20 ವರ್ಷಗಳ ಅವಧಿಗೆ 5ಜಿ ತರಂಗಾತರ ಪಡೆದುಕೊಂಡಿರುವ ಏರ್ಟೆಲ್ ಈ ಗುತ್ತಿಗೆಗಾಗಿ ₹ 43,084 ಕೋಟಿ ವ್ಯಯಿಸಿದೆ.

5ಜಿ ಸೇವೆ (ಪ್ರಾತಿನಿಧಿಕ ಚಿತ್ರ)
ಮುಂಬೈ: 5G ಸೇವೆಗಳನ್ನು ಪಡೆಯಬೇಕು ಎನ್ನುವ ಭಾರತೀಯರ ಸುದೀರ್ಘ ಕನಸು ಈಡೇರುವ ಕ್ಷಣಗಳು ಹತ್ತಿರವಾಗುತ್ತಿವೆ. ಈ ಸಂಬಂಧ ಭಾರ್ತಿ ಏರ್ಟೆಲ್ (Bharti Airtel) ಮಹತ್ವದ ಮಾಹಿತಿಯೊಂದನ್ನು ಹಂಚಿಕೊಂಡಿದೆ. ತನ್ನ ಮೊದಲ 5G ಗುತ್ತಿಗೆಯನ್ನು ಎರಿಕ್ಸನ್ (Ericsson) ಕಂಪನಿಗೆ ನೀಡಿದ್ದು, ಇದೇ ತಿಂಗಳಲ್ಲಿ (ಆಗಸ್ಟ್ 2022) ಸೇವೆಗಳನ್ನು ಒದಗಿಸಲಾಗುವುದು ಎಂದು ಹೇಳಿದೆ. ಏರ್ಟೆಲ್ನೊಂದಿಗೆ 25 ವರ್ಷಗಳಿಗೂ ಹೆಚ್ಚು ಕಾಲದ ವ್ಯಾಪಾರ ಸಂಬಂಧ ಹೊಂದಿರುವ ಎರಿಕ್ಸನ್ ಭಾರತದಾದ್ಯಂತ ಕನೆಕ್ಟಿವಿಟಿ ಸೇವೆ ಒದಗಿಸುತ್ತಿದೆ. ಜುಲೈ 26ರಂದು ಅಂತ್ಯಗೊಂಡ 5ಜಿ ತರಂಗಾಂತರ ಹರಾಜಿನ ನಂತರ ಎರಿಕ್ಸನ್ಗೆ ಹೊಸ ಗುತ್ತಿಗೆಯನ್ನು ಏರ್ಟೆಲ್ ನೀಡಿದೆ.
ಎರಿಕ್ಸನ್ ರೇಡಿಯೊ ಸಿಸ್ಟಮ್ ಮತ್ತು ಎರಿಕ್ಸನ್ ಮೈಕ್ರೊವೈವ್ ಮೊಬೈಲ್ ಟ್ರಾನ್ಸ್ಪೋರ್ಟ್ ಸಲ್ಯೂಷನ್ನಿಂದ ಪಡೆದುಕೊಂಡ 5ಜಿ ರೇಡಿಯೊ ಅಕ್ಸೆಸ್ ನೆಟ್ವರ್ಕ್ (5G Radio Access Network – RAN) ಉತ್ಪನ್ನಗಳನ್ನು ಏರ್ಟೆಲ್ ಅಳವಡಿಸಲಿದೆ. ಭಾರ್ತಿ ಏರ್ಟೆಲ್ನ 12 ಟೆಲಿಕಾಂ ವೃತ್ತಗಳಲ್ಲಿ ಎರಿಕ್ಸನ್ 5ಜಿ ಸಂಪರ್ಕ ಒದಗಿಸಲಿದೆ. ಅತಿವೇಗದ ಇಂಟರ್ನೆಟ್ ಕನೆಕ್ಟಿವಿಟಿ, ದೊಡ್ಡಮಟ್ಟದ ಡೇಟಾ ನಿರ್ವಹಣಾ ಸಾಮರ್ಥ್ಯ ಮತ್ತು ವೇಗದ ದತ್ತಾಂಶ ವರ್ಗಾವಣೆ ಸೌಲಭ್ಯವನ್ನು ಈ ಸೇವೆಗಳು ಒದಗಿಸುತ್ತವೆ ಎಂದು ಭಾರ್ತಿ ಏರ್ಟೆಲ್ ಪ್ರಕಟಣೆಯಲ್ಲಿ ತಿಳಿಸಿದೆ.