5 Years Of Demonetisation: ನೋಟು ನಿಷೇಧದ 5 ವರ್ಷಗಳ ನಂತರವೂ ಸಾರ್ವಜನಿಕರ ಮಧ್ಯೆ ನಗದು ವಹಿವಾಟಿಗೇ ಆದ್ಯತೆ | 5 Years Of Demonetisation Cash With Public Rising To Record High Here Is The Details


5 Years Of Demonetisation: ನೋಟು ನಿಷೇಧದ 5 ವರ್ಷಗಳ ನಂತರವೂ ಸಾರ್ವಜನಿಕರ ಮಧ್ಯೆ ನಗದು ವಹಿವಾಟಿಗೇ ಆದ್ಯತೆ

ಸಾಂದರ್ಭಿಕ ಚಿತ್ರ

ಇನ್ನು ಮೂರು ದಿನ ಕಳೆದರೆ ನೋಟು ನಿಷೇಧಕ್ಕೆ 5 ವರ್ಷದ “ಸಂಭ್ರಮ”. ಆದರೆ ನವೆಂಬರ್ 8, 2016ರಂದು ಯಾವ ಉದ್ದೇಶಕ್ಕೆ ಈ ನಿರ್ಧಾರ ಕೈಗೊಳ್ಳಲಾಯಿತೋ ಆ ಪೈಕಿ ಪ್ರಮುಖವಾದದ್ದೊಂದು ಈಡೇರಲೇ ಇಲ್ಲ ಎಂಬುದು ಅಂಕಿ- ಅಂಶಗಳ ಮೂಲಕ ಸ್ಪಷ್ಟವಾಗುತ್ತದೆ. ಅದೇನು ಅಂತೀರಾ? ಅಕ್ಟೋಬರ್ 8, 2021ಕ್ಕೆ ಕೊನೆಗೊಂಡ ಪಾಕ್ಷಿಕಕ್ಕೆ 28.30 ಲಕ್ಷ ಕೋಟಿ ರೂಪಾಯಿ ಸಾರ್ವಜನಿಕವಾಗಿ ಹಣ ಚಲಾವಣೆಯಲ್ಲಿ ಇರುವುದರೊಂದಿಗೆ ಪಾವತಿಗೆ ಇವತ್ತಿಗೂ ನಗದು ಆದ್ಯತೆಯಾಗಿದೆ ಎಂಬುದು ಸಾಬೀತಾಗಿದೆ. ನಿಮಗೆ ಗೊತ್ತಿರಲಿ, ನವೆಂಬರ್ 4, 2016ರಲ್ಲಿ ಚಲಾವಣೆಯಲ್ಲಿ ಇದ್ದ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ. ಅಲ್ಲಿಂದ ಶೇ 57.48 ಅಥವಾ 10.33 ಲಕ್ಷ ಕೋಟಿ ರೂಪಾಯಿ ಚಲಾವಣೆ ಹೆಚ್ಚಾಗಿದೆ. ಇನ್ನು ನವೆಂಬರ್ 25, 2016ರಂದು ಸಾರ್ವಜನಿಕರ ಬಳಿ ಇದ್ದ 9.11 ಲಕ್ಷ ಕೋಟಿ ರೂಪಾಯಿಯ ನಗದು ಮೊತ್ತಕ್ಕೆ ಹೋಲಿಸಿದರೆ ಶೇ 211ರಷ್ಟು ಹೆಚ್ಚಳವಾಗಿದೆ.

