ಟೈಗರ್.. ಹೀಗಂತ ಹೇಳಿದ ಕೂಡಲೇ ಆ ಗತ್ತು, ಗಾಂಭೀರ್ಯ ಕಣ್ಮುಂದೆ ಬಂದು ಬಿಡುತ್ತೆ. ಹುಲಿ ಅಂದರೆ ಹುಲಿನೇ. ಹುಲಿಗೆ ಬೇರೆ ಸಾಟಿ ಇದ್ಯಾ? ಅದಕ್ಕೆ ಅನೇಕರು ಟೈಗರ್ ಅಂತ ತಮ್ಮ ಹೆಸರಿನ ಪಕ್ಕ ಸೇರಿಸಿಕೊಂಡು ಬಿಡುತ್ತಾರೆ. ಬದುಕಿದರೆ ಹುಲಿಯಂತೆ ಬದುಕಬೇಕು, ಇಲಿಯಂತಲ್ಲ ಅನ್ನೋ ಮಾತೇ ಇದೆ. ಹುಲಿ ಅಂದ್ರೆ ವಿಶಿಷ್ಠ ಅಷ್ಟೇ ಅಪರೂಪದ ಪ್ರಾಣಿ.

ಆದರೆ ಬರ್ತಾ, ಬರ್ತಾ ಹುಲಿಗಳೇ ಮಾಯವಾಗಿ ಹೋಗಿವೆ. ಅಲ್ಲೋ ಇಲ್ಲೋ ಒಂದೊಂದು ಹುಲಿ ಕಣ್ಣಿಗೆ ಬಿದ್ರೆ ಅದೇ ದೊಡ್ಡದು. ಇನ್ನು ರಾಷ್ಟ್ರೀಯ ಅಭಯಾರಣ್ಯಗಳಲ್ಲಿ ಹುಲಿಗಳನ್ನು ಕಾಣಬಹುದೇ ವಿನಃ ಸ್ವತಂತ್ರವಾಗಿ ಜೀವಿಸುತ್ತಾ ಇರುವ ಹುಲಿಗಳ ಸಂಖ್ಯೆಯೂ ಕ್ಷೀಣಿಸಿ ಹೋಗಿದೆ. ಇದರ ಮಧ್ಯೆ ಹುಲಿ ಹೊಡೆಯೋರು, ಕದ್ದು ಹುಲಿ ಬೇಟೆ ಮಾಡೋರು ಅಲ್ಲಲ್ಲಿ ಇನ್ನೂ ಇದ್ದಾರೆ.


ಸದ್ಯ ಬಾಂಗ್ಲಾದಲ್ಲಿ ಹುಲಿ ಬೇಟೆಗಾರ ಹಬೀಬ್ ತಾಲೂಕ್ದಾರ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ಈ ಖದೀಮ ಅಂತಿಂಥ ಮನುಷ್ಯನಲ್ಲ. ಇವನ ಬಗ್ಗೆ ಕೇಳಿದ್ರೆ ನೀವು ಒಂದು ಕ್ಷಣ ಬೆಚ್ಚಿ ಬೀಳ್ತೀರ. ಒಂದೋ ಎರಡೋ ಆನೆ, ಹುಲಿ ಹೊಡೆದು ಹಿಂದೆ ಬಿರುದು ಪಡೆದುಕೊಳ್ಳುತ್ತಿದ್ದ ಕಾಲ ಬೇರೆ. ಆದ್ರೆ ಈಗ ವ್ಯನ್ಯಜೀವಿಗಳನ್ನು ಟಚ್ ಮಾಡಿದ್ರೂ ಅಪರಾಧ. ಬೇಟೆಯಾಡಿದ್ರೆ ಮಹಾಪರಾಧ. ಕಾರಣ ಅಳಿನಂಚಿನಲ್ಲಿರುವ ಪ್ರಾಣಿಗಳನ್ನು ರಕ್ಷಣೆ ಮಾಡಲು ವಿವಿಧ ದೇಶಗಳಲ್ಲಿ, ಸರ್ಕಾರಗಳು ಕೋಟ್ಯಾಂತರ ರೂಪಾಯಿ ಖರ್ಚು ಮಾಡ್ತಾ ಇವೆ.

