5ನೆ ಬಾರಿಗೆ ಸುಮುಹೂರ್ತ: ಎಂಟಿಬಿ ನಾಗರಾಜ್-ಡಾ ಸುಧಾಕರ್ ರಿಂದ ದೊಡ್ಡಬಳ್ಳಾಪುರ ನಗರಸಭೆ ಕಟ್ಟಡ ಉದ್ಘಾಟನೆ, ಕಾಂಗ್ರೆಸ್​ ಪ್ರತಿಭಟನೆ | MTB Nagaraj and Dr K Sudhakar inaugurates Doddaballapur City Corporation building Congress protests


5ನೆ ಬಾರಿಗೆ ಸುಮುಹೂರ್ತ: ಎಂಟಿಬಿ ನಾಗರಾಜ್-ಡಾ ಸುಧಾಕರ್ ರಿಂದ ದೊಡ್ಡಬಳ್ಳಾಪುರ ನಗರಸಭೆ ಕಟ್ಟಡ ಉದ್ಘಾಟನೆ, ಕಾಂಗ್ರೆಸ್​ ಪ್ರತಿಭಟನೆ

5ಯ ಬಾರಿಗೆ ಸುಮುಹೂರ್ತ ಕೂಡಿಬಂದು ಸಚಿವರಾದ ಎಂಟಿಬಿ-ಡಾ ಸುಧಾಕರ್ ದೊಡ್ಡಬಳ್ಳಾಪುರ ನಗರಸಭೆ ಕಟ್ಟಡ ಉದ್ಘಾಟಿಸಿದರು! ಕಾಂಗ್ರೆಸ್ಸಿಗರು ಪ್ರತಿಭಟಿಸಿದರು

ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ನಗರದಲ್ಲಿ ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ನಗರಸಭೆಯ ಭವ್ಯ ಕಟ್ಟಡ ನಿರ್ಮಾಣವಾಗಿ ಯಾವುದೋ ಕಾಲವಾಗಿದೆ. ಆದರೆ ಆ ನೂತನ ಭವನಕ್ಕೆ (Doddaballapur City Corporation) ತಕ್ಷಣಕ್ಕೆ ಉದ್ಘಾಟನೆಯ ಭಾಗ್ಯ ಒದಗಿಬಂದಿಲ್ಲ. ನಾಲ್ಕು ಬಾರಿ ಮುಹೂರ್ತ ನಿಗದಿಯಾಗಿದ್ದರೂ ನಾನಾ ಕಾರಣಳಗಳಿಂದಾಗಿ ಉದ್ಘಾಟನೆಯಾಗದೆ ಹಾಗೆಯೇ ಉಳಿದಿತ್ತು. ಕಳೆದ ತಿಂಗಳು ಮಾರ್ಚ್ ನಲ್ಲಿ ಸ್ಥಳೀಯ ಕಾಂಗ್ರೆಸ್​ ಶಾಸಕ ಟಿ. ವೆಂಕಟರಮಣಯ್ಯ ಅವರೆ ಉದ್ಘಾಟನೆ ಮಾಡಿದ್ದರು. ಆದರೆ ಅದು ಅಧಿಕೃತ ಎನಿಸಿರಲಿಲ್ಲ. ಹಾಗಾಗಿ ಐದನೆಯ ಬಾರಿಗೆ ಸುಮುಹೂರ್ತ ನಿಗದಿಯಾಗಿ ಇಂದು ಉದ್ಘಾಟನೆಯ ಭಾಗ್ಯ ಕಂಡಿತು. ಐದನೆಯ ಬಾರಿಗೆ ಮುಹೂರ್ತ ನಿಗದಿಗೊಂಡು ಇಂದು ನೂತನ ನಗರಸಭೆ ಕಟ್ಟಡವನ್ನು ವಿಜೃಂಭಣೆಯಿಂದ ಉದ್ಘಾಟನೆ ಮಾಡಲಾಯಿತು. ಸಿಎಂ ಬೊಮ್ಮಾಯಿ ಮಂತ್ರಿಮಂಡಲದ ಹಿರಿಯ ಸಚಿವರಾದ ಎಂಟಿಬಿ ನಾಗರಾಜ್ (MTB Nagaraj) ಮತ್ತು ಡಾ. ಕೆ ಸುಧಾಕರ್ (Dr K Sudhakar) ಅವರುಗಳು ತಮ್ಮ ಅಮೃತ ಹಸ್ತದಿಂದ ಉದ್ಘಾಟನೆ ನೆರವೇರಿಸಿದರು.

