65 ಮೀ. ದೂರದಿಂದ ರಾಹುಲ್ ರಾಕೆಟ್ ಥ್ರೋ; ಪಂದ್ಯದ ದಿಕ್ಕನೇ ಬದಲಾಯಿಸಿದ ಅದೊಂದು ರನೌಟ್..! ವಿಡಿಯೋ – IND vs BAN kl rahul direct hit run out litton das watch video t20 world cup 2022


IND vs BAN: ಕೆಎಲ್ ರಾಹುಲ್ ಅದ್ಭುತ ಫೀಲ್ಡಿಂಗ್ ಮಾಡಿ, ಬೌಂಡರಿಯಿಂದ ವೇಗವಾಗಿ ಓಡಿ ಬಂದು ಸುಮಾರು 65 ಮೀಟರ್ ದೂರದಿಂದ ಚೆಂಡನ್ನು ನಾನ್ ಸ್ಟ್ರೈಕರ್ ತುದಿಯತ್ತ ಎಸೆದರು. ಆ ಚೆಂಡು ಸೀದಾ ಸ್ಟಂಪ್‌ಗೆ ಬಡಿಯಿತು.

ಕ್ರಿಕೆಟ್ ಮ್ಯಾಚ್​ನಲ್ಲಿ ಒಂದೇ ಒಂದು ವಿಕೆಟ್, ಒಂದೇ ಒಂದು ರನ್ ಅಥವಾ ಒಂದೇ ಒಂದು ಅದ್ಭುತ ಫೀಲ್ಡಿಂಗ್ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಬಹುದು ಎನ್ನುತ್ತಾರೆ. ಟಿ20 ಸ್ವರೂಪದಲ್ಲಂತೂ ಈ ಮಾತಿಗೆ ಹೆಚ್ಚಿನ ತೂಕವೇ ಇದೆ. ಇದಕ್ಕೆ ತಾಜಾ ಉದಾಹರಣೆಯಾಗಿ ಅಡಿಲೇಡ್‌ನಲ್ಲಿ ನಡೆದ ಟಿ20 ವಿಶ್ವಕಪ್​ (T20 World Cup 2022) ಸೂಪರ್ ಸುತ್ತಿನ ಭಾರತ-ಬಾಂಗ್ಲಾದೇಶ ಪಂದ್ಯದಲ್ಲೂ ಇದೇ ರೀತಿಯ ಘಟನೆ ಸಂಭವಿಸಿದೆ. ಒಂದು ಕಡೆ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತಕ್ಕೆ ಬಾಂಗ್ಲಾ ತಂಡದ ಕಳಪೆ ಫೀಲ್ಡಿಂಗ್ ಬಿಗ್ ಟಾರ್ಗೆಟ್ ಸೆಟ್ ಮಾಡಲು ಸಹಾಯ ಮಾಡಿದರೆ. ಈ ಕಡೆ ಕೆಎಲ್ ರಾಹುಲ್ (KL Rahul) ಮಾಡಿದ ಅದೊಂದು ರನೌಟ್ ಇಡೀ ಪಂದ್ಯದ ದಿಕ್ಕನೇ ಬದಲಾಯಿಸಿತು.

ಅಡಿಲೇಡ್‌ನಲ್ಲಿ ನಡೆದ ಮಹತ್ವದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಬಾಂಗ್ಲಾದೇಶದ ಮುಂದೆ 185 ರನ್‌ಗಳ ಗುರಿಯನ್ನು ನೀಡಿತ್ತು. ಇದಕ್ಕೆ ಉತ್ತರವಾಗಿ, ಲಿಟನ್ ದಾಸ್ ಬಾಂಗ್ಲಾದೇಶಕ್ಕೆ ಆಶ್ಚರ್ಯಕರ ಆರಂಭವನ್ನು ನೀಡಿ, ಕೇವಲ 21 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದರು. ಈ ಸಂದರ್ಭದಲ್ಲಿ ದಿನೇಶ್ ಕಾರ್ತಿಕ್ ನೀಡಿದ ಜೀವದಾನವನ್ನು ಸದುಪಯೋಗ ಪಡಿಸಿಕೊಂಡ ಲಿಟನ್, ಬಾಂಗ್ಲಾ ತಂಡವನ್ನು ಗೆಲುವಿನತ್ತ ಕೊಂಡೊಯ್ಯಲು ಆರಂಭಿಸಿದರು. ಆದರೆ 7ನೇ ಓವರ್‌ನಲ್ಲಿ ಮಳೆಯಿಂದಾಗಿ ಆಟ ಸ್ಥಗಿತಗೊಂಡಿತು. ಈ ವೇಳೆಗೆ ಬಾಂಗ್ಲಾದೇಶದ ಸ್ಕೋರ್ ವಿಕೆಟ್ ನಷ್ಟವಿಲ್ಲದೆ 66 ರನ್ ಆಗಿತ್ತು.