ಪ್ರಾಕೃತಿಕ ಸಮತೋಲನದ ದೃಷ್ಟಿಯಿಂದ, ಅಪರೂಪದ ಪ್ರಾಣಿಗಳನ್ನು ರಕ್ಷಿಸಿಕೊಳ್ಳುವ ಉದ್ದೇಶದಿಂದ ಇದಕ್ಕಾಗಿ ಕಠಿಣ ಕಾನೂನುಗಳನ್ನೂ ಜಾರಿ ಮಾಡಿವೆ. ಇಷ್ಟಾದರೂ ಜನ ಪ್ರಾಣಿಗಳನ್ನು ಕೊಲ್ತಾನೇ ಇರ್ತಾರೆ. ಜಿಂಕೆ, ಕಡವೆಗಳನ್ನು ಬಿಡಲ್ಲ ಈ ಮನುಷ್ಯ. ಕಾಡಿನಂಚಿನಲ್ಲಿ ಮಾಂಸಕ್ಕಾಗಿ ಪ್ರಾಣಿಗಳನ್ನು ಹೊಡೆದು ತಿನ್ನೋದು ಒಂದು ಕಡೆಯಾದ್ರೆ, ಇನ್ನೊಂದು ಕಡೆ ಈ ವ್ಯನ್ಯಜೀವಿಗಳ ಒಂದೊಂದು ಅಂಗವೂ ಬಹಳಷ್ಟು ಬೆಲೆ ಬಾಳುವ ಕಾರಣ ಕಳ್ಳರ ಜಾಲವೇ ಹುಟ್ಟಿಕೊಳ್ಳಲು ಕಾರಣವಾಗಿದೆ. ಈ ಹುಲಿಯನ್ನೇ ತೆಗೆದುಕೊಳ್ಳಿ. ಇದರ ಚರ್ಮ ಹಾಗೂ ಉಗುರಿಗೆ ಇರುವ ಬೆಲೆ ಲಕ್ಷಾಂತರ.

70ಕ್ಕೂ ಹೆಚ್ಚು ಹುಲಿಗಳನ್ನು ಹತ್ಯೆ ಮಾಡಿದ್ದ ಕಿಲ್ಲರ ಅರೆಸ್ಟ್
ಎರಡು ದಶಕಗಳಿಂದ ತಲೆಮರೆಸಿಕೊಂಡಿದ್ದ ಹಂತಕ ಬಲೆಗೆ

