5000ಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದ ನರ್ಸ್​ ತನ್ನದೇ ಹೆರಿಗೆ ವೇಳೆ ಸಾವು; ಕೊನೇ ಕ್ಷಣ ನಿಜಕ್ಕೂ ಭೀಕರ | Nurse Who Helped 5,000 Women During Birth dies in her own Delivery in Maharashtra


5000ಕ್ಕೂ ಹೆಚ್ಚು ಮಹಿಳೆಯರಿಗೆ ಹೆರಿಗೆ ಮಾಡಿಸಿದ್ದ ನರ್ಸ್​ ತನ್ನದೇ ಹೆರಿಗೆ ವೇಳೆ ಸಾವು; ಕೊನೇ ಕ್ಷಣ ನಿಜಕ್ಕೂ ಭೀಕರ

ಪ್ರಾತಿನಿಧಿಕ ಚಿತ್ರ

ಸುಮಾರು 5000 ಮಹಿಳೆಯ ಹೆರಿಗೆ ಮಾಡಿಸಿದ್ದ ನರ್ಸ್​​ ತಮ್ಮ ಹೆರಿಗೆಯಲ್ಲಿ ಜೀವ ಕಳೆದುಕೊಂಡ ದುರದೃಷ್ಟಕರ ಘಟನೆ ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ನಡೆದಿದೆ. ಜ್ಯೋತಿ ಗಾವ್ಲಿ (38) ಮೃತರು​​. ಇವರು ಸರ್ಕಾರಿ ಆಸ್ಪತ್ರೆಯೊಂದರಲ್ಲಿ ನರ್ಸ್​ ಆಗಿ ಕೆಲಸ ಮಾಡುತ್ತಿದ್ದರು. ತಮ್ಮ ಸೇವಾವಧಿ ಪ್ರಾರಂಭದಿಂದ ಇಲ್ಲಿಯವರೆಗೆ ಸುಮಾರು 5000 ಮಹಿಳೆಯರಿಗೆ ಹೆರಿಗೆ (ಸಹಜ ಮತ್ತು ಸಿಸೇರಿಯನ್​ ಎರಡೂ)  ಯಲ್ಲಿ ಸಹಾಯ ಮಾಡಿದ್ದಾರೆ.  ಅನೇಕರಿಗೆ ತಾವೇ ಮುಂದೆ ನಿಂತು ಯಶಸ್ವಿಯಾಗಿ ಹೆರಿಗೆ ಮಾಡಿಸಿದ್ದಾರೆ. ಆದರೆ ದುರದೃಷ್ಟವೆಂದರೆ ತಾವು ಎರಡನೇ ಮಗುವಿಗೆ ಜನ್ಮ ನೀಡುವ ಸಂದರ್ಭದಲ್ಲಿ ಉಸಿರು ಚೆಲ್ಲಿದ್ದಾರೆ.  

