ಒಂದೆಡೆ ಭಾರತದಲ್ಲಿ ಉತ್ಪಾದನೆಯಾಗುತ್ತಿರೋ ವ್ಯಾಕ್ಸಿನ್​ಗಳ ವೇಗ ಹೆಚ್ಚುತ್ತಿಲ್ಲ ಇನ್ನೊಂದೆಡೆ ಸ್ಫುಟ್ನಿಕ್ ವ್ಯಾಕ್ಸಿನ್​ಗೆ ಅನುಮತಿ ಸಿಕ್ಕಿದ್ದರೂ ಸಹ ಅದು ಜನಸಾಮಾನ್ಯರಿಗೆ ದಕ್ಕುತ್ತಿಲ್ಲ. ಇಂಥ ವೇಳೆಯಲ್ಲಿ ಫೈಜರ್ ಸಂಸ್ಥೆ ವ್ಯಾಕ್ಸಿನ್ ಪೂರೈಕೆಗೆ ಸಿದ್ಧ ಅಂತಾ ಹೇಳ್ತಾ ಇದೆಯಾದ್ರೂ, ಅದು ಒಡ್ಡುತ್ತಿರುವ ಷರತ್ತುಗಳು ಮಾತ್ರ ಒಪ್ಪಿಕೊಳ್ಳುವಂತಿಲ್ಲ.

ಇವತ್ತು ವಿಶ್ವ ಕೊರೊನಾ ವಿರುದ್ಧ ನಿಲ್ಲೋಕೆ ಸಾಧ್ಯವಾಗ್ತಿದೆ ಅಂದ್ರೆ ಅದಕ್ಕೆ ಕಾರಣ ಭಾರತದ ವ್ಯಾಕ್ಸಿನ್ ಅಂತಾ ವಿಶ್ವಸಂಸ್ಥೆಯೇ ಹೇಳಿತ್ತು. ವಿಶ್ವದ ಸೋ ಕಾಲ್ಡ್​ ಮುಂದುವರೆದ ದೇಶಗಳು ವ್ಯಾಕ್ಸಿನ್​ ಬಚ್ಚಿಟ್ಟುಕೊಂಡಿದ್ದರೆ, ಭಾರತ ಬರೋಬ್ಬರಿ 62 ದೇಶಗಳಿಗೆ ವ್ಯಾಕ್ಸಿನ್ ಪೂರೈಕೆ ಮಾಡಿತ್ತು. ಬರೋಬ್ಬರಿ 6 ಕೋಟಿಗೂ ಅಧಿಕ ಡೋಸ್​ನಷ್ಟು ವ್ಯಾಕ್ಸಿನ್​ಗಳನ್ನು ಸಾಗರದಾಚೆ ದಾಟಿಸಿತ್ತು. ಎಷ್ಟೋ ಚಿಕ್ಕ ಪುಟ್ಟ ದೇಶಗಳು, ಅಭಿವೃದ್ಧಿಶೀಲ ರಾಷ್ಟ್ರಗಳ ಜನ ಜೀವ ಉಳಿದುಕೊಳ್ಳಲು ಭಾರತ ವ್ಯಾಕ್ಸಿನ್ ಮೈತ್ರಿ ಹೆಸರಿನಲ್ಲಿ ವ್ಯಾಕ್ಸಿನ್ ಪೂರೈಸಿತ್ತು. ಆದ್ರೆ ವಿಶ್ವಕ್ಕೇ ಅಮೃತ ನೀಡಿದ ಭಾರತಕ್ಕೆ ಷರತ್ತು ವಿಧಿಸಲಾಗ್ತಿದೆ. ಕೇವಲ 5 ಕೋಟಿ ಡೋಸ್​ ವ್ಯಾಕ್ಸಿನ್​ಗಾಗಿ ಒಪ್ಪಿಕೊಳ್ಳಲಾಗದಂಥ ಷರತ್ತನ್ನು ಫೈಜರ್ ವಿಧಿಸುತ್ತಿದೆ. ವಿಶ್ವಕ್ಕೇ ಕೈ ತುತ್ತು ನೀಡಿದ್ದ ಭಾರತಕ್ಕೆ, ನಾಲ್ಕು ಕಾಸಿನ ಮಜ್ಜಿಗೆ ನೀಡಲೂ ಮೀನಮೇಷ ಎಣಿಸಲಾಗ್ತಿದೆ. ಆದ್ರೆ ಭಾರತ ನಿಲ್ಲೋದಿಲ್ಲ.