ಈ ಫೋಟೋದಲ್ಲಿ ಕಾಣ್ತಾ ಇರುವ ಮನುಷ್ಯ ಹಬೀಬ್. ನೆರೆಯ ಬಾಂಗ್ಲಾ ದೇಶದವನು. ಈತ ಶೂರನೋ, ಧೀರನೋ, ಖದೀಮನೋ ಆದ್ರೆ ಹುಲಿಗಳ ಪಾಲಿಗಂತೂ ಯಮದೂತನಾಗಿ ಬಿಟ್ಟಿದ್ದ. ಇವನ ಚರಿತ್ರೆ ಕೇಳಿ ಬಿಟ್ಟರೆ ನಿಜಕ್ಕೂ ಬೆಚ್ಚಿ ಬೀಳುವಂತಿದೆ. ಈತ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯ. ಆದರೆ ಈತ ಕಾಡಿನಲ್ಲೇ ಅಲೆಯುತ್ತಿದ್ದುದು ಜಾಸ್ತಿ. ಇವನು ಜನರ ಜೊತೆ, ತನ್ನ ಗ್ರಾಮಸ್ಥರ ಜೊತೆ ಸಂಪರ್ಕದಲ್ಲಿ ಇರ್ತಾ ಇದ್ದಿದ್ದೇ ಕಡಿಮೆ. ಯಾವಾಗಲೂ ಕಾಡಂಚಿನಲ್ಲಿ ಹೊಂಚು ಹಾಕುತ್ತ ಕುಳಿತಿರುತ್ತಿದ್ದ. ಕೈಯಲ್ಲೊಂದು ಬಂದೂಕು ಹಿಡಿದುಕೊಂಡು ಹೊರಟಾಗ ಎಲ್ಲಿಗೆ ಅಂತ ಕೇಳಿದ್ರೆ ಜೇನು ಸಾಕೋದಕ್ಕೆ, ಜೇನು ತರೋದಕ್ಕೆ ಅಂತ ಸುಳ್ಳು ಹೇಳಿ ಬಿಡುತ್ತಿದ್ದ. ಆದ್ರೆ ಇವನು ಮಾಡ್ತಾ ಇದ್ದ ದಂಧೆಯೇ ಬೇರೆ. ಹುಲಿಗಳನ್ನು ಕೊಲ್ಲೋದು, ಅದರ ಉಗುರು,ಚರ್ಮ,ಹಲ್ಲು,ಮಾಂಸ ಎಲ್ಲವನ್ನೂ ಕಾಳಸಂತೆಯಲ್ಲಿ ಮಾರೋದು. ಇದು ಮೊದಲು ಗೊತ್ತೇ ಇರಲಿಲ್ಲ. ಆದ್ರೆ ಪದೇ ಪದೇ ಹುಲಿಗಳು ಹತ್ಯೆ ಆಗ್ತಾ ಇರೋದನ್ನು ಗಮನಿಸಿದ ಅಧಿಕಾರಿಗಳು ಹೇಗೋ ಇವನ ಬಗ್ಗೆ ಮಾಹಿತಿ ತರಿಸಿಕೊಂಡಿದ್ದಾರೆ. ಬಳಿಕ ಈತ ಮಾಡಿದ ಹುಲಿಗಳ ಹತ್ಯೆಯನ್ನು ಕೇಳಿ ಶಾಕ್ ಆಗಿದ್ದಾರೆ. ಈತ ಒಂದಲ್ಲಾ, ಎರಡಲ್ಲಾ, ಬರೋಬ್ಬರಿ 70ಕ್ಕೂ ಹೆಚ್ಚು ಹುಲಿಗಳನ್ನು ಹೊಡೆದು ಹಾಕಿದ್ದಾನೆ.

ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿರುವ ಕಾಡಿನಲ್ಲೇ ಈತ ಹುಲಿಗಳನ್ನು ಹತ್ಯೆ ಮಾಡುತ್ತಿದ್ದ. ಹತ್ತಿರದ ಕಾಳ ಸಂತೆಯಲ್ಲಿ ದಂಧೆಕೋರರ ಜೊತೆ ಸೇರಿಕೊಂಡು ಮಾರಿ ಕೈತೊಳೆದು ಕೊಂಡು ಬಿಡುತ್ತಿದ್ದ. ಆದ್ರೆ ಇವನ ಬಗ್ಗೆ ಪಕ್ಕಾ ಮಾಹಿತಿ ಇಟ್ಟುಕೊಂಡ ಪೊಲೀಸರು ಈತನನ್ನು ಹಿಡಿಯಲು ಕಳೆದ 20 ವರ್ಷಗಳಿಂದ ಪ್ರಯತ್ನ ಮಾಡ್ತಾನೇ ಇದ್ರು. ಆದ್ರೆ, ಈ ಖದೀಮ ವೀರಪ್ಪನ್ ಗಿಂತ ಹೆಚ್ಚು ಖದೀಮನಾಗಿದ್ದ.

ತಿಂಗಳುಗಟ್ಟಲೇ ಕಾಡಿನಲ್ಲೇ ಇದ್ದು ಬಿಡ್ತಿದ್ದ ಟೈಗರ್ ಹಬೀಬ್
ಈತ ಕಳೆದ 20 ವರ್ಷಗಳಲ್ಲಿ ಜನರ ಸಂಪರ್ಕಕ್ಕೆ ಬಂದಿದ್ದೇ ಕಡಿಮೆ
ಚೀನಾದವರೆಗೂ ಹೆಸರು ಮಾಡಿದ್ದ ಬಾಂಗ್ಲಾದ ಟೈಗರ್ ಹಬೀಬ್

