯನ್ನು ಸಲ್ಲಿಸಿದ್ದಾರೆ ಎಂದು ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಜೆ.ಆರ್.ಮಿಧಾ ಅವರು ಚಾಟಿ ಬೀಸಿದರು.

ನೇರವಾಗಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವ ಬದಲು ಟೆಲಿಕಾಂ ಇಲಾಖೆಯೊಂದಿಗೆ ಏಕೆ ಚರ್ಚಿಸಿಲ್ಲ ಎಂದು ನ್ಯಾಯಮೂರ್ತಿ ಮಿಧಾ ಅವರು ವಿಚಾರಣೆ ವೇಳೆ ಜೂಹಿ ಚಾವ್ಲಾ ಹಾಗೂ ಉಳಿದ ಇಬ್ಬರು ಅರ್ಜಿದಾರರನ್ನು ಪ್ರಶ್ನಿಸಿದರು. ಅಲ್ಲದೆ ನ್ಯಾಯಾಲಯಕ್ಕೆ ಬರುವ ಮೊದಲು ಈ ಬಗ್ಗೆ ಸರ್ಕಾರದ ಗಮನಕ್ಕೆ ತಂದು, ಚರ್ಚಿಸಿ ಎಂದು ಜೂಹಿ ಚಾವ್ಲಾ ಹಾಗೂ ಇತರ ಇಬ್ಬರು ಅರ್ಜಿದಾರರಿಗೆ ಸೂಚಿಸಿತು.

ವೀಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ ಅರ್ಜಿದಾರರ ವಿಚಾರಣೆ ನಡೆಸಿದ್ದು, ಈ ವಿಚಾರಣೆಯ ಲಿಂಕ್‍ನ್ನು ಜೂಹಿ ಚಾವ್ಲಾ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಇದರಿಂದಾಗಿ ಮೂರು ಬಾರಿ ವಿಚಾರಣೆಗೆ ಅಡ್ಡಿಯಾಗಿದೆ ಎಂದು ಕೋರ್ಟ್ ಹೇಳಿದೆ. ಅಲ್ಲದೆ ದೆಹಲಿ ಪೊಲೀಸರು ವ್ಯಕ್ತಿಗಳನ್ನು ಗುರುತಿಸಿ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.

ದೂರಿನಲ್ಲಿ ಏನಿದೆ?
ಭಾರತದಲ್ಲಿ 5ಜಿಯನ್ನು ಜಾರಿಗೆ ತಂದರೆ ದೇಶದಲ್ಲಿರುವ ಯಾವುದೇ ವ್ಯಕ್ತಿ, ಪ್ರಾಣಿ, ಪಕ್ಷಿ, ಕೀಟ, ಸಸ್ಯ ಪ್ರಭೇದಗಳು 5ಜಿಯ ವಿಕಿರಣದಿಂದಾಗುವ ತೊಂದರೆಗಳನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ದಿನದ 24 ಗಂಟೆ, ವರ್ಷದ 365 ದಿನ, ಈಗಿರುವ ನೆಟ್‍ವರ್ಕ್ ವಿಕಿರಣಗಳಿಂದ ರೇಡಿಯೋ ಫ್ರಿಕ್ವೆನ್ಸಿ ವಿಕಿರಣ 10x ರಿಂದ 100x ಪಟ್ಟು ಹೆಚ್ಚಾಗಿರುತ್ತದೆ.

5ಜಿ ಯೋಜನೆಗಳಿಂದಾಗಿ ಮನುಷ್ಯರ ಮೇಲೆ ಹಲವು ದುಷ್ಪರಿಣಾಮಗಳಿದ್ದು, ಮುಂದೆ ಬದಲಾಯಿಸಲು ಸಾಧ್ಯವಾಗದ ಪರಿಣಾಮವನ್ನು ಎದುರಿಸಬೇಕಾಗುತ್ತದೆ. ಮನುಷ್ಯರ ಮೇಲೆ ಮಾತ್ರವಲ್ಲದೇ ಭೂಮಿಯ ಮೇಲಿರುವ ಎಲ್ಲಾ ಪರಿಸರ ವ್ಯವಸ್ಥೆಗೆ ಇದರಿಂದ ತೊಂದರೆ ಎದುರಾಗುತ್ತದೆ.

5ಜಿಯಿಂದ ಮಾನವಕುಲದ, ಪುರುಷ, ಮಹಿಳೆ, ಮಗು, ವಯಸ್ಕ, ಶಿಶು, ಪ್ರಾಣಿ ಮತ್ತು ಎಲ್ಲಾ ವಿದಧ ಜೀವಿಗಳಿಗೂ ಇದರಿಂದ ಯಾವುದೇ ದುಷ್ಟರಿಣಾಮಗಳಿಲ್ಲ ಎಂದು ಪರೀಕ್ಷಿಸುವಂತೆ, ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ಕೊಡಬೇಕೆಂದು ವಕೀಲರಾದ ದೀಪಕ್ ಖೋಸ್ಲಾ ಅವರ ಮೂಲಕ ಸಲ್ಲಿಸಲಾಗಿರುವ ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

The post 5ಜಿ ವಿರುದ್ಧ ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಜಾ- 20 ಲಕ್ಷ ದಂಡ ವಿಧಿಸಿದ ದೆಹಲಿ ಹೈ ಕೋರ್ಟ್ appeared first on Public TV.

Source: publictv.in

Source link