ಹೌದು.. ಫೈಜರ್ ಸಂಸ್ಥೆ ಈಗ ಭಾರತಕ್ಕೆ ವ್ಯಾಕ್ಸಿನ್ ಕೊಡುತ್ತೇವೆ ಅಂತಾ ಮತ್ತೆ ಮುಂದೆ ಬಂದಿದೆ. ಆದ್ರೆ, ನೀಡುವ ಮುಖವಾಡದ ಹಿಂದೆ ಅವಕಾಶವಾದಿತನವನ್ನು ಬಚ್ಚಿಟ್ಟುಕೊಂಡಂತೆ. ಲಸಿಕೆ ನೀಡಲು ಫೈಜರ್ ಷರತ್ತುಗಳ ಮೇಲೆ ಷರತ್ತು ವಿಧಿಸುತ್ತಿದೆ.

ಭಾರತಕ್ಕೆ 2021ರಲ್ಲಿಯೇ ಬರೋಬ್ಬರಿ 5 ಕೋಟಿ ಡೋಸ್​ನಷ್ಟು ವ್ಯಾಕ್ಸಿನ್ ನೀಡೋದಾಗಿ ಅಮೆರಿಕಾದ ಫಾರ್ಮಾ ದೈತ್ಯ ಫೈಜರ್ ಹೇಳಿದೆ. ಈ ಸಂಸ್ಥೆ ಈಗಾಗಲೇ ವಿಶ್ವಾದ್ಯಂತ ಸುಮಾರು 14.7 ಕೋಟಿ ಡೋಸ್​ನಷ್ಟು ವ್ಯಾಕ್ಸಿನ್ ನೀಡಿದೆ. ಅಮೆರಿಕಾದ ಫೈಜರ್ ಹಾಗೂ ಜರ್ಮನಿಯ ಬಯೋ-ಎನ್​ಟೆಕ್ ಸಂಸ್ಥೆಗಳು ಅಭಿವೃದ್ಧಿಪಡಿಸಿರುವ ಈ ಎಂಆರ್​ಎನ್​ಎ ವ್ಯಾಕ್ಸಿನ್​ಗೆ ವಿಶ್ವಾದ್ಯಂತ ಬೇಡಿಕೆ ಇದೆ. ಈಗಾಗಲೇ ಅಮೆರಿಕಾ, ಇಂಗ್ಲೆಂಡ್, ಕೆನಡಾ ಮುಂತಾದ ದೇಶಗಳಲ್ಲಿ ಈ ವ್ಯಾಕ್ಸಿನ್ ಬಳಕೆ ಮಾಡಲಾಗ್ತಿದೆ. ಇನ್ನೊಂದು ಕಡೆ ನೋಡಿದ್ರೆ ಕಳೆದ ಡಿಸೆಂಬರ್​ನಲ್ಲಿ ಎಮರ್ಜೆನ್ಸಿ ಅನುಮತಿ ಕೋರಿ ಭಾರತದಲ್ಲಿ ಫೈಜರ್ ಸಂಸ್ಥೆ ಮೊದಲಿಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಕ್ಕೆ ಅರ್ಜಿ ಸಲ್ಲಿಸಿತ್ತು. ಹಾಗಿದ್ದು ಇಂದಿಗೂ ಫೈಜರ್ ವ್ಯಾಕ್ಸಿನ್ ಭಾರತಕ್ಕೆ ಎಂಟ್ರಿಯಾಗಲು ಸಾಧ್ಯವಾಗಿಲ್ಲ. ಆದ್ರೆ ಈಗ ಮತ್ತೆ ಭಾರತ ಸರ್ಕಾರದ ಕದ ತಟ್ಟಿದೆ.