ಇವನನ್ನು ಅಂತಿಂಥಾ ಬೇಟೆಗಾರನಲ್ಲ. ಕಾಡಿನಲ್ಲೇ ತಿಂಗಳುಗಟ್ಟಲೇ ಕಳೆಯುತ್ತಿದ್ದ. ಈ ಹುಲಿ ಹಂತಕ ಎರಡು ದಶಕಗಳಿಂದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಲೇ ಬಂದಿದ್ದ. ಭಾರತ ಮತ್ತು ಬಾಂಗ್ಲಾದೇಶ ಗಡಿಗೆ ಹೊಂದಿಕೊಂಡಿರುವ ಸುಂದರಬನ ಮ್ಯಾಂಗ್ರೋವ್‌ ಕಾಡುಗಳೇ ಈತನ ಕಾರ್ಯಸ್ಥಾನ. ಈತನ ಆಸ್ಥಾನ. ಇಲ್ಲೇ ಇವನ ಸಾಮ್ರಾಜ್ಯ. ಈತನ ಹತ್ಯಾಕಾಂಡಕ್ಕೆ ಸಾಕ್ಷಿಯಾಗಿದ್ದು ಈ ಸುಂದರಬನದ ಕಾಡುಗಳು. ಜೇನು ಸಾಕಣೆ ನೆಪದಲ್ಲಿ ಕಾಡು ಸೇರಿಕೊಂಡು ಹೇಗೋ ಕಳ್ಳರ ಗ್ಯಾಂಗ್ ಸಂಪರ್ಕ ಬೆಳೆಸಿಕೊಂಡಿದ್ದ ಈತನದ್ದು ಬರೇ ಪ್ರಾಣಿಗಳದ್ದೇ ವ್ಯಾಪಾರ. ಅದೆಷ್ಟೋ ಬಾರಿ ಈತ ಇದ್ದ ಕಡೆ ಪೊಲೀಸರು ದಾಳಿ ಮಾಡಿದ್ದರು. ಆದ್ರೆ ಹೇಗೇ ಈ ಹಬೀಬ್ ಪರಾರಿ ಯಾಗಿ ಬಿಡ್ತಾ ಇದ್ದ. ಈತನ ಮನೆಯೂ ಇದೆ. ಆದ್ರೆ ಹಬೀಬ್ ಇಲ್ಲಿಗೆ ಬರ್ತಾ ಇದ್ದಿದ್ದೇ ಕಡಿಮೆ. ಕೊನೆಗೂ 20 ವರ್ಷಗಳ ನಂತರ ದಕ್ಷಿಣ ಬಗೇರ್‌ಹಾತ್‌ ಪ್ರದೇಶದ ಮನೆಯಲ್ಲಿ ಇದ್ದ ಹಬೀಬ್‌ ನನ್ನು ಪೊಲೀಸರು ಹಿಡಿದಿದ್ದಾರೆ. ಬಾಂಗ್ಲಾದಲ್ಲಿ ಈಗ ಈ ಟೈಗರ್ ಹಬೀಬ್ ಬಗ್ಗೆಯೇ ಸಿಕ್ಕಾಪಟ್ಟೆ ರಿಪೋರ್ಟ್ ಗಳು ಬರ್ತಾ ಇವೆ. ಅಷ್ಟೇ ಅಲ್ಲ ಈತನ ಕುರಿತಾಗಿನ ರೋಚಕ ಕಥೆಗಳು ಒಂದೊಂದೇ ಬಯಲಾಗ್ತಾ ಇವೆ.

20ನೇ ವಯಸ್ಸಿನಲ್ಲೇ ಕಾಡು ಸೇರಿಕೊಂಡು ಬಿಟ್ಟಿದ್ದ ಹಬೀಬ್
ಮರದಲ್ಲೇ ಅವಿತು ಕುಳಿತು ಹುಲಿಗಳನ್ನು ಬೇಟೆಯಾಡ್ತಿದ್ದ ಹಂತಕ
ದಿನಗಟ್ಟಲೇ ಹುಲಿ ಹೊಡೆಯೋದಕ್ಕೆ ಹೊಂಚು ಹಾಕುತ್ತಿದ್ದ ಖದೀಮ

