5G Spectrum: 2022ರ ಏಪ್ರಿಲ್ ಅಥವಾ ಮೇ ವೇಳೆಗೆ 5G ತರಂಗಾಂತರ ಹರಾಜು ನಿರೀಕ್ಷೆ | 5G Spectrum Auction Likely On 2022 April Or May Announced By Minister Ashwini Vaishnav


5G Spectrum: 2022ರ ಏಪ್ರಿಲ್ ಅಥವಾ ಮೇ ವೇಳೆಗೆ 5G ತರಂಗಾಂತರ ಹರಾಜು ನಿರೀಕ್ಷೆ

ಸಾಂದರ್ಭಿಕ ಚಿತ್ರ

ಮುಂದಿನ ವರ್ಷ, ಅಂದರೆ 2022ರ ಏಪ್ರಿಲ್ ಅಥವಾ ಮೇ ವೇಳೆಗೆ 5G ತರಂಗಾಂತರ ಹರಾಜು ಮಾಡುವ ನಿರೀಕ್ಷೆಯನ್ನು ಸರ್ಕಾರ ಹೊಂದಿದೆ ಎಂದು ಸಂಪರ್ಕ, ಐಟಿ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಗುರುವಾರ ಹೇಳಿದ್ದಾರೆ. “ಸದ್ಯಕ್ಕೆ ಟೆಲಿಕಾಂ ನಿಯಂತ್ರಕವು ಅದರ ಮೇಲೆ ಕಾರ್ಯ ನಿರ್ವಹಿಸುತ್ತಿದೆ. ಒಮ್ಮೆ ಆ ಕಡೆಯಿಂದ ತಮ್ಮ ಶಿಫಾರಸುಗಳನ್ನು ಕಳುಹಿಸಿದರೆ ನಾವು ಹರಾಜನ್ನು ಪ್ರಾರಂಭಿಸಲು ಸಾಧ್ಯವಾಗುತ್ತದೆ,” ಎಂದು ಟೈಮ್ಸ್ ನೌ ಸಮಾವೇಶ 2021ರಲ್ಲಿ ಸಚಿವರು ಹೇಳಿದ್ದಾರೆ. ಟೆಲಿಕಾಂ ನಿಯಂತ್ರಕವು ತನ್ನ ಶಿಫಾರಸುಗಳನ್ನು ಫೆಬ್ರವರಿ ಅಂತ್ಯದೊಳಗೆ ಅಥವಾ ಮುಂದಿನ ವರ್ಷದ ಮಾರ್ಚ್ ಆರಂಭದಲ್ಲಿ ಕಳುಹಿಸುವ ನಿರೀಕ್ಷೆ ದೂರಸಂಪರ್ಕ ಇಲಾಖೆಗೆ (DoT) ಇದೆ ಎಂದು ವೈಷ್ಣವ್ ಹೇಳಿದ್ದಾರೆ.

“ಟ್ರಾಯ್ ಸಮಾಲೋಚನೆಯು ಸಾಕಷ್ಟು ಸಮಗ್ರವಾಗಿದೆ ಮತ್ತು ದೊಡ್ಡ ಕ್ರಮವಾಗಿದೆ,” ಎಂದು ಅವರು ವಿವರಿಸಿದ್ದಾರೆ. ಈ ಮಧ್ಯೆ, ಟೆಲಿಕಾಂ ಕ್ಷೇತ್ರದ ಲಾಭದಾಯಕತೆಯನ್ನು ಪುನರುಜ್ಜೀವನಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡುತ್ತಿದೆ. ಈ ವಲಯದಲ್ಲಿ ವ್ಯಾಪಕವಾದ ದಾವೆಗಳಿಗೆ ಮೂಲ ಕಾರಣ ನಿಯಂತ್ರಣದ ಸಂಕೀರ್ಣ ರಚನೆಯಾಗಿದೆ ಎಂದು ಸಚಿವರು ಹೇಳಿದ್ದಾರೆ.

“ಪ್ರಧಾನಿಯವರ ದೃಷ್ಟಿಕೋನಕ್ಕೆ ಅನುಗುಣವಾಗಿ, ನೀತಿಯ ಆದ್ಯತೆಯು ಈಗ ನಿಯಂತ್ರಕ ರಚನೆಯನ್ನು ಸರಳಗೊಳಿಸುವ ಕಡೆಗೆ ಇರುತ್ತದೆ ಎಂಬುದನ್ನು ನೀವು ನೋಡುತ್ತೀರಿ,” ಎಂದು ಅವರು ಹೇಳಿದ್ದಾರೆ. ಈಗಾಗಲೇ ಘೋಷಿಸಲಾದ ಸುಧಾರಣೆಗಳ ಸಂಪೂರ್ಣ ಸಾಮರ್ಥ್ಯ ಮತ್ತು ಸುಧಾರಣೆಗಳು ಮುಂದಿನ ಎರಡು- ಮೂರು ವರ್ಷಗಳಲ್ಲಿ ಸಾಕಾರಗೊಳ್ಳಲಿವೆ ಎಂದು ವೈಷ್ಣವ್ ತಿಳಿಸಿದ್ದಾರೆ.

ಇದನ್ನೂ ಓದಿ: 5ಜಿ ತರಂಗಾಂತರ: ದೆಹಲಿ ಹೈಕೋರ್ಟ್​ಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ಜೂಹಿ ಚಾವ್ಲಾ

TV9 Kannada


Leave a Reply

Your email address will not be published. Required fields are marked *