ಕದ ತಟ್ಟಿದ್ರೂ ಕಂಡೀಷನ್ಸ್ ಎಂದ ಫೈಜರ್
ಹೌದು.. ಮತ್ತೆ ಕೇಂದ್ರ ಸರ್ಕಾರದ ಕದ ತಟ್ಟಿರೋ ಫೈಜರ್ ಸಂಸ್ಥೆ, 2021ರಲ್ಲಿಯೇ 5 ಕೋಟಿ ಡೋಸ್​ ನಷ್ಟು ವ್ಯಾಕ್ಸಿನ್ ಪೂರೈಕೆ ಮಾಡೋದಾಗಿ ತಿಳಿಸಿದೆ. ಸದ್ಯದ ಮಟ್ಟಿಗೆ ಭಾರತ ವ್ಯಾಕ್ಸಿನ್ ವಿಷಯದಲ್ಲಿ ಅತೀವ ಅಭಾವ ಎದುರಿಸುತ್ತಿರೋದನ್ನ ಮನಗಂಡಿರುವ ಫೈಜರ್, ಇದೇ ವರ್ಷ ನಿಮಗೆ ನಾವು 5 ಕೋಟಿ ಡೋಸ್​ನಷ್ಟು ಫೈಜರ್ ವ್ಯಾಕ್ಸಿನ್ ಕೊಡ್ತೀವಿ ಎಂದಿದೆ.

ಜುಲೈನಲ್ಲಿ 1 ಕೋಟಿ, ಅಗಸ್ಟ್​ನಲ್ಲಿ 1 ಕೋಟಿ
ಸೆಪ್ಟಂಬರ್​ನಲ್ಲಿ 2 ಕೋಟಿ, ಅಕ್ಟೋಬರ್​ನಲ್ಲಿ 1 ಕೋಟಿ

ಅದೂ ಕೂಡ ಜುಲೈ ತಿಂಗಳಿನಲ್ಲಿಯೇ 1 ಕೋಟಿ ಡೋಸ್​, ಅಗಸ್ಟ್​ನಲ್ಲಿ 1 ಕೋಟಿ ಡೋಸ್, ಸೆಪ್ಟಂಬರ್​ನಲ್ಲಿ 2 ಕೋಟಿ ಹಾಗೂ ಅಕ್ಟೋಬರ್​ನಲ್ಲಿ 1 ಕೋಟಿ ಡೋಸ್​ ನೀಡಲು ನಾವು ಸಕ್ಷಮವಾಗಿದ್ದೇವೆ ಅಂತಾ ಫೈಜರ್ ಸಂಸ್ಥೆ ಹೇಳಿಕೆ ನೀಡಿದೆ. ಆದ್ರೆ, ಹೀಗೆ ವ್ಯಾಕ್ಸಿನ್ ನೀಡಬೇಕಾದ್ರೆ ನೀವು ನಮ್ಮ ಕಂಡೀಷನ್ಸ್​ಗೆ ಒಪ್ಪಿಗೆ ನೀಡಬೇಕು ಅನ್ನೋ ದಾಳವನ್ನೂ ಉರುಳಿಸಿದೆ.

ಈಗಾಗಲೇ 116 ದೇಶಗಳಲ್ಲಿ ಫೈಜರ್ ಸಂಸ್ಥೆ ಕಾನೂನು-ಕಟ್ಟಳೆಯಿಂದ ಆಯಾ ದೇಶಗಳ ಸರ್ಕಾರದಿಂದ ಇಮ್ಯುನಿಟಿ ಪಡೆದಿದೆ. ಅದರಂತೆಯೇ ಭಾರತದಲ್ಲಿಯೂ ನಮಗೆ ಕಾನೂನು-ಕಟ್ಟಳೆಯಿಂದ ಸುರಕ್ಷೆ ನೀಡಬೇಕು ಅಂತಾ ಫೈಜರ್ ಹೇಳಿದೆ. ಅಂದ್ರೆ ಒಂದು ವೇಳೆ ನಾಳೆ ಏನಾದ್ರೂ ಫೈಜರ್ ವ್ಯಾಕ್ಸಿನ್ ಕಾರಣದಿಂದಾಗಿ ಯಾರಿಗಾದ್ರೂ ತೊಂದ್ರೆ ಆದ್ರೆ, ಅಂಥವರು ಆ ಸಂಸ್ಥೆ ಮೇಲೆ ಕೇಸ್ ದಾಖಲಿಸಲು ಸಾಧ್ಯವಿಲ್ಲ. ಅಷ್ಟು ಮಾತ್ರವಲ್ಲ ಏನೇ ಪರಿಹಾರ ನೀಡಬೇಕಿದ್ರೆ ಆ ದೇಶಗಳ ಸರ್ಕಾರವೇ ನೀಡಬೇಕೇ ಹೊರತು, ಫೈಜರ್ ಸಂಸ್ಥೆಯಲ್ಲ.

