ಬೆಂಗಳೂರು: ಬ್ಲಾಕ್ ಫಂಗಸ್ ಹಾಗೂ ವೈಟ್ ಫಂಗಸ್ ರೋಗಿಗಳಿಗೆ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ವೈದ್ಯಕೀಯ ಕಾಲೇಜು ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ ಹಾಗೂ ಕೊರತೆಯಾಗದಂತೆ ಔಷಧಿ ಒದಗಿಸಲು ಸರ್ಕಾರ ಕ್ರಮ ಕೈಗೊಂಡಿದೆ. ಕೋವಿಡ್ ಕೇರ್ ಸೆಂಟರ್’ಗಳಲ್ಲಿ ಕೋವಿಡ್ ರೋಗಿಗಳನ್ನು ಆರೈಕೆ ಮಾಡುವ ವ್ಯವಸ್ಥೆ ಮಾತ್ರ ಇರುತ್ತದೆ ಎಂದು ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಕೋವಿಡ್-19 ಮೇಲ್ವಿಚಾರಣೆ ಉಸ್ತುವಾರಿ ಹೊತ್ತಿರುವ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.

ಇಂದು ಮಹಾನಗರ ಪಾಲಿಕೆಯ ಪೂರ್ವ ವಲಯದ ಸರ್ವಜ್ಞನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬರುವ ಕಾಚರಕನಹಳ್ಳಿ ಬಳಿಯ ಸೇಂಟ್ ಥಾಮಸ್ ಟೌನ್ ಇಂಡಿಯಾ ಕ್ಯಾಂಪಸ್ ಕ್ರೂಡ್’ನಲ್ಲಿ ಕೊರೊನಾ ಸೊಂಕಿತರ ಚಿಕಿತ್ಸೆಗಾಗಿ ಸಜ್ಜುಗೊಳಿಸಲಾದ 60 ಬೆಡ್‍ಗಳ ಕೋವಿಡ್ ಕೇರ್ ಸೆಂಟರ್‌ನ್ನು ಉದ್ಘಾಟಿಸಿ ಮಾತನಾಡಿದರು.

ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದಲ್ಲಿ ಕೋವಿಡ್ ರೋಗಿಗಳಿಗೆ ವೈದ್ಯಕೀಯ ನೆರವು ನೀಡಲು ಅಗತ್ಯವಿರುವಂತೆ 60 ಹಾಸಿಗೆಯ ಕೋವಿಡ್ ಕೇರ್ ಸೆಂಟರ್’ನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ರೂಪಿಸಲಾಗಿದೆ ಎಂದರು.

ಟ್ರಯಾಜ್ ಸೌಕರ್ಯ, ಆಕ್ಸಿಜನ್ ವ್ಯವಸ್ಥೆ ಹಾಗೂ ಕೋವಿಡ್ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಪೌಷ್ಠಿಕ ಆಹಾರ ಸರಬರಾಜು ಸೌಲಭ್ಯಗಳನ್ನು ಈ ಕೇಂದ್ರ ಹೊಂದಿದೆ. ರೋಗಿಗಳ ಮೇಲ್ವಿಚಾರಣೆಗೆ ಹಗಲು-ರಾತ್ರಿ ಅಗತ್ಯವಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ನೇಮಿಸಲಾಗಿದೆ. ಕ್ಷೇತ್ರದ ಸಂಸತ್ ಸದಸ್ಯ ಪಿ.ಸಿ ಮೋಹನ್, ಸರ್ವಜ್ಞನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ಜೆ.ಜಾರ್ಜ್, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಆಯುಕ್ತ ಗೌರವ ಗುಪ್ತಾ ಹಾಗೂ ಹಿರಿಯ ಅಧಿಕಾರಿಗಳು ಉದ್ಘಾಟನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

The post 60 ಹಾಸಿಗೆಗಳ ಕೋವಿಡ್ ಕೇರ್ ಸೆಂಟರ್ ಉದ್ಘಾಟಿಸಿದ ವಿ. ಸೋಮಣ್ಣ appeared first on Public TV.

Source: publictv.in

Source link