ಬೆಂಗಳೂರು: ಕೊರೊನಾ ಸೋಂಕಿತರನ್ನು ಮುಟ್ಟಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಇಲ್ಲೊಂದು ತಂಡ ಸೋಂಕಿನಿಂದ ಮೃತಪಟ್ಟವರ ಶವಗಳಿಗೆ ಮತ್ತು ಅನಾಥ ಶವಗಳಿಗೆ ಗೌರವ ಪೂರ್ಣವಾಗಿ ಅಂತ್ಯಕ್ರಿಯೆ ನಡೆಸುತ್ತಿದೆ. ಇಲ್ಲಿಯವರೆಗೂ 700ಕ್ಕೂ ಹೆಚ್ಚು ಮೃತದೇಹಗಳಿಗೆ ಶವ ಸಂಸ್ಕಾರ ನಡೆಸುವ ಮೂಲಕ ಮಾದರಿಯಾಗಿದೆ‌.

ಕೊರೊನಾ ಮಹಾಮಾರಿ ಎಂತಹ ದಾರುಣ ಪರಿಸ್ಥಿತಿಯನ್ನ ಸೃಷ್ಟಿಸಿದೆ ಎಂದರೆ ಕುಟುಂಬಸ್ಥರೇ ತಮ್ಮವರ ಶವಗಳನ್ನ ಮುಟ್ಟಲು, ಅಂತ್ಯ ಸಂಸ್ಕಾರ ನಡೆಸಲು ಭಯಪಡುತ್ತಿದ್ದಾರೆ. ಇನ್ನೊಂದು ಕಡೆ ಕುಟುಂಬಸ್ಥರಿಗೆ ಕೋವಿಡ್ ಸೋಂಕಿತರ ಶವಗಳು ಬೇಡವಾಗ್ತಿದೆ. ಇದರ ನಡುವೆಯೂ ಅನಾಥ ಶವಗಳನ್ನ ಗೌರವಯುತವಾಗಿ ಅಂತ್ಯ ಸಂ‌ಸ್ಕಾರ ಮಾಡುವ ಹಿಯರ್ ಆಮ್ ಐ ಸಂಸ್ಥೆ ಮಾದರಿಯಾಗಿದೆ. ಇಲ್ಲಿಯವರೆಗೂ ಸುಮಾರು 700 ಶವಗಳ ಅಂತ್ಯ ಕ್ರಿಯೆಯನ್ನ ಸಂಸ್ಥೆಯ ಸ್ವಯಂ ಸೇವಕರು ನೆರವೇರಿಸಿದ್ದಾರೆ. ಇಂತಹ ಕಠಿಣ ಸನ್ನಿವೇಶದಲ್ಲಿ ಶವ ಸಂಸ್ಕಾರದಂತಹ ಕೆಲಸಕ್ಕೆ ತಮ್ಮ ಬದುಕನ್ನೇ ಮುಡಿಪಾಗಿಟ್ಟು ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹಿಯರ್ ಆಮ್ ಐ ಸಂಘಟನೆಯಲ್ಲಿ ಸುಮಾರು 68 ಜನ ಸ್ವಯಂ ಸೇವಕರಿದ್ದಾರೆ. ಮಹಿಳೆಯರು ಕೂಡ ಇವರ ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಬೆಂಗಳೂರಿನ ನಾಲ್ಕು ಭಾಗದ ಸ್ಮಶಾನಗಳಲ್ಲಿ ಈ ಸಂಘಟನೆಯ ಕಾರ್ಯಕರ್ತರು ಈ ಮಹತ್ಕಾರ್ಯ ನಡೆಸುತ್ತಿದ್ದಾರೆ.

ನಮ್ಮ ಜನರ ಸಂಕಷ್ಟಕ್ಕೆ ನಾವು ಸ್ಪಂದಿಸುವ ಕೆಲಸ ಮಾಡಬೇಕಿದೆ ಎನ್ನುವ ಇವರು.. ಉಚಿತ ಅಂಬ್ಯುಲೆನ್ಸ್ ಸೇವೆಯನ್ನ ಕೂಡ ಒದಗಿಸುತ್ತಿದ್ದಾರೆ. ಮತ್ತು 2 ಶಾಲೆಯಲ್ಲಿ ಈಗಾಗಲೇ ಕೋವಿಡ್ ಕೇರ್ ಸೆಂಟರ್ ಕೂಡ ಸ್ಥಾಪಿಸಿದ್ದಾರೆ. ತುರ್ತಾಗಿ ಆಕ್ಸಿಜನ್ ಬೇಕಾಗಿರುವವರಿಗೆ ಉಚಿತವಾಗಿ ಆಕ್ಸಿಜನ್ ಒದಗಿಸುವ ಕೆಲಸವನ್ನ ಕೂಡ ಮಾಡುತ್ತಿದ್ದಾರೆ.

ಮಹಿಳೆಯರು ಕೂಡ ಈ ಸಂಘಟನೆಯ ಜೊತೆಗೂಡಿ ಅನಾಥ ಶವಗಳನ್ನ ಸಂಸ್ಕಾರ ಮಾಡುವ ಮಹತ್ಕಾರ್ಯದಲ್ಲಿ ಕೈ ಜೋಡಿಸಿದ್ದಾರೆ. ಇಂತಹ ಉತ್ತಮ ಸಮಾಜ ಮುಖಿ ಕೆಲಸಗಳನ್ನ ಮಾಡುವ ಸಂಘಟನೆಗಳು ಸಾವಿರವಾಗಲಿ, ಇನ್ನಷ್ಟು ಯುವ ಮನಸ್ಸುಗಳಿಗೆ ಇವರ ಕಾರ್ಯ ಪ್ರೇರಣೆಯಾಗಲಿ ಎಂದು ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

The post 700 ಅನಾಥ ಶವಗಳಿಗೆ ಗೌರವಯುತ ಅಂತ್ಯ ಸಂ‌ಸ್ಕಾರ: ಮಾನವೀಯತೆ ಮೆರೆದ ಸ್ವಯಂ ಸೇವಕರು appeared first on News First Kannada.

Source: newsfirstlive.com

Source link