Image credit: pfizer

ಇಷ್ಟು ಮಾತ್ರವಲ್ಲ ಭಾರತದಲ್ಲಿ ಯಾವುದೇ ವ್ಯಾಕ್ಸಿನ್ ನೀಡಬೇಕು ಅಂದ್ರೂ ನಮ್ಮ ದೇಶದಲ್ಲಿ ಬ್ರಿಡ್ಜ್ ಸ್ಟಡಿ ನಡೆಸಬೇಕಾಗುತ್ತೆ. ಅಂದ್ರೆ ಈಗಿನ ನಿಯಮದಂತೆ ಕನಿಷ್ಠ 100 ಜನರಿಗೆ ವ್ಯಾಕ್ಸಿನ್ ನೀಡಿ 7 ದಿನಗಳ ಕಾಲ ಅವರ ಮೇಲೆ ನಿಗಾ ಇರಿಸಲಾಗುತ್ತೆ. ವ್ಯಾಕ್ಸಿನ್ ಪಡೆದವರಿಗೆ ಯಾವುದೇ ತೊಂದರೆ ಆಗಿಲ್ಲ ಅಂದ್ರೆ ಮಾತ್ರ ಉಳಿದವರಿಗೆ ವ್ಯಾಕ್ಸಿನ್ ನೀಡಲಾಗುತ್ತೆ. ಜೊತೆಗೆ, ದೇಶಿ ಸಂಸ್ಥೆಯೊಂದರ ಜೊತೆ ಒಪ್ಪಂದ ಮಾಡಿಕೊಂಡು ಆ ಮೂಲಕ ಇಂಥ ವಿದೇಶಿ ಸಂಸ್ಥೆಗಳು ಬ್ರಿಡ್ಜ್ ಸ್ಟಡಿ ಮಾಡುವುದು ಮತ್ತು ವ್ಯಾಕ್ಸಿನ್ ಪೂರೈಕೆಯನ್ನ ಮಾಡಬಹುದು. ಈಗ ಲೇಟೆಸ್ಟ್ ಉದಾಹರಣೆ ಅಂದ್ರೆ ರಷ್ಯಾದ ಸ್ಫುಟ್ನಿಕ್ ಸಂಸ್ಥೆ ಡಾ. ರೆಡ್ಡೀಸ್ ಲ್ಯಾಬೊರೇಟರಿ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಆ ಮೂಲಕ ಸವಿವರವಾದ ಬ್ರಿಡ್ಜ್ ಸ್ಟಡಿ ಮಾಡಿತು. ಜೊತೆಗೆ ಈಗ ಭಾರತದಲ್ಲಿ ಲಸಿಕೆ ತುರ್ತು ಬಳಕೆಗೆ ಅನುಮತಿಯನ್ನೂ ಪಡೆದಕೊಂಡಿದೆ.