ಸಾರ್ವಜನಿಕರ ಬಳಿ ಇದ್ದ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ
ಅಕ್ಟೋಬರ್ 23, 2020ರಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡೇಟಾವೊಂದನ್ನು ಬಿಡುಗಡೆ ಮಾಡಿತ್ತು. ಅದರ ಪ್ರಕಾರ, ದೀಪಾವಳಿ ಹಬ್ಬದ ಮುನ್ನ ಸಾರ್ವಜನಿಕರ ಬಳಿ ಇದ್ದ ನಗದು 15,582 ಕೋಟಿ ರೂಪಾಯಿ ಜಾಸ್ತಿ ಆಗಿತ್ತು. ವರ್ಷದಿಂದ ವರ್ಷಕ್ಕೆ ಅಂತ ನೋಡುವುದಾದರೆ 2.21 ಲಕ್ಷ ಕೋಟಿ ರೂಪಾಯಿ ಅಥವಾ ಶೇ 8.5ರಷ್ಟು ಹೆಚ್ಚಳವಾಗಿತ್ತು. ನವೆಂಬರ್ 8, 2016ರಂದು 500, 1000 ರೂಪಾಯಿಯ ನಿಷೇಧ ಮಾಡಲಾಯಿತು. ಅದಕ್ಕೆ ನಾಲ್ಕು ದಿನದ ಮುಂಚೆ, ಅಂದರೆ ನವೆಂಬರ್ 4, 2016ರಂದು ಸಾರ್ವಜನಿಕರ ಬಳಿ ಇದ್ದ ನಗದು ಪ್ರಮಾಣ 17.97 ಲಕ್ಷ ಕೋಟಿ ರೂಪಾಯಿ. ಆ ಮೊತ್ತವು 2017ರ ಜನವರಿಗೆ 7.8 ಲಕ್ಷ ಕೋಟಿ ರೂಪಾಯಿಗೆ ಕುಸಿಯಿತು. “ಕಡಿಮೆ ನಗದು ಹೊಂದಿರುವ ಸಮಾಜ”ದ ಕಡೆಗೆ ಸಾಗಲು ಸರ್ಕಾರ ಮತ್ತು ಆರ್​ಬಿಐ ಬಹಳ ಒತ್ತು ನೀಡುತ್ತಿದೆ. ಅದಕ್ಕಾಗಿ ಪಾವತಿಯ ಡಿಜಿಟೈಸೇಷನ್ ಮತ್ತು ವಿವಿಧ ವಹಿವಾಟುಗಳಿಗೆ ನಗದು ಬಳಕೆ ಮಾಡುವುದರ ಮೇಲೆ ನಿರ್ಬಂಧ ಹೇರಲಾಗಿದೆ.

ಹೀಗೆ ನಗದು ಬೇಡಿಕೆ ಹೆಚ್ಚಾಗಲು ಕಾರಣ ಏನು ಅಂತ ನೋಡುವುದಾದರೆ, 2020ರಲ್ಲಿ ದೇಶದಾದ್ಯಂತ ಜಾರಿಗೆ ತಂದ ಕಠಿಣ ಕೊರೊನಾ ನಿರ್ಬಂಧದ ಕಡೆಗೆ ಕೈ ಮಾಡಲಾಗುತ್ತದೆ. ವಿಶ್ವದ ನಾನಾ ಕಡೆಗೆ ಫೆಬ್ರವರಿಯಲ್ಲಿ ಲಾಕ್​ಡೌನ್ ಘೋಷಿಸಲಾಯಿತು. ಭಾರತ ಸರ್ಕಾರ ಕೂಡ ಲಾಕ್​ಡೌನ್ ಘೋಷಿಸುವುದಕ್ಕೆ ಸಿದ್ಧವಾಯಿತು. ಜನರು ತಮ್ಮ ದಿನಸಿ ಮತ್ತಿತರ ಅಗತ್ಯಗಳಿಗಾಗಿ ನಗದು ಸಂಗ್ರಹ ಆರಂಭಿಸಿದರು. ಸಾರ್ವಜನಿಕರ ಬಳಿ ಇರುವ ಕರೆನ್ಸಿ ಎಂಬುದಕ್ಕೆ ಸಂಬಂಧಿಸಿದಂತೆ ಆರ್​ಬಿಐನ ವ್ಯಾಖ್ಯಾನವೊಂದಿದೆ. ಒಟ್ಟಾರೆ ಚಲಾವಣೆಯಲ್ಲಿ ಇರುವ ಕರೆನ್ಸಿಗಳಿಂದ (CIC) ಬ್ಯಾಂಕ್​ಗಳ ಬಳಿ ಇರುವ ನಗದನ್ನು ಕಳೆದರೆ ಉಳಿಯುವುದು ಸಾರ್ವಜನಿಕರ ಬಳಿ ಇರುವ ನಗದು ಎನಿಸುತ್ತದೆ.

