ನವದೆಹಲಿ: ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಮನುಕುಲ ತಲೆ ತಗ್ಗಿಸುವಂತಹ ಪೈಶಾಚಿಕ ವಿಕೃತಿಯೊಂದು ನಡೆದು ಹೋಗಿದೆ. ಕಳೆದ ಆರು ತಿಂಗಳ ಅವಧಿಯಲ್ಲಿ 16 ವರ್ಷದ ಬಾಲಕಿಯ ಮೇಲೆ 400 ಮಂದಿ ಅತ್ಯಾಚಾರವೆಸಗಿದ್ದಾರೆ ಅನ್ನೋ ಆರೋಪ ಕೇಳಿಬಂದಿದೆ. ಈ ಬಗ್ಗೆ ದೂರ ದಾಖಲಿಸಲು ಠಾಣೆಗೆ ಬಂದರೆ ಪೊಲೀಸರು ಕೂಡ ಲೈಂಗಿಕ ಶೋಷಣೆ ಮಾಡಿದ್ದಾರೆ ಅನ್ನೋ ದೂರು ಕೇಳಿಬಂದಿದೆ. ಮತ್ತೊಂದು ವಿಪರ್ಯಾಸ ಏನಂದ್ರೆ ದೌರ್ಜನ್ಯಕ್ಕೆ ಒಳಗಾದ ಬಾಲಕಿ ಈಗ 2 ತಿಂಗಳ ಗರ್ಭಿಣಿ ಆಗಿದ್ದಾಳೆ.
ಈ ವಾರ ಸಂತ್ರಸ್ತ ಬಾಲಕಿ ಪೊಲೀಸರಿಗೆ ದೂರು ನೀಡಿದ್ದಾಳೆ. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆ ಮತ್ತು ಐಪಿಸಿ ಸೆಕ್ಷನ್ ಸೆಕ್ಸ್ಯುವಲ್ ಅಫೆನ್ಸ್ ಆ್ಯಕ್ಟ್ ಹಾಗೂ ರೇಪ್ ಮತ್ತು ಕಿರುಕುಳ ಆರೋಪದ ಅಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಬಾಲಕಿ ನೀಡಿದ ದೂರಿನ ಆಧಾರದ ಮೇಲೆ ಮೂವರನ್ನ ಬಂಧಿಸಲಾಗಿದೆ ಎಂದು ಬೀಡ್ ಜಿಲ್ಲೆಯ ಎಸ್ಪಿ ರಾಜಾ ರಾಮಸಾಮಿ ಮಾಹಿತಿ ನೀಡಿದ್ದಾರೆ.
ಬಾಲಕಿಯ ದೂರಿನಲ್ಲಿ ಏನಿದೆ..?
ಅಪ್ರಾಪ್ತ ಬಾಲಕಿ ಮಾಡಿರುವ ಆರೋಪದ ಪ್ರಕಾರ.. ನಾನು ಕಳೆದ ಎರಡು ವರ್ಷಗಳ ಹಿಂದೆ ಹೆತ್ತ ಅಮ್ಮನನ್ನ ಕಳೆದುಕೊಂಡೆ. 8 ತಿಂಗಳ ಹಿಂದೆ ಅಪ್ಪ ನನಗೆ ಮದುವೆ ಮಾಡಿದರು. ಮದುವೆ ಬಳಿಕ ಪತಿ ಹಾಗೂ ಅತ್ತೆ-ಮಾವ ನನ್ನ ಮೇಲೆ ಕೆಟ್ಟದಾಗಿ ನಡೆಸಿಕೊಂಡು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾಳೆ.
ಇಷ್ಟೆಲ್ಲಾ ಆದ ಬಳಿಕ ಮತ್ತೆ ಆ ಬಲಕಿ ತಂದೆ ಬಳಿಗೆ ಓಡಿ ಹೋಗಿದ್ದಾಳೆ. ಆದರೆ ಮಗಳನ್ನ ಮನೆಗೆ ಸೇರಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ಜಿಲ್ಲೆಯ ಅಂಬಾಜೋಗೈ ಬಸ್ ನಿಲ್ದಾಣದಲ್ಲಿ ಭಿಕ್ಷಾಟನೆಗೆ ಮುಂದಾಗಿದ್ದಾಳೆ. ಈ ಸಮಯದಲ್ಲಿ ಅವಳು ಲೈಂಗಿಕ ಶೋಷಣೆಯನ್ನು ಎದುರಿಸಲು ಪ್ರಾರಂಭಿಸಿದ್ದಾಳೆ ಎನ್ನಲಾಗಿದೆ.
ಬಾಲಕಿಯರ ಮಕ್ಕಳ ಕಲ್ಯಾಣ ಸಮಿತಿಗೆ ನೀಡಿದ ಹೇಳಿಕೆಯಲ್ಲಿ.. ನನ್ನನ್ನು ಅನೇಕ ಜನರು ನಿಂದಿಸಿದ್ದಾರೆ. ಅಂಬಾಜೋಗೈ ಠಾಣೆಗೆ ದೂರು ನೀಡಲು ಹಲವು ಬಾರಿ ಹೋದರೂ ಪೊಲೀಸರು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಂಡಿಲ್ಲ. ಬದಲಾಗಿ ಒಬ್ಬ ಪೊಲೀಸ್ ಅಧಿಕಾರಿ ಕಿರುಕುಳ ನೀಡಿದ್ದಾನೆ ಎಂದು ದೂರಿದ್ದಾಳೆ ಅಂತಾ ವರದಿಯಾಗಿದೆ.