ಆದ್ರೆ ಈ ವಿಷಯದಲ್ಲೂ ಫೈಜರ್ ವ್ಯಾಕ್ಸಿನ್ ತಗಾದೆ ತೆಗೆದಿದೆ ಎನ್ನಲಾಗಿದೆ. ತಮಗೆ ಈ ನಿಯಮದಿಂದಲೂ ವಿನಾಯಿತಿ ಬೇಕು ಎಂದು ಕೇಳಿದೆ ಎನ್ನಲಾಗ್ತಿದೆ. ಜೊತೆಗೆ, ಅಡ್ವಾನ್ಸ್​​ ಪೇಮೆಂಟ್​​​ ಕೂಡ ಮಾಡಬೇಕು ಮತ್ತು ಆರ್ಡರ್ ಕೂಡ ನೀಡಬೇಕು ಅಂತಾ ಬೇಡಿಕೆ ಇಟ್ಟಿದೆ ಎನ್ನಲಾಗಿದೆ.

ಫೈಜರ್​ ವ್ಯಾಕ್ಸಿನ್​ ಸ್ಟೋರೇಜ್​ದೂ ಇತ್ತು ಟೆನ್ಷನ್
ಮ್ಯೂಟಂಟ್ ವಿರುದ್ಧ ಹೋರಾಡುತ್ತಾ ವ್ಯಾಕ್ಸಿನ್

ಈ ಹಿಂದೆ ಫೈಜರ್ ವ್ಯಾಕ್ಸಿನ್ ಭಾರತದಲ್ಲಿ ಎಮರ್ಜನ್ಸಿ ಅನುಮತಿ ಕೋರಿ ಅಎ್ಜಿ ಸಲ್ಲಿಸಿದ್ದಾಗ.. ಅದು ಒಡ್ಡಿದ್ದ ಷರತ್ತು ಒಂದೆಡೆ ತಡೆಯೊಡ್ಡಿದ್ದರೆ, ಲಸಿಕೆಯನ್ನ ಶೇಖರಿಸಬೇಕಾದ ರೀತಿ ಕೂಡ ಸಾಕಷ್ಟು ತೊಂದರೆಯನ್ನುಂಟು ಮಾಡಿತ್ತು. ಯಾಕಂದ್ರೆ ಫೈಜರ್ ವ್ಯಾಕ್ಸಿನ್ ಅನ್ನ ಬರೋಬ್ಬರಿ ಮೈನಸ್ 70 ಡಿಗ್ರೀ ಸೆಲ್ಸಿಯಸ್​ನಲ್ಲಿ ಶೇಖರಿಸಬೇಕಿತ್ತು. ಆದ್ರೆ ಇದಕ್ಕೆ ಈಗ ಫೈಜರ್ ಸ್ಪಷ್ಟನೆಯನ್ನ ಕೊಟ್ಟಿದೆ, ಫೈಜರ್ ಹೇಳುವಂತೆ ಈ ವ್ಯಾಕ್ಸಿನ್ ಅನ್ನ ಮೈನಸ್ 25 ಡಿಗ್ರಿ ಉಷ್ಣಾಂಶದಲ್ಲಿ ಶೇಖರಿಸಬಹುದಾಗಿದೆ. ಅಲ್ಲದೇ 5 ದಿನಗಳ ಮಟ್ಟಿಗೆ ಇದನ್ನು ಸಾಮಾನ್ಯ ರೆಫ್ರಿಜರೇಟರ್​ನಲ್ಲಿ ಕೂಡ ಸಂಗ್ರಹಿಸಡಬಹುದಾಗಿದೆಯಂತೆ. ಹೀಗಾಗಿ.. ಇದರ ಶೇಖರಣೆ ಚಿಂತೆಯಂತೂ ಈಗ ಇಲ್ಲ..