ಜಿಡಿಪಿ ಬೆಳವಣಿಗೆ ಹತ್ತಿರಹತ್ತಿರ ಶೇ 1.5ರಷ್ಟು ಕುಸಿಯಿತು
CIC ಅಂದರೆ, ನಗದು ಅಥವಾ ಕರೆನ್ಸಿ ಅದನ್ನು ಒಂದು ದೇಶದೊಳಗೆ ಗ್ರಾಹಕರು ಮತ್ತು ಉದ್ಯಮದ ಮಧ್ಯೆ ವಹಿವಾಟು ನಡೆಸುವುದಕ್ಕೆ ಭೌತಿಕವಾಗಿ ಬಳಸುವಂಥದ್ದು. 2016ರ ನವೆಂಬರ್​ನಲ್ಲಿ ಏಕಾಏಕಿ ನೋಟುಗಳನ್ನು ಹಿಂಪಡೆದಿದ್ದರಿಂದ ಬೇಡಿಕೆ ಕುಸಿಯಿತು. ಉದ್ಯಮಗಳು ಬಿಕ್ಕಟ್ಟು ಎದುರಿಸಿದವು. ಜಿಡಿಪಿ ಬೆಳವಣಿಗೆ ಹತ್ತಿರಹತ್ತಿರ ಶೇ 1.5ರಷ್ಟು ಕುಸಿಯಿತು. ಹಲವು ಸಣ್ಣ ಘಟಕಗಳಿಗೆ ಭರ್ತಿ ಪೆಟ್ಟು ಬಿತ್ತು ಮತ್ತು ಕೆಲವು ಬಾಗಿಲು ಮುಚ್ಚುವಂತಾಯಿತು. ಇದರ ಜತೆಗೆ ನಗದು ಲಭ್ಯತೆಗೆ ಕೊರತೆ ಎದುರಾಯಿತು.

ಪರಿಪೂರ್ಣ ಸಂಖ್ಯೆಯಲ್ಲಿ ಚಲಾವಣೆಯಲ್ಲಿರುವ ಕರೆನ್ಸಿಯು ಏರಿಕೆಯ ವಾಸ್ತವದ ಪ್ರತಿಬಿಂಬವಲ್ಲ. ನೋಟು ನಿಷೇಧದ ನಂತರ ಕಡಿಮೆಯಾದ ಕರೆನ್ಸಿ ಮತ್ತು ಜಿಡಿಪಿ ಅನುಪಾತವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿದೆ ಎಂದು ಬ್ಯಾಂಕರ್​ವೊಬ್ಬರು ಹೇಳುತ್ತಾರೆ. ಸುಮಾರು FY20 ರವರೆಗೆ GDP ಅನುಪಾತಕ್ಕೆ ಚಲಾವಣೆಯಲ್ಲಿರುವ ನಗದು ಶೇಕಡಾ 10ರಿಂದ 12 ರಷ್ಟಿತ್ತು. ಆದರೂ ಕೊವಿಡ್-19 ಸಾಂಕ್ರಾಮಿಕದ ನಂತರ ಮತ್ತು ನಗದು ಸಿಸ್ಟಮ್​ನಲ್ಲಿನ ಬೆಳವಣಿಗೆಯಿಂದಾಗಿ, FY25ರ ವೇಳೆಗೆ CICನಿಂದ GDP ಶೇ 14 ತಲುಪುವ ನಿರೀಕ್ಷೆಯಿದೆ. RBI ಸ್ವಂತ ದೃಷ್ಟಿಕೋನವು CIC ಮತ್ತು ಡಿಜಿಟಲ್ ಪಾವತಿಯ ನಡುವೆ ಕಡಿಮೆ ಅಥವಾ ಯಾವುದೇ ಸಂಬಂಧವಿಲ್ಲ ಎಂದು ಸೂಚಿಸುತ್ತದೆ. CICಯು ನಾಮಿನಲ್ GDPಗೆ ಅನುಗುಣವಾಗಿ ಬೆಳೆಯುತ್ತದೆ.