ಕಳೆದ ಮಾರ್ಚ್ ನಲ್ಲಿ ಎಲ್ಲ ಸಿದ್ಧತೆಯಾಗಿದ್ದರೂ ಸಚಿವರು ಬಾರದ ಕಾರಣ ಉದ್ಘಾಟನೆ ರದ್ದಾಗಿತ್ತು. ಆಗ ಸಚಿವರು ಬಾರದ ಕಾರಣ ಸ್ಥಳೀಯ ಶಾಸಕ ವೆಂಕಟರಮಣಯ್ಯ ಅವರೇ ಉದ್ಘಾಟನೆ ಮಾಡಿದ್ದರು. ಅಂದು ಉದ್ಘಾಟನೆಯಾಗಿದ್ದರೂ ಇದೀಗ ಸಚಿವರಿಂದ ಮತ್ತೊಮ್ಮೆ‌ಉದ್ಘಾಟನೆಗೊಂಡಿತು. ಉದ್ಘಾಟನೆ ಬಳಿಕ ನಡೆದ ಸಭೆಯಲ್ಲಿ ಸಚಿವರು ಮತ್ತು ಅಧಿಕಾರಿಗಳು ಪಾಲ್ಗೊಂಡಿದ್ದರು. ಆದರೆ ಕುತೂಹಲದ ಸಂಗತಿಯೆಂದರೆ, ಎರಡನೆ ಬಾರಿಯ ಉದ್ಘಾಟನೆಗೆ ಸ್ಥಳಿಯ ಶಾಸಕ ಟಿ. ವೆಂಕಟರಮಣಯ್ಯ ಗೈರು ಹಾಜರಾದರು. ತಾವೇ ಕಳೆದ ತಿಂಗಳು ಉದ್ಘಾನೆ ಮಾಡಿದ್ದರಿಂದ, ಜೊತೆಗೆ ಸಚಿವರ ಮೇಲೆ ಅಸಮಧಾನದಿಂದ ಶಾಸಕ ವೆಂಕಟರಮಣಯ್ಯ ಇಂದಿನ ಉದ್ಘಾಟನೆ ಕಾರ್ಯಕ್ರಮಕ್ಕೆ ಅಬ್ಸೆಂಟ್​ ಆದರು (Congress Protest).