ರಾಹುಲ್ ಅದ್ಭುತ ಫೀಲ್ಡಿಂಗ್

ಮಳೆಯ ನಂತರ ಪಂದ್ಯ ಪ್ರಾರಂಭವಾದಾಗ ಮತ್ತೊಮ್ಮೆ ಬಾಂಗ್ಲಾದೇಶ ತಂಡ ಲಿಟನ್‌ ಅವರಿಂದ ಅದೇ ಆಕ್ರಮಣಕಾರಿ ಇನ್ನಿಂಗ್ಸ್ ಅನ್ನು ನಿರೀಕ್ಷಿಸಿತ್ತು. ಆದರೆ 8ನೇ ಓವರ್ ಎಸೆದ ಅಶ್ವಿನ್ ಅವರ ಎರಡನೇ ಎಸೆತದಲ್ಲಿ, ಭಾರತ ದೊಡ್ಡ ಯಶಸ್ಸನ್ನು ಸಾಧಿಸಿತು. ನಜ್ಮುಲ್ ಶಾಂಟೊ ಅವರು ಅಶ್ವಿನ್ ಎಸೆತವನ್ನು ಡೀಪ್ ಮಿಡ್ ವಿಕೆಟ್ ಕಡೆಗೆ ಆಡಿದರು ಮತ್ತು ಇಬ್ಬರೂ ಬ್ಯಾಟ್ಸ್‌ಮನ್‌ಗಳು ಎರಡು ರನ್‌ಗಳಿಗೆ ಓಡಿದರು.

ಇಲ್ಲಿ ಕೆಎಲ್ ರಾಹುಲ್ ಅದ್ಭುತ ಫೀಲ್ಡಿಂಗ್ ಮಾಡಿ, ಬೌಂಡರಿಯಿಂದ ವೇಗವಾಗಿ ಓಡಿ ಬಂದು ಸುಮಾರು 65 ಮೀಟರ್ ದೂರದಿಂದ ಚೆಂಡನ್ನು ನಾನ್ ಸ್ಟ್ರೈಕರ್ ತುದಿಯತ್ತ ಎಸೆದರು. ಆ ಚೆಂಡು ಸೀದಾ ಸ್ಟಂಪ್‌ಗೆ ಬಡಿಯಿತು.

ಲಿಟನ್ ಇನ್ನಿಂಗ್ಸ್ ಅಂತ್ಯ

ಮೊದಲ ರನ್ ಆರಾಮವಾಗಿ ಪೂರೈಸಿದ ಲಿಟನ್​ಗೆ ಎರಡನೇ ರನ್ ಓಡಲು ಸಾಧ್ಯವಾಗಲಿಲ್ಲ. ಅಲ್ಲದೆ ಮಳೆಯಿಂದಾಗಿ ಪಿಚ್ ತೇವವಾಗಿದ್ದು ಸಹ ಲಿಟನ್​ಗೆ ಹೊಡೆತ ನೀಡಿತು. ಪಿಚ್​ನಲ್ಲಿ ಎಡವಿದ ಲಿಟನ್ ಡೈವ್ ಮಾಡಿದರಾದರೂ ಚೆಂಡು ವಿಕೆಟ್​ಗೆ ಬೀಳುವ ಮುನ್ನ ಕ್ರೀಸ್ ತಲುಪಲು ಸಾಧ್ಯವಾಗಲಿಲ್ಲ. ಇದು ಭಾರತಕ್ಕೆ ಮೊದಲ ವಿಕೆಟ್ ನೀಡಿದ್ದಲ್ಲದೆ, ಪ್ರಮುಖ ವಿಕೆಟ್ ಕೂಡ ಸಿಕ್ಕಿತು.

ಈ ಅದ್ಭುತ ಫೀಲ್ಡಿಂಗ್ ಜೊತೆಗೆ ಬ್ಯಾಟಿಂಗ್​ನಲ್ಲೂ ಫಾರ್ಮ್​ಗೆ ಮರಳಿದ ರಾಹುಲ್ ಅಮೋಘ ಅರ್ಧಶತಕ ಸಿಡಿಸಿದರು. ತಮ್ಮ ಇನ್ನಿಂಗ್ಸ್​ನಲ್ಲಿ ಕೇವಲ 32 ಎಸೆತಗಳನ್ನು ಎದುರಿಸಿದ ರಾಹುಲ್ 3 ಬೌಂಡರಿ 4 ಸಿಕ್ಸರ್ ಸಹಿತ 50 ರನ್ ಬಾರಿಸಿ ತಮ್ಮ ವಿಕೆಟ್ ಒಪ್ಪಿಸಿದರು.

ತಾಜಾ ಸುದ್ದಿ

TV9 Kannada


Leave a Reply

Your email address will not be published.