6 ಜನರಿಂದ 700 ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ; ಹಿಜಾಬ್ ವಿವಾದದ ಕುರಿತು ಉಡುಪಿ ಜಿಲ್ಲಾಡಳಿತದ ಮೊರೆಹೋದ ವಿದ್ಯಾರ್ಥಿನಿಯರು | Karnataka Hijab Row Udupi Government PU College Students met ADC over Hijab Controversy in Their College


6 ಜನರಿಂದ 700 ವಿದ್ಯಾರ್ಥಿಗಳ ಭವಿಷ್ಯ ಹಾಳಾಗುತ್ತಿದೆ; ಹಿಜಾಬ್ ವಿವಾದದ ಕುರಿತು ಉಡುಪಿ ಜಿಲ್ಲಾಡಳಿತದ ಮೊರೆಹೋದ ವಿದ್ಯಾರ್ಥಿನಿಯರು

ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು

ಉಡುಪಿ: ಕರ್ನಾಟಕದ ಹಿಜಾಬ್ ವಿವಾದ ದೇಶಾದ್ಯಂತ ಚರ್ಚೆಯಾಗುತ್ತಿದೆ. ಸರ್ಕಾರಿ ಕಾಲೇಜುಗಳಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸುವುದು ಸರಿಯೇ, ತಪ್ಪೇ ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿವೆ. ಆಗಾಗ ಕೋಮು ಗಲಭೆಗಳಿಂದ ಸುದ್ದಿಯಾಗುತ್ತಿರುವ ಉಡುಪಿ, ದಕ್ಷಿಣ ಕನ್ನಡ ಇದೀಗ ಹಿಜಾಬ್ ಕಾರಣದಿಂದ ಮತ್ತೆ ಸುದ್ದಿಯಲ್ಲಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ (Hijab), ಕೇಸರಿ ಶಾಲು ವಿವಾದದ ಕುರಿತು ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಇಂದು ಉಡುಪಿ ಜಿಲ್ಲಾಡಳಿತದ ಮೊರೆಹೋಗಿದ್ದಾರೆ. ಪರೀಕ್ಷಾ ಸಮಯದಲ್ಲಿ ಹಿಜಾಬ್ ವಿವಾದ ಶುರುವಾಗಿದ್ದು, ದಿನವೂ ಕಾಲೇಜಿಗೆ ಪೊಲೀಸರು ಬರುತ್ತಿದ್ದಾರೆ. ವಿನಾಕಾರಣ ವಿವಾದ ಸೃಷ್ಟಿಸಿ ನಮ್ಮ ಕಾಲೇಜಿನ ಮರ್ಯಾದೆ ಮತ್ತು ನಮ್ಮ ಭವಿಷ್ಯವನ್ನು ಹಾಳು ಮಾಡಲಾಗುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ಇಂದು ಉಡುಪಿಯ ಎಡಿಸಿ ಸದಾಶಿವ ಪ್ರಭು ಅವರನ್ನು ಭೇಟಿಯಾದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಯರು ಹಿಜಾಬ್ ವಿವಾದದಿಂದ ನಮ್ಮ ಕಾಲೇಜಿನ ಶೈಕ್ಷಣಿಕ ವಾತಾವರಣ ಹದಗೆಟ್ಟಿದೆ. ಇದರಿಂದ ನಮ್ಮ ಕಾಲೇಜಿನ ಮರ್ಯಾದೆ ಹೋಗುತ್ತಿದೆ. ಪರೀಕ್ಷಾ ಸಮಯದಲ್ಲಿ ಈ ವಿವಾದ ಆರಂಭವಾಗಿದೆ. ಕೇವಲ 6 ಮಕ್ಕಳಿಂದ 700 ಮಕ್ಕಳ ಭವಿಷ್ಯ ಹಾಳಾಗ್ತಿದೆ. ಶಾಲೆಗೆ ಪ್ರತಿನಿತ್ಯವೂ ಪೊಲೀಸರು ಭೇಟಿ ನೀಡುತ್ತಿದ್ದಾರೆ. ನಮ್ಮ ಕಾಲೇಜಿಗೆ ಹಲವಾರು ದಶಕಗಳ ಇತಿಹಾಸವಿದೆ. ಇಲ್ಲಿ ಯಾವ ರೀತಿಯ ತಾರತಮ್ಯ, ಅನ್ಯಾಯವೂ ನಡೆಯುತ್ತಿಲ್ಲ. ವಿನಾಕಾರಣ ವಿವಾದ ಸೃಷ್ಟಿಸಿ ವಾತಾವರಣ ಹದಗೆಡಿಸಿದ್ದಾರೆ. ಈ ಕುರಿತು ಜಿಲ್ಲಾಡಳಿತ ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಭಾರತವನ್ನು ತಾಲಿಬಾನ್ ರಾಷ್ಟ್ರ ಮಾಡಲು ಸಾಧ್ಯವಿಲ್ಲ; ಸಚಿವ ಸುನಿಲ್ ಕುಮಾರ್