ಈ ಹಬೀಬ್ ತನ್ನ 20ನೇ ವಯಸ್ಸಿಗೇ ಕಾಡು ಸೇರಿಕೊಂಡು ಬಿಟ್ಟಿದ್ದ. ಈತ ತನ್ನ ಊರಿನಲ್ಲಿ, ಪೇಟೆ ಪಟ್ಟಣ ನೋಡಿದ್ದೇ ಕಡಿಮೆ. ಇವನ ಸಂಪಾದನೆ ಅದ್ಯಾರಿಗೆ ಕೊಡ್ತಾ ಇದ್ನೋ, ಅದೇನು ಮಾಡ್ತಾ ಇದ್ನೋ ಗೊತ್ತಿಲ್ಲ. ಆದ್ರೆ ,ಇವನ ಜೊತೆ ಬೇರೆ ಯಾರೂ ಅಷ್ಟಾಗಿ ಕಾಣಿಸಿದ್ದಿಲ್ಲ. ಮೊದಲಿನಿಂದಲೂ ಒಂಟಿ. ಒಬ್ಬನೇ ಕಾಡಿಗೆ ಹೋಗಿ, ಮರದಲ್ಲೇ ಮರೆಯಾಗಿ ಕುಳಿತು ಹುಲಿಗಳನ್ನು ಹೊಡೆದು ಹಾಕುತ್ತಿದ್ದ ಈ ಹಬೀಬ್. 20ನೇ ವಯಸ್ಸಿನಲ್ಲೇ ಕಾಡು ಸೇರಿದ್ದ ಅಂದ್ರೆ ಅರ್ಥ ಮಾಡಿಕೊಳ್ಳಿ. ಕಾಡಿನಲ್ಲಿ ಹುಲಿಯ ಜಾಡು ಪತ್ತೆ ಮಾಡುವಲ್ಲಿ ಈತನದ್ದೂ ಎತ್ತಿದ ಕೈ. ಒಮ್ಮೆ ಒಂದು ಕಡೆ ಓಡಾಡಿ ಬಂದನೆಂದರೆ ಅಲ್ಲಿ ಒಂದು ಹುಲಿ ಫಿಕ್ಸ್ ಅಂತಾನೇ ಅರ್ಥ. ಅಷ್ಟರ ಮಟ್ಟಿಗೆ ಪರಿಣಿತಿ ಸಾಧಿಸಿ ಬಿಟ್ಟಿದ್ದ ಹಬೀಬ್. ಹಗಲಿರಲಿ,ರಾತ್ರಿಯಿರಲಿ ಈತನಿಗೆ ಬೇಧ ಭಾವವೇ ಇರಲಿಲ್ಲ. ಬೆಳದಿಂಗಳ ಬೆಳಕಿನಲ್ಲೇ ಕಾಡಿನಲ್ಲಿ ನಡೆಯುತ್ತಿದ್ದ ಈತ ಹುಲಿಯ ಆವಾಸ ಸ್ಥಾನಗಳನ್ನು ಹುಡುಕಿಕೊಂಡು ಹೋಗಿ ಬಿಡುತ್ತಿದ್ದ. ಕತ್ತಲಿನಲ್ಲಿ ಹುಲಿಯ ಕಣ್ಣಗಳನ್ನೇ ದಿಟ್ಟಿಸಿ ನೋಡುತ್ತ ತನ್ನ ಬೇಟೆಯನ್ನು ಮುಗಿಸಿ ಬಿಡುತ್ತಿದ್ದ ಕಿರಾತಕ ಇವನು. ಅಬ್ಬಾ. ಈತನ ಧೈರ್ಯ,ಶೌರ್ಯದ ಬಗ್ಗೆ ಸುಂದರ ಬನ ಪ್ರದೇಶದಲ್ಲಿ ಅಂತೆ-ಕಂತೆಗಳು ಸಿಕ್ಕಾ ಪಟ್ಟೆ ಇವೆ. ಆದ್ರೆ ಈತ ಕಾಡಿನಲ್ಲೇ ಇದ್ದು ಟೈಗರ್ ಹಬೀಬ್ ಅಂತ ಕುಖ್ಯಾತಿ ಗಳಿಸಿದ್ದು ಸುಳ್ಳಲ್ಲವಲ್ಲ. ಇಂಥಾ ಹಬೀಬ್ ಈಗ ಸಿಕ್ಕಿ ಬಿದ್ದಿದ್ದಾನೆ. ತಾನು ಎಲ್ಲೆಲ್ಲಿ ಏನೇನು ಮಾಡಿದೆ ಅಂತೆಲ್ಲ ಬಾಯಿ ಬಿಡ್ತಾ ಇದ್ದಾನೆ. ಇವನ ಹುಲಿ ಬೇಟೆ ಕಥೆಗಳನ್ನು ಕೇಳಿ ಪೊಲೀಸರಿಗೆ ಶಾಕ್ ಆಗ್ತಾ ಇದೆ. ಅದ್ಯಾವಾಗ ಎಲ್ಲೆಲ್ಲಿ ಹೇಗೆಗೆ ಹುಲಿ ಹೊಡೆದೆ ಅಂತ ತನ್ನ ಶೌರ್ಯ,ಪರಾಕ್ರಮಗಳನ್ನೆಲ್ಲ ಹೇಳಿಕೊಳ್ತಾ ಇದ್ದಾನಂತೆ ಹಬೀಬ್. ಹಬೀಬ್ ಗೆ ತಾನು ಮಾಡಿದ್ದ ತಪ್ಪು, ಅಪರಾಧ ಅನ್ನೋದೆಲ್ಲ ಮನಸ್ಸಿನಲ್ಲಿಲ್ಲ. ಆದರೆ ನೆಲದ ಕಾನೂನೂ ಈತನನ್ನು ಬಿಡೋದಿಲ್ಲ. ಅದರಲ್ಲೂ ಅಳಿನಂಚಿನಲ್ಲಿರುವ ಹುಲಿಗಳ ಹಂತಕನನ್ನು ಯಾರಾದರೂ ಬಿಟ್ಟಾರೆಯೇ.