ಐದನೆ ಬಾರಿಗೆ ಉದ್ಘಾಟನೆ ವಿರೋಧಿಸಿ, ಕಾಂಗ್ರೆಸ್ಸಿಗರಿಂದ ರಸ್ತೆ ಮೇಲೆಯೇ ನಿಂತು ಪ್ರತಿಭಟನೆ:
ನಗರಸಭೆ ಕಟ್ಟಡವನ್ನು ಐದನೆಯ ಬಾರಿಗೆ ಇಂದು ಉದ್ಘಾಟಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರು ಮತ್ತು ಕಾರ್ಯಕರ್ತರು ನಗರಸಭೆ ಕಛೇರಿ ಬಳಿ ಪ್ರತಿಭಟನೆ ನಡೆಸಿದರು. ಅಧಿಕಾರಿಗಳು, ಇಂದು ಉದ್ಘಾಟಿಸಿದ ಸಚಿವರು ಮತ್ತು ಸರ್ಕಾರದ ವಿರುದ್ಧ ಧಿಕ್ಕಾರಗಳನ್ನ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಆ ವೇಳೆ ಉದ್ಘಾಟನಾ ಸ್ಥಳಕ್ಕೆ ಕಾಂಗ್ರೆಸ್ಸಿಗರನ್ನು ಬಿಡದೆ ರಸ್ತೆಯಲ್ಲಿಯೇ ಪ್ರತಿಭಟನಾಕಾರರಿಗೆ ಪೊಲೀಸರು ತಡೆಯೊಡ್ಡಿದರು. ಬ್ಯಾರಿಕೇಡ್​ಗಳನ್ನ ಹಾಕಿ ಪೊಲೀಸರು ಭದ್ರಕೋಟೆ ನಿರ್ಮಿಸಿದ್ದರು. ಆದರೂ ರಸ್ತೆಯ ಮಧ್ಯೆಯೇ ನಿಂತು ಕೈ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಶಿಸ್ತಿನ ಸಿಪಾಯಿಗಳಂತೆ ಆ ಇಬ್ಬರು ಉನ್ನತ ಅಧಿಕಾರಿಗಳು ಮಾತ್ರ ಮಾಸ್ಕ್​ ಹಾಕಿಕೊಂಡಿದ್ದರು!
ಇನ್ನುಇಂದಿನಿಂದ ಸರ್ಕಾರವೇ ಕೊರೊನಾ ನಾಲ್ಕನೆಯ ಅಲೆ ಗುಮ್ಮನ ಭೀತಿಯಿಂದ ಮಾಸ್ಕ್ ಧಾರಣೆಯನ್ನು ಕಡ್ಡಾಯಗೊಳಿಸಿದೆ. ಆದರೆ ಖುದ್ದು ಆರೋಗ್ಯ ಸಚಿವರೆ ಕಡ್ಡಾಯ ಮಾಸ್ಕ್ ರೂಲ್ಸ್ ಅನ್ನುಪೀಸ್ ಪೀಸ್​ ಮಾಡಿದ್ದಾರೆ. ನಗರಸಭೆ ಉದ್ಘಾಟನೆ ವೇದಿಕೆಯಲ್ಲಿ ಯಾರೊಬ್ಬರ ಮೂಗಿನ ಮೇಲೂ ಫೇಸ್​ ಮಾಸ್ಕ್ ಕಂಡುಬರಲಿಲ್ಲ! ದೊಡ್ಡಬಳ್ಳಾಪುರ ನಗರದ ನಗರಸಭೆ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿಆರೋಗ್ಯ ಸಚಿವ ಮತ್ತು ಪೌರಾಡಳಿತ ಸಚಿವರಿಬ್ಬರೂ ರೂಲ್ಸ್ ಬ್ರೇಕ್ ಮಾಡಿದ್ದು, ಜನರ ಬಾಯಿಗೆ ಆಹಾರವಾದರು. ಇನ್ನು, ಯಥಾ ರಾಜ ತಥಾ ಪ್ರಜೆ ಎಂಬಂತೆ ಸಚಿವರ ಜೊತೆಗೆ ಅಧಿಕಾರಿಗಳು ತ್ತು ಸ್ಥಳೀಯ ಜನಪ್ರತಿನಿಧಿಗಳೂ ಸಹ ಮಾಸ್ಕ್​ ರೂಲ್ಸ್ ಗೆ ಡೋಂಟ್​ ಕೇರ್​ ಅಂದರು. ಗುಂಪು ಗುಂಪಾಗಿ ಜನ ಸೇರಿದ್ದರೂ ಒಬ್ರೂ ಮಾಸ್ಕ್ ಧರಿಸದೆ ದಿವ್ಯ ನಿರ್ಲಕ್ಷ್ಯ ವಹಿಸಿದರು! ಗಮನಾರ್ಹವೆಂದರೆ ವೇದಿಕೆಯ ಮೇಲೆ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಇಬ್ಬರು ಮಾತ್ರ ಶಿಸ್ತಿನ ಸಿಪಾಯಿಗಳಂತೆ, ಕೊರೊನಾಗೆ ಅಂಜಿ ಮಾಸ್ಕ್ ಹಾಕಿ ರೂಲ್ಸ್ ಫಾಲೋ ಮಾಡಿ ಸೈ ಅನ್ನಿಸಿಕೊಂಡರು.

ಅಂತೂ 5ನೆಯ ಬಾರಿಗೆ ದೊಡ್ಡಬಳ್ಳಾಪುರ ನಗರ ಸಭೆ ಉದ್ಘಾಟನೆ ಮುಗಿಸಿದ ಸಚಿವ ಡಾ. ಸುಧಾಕರ್​ ಅವರು ಟ್ವೀಟ್​ ಮಾಡಿ, ತಮ್ಮ ಸಂತಸ ಹಂಚಿಕೊಂಡರು. ಡಾ. ಸುಧಾಕರ್ ಟ್ವೀಟ್​ ಸಾರಾಂಶ ಹೀಗಿದೆ:
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ನಗರಸಭೆಯ ಕಟ್ಟಡವನ್ನು ಉದ್ಘಾಟಿಸಿ ನಗರಸಭೆಯ ಪೌರಕಾರ್ಮಿಕರಿಗೆ ನಿರ್ಮಿಸಲು ಉದ್ದೇಶಿಸಿರುವ ಜಿ+2 ಮಾದರಿ ಮನೆಗಳ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಾಯಿತು. ಸಚಿವ ಶ್ರೀ @MtbNagaraju, ಸ್ಥಳೀಯ ಮುಖಂಡರು, ಅಧಿಕಾರಿಗಳು ಉಪಸ್ಥಿತರಿದ್ದರು.

TV9 Kannada


Leave a Reply

Your email address will not be published.