9.15 ಲಕ್ಷ ಕೋಟಿ ರೂಪಾಯಿ ದಾಟಿಸಿದೆ
ಡಿಜಿಟಲ್ ಪಾವತಿಗಳ RBI ಅಧ್ಯಯನದ ಪ್ರಕಾರ, ಇತ್ತೀಚಿನ ವರ್ಷಗಳಲ್ಲಿ ಡಿಜಿಟಲ್ ಪಾವತಿಗಳು ದೇಶಾದ್ಯಂತ ಮೌಲ್ಯ ಮತ್ತು ಪರಿಮಾಣದ ಪರಿಭಾಷೆಯಲ್ಲಿ ಕ್ರಮೇಣವಾಗಿ ಬೆಳೆಯುತ್ತಿದ್ದರೂ ಅದೇ ಸಮಯದಲ್ಲಿ GDP ಅನುಪಾತಕ್ಕೆ ಚಲಾವಣೆಯಲ್ಲಿರುವ ಕರೆನ್ಸಿ ಒಟ್ಟಾರೆ ಆರ್ಥಿಕ ಬೆಳವಣಿಗೆಗೆ ಅನುಗುಣವಾಗಿ ಹೆಚ್ಚಿದೆ ಎಂದು ಡೇಟಾ ಸೂಚಿಸುತ್ತದೆ. ತಜ್ಞರು ಹೇಳುವಂತೆ, ಭಾರತದಲ್ಲಿ ನಗದು ವಹಿವಾಟಿನ ಪ್ರಬಲ ಮಾಧ್ಯಮವಾಗಿ ಪ್ರಬಲವಾಗಿ ಮತ್ತು ಆದಾಯ ಗುಂಪುಗಳಾದ್ಯಂತ ಮುಂದುವರಿದಿದೆ. FY21ರಲ್ಲಿ CMS ನೆಟ್‌ವರ್ಕ್ ಕಂಪೆನಿಯು ಭರ್ತಿ ಮಾಡುವ 63,000 ಎಟಿಎಂಗಳ ಮೂಲಕ ಮತ್ತು 40,000ಕ್ಕೂ ಹೆಚ್ಚು ರೀಟೇಲ್ ಮತ್ತು ಉದ್ಯಮ ಸರಪಳಿಗಳ ಮೂಲಕ 9.15 ಲಕ್ಷ ಕೋಟಿ ರೂಪಾಯಿ ದಾಟಿಸಿದೆ.

ಹಬ್ಬದ ಋತುವಿನಲ್ಲಿ ಹೆಚ್ಚಿನ ಸಂಖ್ಯೆಯ ವ್ಯಾಪಾರಿಗಳು ಇನ್ನೂ ಎಂಡ್​​ ಟು ಎಂಡ್ ವಹಿವಾಟುಗಳಿಗೆ ನಗದು ಪಾವತಿಯನ್ನು ಅವಲಂಬಿಸಿರುವುದರಿಂದ ನಗದು ಬೇಡಿಕೆಯು ಅಧಿಕವಾಗಿರುತ್ತದೆ. ಸುಮಾರು 15 ಕೋಟಿ ಜನರು ಬ್ಯಾಂಕ್ ಖಾತೆಯನ್ನು ಹೊಂದಿಲ್ಲವಾದ್ದರಿಂದ ನಗದು ವ್ಯವಹಾರದ ಪ್ರಮುಖ ವಿಧಾನವಾಗಿ ಉಳಿದಿದೆ. ಅಲ್ಲದೆ, ಇ-ಕಾಮರ್ಸ್ ವಹಿವಾಟುಗಳಿಗೆ ಟಯರ್ 1 ನಗರಗಳಲ್ಲಿ ಪಾವತಿಗೆ ಬಳಸುವ ಶೇ 50ರ ನಗದು ಪಾವತಿಗೆ ಹೋಲಿಸಿದರೆ ಟಯರ್ 4 ನಗರಗಳಲ್ಲಿ ಶೇ 90ರಷ್ಟು ನಗದು ಬಳಸಲಾಗುತ್ತದೆ.

ಇದನ್ನೂ ಓದಿ: Cash with public: 2021ರ ಮೇ 7ರ ಕೊನೆಗೆ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ ಜನರ ಬಳಿಯ ನಗದು ರೂ. 28.39 ಲಕ್ಷ ಕೋಟಿ

TV9 Kannada


Leave a Reply

Your email address will not be published. Required fields are marked *