ಅಳಿವಿನಂಚಿಲ್ಲಿರುವ ಹುಲಿಗಳಿಗೆ ಮನುಷ್ಯನಿಂದಲೇ ಅಪಾಯ
ಭಾರತದ ಕಾಡಿನಲ್ಲಂತೂ ಈಗ ಇರೋದೇ 2967 ಹುಲಿಗಳು
ನೆರೆಯ ಬಾಂಗ್ಲಾದಲ್ಲಿ ನೂರೋ ಇನ್ನೂರೋ ಹುಲಿಗಳಿದ್ರೆ ಹೆಚ್ಚು
ಹಬೀಬ್ ನಂತರ ಕಿಲ್ಲರ್ಸ್ ಗಳಿಂದ ರಕ್ಷಣೆ ಮಾಡೋದೇ ಸವಾಲು

ಹುಲಿಗಳು ಜಗತ್ತಿನ ಅಪರೂಪದ ಪ್ರಾಣಿ. ಆದರೆ ಅಳಿನಂಚಿನಲ್ಲಿರು ಪ್ರಾಣಿ. ನೋಡಿ ಸದ್ಯ ಭಾರತದ ಕಾಡಿನಲ್ಲಿರುವ ಹುಲಿಗಳ ಸಂಖ್ಯೆಯೇ ಕೇವಲ 2967 ಮಾತ್ರ. ನೆರೆಯ ಬಾಂಗ್ಲಾದಲ್ಲಿ ನೂರೋ ಇನ್ನೂರೋ ಹುಲಿಗಳು ಇದ್ದರೆ ಅದೇ ಹೆಚ್ಚು. ಇಂತಾದ್ರಲ್ಲಿ ಹಬೀಬ್ ಅಂಥಹ ಟೈಗರ್ ಕಿಲ್ಲರ್ ಗಳು ಅಲ್ಲೊಬ್ಬರು,ಇಲ್ಲೊಬ್ಬರು ಇದ್ದು ಬಿಟ್ಟರೆ ಈಗಿರುವ ಹುಲಿಗಳು ಇಲ್ಲವಾಗಿ ಬಿಡುತ್ತವೆ. ಹೀಗಾಗಿ ಹುಲಿಗಳಿರುವ ದೇಶಗಳಲ್ಲಿ ಹುಲಿ ರಕ್ಷಣೆ ಮಾಡೋಕಂತಾನೇ ಕಠಿಣವಾದ ಕಾನೂನುಗಳಿವೆ.