ಜ್ಯೋತಿ ಆಸ್ಪತ್ರೆಯಲ್ಲಿ ಉಳಿದ ಸಿಬ್ಬಂದಿಗೂ ಅಚ್ಚುಮೆಚ್ಚಿನ ನರ್ಸ್ ಆಗಿದ್ದರು. ಹಾಗೇ, ಇಲ್ಲಿಗೆ ಬರುವ ರೋಗಿಗಳ ಪಾಲಿಗೂ ಆಪ್ತರಾಗುತ್ತಿದ್ದರು. ಅವರ ಆರೈಕೆಯನ್ನು ತುಂಬ ಪ್ರೀತಿಯಿಂದ ಮಾಡುತ್ತಿದ್ದರು. ಇವರು ಎರಡನೇ ಬಾರಿಗೆ ಗರ್ಭ ಧರಿಸಿ, ಇತ್ತೀಚೆಗಷ್ಟೇ ಹೆರಿಗೆಯ ದಿನ ಹತ್ತಿರ ಬಂದಿತ್ತು. ಹಾಗಾಗಿ ತಾವು ಕೆಲಸ ಮಾಡುತ್ತಿದ್ದ ಸರ್ಕಾರಿ ಆಸ್ಪತ್ರೆಯಲ್ಲೇ ದಾಖಲಾಗಿದ್ದರು. ಜ್ಯೋತಿಗೆ ಸಹಜ ಹೆರಿಗೆ ಆಗುವ ಸಾಧ್ಯತೆ ಕಡಿಮೆ ಇದ್ದ ಕಾರಣ ಸಿಸೇರಿಯನ್​ ಮೂಲಕ ಮಗುವನ್ನು ತೆಗೆಯಲಾಯಿತು. ಆ ಮಗು ತುಂಬ ಆರೋಗ್ಯವಾಗಿಯೂ ಇತ್ತು. ಆದರೆ ಹೆರಿಗೆಯಾಗುತ್ತಿದ್ದಂತೆ ನರ್ಸ್​ ಆರೋಗ್ಯ ಒಮ್ಮೆಲೇ ಹದಗೆಡಲು ಶುರುವಾಯಿತು. ರಕ್ತಸ್ರಾವವನ್ನು ನಿಲ್ಲಿಸಲು ಸಾಧ್ಯವಾಗಲೇ ಇಲ್ಲ. ಕೂಡಲೇ ಹೆಚ್ಚಿನ ಚಿಕಿತ್ಸೆಗಾಗಿ ಆಕೆಯನ್ನು ನಂದೇಡ್​​ನ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆದರೆ ಅಲ್ಲಿ ಕರೆದುಕೊಂಡು ಹೋದರೂ ಪ್ರಯೋಜನವಾಗದೆ ವಿಪರೀತ ರಕ್ತಸ್ರಾವದಿಂದ ಮೃತಪಟ್ಟಿದ್ದಾರೆ.  ನಂದೇಡ್​​ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯುವ ಹೊತ್ತಿಗೆ ಜ್ಯೋತಿ ಆರೋಗ್ಯ ಅದೆಷ್ಟು ಕ್ಷೀಣಿಸಿತ್ತೆಂದರೆ ಅವರಿಗೆ ಉಸಿರಾಡಲೂ ಸಾಧ್ಯವಾಗುತ್ತಿರಲಿಲ್ಲ. ಅಲ್ಲಿನ ವೈದ್ಯರೂ ಏನೂ ಮಾಡಲಾಗದೆ ಔರಂಗಾಬಾದ್​ಗೆ ಕಳಿಸೋಣ ಎಂದು ಯೋಜನೆ ಹಾಕುತ್ತಿದ್ದಾಗಲೇ ಇತ್ತ ಜ್ಯೋತಿ ಪ್ರಾಣ ಹೋಗಿದೆ.

ಹಿಂಗೋಲಿ ಜಿಲ್ಲೆಯ ಸಿವಿಲ್ ಆಸ್ಪತ್ರೆಯಲ್ಲಿ ಜ್ಯೋತಿ ಕಳೆದ ಎರಡು ವರ್ಷಗಳಿಂದ ಲೇಬರ್​ ರೂಂ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇಲ್ಲಿ ಕೆಲಸ ಮಾಡುವುದಕ್ಕೂ ಮೊದಲು ಎರಡು ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡಿದವರು. ತುಂಬ ಅನುಭವಿ ನರ್ಸ್​. ದಿನಕ್ಕೆ ಏನಿಲ್ಲವೆಂದರೂ ನಮ್ಮ ಆಸ್ಪತ್ರೆಯಲ್ಲಿ 15 ಹೆರಿಗೆ ಮಾಡಿಸುತ್ತಿದ್ದರು. ಗರ್ಭಿಣಿಯಾಗಿದ್ದರೂ 9 ತಿಂಗಳು ತುಂಬುವವರೆಗೂ ಕೆಲಸ ಮಾಡಿದ್ದಾರೆ. ಹೆರಿಗೆ ನಂತರವೇ ರಜೆ ತೆಗೆದುಕೊಳ್ಳಲು ನಿರ್ಧಾರ ಮಾಡಿದ್ದರು ಎಂದು ಸಿವಿಲ್​ ಆಸ್ಪತ್ರೆಯ ರೆಸಿಡೆಂಟ್​ ವೈದ್ಯಕೀಯ ಅಧಿಕಾರಿ ಡಾ. ಗೋಪಾಲ್​ ಕದಮ್​ ಹೇಳಿದ್ದಾರೆ. ಜ್ಯೋತಿ ಗಾವ್ಲಿ ಸಾವಿಗೆ ತೀವ್ರ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ: Photos: ಶಿವಣ್ಣನ ಜತೆ ವಿಶಾಲ್​ ಮಾತುಕತೆ; ಪುನೀತ್​ ಫೋಟೋಗೆ ಹಾರ ಹಾಕಿ ನಮಿಸಿದ ತಮಿಳು ನಟ

TV9 Kannada


Leave a Reply

Your email address will not be published. Required fields are marked *