ಇನ್ನು ಈ ವ್ಯಾಕ್ಸಿನ್ ಎಷ್ಟು ಪರಿಣಾಮಕಾರಿ? ಅದ್ರಲ್ಲೂ ಮ್ಯೂಟೇಶನ್ ಆಗಿರೋ ಕೊರೊನಾ ವೈರಸ್​ಗೆ ಎಷ್ಟು ಪರಿಣಾಮಕಾರಿ? ಅಂತಾ ನೋಡೋದಾದ್ರೆ.. ಆ ದೃಷ್ಟಿಯಿಂದ ಇದು ಅತ್ಯಂತ ಪರಿಣಾಮಕಾರಿ ಅನ್ನೋದು ತಿಳಿದು ಬರುತ್ತೆ. ಹೌದು.. ಅಮೆರಿಕಾದ ಫೈಜರ್​ ವ್ಯಾಕ್ಸಿನ್ ಭಾರತದಲ್ಲಿ ಮೊದಲ ಬಾರಿ ಕಂಡು ಬಂದ​ B.1.617.2 ಹೆಸರಿನ  ರೂಪಾಂತರಿ ವಿರುದ್ಧ ಶೇ.88ರಷ್ಟು ಪರಿಣಾಮಕಾರಿಯಾಗಿದ್ರೆ, ಇಂಗ್ಲೆಂಡ್​ನಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡ B.1.1.7 ಹೆಸರಿನ  ರೂಪಾಂತರಿ ವಿರುದ್ಧ ಶೇ.93 ರಷ್ಟು ಪರಿಣಾಮಕಾರಿಯಾಗಿರೋದು ತಿಳಿದು ಬಂದಿದೆ.

Image Source:
Pfizer/facebook

ಹೀಗಾಗಿ ಸದ್ಯ ಫೈಜರ್ ವ್ಯಾಕ್ಸಿನ್ ಬಗ್ಗೆ ದೇಶದಲ್ಲೂ ಸಾಕಷ್ಟು ಜನರಲ್ಲಿ ನಿರೀಕ್ಷೆಗಳಿವೆ. ಹಾಗಂತ ದೇಶದ ಕಾನೂನು ಮತ್ತು ಸಾರ್ವಭೌಮತೆಗೆ ಧಕ್ಕೆ ತರುವಂಥ ಒಪ್ಪಂದ ಮಾಡಿಕೊಂಡು ಈ ವ್ಯಾಕ್ಸಿನ್ ತರಿಸೋದು ಕೂಡ ಸರಿಯಲ್ಲ.

ಒಟ್ಟಿನಲ್ಲಿ ಫೈಜರ್​ನಂಥ ಕಂಪನಿಗಳು ಪರಿಣಾಮಕಾರಿ ವ್ಯಾಕ್ಸಿನ್ ತಯಾರಿಸಿದ್ರೂ ತಮ್ಮ ಸ್ವಾರ್ಥದ ನಡೆಯ ಕಾರಣದಿಂದಾಗಿ ವಿಶ್ವಾದ್ಯಂತ ಸಾಕಷ್ಟು ಜನರಿಗೆ ವ್ಯಾಕ್ಸಿನ್ ದೊರಕದಿರುವಂತೆ ಮಾಡುತ್ತಿರೋದು ಸುಳ್ಳಲ್ಲ. ಒಂದು ಕಡೆ ಚೀನಾ ವೈರಸ್​ ಅನ್ನ ವಿಶ್ವಕ್ಕೆ ಗಿಫ್ಟ್​ ನೀಡಿದ್ರೆ, ಅದನ್ನ ತಡೆಗಟ್ಟೋ ವ್ಯಾಕ್ಸಿನ್​​​ ಸಿಗದಂತೆ ಮಾಡುತ್ತಾ ಕೆಲ ದೇಶಗಳು ಹಾಗೂ ಕಂಪನಿಗಳು ಜನರಿಗೆ ಸೋಂಕಿನ ಗಿಫ್ಟ್​ ನೀಡುತ್ತಿರೋದು ಮಾತ್ರ ಅನ್ಯಾಯವೇ ಸರಿ.

ವಿಶೇಷ ವರದಿ: ರಾಘವೇಂದ್ರ ಗುಡಿ, ಡಿಜಿಟಲ್ ಡೆಸ್ಕ್

The post ‘5 ಕೋಟಿ ವ್ಯಾಕ್ಸಿನ್ ಕೊಡ್ತೀವಿ’ ಎಂದ ಫೈಜರ್​ನಿಂದ ಷರತ್ತುಗಳ ಸರಮಾಲೆ.. ಒಪ್ಪುತ್ತಾ ಭಾರತ? appeared first on News First Kannada.

Source: newsfirstlive.com

Source link