ಆದ್ರೆ ಕಾಡಿನಲ್ಲೇ ಇದ್ದು ವೀರಪ್ಪನ್ ಹಾಗೆ ದಂಧೆ ಮಾಡಿಕೊಳ್ಳೋರಿಂದ ವ್ಯನ್ಯಜೀವಿಗಳನ್ನು ರಕ್ಷಣೆ ಮಾಡಿಕೊಳ್ಳೋದೇ ಸವಾಲಾಗಿ ಹೋಗಿದೆ. ಸ್ವಾತಂತ್ರ್ಯಪೂರ್ವದಲ್ಲಿ ರಾಜರ ಆಳ್ವಿಕೆ ಮತ್ತು ಬ್ರಿಟಿಷ್‌ ಆಡಳಿತದಲ್ಲಿ ನಡೆದ ನಿರಂತರ ಬೇಟೆ ಹಾಗೂ ಸಂರಕ್ಷಣೆಗೆ ಒತ್ತು ಸಿಗದ ಪರಿಣಾಮವಾಗಿ ಹುಲಿಗಳ ಸಂಖ್ಯೆ ನಿರಂತರವಾಗಿ ಕುಸಿದಿತ್ತು. ಸ್ವಾತಂತ್ರ್ಯಾ ನಂತರ ಕಾಡು ಮತ್ತು ಕಾಡುಪ್ರಾಣಿಗಳ ಸಂರಕ್ಷಣೆ ವಿಚಾರದಲ್ಲಿ ಕೇಂದ್ರ ಸರ್ಕಾರ ತೆಗೆದುಕೊಂಡ ದಿಟ್ಟ ಕ್ರಮಗಳಿಂದ ಹುಲಿಗಳ ಸಂಖ್ಯೆಯಲ್ಲಿ ಏರಿಕೆ ಉಂಟಾಗಿದೆ. ಹುಲಿಗಳ ಏರಿಕೆ ಪ್ರಮಾಣವು 2006– 2010ರ ಅವಧಿಯಲ್ಲಿ ಶೇಕಡಾ 21ರಷ್ಟು ಹಾಗೂ 2010–2014ರ ಅವಧಿಯಲ್ಲಿ ಶೇಕಡಾ 30ರಷ್ಟು ಇತ್ತು. ಇದೀಗ ಆಗಿರುವ ಏರಿಕೆಯು ಸಾರ್ವಕಾಲಿಕ ದಾಖಲೆ. ಹುಲಿಗಳ ರಕ್ಷಣೆ ನಮ್ಮ ಹೊಣೆ ಅನ್ನುವಷ್ಟು ಅರಿವು ಹೆಚ್ಚಬೇಕು. ಇಲ್ಲವಾದರೆ ಹಬೀಬ್ ನಂತಹ ಟೈಗರ್ ಕಿಲ್ಲರ್ ಗಳು ಅಲ್ಲಲ್ಲಿ ಹುಟ್ಟಿಕೊಳ್ತಾನೇ ಇರ್ತಾರೆ. ವೀರಪ್ಪನ್ ತರದ ಕಾಡುಗಳ್ಳರು ಮುಂದಿನ ದಿನಗಳಲ್ಲೂ ಬರಬಹುದು. ಅದೇನೇ ಇರಲಿ, ಈಗ ಬಾಂಗ್ಲಾದ ಟೈಗರ್ ಕಿಲ್ಲರ್,ಕಾಡುಗಳ್ಳ ಹಬೀಬ್ ಬಲೆಗೆ ಬಿದ್ದಿರೋದು ದಕ್ಷಿಣ ಏಷ್ಯಾದ ಮಟ್ಟಿಗಂತೂ ಮಹತ್ವದ ಸುದ್ದಿಯೇ.

The post 70ಕ್ಕೂ ಹೆಚ್ಚು ಹುಲಿಗಳ ಕೊಂದಿರೋ ಹಂತಕ.. ವೀರಪ್ಪನ್​​ಗಿಂತ ಡೇಂಜರ್ ಈ ಬೇಟೆಗಾರ appeared first on News First Kannada.

Source: newsfirstlive.com

Source link