5,000 ಮೀಟರ್ ರೇಸ್​ನಲ್ಲಿ 30 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆ ಮುರಿದ ಅವಿನಾಶ್; ಹೊಸ ಇತಿಹಾಸ ಸೃಷ್ಟಿ | Avinash Sable makes new national record in 5000 meter race and breaks 30 year old record details inside


5,000 ಮೀಟರ್ ರೇಸ್​ನಲ್ಲಿ 30 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆ ಮುರಿದ ಅವಿನಾಶ್; ಹೊಸ ಇತಿಹಾಸ ಸೃಷ್ಟಿ

ಅವಿನಾಶ್ ಸೇಬಲ್

ಭಾರತದ ಅವಿನಾಶ್ ಸೇಬಲ್ 5,000 ಮೀ ಓಟದಲ್ಲಿ 30 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಅಮೆರಿಕದ ಸ್ಯಾನ್‌ ಜುವಾನ್‌ ಕ್ಯಾಪಿಸ್ಟ್ರಾನೊದಲ್ಲಿ ನಡೆದ ಸೌಂಡ್‌ ರನ್ನಿಂಗ್‌ ಟ್ರ್ಯಾಕ್‌ ಮೀಟ್‌ನಲ್ಲಿ 13:25.65 ಸಮಯದೊಂದಿಗೆ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ ಮಹಾರಾಷ್ಟ್ರದ 27 ವರ್ಷದ ಯುವಕ.

ಭಾರತದ ಅವಿನಾಶ್ ಸೇಬಲ್ (Avinash Sable) 5,000 ಮೀ ಓಟದಲ್ಲಿ 30 ವರ್ಷಗಳ ಹಳೆಯ ದಾಖಲೆಯನ್ನು ಮುರಿದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸಾಮಾನ್ಯ ಕುಟುಂಬದಿಂದ ಬಂದಿರುವ ಅವರು ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಸ್ತುತ ಅವರು 1992 ರಲ್ಲಿ ಬರ್ಮಿಂಗ್‌ಹ್ಯಾಮ್‌ನಲ್ಲಿ ಬಹದ್ದೂರ್ ಪ್ರಸಾದ್​ರಿಂದ ರಚಿಸಲಾಗಿದ್ದ ದಾಖಲೆಯನ್ನು ಮುರಿದಿದ್ದಾರೆ. ಅಮೆರಿಕದ ಸ್ಯಾನ್‌ ಜುವಾನ್‌ ಕ್ಯಾಪಿಸ್ಟ್ರಾನೊದಲ್ಲಿ ನಡೆದ ಸೌಂಡ್‌ ರನ್ನಿಂಗ್‌ ಟ್ರ್ಯಾಕ್‌ ಮೀಟ್‌ನಲ್ಲಿ 13:25.65 ಅವಧಿಯಲ್ಲಿ ಗುರಿ ತಲುಪಿ ಹೊಸ ರಾಷ್ಟ್ರೀಯ ದಾಖಲೆ ನಿರ್ಮಿಸಿದ್ದಾರೆ ಮಹಾರಾಷ್ಟ್ರದ 27 ವರ್ಷದ ಯುವಕ. ಕಳೆದ 30 ವರ್ಷಗಳ ಹಿಂದೆ ಅಂದರೆ ಜೂನ್ 1992 ರಲ್ಲಿ ಬಹದ್ದೂರ್ ಪ್ರಸಾದ್ 13:29.70 ನಿಮಿಷದಲ್ಲಿ ಗುರಿ ತಲುಪಿ ದಾಖಲೆ ಬರೆದಿದ್ದರು. ಅದನ್ನು ಭಾರತದ ಯಾವ ಅಥ್ಲೀಟ್​ಗಳೂ ಮುರಿದಿರಲಿಲ್ಲ. ಇದೀಗ ಅದನ್ನು ಅವಿನಾಶ್ ಸೇಬಲ್ ಮುರಿದಿದ್ದು, ಹೊಸ ದಾಖಲೆ ನಿರ್ಮಿಸಿದ್ದಾರೆ. ಕ್ರೀಡಾಕೂಟದಲ್ಲಿ ಸೇಬಲ್ 12ನೇ ಸ್ಥಾನ ಪಡೆದಿದ್ದಾರೆ. ಪ್ರಸ್ತುತ ಅವರು ಮುಂಬರುವ ಅಂತರಾಷ್ಟ್ರೀಯ ಸ್ಪರ್ಧೆಗಳಿಗೆ ಅಮೇರಿಕಾದಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ಈ ಕುರಿತು ಎಎನ್​ಐ ಟ್ವೀಟ್:

ಅವಿನಾಶ್ ಸೇಬಲ್ ಯಾರು?