ಇನ್ನು, ಮಂಗಳೂರಿನಲ್ಲಿ ನಡೆದ ಮಾಧ್ಯಮ ಸಂವಾದದಲ್ಲಿ ಹಿಜಾಬ್ ವಿವಾದದ ಬಗ್ಗೆ ಕನ್ನಡ ಮತ್ತು ಸಂಸ್ಕೃತಿ ಸಚಿವ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಸುನಿಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದು, ಈ ವಿವಾದ ಖಂಡಿತವಾಗಿಯೂ ದಿಢೀರ್ ಎಂದು ಶುರುವಾಗಿದ್ದಲ್ಲ. ಮುಫ್ತಿ ಮೊಹಮ್ಮದ್​​ ಟ್ವೀಟ್​ ಮಾಡ್ತಾರೆ ಅಂದ್ರೆ ಏನಿದರ ಲಿಂಕ್? ದಿನಕ್ಕೆ 50-60 ಸಾವಿರ ಜನ ಟ್ವೀಟ್ ಮಾಡ್ತಾರೆ ಅಂದ್ರೆ ಏನರ್ಥ? ನಾನು ಪ್ರಿನ್ಸಿಪಾಲ್​​ರನ್ನು ಸಮರ್ಥಿಸುತ್ತೇನೆ, ಅವರು ಮಾಡಿದ್ದು ಸರಿಯಾಗಿದೆ. ಭಾರತ ದೇಶವನ್ನು ಹಿಂದೂ ರಾಷ್ಟ್ರ ಎಂದು ಕರೆಯುತ್ತಾರೆ. ಇದನ್ನು ತಾಲಿಬಾನ್, ಆಫ್ಘನ್​ ಮಾಡುವುದಕ್ಕೆ ಸಾಧ್ಯವೇ ಇಲ್ಲ. ಸಮವಸ್ತ್ರ ಅನ್ನೋದು ಕಾನೂನಾಗಿ ಏಕೆ ಮಾಡಿಕೊಳ್ಳಬೇಕು? ಅದೊಂದು ಸಂಪ್ರದಾಯ, ಸರ್ಕಾರಿ ಶಾಲೆ ಶಿಸ್ತಿನ ಸಂಪ್ರದಾಯ. ಅದಕ್ಕೆ ಕಾನೂನು ಚೌಕಟ್ಟು ಕೊಡಬೇಕೆನ್ನುವುದರಲ್ಲಿ ಅರ್ಥವಿಲ್ಲ. ಅದಕ್ಕೆ ಕಾನೂನು ಚೌಕಟ್ಟು ಕೊಡಿ ಅಂದರೆ ಕೊಡಲು ಸರ್ಕಾರ ಸಿದ್ಧವಾಗಿದೆ. ಆದರೆ ಇವರ ಬಳಿ ಕೋರ್ಟ್​​ಗೆ ಹೋಗಲು ಹಣ ಇದೆಯಾ? ಹಾಗಾದ್ರೆ ಇದರ ಹಿಂದೆ ಯಾರಿದ್ದಾರೆ? ಎಂದು ಪ್ರಶ್ನೆ ಮಾಡಿದ್ದಾರೆ.

TV9 Kannada


Leave a Reply

Your email address will not be published.