3000 ಮೀಟರ್ ಸ್ಟೀಪಲ್‌ಚೇಸ್‌ನಲ್ಲಿ ರಾಷ್ಟ್ರೀಯ ದಾಖಲೆಯನ್ನು ಹೊಂದಿರುವ ಅವಿನಾಶ್ ಸೇಬಲ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದರು. ಪ್ರಸ್ತುತ ಅಮೇರಿಕನ್ ಮೀಟ್​ನಲ್ಲಿ 13.25 ನಿಮಿಷದಲ್ಲಿ ಗುರಿ ತಲುಪಿದ ಸೇಬಲ್ 12ನೇ ಸ್ಥಾನ ಪಡೆದರು. ಸೌಂಡ್ ರನ್ನಿಂಗ್ ಟ್ರ್ಯಾಕ್ ಮೀಟ್ ವಿಶ್ವ ಆಥ್ಲೆಟಿಕ್ ಸ್ಪರ್ಧೆಗಳಲ್ಲಿ ಪ್ರತಿಷ್ಠಿತ ಕ್ರೀಡಾಕೂಟಗಳಲ್ಲಿ ಒಂದಾಗಿದೆ. ಈ ಸ್ಪರ್ಧೆಯಲ್ಲಿ ಟೋಕಿಯೊ ಒಲಿಂಪಿಕ್ಸ್‌ನ 1500 ಮೀ ಚಿನ್ನ ವಿಜೇತ ನಾರ್ವೆಯ ಜಾಕೋಬ್ ಇಂಗೆಬ್ರಿಗ್ಟ್ಸೆನ್ 13:02.03 ಸೆಕೆಂಡ್‌ಗಳಲ್ಲಿ ಓಟವನ್ನು ಗೆದ್ದರು.

ಅವಿನಾಶ್ ಸೇಬಲ್ ರಾಷ್ಟ್ರೀಯ ಮಟ್ಟದಲ್ಲಿ ಹಲವು ಬಾರಿ ತಮ್ಮದೇ ದಾಖಲೆಯನ್ನು ಮುರಿದು ಹೊಸ ದಾಖಲೆ ನಿರ್ಮಿಸಿದ್ದಾರೆ. 3000 ಮೀ ಸ್ಟೀಪಲ್‌ಚೇಸ್​ನಲ್ಲಿ ಹಲವು ದಾಖಲೆಗಳು ಸೇಬಲ್ ಹೆಸರಿನಲ್ಲಿವೆ. ಮಾರ್ಚ್‌ನಲ್ಲಿ ತಿರುವನಂತಪುರದಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ 2ರಲ್ಲಿ 8:16.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಏಳನೇ ಬಾರಿಗೆ ಹೊಸ ದಾಖಲೆ ಬರೆದಿದ್ದರು ಸೇಬಲ್.

ಈ ಕುರಿತು ಭಾರತೀಯ ಕ್ರೀಡಾ ಪ್ರಾಧಿಕಾರ ಹಂಚಿಕೊಂಡ ಟ್ವೀಟ್:

ಜುಲೈ 15ರಿಂದ 24ರವರೆಗೆ ಅಮೆರಿಕದ ಯುಜೀನ್‌ನಲ್ಲಿ ನಡೆಯಲಿರುವ ವಿಶ್ವ ಚಾಂಪಿಯನ್‌ಶಿಪ್‌ಗೆ ಅವಿನಾಶ್ ಸೇಬಲ್ ಈಗಾಗಲೇ ಅರ್ಹತೆ ಪಡೆದಿದ್ದಾರೆ.

ಹೆಚ್ಚಿನ ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

TV9 Kannada


Leave a Reply

Your email address will not be published. Required fields are marked *